ದೆಹಲಿ ಯುನಿವರ್ಸಿಟಿಯಲ್ಲಿ ಉಪನ್ಯಾಸಕರಾಗಿರುವ ಅಪೂರ್ವಾನಂದ ಅವರು ‘ದಿ ವೈರ್’ನಲ್ಲಿ ಬರೆದಿರುವಂತೆ “ಶಾಂತಿಯುತವಾಗಿ ನಡೆಯುತ್ತಿದ್ದ ಮೇಣದ ಬತ್ತಿ ಮೆರವಣಿಗೆಯನ್ನು ನಿಲ್ಲಿಸಲಾಗಿದೆ. ಪ್ರತಿಭಟನೆಗೆ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಲಜ್ಪತ್ನಗರ್ನ ಪೊಲೀಸ್ ಸ್ಟೇಷನ್ ಗೆ ಕರೆದೊಯ್ಯಲಾಗಿದೆ. ಬಂಧಿತರಲ್ಲಿ ಉಮರ್ ಖಾಲಿದ್ ಸಹೋದರಿ ಮತ್ತು ತಾಯಿ ಕೂಡಾ ಇದ್ದಾರೆ” ‘United Against Hate’ನ ನದೀಮ್ ಖಾನ್ ಮೆಸೇಜ್ ಮಾಡಿದ್ದರು. ಆಗಲೇ ಅವರಿಗೆ ಜಾಮಿಯಾದ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದು ಗೊತ್ತಾದದ್ದು.
ಅಪೂರ್ವ ಅವರಂತೆ ಅನೇಕ ಮಂದಿಗೆ ಡಿಸೆಂಬರ್ ಹದಿನೈದು 2019ರಂದು ನಿಯಮ ಮೀರಿ ಪೊಲೀಸರು ವಿಶ್ವವಿದ್ಯಾಲಯದೊಳಗೆ ನುಗ್ಗಿದ ಘಟನೆ ಅರಿವಾದದ್ದು ಬೇರೆಯವರ ಮೂಲಕವೇ.
ಉಮರ್ ಖಾಲಿದ್ ಅವರ ತಂದೆ, ಇಲ್ಯಾಸ್ ಅವರಿಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸಿದಾಗ “ಪೌರತ್ವ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಭಯಾನಕವಾಗಿ ದಾಳಿ ಮಾಡಿದ್ದರೆ ಎಂದಷ್ಟೇ ಗೊತ್ತು” ಎಂದಿದ್ದರಂತೆ ಅವರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ತಮ್ಮ ಹೆಂಡತಿ ಮಗಳೂ ಸೇರಿದಂತೆ ಎಲ್ಲಾ ಪ್ರತಿಭಟನಾಕಾರರನ್ನು ಲಜ್ಪತ್ ನಗರ್ ಪೋಲೀಸ್ ಸ್ಟೇಷನ್ಗೆ ಕರೆದೊಯ್ದಿದ್ದಾರೆ ಎಂದು ಅರಿವಾದ ಮೇಲೆ ಅಲ್ಲಿಗೆ ಹೋದರು ಇಲ್ಯಾಸ್. ಆದರೆ ಅವರು ಅಲ್ಲಿರಲಿಲ್ಲ. ಅಲ್ಲಿಂದ ಇಲ್ಯಾಸರು ನ್ಯೂ ಫ್ರೆಂಡ್ಸ್ ಕಾಲನಿಯ ಪೊಲೀಸ್ ಸ್ಟೇಷನ್ಗೆ ಹೋದರು. ಅಲ್ಲೂ ವಿದ್ಯಾರ್ಥಿಗಳಿರಲಿಲ್ಲ.ಒಂದು ಪೊಲೀಸ್ ಸ್ಟೇಷನ್ ನಿಂದ ಮತ್ತೊಂದು ಸ್ಟೇಷನ್ ಗೆ ಅಲೆಯುತ್ತಲೇ ಜಾಮಿಯಾದ SHO ಗೆ ಕರೆಮಾಡಿ ವಿಚಾರಿಸಿದಾಗ ಮಾಹಿತಿ ಕೊಡಲು ನಿರಾಕರಿಸಿದ ಅವರು ಪ್ರತಿಭಟನಾಕಾರರು ಇನ್ನರ್ಧ ಗಂಟೆಯಲ್ಲಿ ಮನೆಗೆ ತಲುಪಲಿದ್ದಾರೆ ಎಂದಷ್ಟೇ ಹೇಳಿದ್ದರು.
