ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಸುಳ್ಳು ಹೇಳಿದ್ದಾರೆ. ಅದೂ ಜಾಗತಿಕ ವೇದಿಕೆಯಲ್ಲಿ! ಅಷ್ಟೇ ತ್ವರಿತವಾಗಿ ಅವರು ಹೇಳಿದ್ದು ಸುಳ್ಳು ಎಂಬುದನ್ನು ಕೇಂದ್ರ ಸರ್ಕಾರದ್ದೇ ಸ್ವಾಯತ್ತ ಸಂಸ್ಥೆಯೊಂದು ಈ ಹಿಂದೆಯೇ ಪ್ರಕಟಿಸಿದ್ದ ಅಂಕಿಅಂಶಗಳು ಬಹಿರಂಗ ಪಡಿಸಿವೆ.
ಅಷ್ಟಕ್ಕೂ ಪ್ರಧಾನಿ ಮೋದಿ ಹೇಳಿದ ಇತ್ತೀಚಿನ ಸುಳ್ಳು ಏನು?
ಎರಡು ದಿನಗಳ ಹಿಂದೆ ನಡೆದ ಯುಎಸ್-ಐಬಿಸಿ (ಯುನೈಟೆಡ್ ಸ್ಟೇಟ್ಸ್- ಇಂಡಿಯಾ ಬ್ಯೂಸಿನೆಸ್ ಕೌನ್ಸಿಲ್) ಶೃಂಗಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದ ಪ್ರಧಾನಿ ಮೋದಿ “ಭಾರತದಲ್ಲಿನ ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ನಗರಪ್ರದೇಶದ ಬಳಕೆದಾರ ಸಂಖ್ಯೆಗಿಂತ ಹೆಚ್ಚಿದೆ” ಎಂದು ಹೇಳಿದ್ದರು. ಅಲ್ಲದೇ ಭಾರತದಲ್ಲಿ ಅರ್ಧ ಬಿಲಿಯನ್ (ಐವತ್ತು ಕೋಟಿ) ಕ್ರಿಯಾಶೀಲ ಇಂಟರ್ನೆಟ್ ಬಳಕೆದಾರರಿದ್ದಾರೆ ಎಂದೂ ಹೇಳಿದ್ದರು.
ಆದರೆ, ಮೋದಿ ಜಾಗತಿಕ ವೇದಿಕೆಯಲ್ಲಿ ಹೇಳಿದ್ದು ಸಳ್ಳು ಎಂಬುದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಅಂಕಿಅಂಶಗಳೇ ಹೇಳುತ್ತಿವೆ. ನಾವು ಪ್ರಧಾನಿ ಮೋದಿ ಮಾತಿಗಿಂತ ಟ್ರಾಯ್ ಅಂಕಿಅಂಶಗಳನ್ನೇ ನಂಬಬೇಕು- ಏಕೆಂದರೆ, ಟ್ರಾಯ್ ದೇಶದ ದೂರಸಂಪರ್ಕ ವ್ಯವಸ್ಥೆಯ ನಿಯಂತ್ರಣ ಪ್ರಾಧಿಕಾರವಾಗಿ ಅಷ್ಟೇ ಅಲ್ಲ, ಕಣ್ಗಾವಲಾಗಿಯೂ ಕಾರ್ಯನಿರ್ವಹಿಸುತ್ತದೆ. ಟ್ರಾಯ್ ಬಳಿ ಕರಾರುವಕ್ಕಾದ ರಿಯಲ್ ಟೈಮ್ ಅಂಕಿಅಂಶಗಳು ಲಭ್ಯವಿರುತ್ತವೆ.
