ಕರೋನಾ ಹಿನ್ನೆಲೆಯಲ್ಲಿ ಕಳೆದ ಎರಡೂವರೆ ತಿಂಗಳಿನಿಂದ ಮುಚ್ಚಿರುವ ಶಾಲೆಗಳ ಪುನರಾರಂಭಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮೊದಲ ಹೆಜ್ಜೆ ಇಟ್ಟಿದ್ದು, ಪೋಷಕರೊಂದಿಗೆ ಸಮಾಲೋಚನೆ ನಡೆಸಿ ಜುಲೈ ಒಂದರಿಂದ ಹಂತಹಂತವಾಗಿ ತರಗತಿಗಳನ್ನು ಆರಂಭಿಸುವ ಕುರಿತು ಅಭಿಪ್ರಾಯ ತಿಳಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ.
ಕರೋನಾ ನಿಯಂತ್ರಣ ಉದ್ದೇಶದ ಲಾಕ್ ಡೌನ್ ಕ್ರಮಗಳು ಹಂತಹಂತವಾಗಿ ಜಾರಿಯಾದರೂ, ಲಾಕ್ ಡೌನ್ ಅವಧಿಯಲ್ಲಿ ಕೆಲಮಟ್ಟಿಗೆ ನಿಯಂತ್ರಣದಲ್ಲಿದ್ದ ಸೋಂಕು, ಇದೀಗ ಬಹುತೇಕ ಲಾಕ್ ಡೌನ್ ತೆರವಿನ ಬಳಿಕ ಆಘಾತಕಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ನಗರಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಸೋಂಕು, ಇದೀಗ ಕಳೆದ ಒಂದು ತಿಂಗಳಿನಿಂದ ಗ್ರಾಮೀಣ ಭಾಗಗಳಿಗೂ ವ್ಯಾಪಿಸತೊಡಗಿದೆ. ಸೋಂಕು ತೀರಾ ವಿರಳವಿದ್ದಾಗ ಶಾಲೆಗಳನ್ನು ಮುಚ್ಚಿ, ಬೀದಿಬೀದಿಗಳಲ್ಲಿ ಸೋಂಕು ಹಬ್ಬಿರುವಾಗ ಪುನರಾರಂಭಿಸುತ್ತಿರುವುದು ಸರಿಯೇ ಎಂಬ ಆತಂಕ ಈಗ ಪೋಷಕರ ವರ್ಗದಲ್ಲಿ ಮೂಡಿದೆ.
Also Read: ಜುಲೈನಲ್ಲಿ ಶಾಲೆಗಳ ಪುನರಾರಂಭಕ್ಕೆ ಪೋಷಕರ ವಿರೋಧ; ಶುರುವಾಗಿದೆ ಆನ್‌ಲೈನ್ ಅಭಿಯಾನ
ಈ ಮೊದಲು ಆಗಸ್ಟ್ ಹೊತ್ತಿಗೆ ಶಾಲೆಗಳು ಪುನರಾರಂಭವಾಗಬಹುದು ಎಂಬ ಸುದ್ದಿ ಹರಡಿತ್ತು. ಆದರೆ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಆ ಬಗ್ಗೆ ಸ್ಪಷ್ಟನೆ ನೀಡಿ ಸರ್ಕಾರ ಈ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಬಳಿಕ ಶಾಲೆಗಳನ್ನು ಪಾಳಿಯಲ್ಲಿ ನಡೆಸುವ ಬಗ್ಗೆ, ತರಗತಿಗಳಲ್ಲಿ ಮಕ್ಕಳ ಮಿತಿಯ ಬಗ್ಗೆ, ಭೌತಿಕ ಅಂತರ ಕಾಯ್ದುಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಲು ಸಿದ್ಧಪಡಿಸಿದ ಶಿಕ್ಷಣ ಇಲಾಖೆಯ ಸುತ್ತೋಲೆ ವೈರಲ್ ಆಗಿತ್ತು. ಆಗಲೂ ಸಚಿವರು ಸ್ಪಷ್ಟನೆ ನೀಡಿ, ಅದು ಇಲಾಖೆಯ ಸಭೆಯಲ್ಲಿ ಚರ್ಚೆಗಾಗಿ ಸಿದ್ಧಪಡಿಸಿದ ಸುತ್ತೋಲೆ, ಶಾಲೆಗಳಿಗೆ ಯಾವುದೇ ಸೂಚನೆ ನೀಡಿಲ್ಲ ಎಂದು ಹೇಳಿದ್ದರು.
