ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆರೋಗ್ಯಕರವಾಗಿ ಇಡುವುದರಲ್ಲಿ ಬಹಳ ಮುಖ್ಯ ಪಾತ್ರ ವಹಿಸುವುದು ಅಲ್ಲಿನ ಚುನಾವಣಾ ಕಣ್ಗಾವಲು ಸಂಸ್ಥೆಗಳು. ಆದರೆ, ಒಂದು ವೇಳೆ ಇಂತಹ ಚುನಾವಣಾ ಕಣ್ಗಾವಲು ವ್ಯವಸ್ಥೆಯೇ ಆಳುವ ಪಕ್ಷದ ಪಕ್ಷಪಾತಿಯಾಗಿ, ಆ ಪಕ್ಷದ ವಕ್ತಾರನಂತೆ ಕೆಲಸ ಮಾಡತೊಡಗಿದರೆ ಅಂತಹ ವ್ಯವಸ್ಥೆ ನಿಜವಾಗಿಯೂ ಪ್ರಜಾಪ್ರಭುತ್ವದ ತಳಹದಿಯ ಮೇಲೆ ಮುಂದುವರಿಯಲು ಸಾಧ್ಯವೆ?
ಈ ಪ್ರಶ್ನೆ ಹುಟ್ಟುವಂತೆ ಮಾಡಿರುವುದು ಈಗ ನಮ್ಮ ಚುನಾವಣಾ ಆಯೋಗ ಮತ್ತು ಆಳುವ ಬಿಜೆಪಿ ನಡುವಿನ ದೋಸ್ತಿ ಕುರಿತು ಹೊರಬಿದ್ದಿರುವ ಆಘಾತಕಾರಿ ವಿವರಗಳು. ಹೌದು, ಕಳೆದ ವರ್ಷ ಬಿಜೆಪಿ ಪಾಲಿಗೆ ಅತ್ಯಂತ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯ ವೇಳೆ ಚುನಾವಣಾ ಆಯೋಗ, ಆಡಳಿತರೂಢ(ಆಗ ಆ ರಾಜ್ಯದಲ್ಲೂ, ಕೇಂದ್ರದಲ್ಲೂ) ಬಿಜೆಪಿಯ ಐಟಿ ಸೆಲ್ ಪ್ರಮುಖರೊಂದಿಗೆ ಹೊಂದಿದ್ದ ಸಂಬಂಧದ ಕುರಿತ ನಿಖರ ವಿವರಗಳು ಈಗ ಸದ್ದುಮಾಡತೊಡಗಿವೆ.
ಕೇಂದ್ರ ಚುನಾವಣಾ ಆಯೋಗದ ಮಹಾರಾಷ್ಟ್ರ ಘಟಕ ಕಳೆದ ವರ್ಷದ ಅಲ್ಲಿನ ವಿಧಾನಸಭಾ ಚುನಾವಣೆಯ ವೇಳೆ ಹೇಗೆ ಬಿಜೆಪಿ ರಾಷ್ಟ್ರೀಯ ಐಟಿ ಸೆಲ್ ಸದಸ್ಯ ಹಾಗೂ ಯುವ ಬಿಜೆಪಿ ಘಟಕದ ಪ್ರಮುಖನೊಂದಿಗೆ ಹೇಗೆ ವ್ಯವಹಾರ ಹೊಂದಿತ್ತು ಎಂಬುದನ್ನು ಸಾಕೇತ್ ಗೋಖಲೆ ಎಂಬ ಸಾಮಾಜಿಕ ಕಾರ್ಯಕರ್ತ ತಮ್ಮ ಟ್ವಿಟರ್ ಜಾಲತಾಣದ ಮೂಲಕ ಸಾಕ್ಷ್ಯಸಹಿತ ಬಹಿರಂಗಪಡಿಸಿದ್ದಾರೆ. ಈ ವಿಷಯ ಮಹಾರಾಷ್ಟ್ರ ಮಾತ್ರವಲ್ಲದೆ, ರಾಷ್ಟ್ರಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು, ಮುಖಭಂಗದಿಂದ ತಪ್ಪಿಸಿಕೊಳ್ಳುವ ಯತ್ನವಾಗಿ ಕೇಂದ್ರ ಚುನಾವಣಾ ಆಯೋಗ ತನ್ನ ಮಹಾರಾಷ್ಟ್ರ ಘಟಕಕ್ಕೆ ವಿವರ ವರದಿ ಕೇಳಿ ನೋಟೀಸ್ ನೀಡಿದೆ.