ಯಾವ ಕಾನೂನಡಿಯಲ್ಲಿ ಸಂಜೆಯ ನಂತರ ಮಹಿಳೆಯರನ್ನು ವಶಕ್ಕೆ ಪಡೆದುಕೊಳ್ಳಲಾಯಿತು? ಪ್ರತಿಭಟನಾಕಾರರನ್ನು ಎಲ್ಲಿಗೆ ಕರೆದೊಯ್ದಿದ್ದಾರೆ ಎನಗನುವ ಮಾಹಿತಿಯನ್ನೇಕೆ ಯಾರೂ ನೀಡುವುದಿಲ್ಲ? SHO ಈ ಯಾವ ಪ್ರಶ್ನೆಗೂ ಉತ್ತರಿಸುವ ಗೋಜಿಗೂ ಹೋಗಿರಲಿಲ್ಲ. ರಾತ್ರಿ 9.30ರ ಹೊತ್ತಿಗೆ ಅವರಿಬ್ಬರೂ ಬಿಡುಗಡೆಯಾಗಿದ್ದಾರೆಂದು ಇಲ್ಯಾಸ್ ಅವರು ಅಪೂರ್ವಾನಂದ್ರಿಗೆ ಮೆಸೇಜ್ ಮಾಡಿ ತಿಳಿಸಿದರು
ಮರುದಿನ ಅಂದರೆ ಡಿಸೆಂಬರ್ 16ರಂದು ಮಧ್ಯಾಹ್ನ ‘ದಿ ವೈರ್’ ಕಛೇರಿಯಲ್ಲಿನ ಕೆಲಸ ಮುಗಿಸಿ ಸ್ಥಳೀಯ ಟ್ಯಾಕ್ಸಿಯೊಂದನ್ನು ಹಿಡಿದು ಜಾಮಿಯಾಗೆ ಹೊರಟ ಅಪೂರ್ವರಿಗೆ ವಿಶ್ವವಿದ್ಯಾಲಯದ ರಸ್ತೆಯ ಎರಡೂ ಬದಿ ಹೆಗಲಿಗೆ ಹೆಗಲು ಕೊಟ್ಟು ನಿಂತ ವಿದ್ಯಾರ್ಥಿಗಳು ಕಂಡುಬಂದರು. “ಅಲ್ಲಿ ಸ್ಲೋಗನ್ಗಳಿರಲಿಲ್ಲ, ಶಬ್ದ ಇರಲಿಲ್ಲ, ಆದರೆ ಅಲ್ಲಿನ ಗಾಳಿಯಲ್ಲೂ ಒತ್ತಡವಿತ್ತು” ಎಂದು ನೆನಪಿಸಿಕೊಳ್ಳುತ್ತಾರೆ ಅಪೂರ್ವಾನಂದ್ ಅವರು.