ಮೋದಿ ಜಾಗತಿಕ ವೇದಿಕೆಯಲ್ಲಿ ನೀಡಿದ ಮಾಹಿತಿಗೂ ಮತ್ತು ಟ್ರಾಯ್ ನೀಡಿರುವ ಅಂಕಿಅಂಶಗಳ ಮಾಹಿತಿಗೂ ಅಜಗಜಾಂತರ ವ್ಯತ್ಯಾಸ ಇದೆ. ಭಾರತದಲ್ಲಿ ಇಂಟರ್ ನೆಟ್ ಬಳಕೆದಾರರ ಸಂಖ್ಯೆಯು 718.74 ದಶಲಕ್ಷ ಇದೆ. ಇದು ಮೋದಿ ಹೇಳಿಕೊಂಡ ಅರ್ಧ ಬಿಲಿಯನ್ ಗಿಂತಲೂ ಹೆಚ್ಚೇ ಇದೆ. ಈ ನೆಟ್ ಬಳಕೆದಾರರ ಸಂಖ್ಯೆಯು ವೈರ್, ವೈರ್ಲೆಸ್, ಬ್ರಾಡ್ ಬ್ಯಾಂಡ್, ನ್ಯಾರೊಬ್ಯಾಂಡ್ ಗಳನ್ನು ಒಳಗೊಂಡಿದೆ. ಈ ಪೈಕಿ ಪ್ರಧಾನಿ ಬ್ರಾಡ್ಬ್ಯಾಂಡ್ ಬಳಕೆದಾರರನ್ನು ಉಲ್ಲೇಖಿಸಿ ಮಾತನಾಡಿದ್ದಾರೆ ಎಂದಿಟ್ಟುಕೊಂಡರು, ಅವರ ಸಂಖ್ಯೆಯು 662 ದಶಲಕ್ಷದಷ್ಟಿದೆ. ಅಂದರೆ, ಮೋದಿ ಹೇಳಿಕೊಂಡ 50 ಕೋಟಿಗಿಂತಲೂ ಹೆಚ್ಚಿದೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದರಲ್ಲಿ ನಿಮ್ಮ ತಕಾರಾರು ಏನು ಎಂದು ಪ್ರಶ್ನಿಸುತ್ತೀರಾ? ತಕರಾರಿರುವುದು ಮೋದಿ ಗ್ರಾಮೀಣ ಪ್ರದೇಶದ ಇಂಟರ್ ನೆಟ್ ಬಳಕೆದಾರರ ಬಗ್ಗೆ ನೀಡಿದ ಮಾಹಿತಿ ಬಗ್ಗೆ. ಟ್ರಾಯ್ ಅಂಕಿ ಅಂಶಗಳ ಪ್ರಕಾರ, ಡಿಸೆಂಬರ್ 2019ರ ವೇಳೆಗೆ ಭಾರತದಲ್ಲಿ ಇದ್ದ ಗ್ರಾಮೀಣ ಪ್ರದೇಶದ ಇಂಟರ್ನೆಟ್ ಬಳಕೆದಾರರ ಸಂಖ್ಯೆ 268.43 ದಶಲಕ್ಷ. ನಗರ ಪ್ರದೇಶದಲ್ಲಿನ ಇಂಟರ್ನೆಟ್ ಬಳಕೆದಾರರ ಸಂಖ್ಯೆಯು 450.31 ದಶಲಕ್ಷ. ಅಂದರೆ, ಗ್ರಾಮೀಣ ಪ್ರದೇಶದ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ಸರಿಸುಮಾರು ಶೇ.38ರಷ್ಟಿದೆ. ನಗರಪ್ರದೇಶದ ನೆಟ್ ಬಳಕೆದಾರರ ಸಂಖ್ಯೆ ಶೇ.62ರಷ್ಟಿದೆ.ಮೋದಿ ಹೇಳಿದಂತೆ ಗ್ರಾಮೀಣ ಪ್ರದೇಶದ ಇಂಟರ್ನೆಟ್ ಬಳಕೆದಾರರ ಸಂಖ್ಯೆ ನಗರ ಪ್ರದೇಶದ ಬಳಕೆದಾರರಿಗಿಂತ ಹೆಚ್ಚಿಲ್ಲ.