2019ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಚುನಾವಣಾ ಆಯೋಗ, ನೇರವಾಗಿ ಬಿಜೆಪಿಯ ಐಟಿ ಸೆಲ್ ಮೂಲಕವೇ ತನ್ನ ಮತದಾನ ಮತ್ತು ಚುನಾವಣೆ ಕುರಿತ ಪ್ರಚಾರ ನಡೆಸಿದೆ. ಆಯೋಗ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳನ್ನು ನಿಭಾಯಿಸಲು ಬಿಜೆಪಿ ಐಟಿ ಸೆಲ್ ಸೇವೆ ಬಳಸಿಕೊಂಡಿದೆ ಎಂದು ಗೋಖಲೆ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಮಹಾರಾಷ್ಟ್ರ ಮುಖ್ಯ ಚುನಾವಣಾ ಅಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಆಯೋಗದ ಪರವಾಗಿ ಹಂಚಿಕೊಂಡಿದ್ದ ಪೋಸ್ಟ್ ಗಳ ಸ್ಕ್ರೀನ್ ಶಾಟ್ ಗಳನ್ನು ಹಾಕಿ, ‘ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿಗಳು ಚುನಾವಣಾ ವೇಳೆಯಲ್ಲಿ ಹಂಚಿಕೊಂಡಿರುವ ಸಾಮಾಜಿಕ ಜಾಲತಾಣ ಜಾಹೀರಾತು ಪೋಸ್ಟುಗಳನ್ನು ಗಮನಿಸಿದರೆ, ಒಂದು ವಿಲಕ್ಷಣ ಸಂಗತಿ ಗಮನಕ್ಕೆ ಬರುತ್ತದೆ. ಕೇಂದ್ರ ಚುನಾವಣಾ ಆಯೋಗದ ಪ್ರತಿನಿಧಿಯಾಗಿ ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಅವರು ಹಂಚಿಕೊಂಡಿರುವ ಪ್ರತಿ ಜಾಹೀರಾತಿನಲ್ಲಿ ಜಾಹೀರಾತು ಸಂಸ್ಥೆಯ ವಿಳಾಸ “202, ಪ್ರೆಸ್ ಮನ್ ಹೌಸ್, ವೈಲ್ ಪಾರ್ಲೆ, ಮುಂಬೈ” ಎಂದಿದೆ.
“ಆ ವಿಳಾಸವನ್ನು ಹುಡುಕಿ ಹೊರಟಾಗ, ಸೈನ್ ಪೋಸ್ಟ್ ಇಂಡಿಯಾ ಎಂಬ ಜಾಹೀರಾತು ಸಂಸ್ಥೆ, ಅಲ್ಲಿ ಕೆಲಸ ಮಾಡುತ್ತಿರುವುದು ಗೊತ್ತಾಯಿತು. ಅಂದಿನ ಸಿಎಂ ಫಡ್ನವೀಸ್ ಅವರ ಬಿಜೆಪಿ ಸರ್ಕಾರ ಅಧಿಕೃತವಾಗಿ ಜಾಹೀರಾತು ಏಜೆನ್ಸಿ ಎಂದು ಗುರುತಿಸಿದ್ದ ಸಂಸ್ಥೆಗಳಲ್ಲಿ ಈ ಸೈನ್ ಪೋಸ್ಟ್ ಇಂಡಿಯಾ ಕೂಡ ಒಂದಾಗಿತ್ತು. ಅಲ್ಲದೆ, ಅದೇ ವಿಳಾಸದಲ್ಲಿ ‘ಸೋಷಿಯಲ್ ಸೆಂಟರ್’ ಎಂಬ ಡಿಜಿಟಲ್ ಏಜೆನ್ಸಿ ಕೂಡ ಕಾರ್ಯನಿರ್ವಹಿಸುತ್ತಿದ್ದು, ಆ ಏಜೆನ್ಸಿಯ ಮಾಲೀಕರು ದೇವಾಂಗ್ ದವೆ. ಈ ದೇವಾಂಗ್ ದವೆ ಬೇರಾರೂ ಅಲ್ಲ; ಬಿಜೆಪಿ ಯುವ ಘಟಕದ ಐಟಿ ಮತ್ತು ಸೋಷಿಯಲ್ ಮೀಡಿಯಾ ವಿಭಾಗದ ಸಂಚಾಲಕ!” ಎಂದು ಗೋಖಲೆ ವಿವರಿಸಿದ್ದಾರೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ದೇವಾಂಗ್ ದವೆ ಜಾಹೀರಾತು ಏಜೆನ್ಸಿ ಸೇವೆ ಪಡೆಯುವ ಗ್ರಾಹಕರ ಪಟ್ಟಿಯಲ್ಲಿ ಆತನ ಸ್ವಂತ ಪಕ್ಷ ಬಿಜೆಪಿ ಮತ್ತು ಮಹಾರಾಷ್ಟ್ರ ಮುಖ್ಯ ಚುನಾವಣಾಧಿಕಾರಿಗಳು ಇದ್ದಾರೆ! ಹಾಗೇ ಇದೇ ದೇವಾಂಗ್ ದವೆ, ಬಿಜೆಪಿ ಪರ ದ್ವೇಷ ಮತ್ತು ಕೋಮುವಾದ ಹರಡುವ ‘ದ ಫಿಯರ್ ಲೆಸ್ ಇಂಡಿಯನ್’, ‘ಐ ಸಪೋರ್ಟ್ ನರೇಂದ್ರ ಮೋದಿ’ ಮತ್ತಿತರ ಜಾಲತಾಣಗಳ ರೂವಾರಿ ಕೂಡ ಎಂಬುದನ್ನು ಕೂಡ ಗೋಖಲೆ ವಿವರಿಸಿದ್ಧಾರೆ.
ಇಷ್ಟಾಗಿಯೂ, ಆತನ ಬಿಜೆಪಿ ಐಟಿ ಸೆಲ್ ಸಂಚಾಲಕ ಮತ್ತು ಬಿಜೆಪಿ ಪರವಾಗಿ ಕೆಲಸ ಮಾಡುವ ಫೇಕ್ ನ್ಯೂಸ್ ಹರಡುವ, ಸಮಾಜದಲ್ಲಿ ದ್ವೇಷ ಬಿತ್ತುವ ಹಲವು ಜಾಲತಾಣ ಪೇಜುಗಳ ರೂವಾರಿ ಎಂಬುದು ಗೊತ್ತಾಗಿಯೂ ಚುನಾವಣಾ ಆಯೋಗ, ತನ್ನ ಜಾಹೀರಾತು ಮತ್ತು ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸಲು ಆತನ ಸೇವೆ ಬಳಸಿಕೊಂಡಿದ್ದು ಮತ್ತು ಆತನ ಏಜೆನ್ಸಿ ಮೂಲಕವೇ ಜಾಹೀರಾತುಗಳನ್ನು ಬಿಡುಗಡೆ ಮಾಡಿರುವುದು ಬಿಜೆಪಿ ಮತ್ತು ಚುನಾವಣಾ ಆಯೋಗದ ನಡುವಿನ ನಂಟು ಎಂತಹದ್ದು ಎಂಬುದಕ್ಕೆ ನಿದರ್ಶನ.
ಚುನಾವಣಾ ವೇಳೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಅವುಗಳ ಬೆಂಬಲಿಗರು ಹಾಗೂ ಮಾಧ್ಯಮಗಳ ಜಾಹೀರಾತು, ಮಾಹಿತಿ, ಸುದ್ದಿಗಳ ಮೇಲೆ ಹದ್ದಿನ ಕಣ್ಣಿಟ್ಟು, ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಹೊತ್ತಿರುವ ಚುನಾವಣಾ ಆಯೋಗವೇ ಆಳುವ ಪಕ್ಷದೊಂದಿಗೆ ಕೈಜೋಡಿಸಿ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುವುದು ಎಂದರೆ; ಈ ದೇಶದ ಚುನಾವಣಾ ಆಯೋಗ ಎಷ್ಟು ನಿಷ್ಪಕ್ಷಪಾತವಾಗಿ, ಎಷ್ಟು ನಿಷ್ಟುರವಾಗಿ ಕೆಲಸ ಮಾಡಿದೆ ಮತ್ತು ಮಾಡುತ್ತಿದೆ ಎಂಬುದನ್ನು ಯಾರು ಬೇಕಾದರೂ ಊಹಿಸಬಹುದು.