ಕ್ಯಾಬ್ನಿಂದ ಇಳಿದು ಜಾಮಿಯಾ ಪ್ರವೇಶಿಸಬೇಕಿದದ್ದರೂ ಅಲ್ಲೂ ಹುಡುಗರು ಮತ್ತು ಹುಡುಗಿಯರು ಮೌನವಾಗಿ ನಿಂತಿದ್ದರು. ಕ್ಯಾಂಪಸ್ಸಿನೊಳಗಡೆ ಹಲವು ಉಪನ್ಯಾಸಕರೂ ಇದ್ದರು. ಕಾಲೇಜಿನ ಆತ್ಮದಂತಿರುವ ಲೈಬ್ರೆರಿಯಲ್ಲಿ ಮುರಿದು ಬಿದ್ದ ಬಾಗಿಲುಗಳು, ಚದುರಿದ ಪುಸ್ತಕಗಳು, ಗಾಜಿಲ್ಲದ ಕಿಟಕಿಗಳು ಮತ್ತು ಅಲ್ಲಲ್ಲಿ ಚೆಲ್ಲಿದ ರಕ್ತ ಕಂಡುಬರುತ್ತಿತ್ತು ಎನ್ನುತ್ತಾರೆ. ಅಷ್ಟಾಗಿಯೂ ಕಾನ್ಫರೆನ್ಸ್ ರೂಮಿನಲ್ಲಿ ಮಾತಿಗೆ ಸಿಕ್ಕ ವಿದ್ಯಾರ್ಥಿಗಳು ತಮ್ಮ ನೋವು ಮಾತಾಡುವ ಧ್ವನಿಯಲ್ಲಿ ವ್ಯಕ್ತವಾಗಬಾರದು ಎಂಬಂತೆ ಕಾಳಜಿ ವಹಿಸುತ್ತಿದ್ದರು. ಹಣೆಗೆ, ಕೈಗೆ, ಕಾಲಿಗೆ ಬ್ಯಾಂಡೇಜು ಕಟ್ಟಿಕೊಂಡಿದ್ದ ವಿದ್ಯಾರ್ಥಿಗಳು ಪೊಲೀಸರ ಅವರ ಮೇಲೆಸೆಗಿದ ದೌರ್ಜನ್ಯಕ್ಕೆ ಸಾಕ್ಷಿಯಂತೆ ಕಂಡುಬರುತ್ತಿದ್ದರು.
ಪೊಲೀಸರ ದೌರ್ಜನ್ಯದ ತನಿಖೆಯಾಗಬೇಕು ಎಂದು ಇಂದಿರಾ ಜೈಸಿಂಗ್ ಮತ್ತು ಕೋಲಿನ್ ಗೋನ್ಸ್ಲೇವ್ ಅವರು ಸುಪ್ರೀಂ ಕೋರ್ಟಿನಲ್ಲೂ ಅರ್ಜಿ ಸಲ್ಲಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ಅರ್ಜಿಯ ಉದ್ದೇಶವನ್ನೇ ಕಡೆಗಣಿಸುವಂತೆ ಸರ್ಕಾರದ ವಿರುದ್ದ ನಿಲ್ಲದೆ, ಮೊದಲು ರಸ್ತೆಗಳನ್ನು ಖಾಲಿ ಮಾಡಿ ಎಂದು ವಿದ್ಯಾರ್ಥಿಗಳಿಗೇ ತಾಕೀತು ಮಾಡಿತು.
ಸುಪ್ರೀಂ ಕೋರ್ಟ್ ತೀರ್ಪು, ಸರ್ಕಾರದ ವಿರುದ್ಧ ಪ್ರತಿಭಟಿಸಬೇಡಿ, ಪ್ರತಿಭಟಿಸಿ ಕೋರ್ಟ್ ನಿಮ್ಮ ನೆರವಿಗೆ ಬರಬೇಕು ಎಂದು ನಿರೀಕ್ಷಿಸಲೂ ಬೇಡಿ ಎಂಬಂತಿತ್ತು. ಕೋರ್ಟಿನ ಮಾತು ತಲುಪುಬೇಕಾದಲ್ಲಿ ಸರಿಯಾಗಿ ತಲುಪಿತ್ತು, ಉತ್ತರ ಪ್ರದೇಶದ ಪೊಲೀಸರು ಒಂದು ದಿನ ಮುಂಚೆ ಅಲೀಘರ್ ವಿಶ್ವವಿದ್ಯಾಲಯದಲ್ಲೂ ಇಂಥದ್ದೇ ಘಟನೆ ನಡೆದಿತ್ತು.