ಜಾಗತಿಕ ವೇದಿಕೆಗಳಲ್ಲಿ ಮೋದಿ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಕುರಿತಂತೆ ಅತ್ಯುತ್ಪ್ರೇಕ್ಷಿತ ಅಂಕಿ ಅಂಶಗಳನ್ನು ನೀಡುತ್ತಿರುವುದು ಇದು ಮೊದಲನೆಯದೇನಲ್ಲ. ಅಷ್ಟಕ್ಕೂ ಮೋದಿ ಗ್ರಾಮೀಣ ಪ್ರದೇಶ ಕುರಿತಂತೆ ಅತ್ಯುತ್ರ್ಪ್ರೇಕ್ಷಿತ ಅಂಕಿ ಅಂಶಗಳನ್ನು ಏಕೆ ನೀಡುತ್ತಾರೆ? ಭಾರತದ ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ ಎಂಬುದು ವಾಸ್ತವಿಕ ಸತ್ಯ. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಹಿಂದಿನ ಯುಪಿಎ ಸರ್ಕಾರದ ಸುಮಾರು ಮೂರ್ನಾಲ್ಕು ಡಜನ್ ಯೋಜನೆಗಳನ್ನು ಮರುನಾಮಕರಣ ಮಾಡಿ, ತಾನೇ ಮಾಡಿದ್ದಾಗಿ ಪ್ರತಿಬಿಂಬಿಸಿಕೊಂಡು ಬರುತ್ತಿದೆ. ಗ್ರಾಮೀಣ ರಸ್ತೆ ಯೋಜನೆ, ಗ್ರಾಮೀಣ ವಿದ್ಯುತ್ ಯೋಜನೆ, ಸ್ವಚ್ಚ ಗ್ರಾಮೀಣ ಯೋಜನೆ ಎಲ್ಲವೂ ಯುಪಿಎ ಸರ್ಕಾರ ಜಾರಿಗೆ ತಂದು, ಹಂತ ಹಂತವಾಗಿ ಜಾರಿ ಮಾಡುತ್ತಿತ್ತು. ಅಷ್ಟೇ ಏಕೆ ಎಲ್ಲಾ ನಾಗರಿಕರಿಗೂ ಬ್ಯಾಂಕ್ ಸೇವೆ ಒದಗಿಸುವ ಉದ್ದೇಶದಿಂದ ಯುಪಿಎ ಸರ್ಕಾರವು ಫೈನಾನ್ಷಿಯಲ್ ಇನ್ಕ್ಲೂಷನ್ (ಆರ್ಥಿಕಸೇವೆಯಲ್ಲಿ ಸರ್ವರನ್ನು ಒಳಗೊಳ್ಳುವಿಕೆ) ಯೋಜನೆಯನ್ನು ಜಾರಿಗೆ ತಂದಿದ್ದು. ಮೋದಿ ಸರ್ಕಾರ ಇದೇ ಯೋಜನೆಗೆ ‘ಪ್ರಧಾನಮಂತ್ರಿ ಜನ್ ಧನ್’ ಎಂಬ ಅತ್ಯಾಕರ್ಷಕ ಹೆಸರನ್ನಿಟ್ಟು, ತನ್ನದೇ ಯೋಜನೆ ಎಂಬಂತೆ ಬಿಂಬಿಸಿದೆ.
ನಗರ ಪ್ರದೇಶದ ಇಂಟರ್ ನೆಟ್ ಬಳಕೆದಾರರಿಗಿಂತ ಗ್ರಾಮೀಣ ಪ್ರದೇಶದ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಿದೆ ಎಂದು ಪ್ರಧಾನಿ ಮೋದಿ ಜಾಗತಿಕ ವೇದಿಕೆಯಲ್ಲಿ ತಪ್ಪು ಮಾಹಿತಿ ನೀಡುವುದರ ಹಿಂದಿನ ಉದ್ದೇಶ ಏನೆಂದರೆ- ತಾನು ಅಧಿಕಾರಕ್ಕೆ ಬಂದ ನಂತರ ಗ್ರಾಮೀಣ ಪ್ರದೇಶದ ಉದ್ಧಾರ ಆಗಿದೆ ಎಂಬುದನ್ನು ಬಿಂಬಿಸುವುದೇ ಆಗಿದೆ.
ವಾಸ್ತವವಾಗಿ ಮೋದಿ ಸರ್ಕಾರದ ಅವಧಿಯಲ್ಲಿ ಗ್ರಾಮೀಣ ಪ್ರದೇಶ ಉದ್ದಾರ ಆಗಿದೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಮೋದಿ ಜಾರಿಗೆ ತಂದ ನೋಟ್ ಬ್ಯಾನ್ ಯೋಜನೆಯಿಂದ ಅತ್ಯಂತ ಸಂಕಷ್ಟಕ್ಕೆ ಈಡಾದವರು ಗ್ರಾಮೀಣ ಪ್ರದೇಶದ ಜನರು. ಆಗ ಕುಸಿದ ಗ್ರಾಮೀಣ ಪ್ರದೇಶದ ಕರಕುಶಲ ಮತ್ತು ಅರೆ ಕೃಷಿ- ಕೈಗಾರಿಕೆಗಳು ಇನ್ನು ತಲೆಎತ್ತಲು ಸಾಧ್ಯವಾಗಿಲ್ಲ. ನಗರಕ್ಕೆ ವಲಸೆ ಬಂದು ನೋಟ್ ಬ್ಯಾನ್ ನಿಂದ ಉದ್ಯೋಗ ಕಳೆದುಕೊಂಡು ಊರಿಗೆ ವಾಪಾಸಾದ ರೈತ ಕಾರ್ಮಿಕರ ಬದುಕು ಇನ್ನೂ ದುರ್ಬರವಾಗೇ ಇದೆ. ಮೋದಿ ಸರ್ಕಾರದ ಅವಧಿಯಲ್ಲೇ ದೇಶದಲ್ಲಿ ಗ್ರಾಮೀಣ ಪ್ರದೇಶ ಸೇರಿದಂತೆ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆ ಕಾಣಿಸಿಕೊಂಡಿದೆ.