ಆ ಹಿನ್ನೆಲೆಯಲ್ಲಿ; ಆಡಳಿತ ಪಕ್ಷದ ಮಾಹಿತಿ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕರೇ ಚುನಾವಣಾ ಆಯೋಗದ ಸಾಮಾಜಿಕ ಜಾಲತಾಣವನ್ನೂ ನಿರ್ವಹಿಸುವುದು ಎಂದರೆ; ಅದರರ್ಥ ನೇರವಾಗಿ ಚುನಾವಣಾ ಆಯೋಗವನ್ನು ಆಡಳಿತ ಪಕ್ಷವೇ ನಿರ್ವಹಿಸಿದಂತೆ ಅಲ್ಲವೆ? ಎಂಬ ಸಾಮಾಜಿಕ ಕಾರ್ಯಕರ್ತ ಗೋಖಲೆ ಎತ್ತಿರುವ ಪ್ರಶ್ನೆ, ನಿಜಕ್ಕೂ ದೇಶದ ಚುನಾವಣಾ ಆಯೋಗ ಎಷ್ಟು ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದೆ ಎಂಬುದನ್ನು ಜಗಜ್ಜಾಹೀರು ಮಾಡಿದೆ. ಅಲ್ಲದೆ, ದೇಶದಲ್ಲಿ ಕಾನೂನು ವ್ಯವಸ್ಥೆಯೂ ಸೇರಿದಂತೆ ವಿವಿಧ ಸಂವಿಧಾನಿಕ ಸಂಸ್ಥೆಗಳನ್ನು ಒಂದೊಂದಾಗಿ ತನ್ನ ಕೈಗೊಂಬೆಯಾಗಿ ಮಾಡಿಕೊಂಡಿರುವ ಬಿಜೆಪಿ, ಚುನಾವಣಾ ಆಯೋಗವನ್ನು ಕೂಡ ಇಷ್ಟೊಂದು ರಾಜಾರೋಷವಾಗಿ ತನ್ನ ವಶ ಮಾಡಿಕೊಂಡುಬಿಟ್ಟಿದೆಯೇ ? ಎಂದೂ ಅವರು ಪ್ರಶ್ನಿಸಿದ್ದಾರೆ.
ಈ ನಡುವೆ, ಗೋಖಲೆಯ ಸರಣಿ ಟ್ವೀಟ್ ಗಳು ಮಾಧ್ಯಮದ ಗಮನ ಸೆಳೆದು, ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಚುನಾವಣಾ ಆಯೋಗ, ಆಗಿರುವ ಮುಖಭಂಗದಿಂದ ಪಾರಾಗುವ ಯತ್ನ ಆರಂಭಿಸಿದ್ದು, ಈ ವಿವಾದದ ಸಂಬಂಧ ಹೇಳಿಕೆ ಬಿಡುಗಡೆ ಮಾಡಿ, “ಗೋಖಲೆ ಅವರ ಟ್ವೀಟ್ ಆರೋಪಗಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯ ಚುನಾವಣಾಧಿಕಾರಿಗಳಿಂದ ವಿವರ ವರದಿ ಕೋರಿದೆ” ಎಂದು ಹೇಳಿದೆ.