ಕೋರ್ಟಿನ ತೀರ್ಪು ವಿಸ್ಯಾರ್ಥಿಗಳನ್ನು ಮತ್ತಷ್ಟು ಅವಮಾನಕ್ಕೆ, ಹತಾಶೆಗೆ, ನಿರಾಶೆಗೆ ದೂಡಿತು. ಪೊಲೀಸರನ್ನು ಕಾಲೇಜೇ ಘಟನಾ ಸ್ಥಳಕ್ಕೆ ಕರೆಸಿಕೊಂಡಿತು ಎಂದು ಸರ್ಕಾರವು ಹೇಳುವ ಮೂಲಕ ವಿದ್ಯಾರ್ಥಿಗಳಲ್ಲಾಗಿದ್ದ ಗಾಯಕ್ಕೆ ಉಪ್ಪು ಸುರಿಯಿತು. ಕಾಲೇಜಿನ ವೈಸ್ ಛಾನ್ಸಲರ್ ಪೊಲೀಸರ ವಿರುದ್ಧ ಎಫ್.ಐ.ಆರ್. ದಾಖಲಿಸಿದರು.
ಅದಾಗಿ ಈಗ ಒಂದು ವರ್ಷ ಕಳೆದಿದೆ. ಈ ಕೇಸು, ಎಫ್ ಐಆರ್ ಮತ್ತು ಆವತ್ತಿನ ಹಿಂಸಾತ್ಮಕ ಘಟನೆಯ ಬಗ್ಗೆ ಮಾತಾಡಿದರೆ ಕಾಲೇಜಿಗೆ ನೆಗೆಟಿವ್ ಪ್ರಚಾರ ನೀಡಿದಂತಾಗುತ್ತದೆ ಎನ್ನುತ್ತಾರೆ ವಿ.ಸಿ.
‘ಘಟನೆಯಲ್ಲಿ ತನ್ನ ಒಂದು ಕಣ್ಣನ್ನು ಕಳೆದುಕೊಂಡ ವಿದ್ಯಾರ್ಥಿ ಮುಹಮ್ಮದ್ ಮಿನ್ಹಾಜುದ್ದೀನ್ ನನ್ನು ವಿ.ಸಿ ಭೇಟಿಯಾಗಿದ್ದಾರೆ, ಈಗಲೂ ಅದೇ ಕಾಲೇಜಲ್ಲಿ ಪಿ.ಎಚ್.ಡಿ ಮಾಡುವಂತೆ ಒತ್ತಾಯಿಸುತ್ತಾರೆ’ ಎಂದು ‘ ದಿ ವೈರ್’ ವರದಿ ಮಾಡಿದೆ.
‘ವೈಸ್ ಛಾನ್ಸಲರ್ ನಿಜಕ್ಕೂ ಒಳ್ಳೆಯವರೇ. ತಮ್ಮ ವಿದ್ಯಾರ್ಥಿಗಳು ಆತ್ಮಸ್ಥೈರ್ಯವುಳ್ಳವರು ಎಂಬ ಹೆಮ್ಮೆ ಅವರಿಗಿದೆ. ಆದರೆ ಒಂದೇ ಒಂದು ಸಮಸ್ಯೆಯೆಂದರೆ ವಿದ್ಯಾರ್ಥಿಗಳು ಹಳೆಯ ಘಟನೆಗಳನ್ನೆಲ್ಲಾ ಮರೆತು ಮುಂದುವರೆಯಲು ತಯಾರಿಲ್ಲ’ ಎಂದು ವ್ಯಂಗ್ಯವಾಡುತ್ತಾರೆ ಅಪೂರ್ವಾನಂದ್.
ಈ ವರ್ಷವೂ ಪುಟ್ಟ ಕ್ಯಾಂಡಲ್ ಹೊತ್ತಿಸಿ ಕಳೆದ ಡಿಸೆಂಬರ್ನಲ್ಲಾದ ಅನ್ಯಾಯವನ್ನು ವಿರೋಧಿಸಿ ನ್ಯಾಯ ಕೇಳುತ್ತಾ ವಿದ್ಯಾರ್ಥಿಗಳು ಬಾಟ್ಲಾ ಹೌಸ್ನ ರಸ್ತೆಗಿಳಿದಿದ್ದರು. ಆದರೆ ದೆಹಲಿ ಪೊಲೀಸರು ಅವರನ್ನೂ ಬಂಧಿಸಿದ್ದಾರೆ.
ಕೃಪೆ: ದ ವೈರ್