ಗ್ರಾಮೀಣ ಪ್ರದೇಶಕ್ಕೆ ಉತ್ತಮ ದೂರಸಂಪರ್ಕ ಸೇವೆ ಒದಗಿಸುತ್ತಿದ್ದ ಭಾರತ ಸಂಚಾರ ನಿಗಮ ನಿಯಮಿತವು (ಬಿಎಸ್ಎನ್ಎಲ್) ಮೋದಿ ಸರ್ಕಾರದ ಅವಧಿಯಲ್ಲಿ ಮುಚ್ಚುವ ಹಂತಕ್ಕೆ ಬಂದಿದೆ. ಬಿಎಸ್ಎನ್ಎಲ್ ನಲ್ಲಿ ಕೆಲಸ ಮಾಡುತ್ತಿದ್ದ 1 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಮೋದಿ ಸರ್ಕಾರ ಮನೆಗೆ ಕಳುಹಿಸಿದೆ.
2016ಕ್ಕೂ ಮುಂಚೆ ಇಂಟರ್ ನೆಟ್ ಬಳಕೆಯು ಆರ್ಥಿಕತೆಯ ಮಾನದಂಡವಾಗಿತ್ತು. ಆದರೆ, 2016ರ ನಂತರ ವ್ಯಾಪಾಕವಾಗಿ ಕುಸಿದ ಸ್ಮಾರ್ಟ್ ಫೋನ್ ಬೆಲೆ ಮತ್ತು ಇಂಟರ್ನೆಟ್ ಡೇಟಾ ದರದಿಂದಾಗಿ ಈಗ ಎಲ್ಲರ ಕೈಯ್ಯಲ್ಲೂ ಇಂಟರ್ ನೆಟ್ ಇರುವ ಸ್ಮಾರ್ಟ್ ಫೋನ್ ಇದೆ. ಹೀಗಾಗಿ ಇಂಟರ್ ನೆಟ್ ಬಳಕೆ ಹೆಚ್ಚಿದೆ. ಇದರಲ್ಲಿ ಪ್ರಧಾನಿ ಮೋದಿಯ ಹೆಚ್ಚುಗಾರಿಕೆಯೇನೂ ಇಲ್ಲ.
ಆದರೆ, ಪ್ರಧಾನಿ ಮೋದಿ ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಇಂಟರ್ ನೆಟ್ ಬಳಕೆದಾರರು ಇದ್ದಾರೆ ಎಂದು ಹೇಳುವ ಮೂಲಕ ಗ್ರಾಮೀಣ ಪ್ರದೇಶವು ತಮ್ಮ ಅಧಿಕಾರದ ಅವಧಿಯಲ್ಲಿ ಆಮೂಲಾಗ್ರವಾಗಿ ಅಭಿವೃದ್ಧಿ ಹೊಂದಿದೆ ಎಂಬುದನ್ನು ಜಾಗತಿಕ ವೇದಿಕೆಯಲ್ಲಿ ಬಿಂಬಿಸುವ ಹತಾಶಪ್ರಯತ್ನ ಮಾಡಿದ್ದಾರೆ.
ಈಗಲೂ ಗ್ರಾಮೀಣ ಮತ್ತು ನಗರ ಪ್ರದೇಶದ ನೂರು ಕೋಟಿ ಜನರ ಕೈಯ್ಯಲ್ಲಿ ಡೇಟಾ ಇರುವ ಸ್ಮಾರ್ಟ್ ಫೋನ್ ಗಳಿವೆ. ಆದರೆ, ಈ ಕೋಟಿ ಕೋಟಿ ಜನರ ಕೈಗಳಲ್ಲಿ ಉದ್ಯೋಗ ಇಲ್ಲ. ಇದು ವಾಸ್ತವಿಕ ಸಂಗತಿ. ಪ್ರಧಾನಿ ಮೋದಿ ವಾಸ್ತವಿಕ ಸಂಗತಿ ಮರೆಮಾಚುವ ಹತಾಶ ಯತ್ನ ಮಾಡುತ್ತ ವಿಫಲರಾಗುತ್ತಲೇ ಇದ್ದಾರೆ!