ಹಾಗೆ ನೋಡಿದರೆ; ಬಿಜೆಪಿ ಅಧಿಕಾರಕ್ಕೆ ಬಂದ ಆರಂಭದಿಂದಲೂ ‘ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿಲ್ಲ. ಆಳುವ ಪಕ್ಷದ ಪರ ಕೆಲಸ ಮಾಡುತ್ತಿದೆ’ ಎಂಬ ಗಂಭೀರ ಆರೋಪಗಳೂ ರಾಜಕೀಯ ಪಕ್ಷಗಳಷ್ಟೇ ಅಲ್ಲದೆ, ದೇಶದ ವಿವಿಧ ವಲಯಗಳಿಂದಲೂ ಕೇಳಿಬಂದಿದ್ದವು. ಗುಜರಾತ್ ವಿಧಾನಸಭಾ ಚುನಾವಣೆ, ಇತ್ತೀಚಿನ ಲೋಕಸಭಾ ಚುನಾವಣೆ, ಕರ್ನಾಟಕ ವಿಧಾನಸಭಾ ಚುನಾವಣೆ ಸೇರಿದಂತೆ ಹಲವು ಚುನಾವಣೆಗಳ ವೇಳಾಪಟ್ಟಿ ಘೋಷಣೆಯಿಂದ ಹಿಡಿದು, ನೀತಿ ಸಂಹಿತೆ ಜಾರಿ ಮತ್ತು ಉಲ್ಲಂಘನೆಯ ವಿಷಯದ ವರೆಗೆ ಟೀಕೆಗೆ, ಅನುಮಾನಕ್ಕೆ, ಅವಿಶ್ವಾಸಕ್ಕೆ ಈಡಾಗಿದೆ.
ಚುನಾವಣಾ ವೇಳೆಯಲ್ಲಿ ಸೇನೆ ಮತ್ತು ಸೇನಾ ಕಾರ್ಯಾಚರಣೆಗಳನ್ನು ಆಳುವ ಪಕ್ಷ ಪ್ರಚಾರದ ವಸ್ತುವಾಗಿ ಬಳಸಿದರೂ ಆಕ್ಷೇಪವೆತ್ತದ ಧೋರಣೆ, ಇವಿಎಂ ಯಂತ್ರಗಳ ವಿಶ್ವಾಸಾರ್ಹತೆ ಪ್ರಶ್ನೆ, ಇದೀಗ ಬಿಹಾರ ಚುನಾವಣೆಯಲ್ಲಿ ವಯಸ್ಕರಿಗೆ ಅಂಚೆಮತಪತ್ರ ಬಳಕೆಯ ವಿಷಯ ಸೇರಿದಂತೆ ಹಲವು ವಿಷಯಗಳಲ್ಲಿ ಸಂಸ್ಥೆಯ ಎಪ್ಪತ್ತು ವರ್ಷಗಳ ವಿಶ್ವಾಸಾರ್ಹತೆಗೆ ಪೆಟ್ಟುಗಳು ಬೀಳುತ್ತಲೇ ಇವೆ.
ಒಂದು ದೇಶದ ರಾಜಕಾರಣ ಮತ್ತು ರಾಜಕೀಯ ವ್ಯವಸ್ಥೆಯನ್ನು ರೂಪಿಸುವ ಚುನಾವಣಾ ಪ್ರಕ್ರಿಯೆ ಯಾವುದೇ ಪಕ್ಷಪಾತವಿಲ್ಲದೆ, ಪ್ರಭಾವವಿಲ್ಲದೆ, ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಯುವಂತೆ ಖಾತರಿಪಡಿಸಬೇಕಾದ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯೇ ಹೀಗೆ ಮಣ್ಣುಮುಕ್ಕಿದರೆ, ಚುನಾವಣೆಗಳ ವಿಶ್ವಾಸಾರ್ಹತೆ ಉಳಿಯುತ್ತದೆಯೇ? ಚುನಾವಣಾ ವಿಶ್ವಾಸಾರ್ಹತೆಯೇ ಉಳಿಯದ ಮೇಲೆ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸಕ್ರಿಯವಾಗಿದೆ ಎಂದು ಹೇಳಲಾದೀತೆ? ಅದರಲ್ಲೂ ಕಾರ್ಪೊರೇಟ್ ಕಂಪನಿಗಳ ಕೈಗೊಂಬೆಯಾಗಿ ಜನಸಾಮಾನ್ಯರ ಹಿತ ಬಲಿಕೊಟ್ಟು ನೀತಿನಿರ್ಧಾರಗಳನ್ನು ಏಕಪಕ್ಷೀಯವಾಗಿ ಜಾರಿಗೆ ತರುತ್ತಿರುವ ಒಂದು ಆಡಳಿತ ಇರುವಾಗ ಇಂತಹ ಪ್ರಶ್ನೆಗಳು ಇನ್ನಷ್ಟು ಚಿಂತೆಗೀಡುಮಾಡುತ್ತವೆ. ಆತಂಕಕ್ಕೆ ಕಾರಣವಾಗುತ್ತವೆ!