Also Read: ಶಾಲಾ ತರಗತಿ ಅವಧಿಯಲ್ಲಿ ಬದಲಾವಣೆ; ಇನ್ಮುಂದೆ ನಡೆಯಲಿದೆ ಎರಡು ಪಾಳಿ ತರಗತಿ
ಹೀಗೆ ಹಲವು ಗೊಂದಲ, ಆತಂಕಗಳ ನಡುವೆ ಪೋಷಕರು ತಮ್ಮ ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಬಗ್ಗೆ ಚಿಂತೆಯಲ್ಲಿರುವಾಗಲೇ ಇದೀಗ ದಿಢೀರನೇ ಜೂನ್ 8ರಿಂದಲೇ ಶಾಲಾ ದಾಖಲಾತಿ ಪ್ರಾರಂಭ. ಶುಲ್ಕ ವಸೂಲಿ ಕೂಡ ಮಾಡಬಹುದು ಮತ್ತು ಜುಲೈ ಒಂದರಿಂದಲೇ ತರಗತಿಗಳು ಪುನರಾರಂಭಿಸುವ ಇರಾದೆ ಸರ್ಕಾರಕ್ಕಿದೆ ಎನ್ನುವ ಮೂಲಕ ಸ್ವತಃ ಶಿಕ್ಷಣ ಸಚಿವರು ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಆ ಹಿನ್ನೆಲೆಯಲ್ಲಿಯೇ ಇಲಾಖೆ ಪೋಷಕರು ಮತ್ತು ಶಾಲಾಭಿವೃದ್ಧಿ ಸಮಿತಿಗಳ ಸಮಾಲೋಚನೆ ನಡೆಸಿ ಅಭಿಪ್ರಾಯ ತಿಳಿಸುವಂತೆ ಎಲ್ಲಾ ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಿದೆ. ಜೂನ್ 10, 11 ಮತ್ತು 12ರಂದು ಸಮಾಲೋಚನಾ ಸಭೆಗಳನ್ನು ನಡೆಸಿ ಅಭಿಪ್ರಾಯ ಸಂಗ್ರಹಿಸಲು ಸರ್ಕಾರ ಮುಂದಾಗಿದೆ.
Also Read: ರಾಜ್ಯದಲ್ಲಿ ಶಾಲೆಗಳನ್ನು ಪುನರಾರಂಭಿಸಲು ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ

ಹಾಗಾಗಿಯೇ ಇದೀಗ ಶಾಲೆಗಳ ಪುನರಾರಂಭಿಸುವ ಕುರಿತ ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿದ್ದು, ವಿವಿಧ ಶಿಕ್ಷಣ ತಜ್ಞರು, ಸಾಂಕ್ರಾಮಿಕ ರೋಗ ತಜ್ಞರು, ಶಿಕ್ಷಣ ಸಂಸ್ಥೆಗಳು, ಪೋಷಕರು ತಮ್ಮದೇ ವಾದಗಳನ್ನು ಮಂಡಿಸತೊಡಗಿದ್ದಾರೆ. ಬಹುತೇಕ ಶಿಕ್ಷಣ ತಜ್ಞರು ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರೆ, ಮತ್ತೆ ಶಾಲೆಗಳನ್ನು ಆರಂಭಿಸದೇ ಹೋದರೆ ಮಕ್ಕಳ ಭವಿಷ್ಯಕ್ಕೆ ತೊಂದರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಸಂಸ್ಥೆಗಳಂತೂ ಬಹುತೇಕ ಆದಷ್ಟು ಬೇಗ ಶಾಲೆಗಳನ್ನು ಆರಂಭಿಸುವ ಬಗ್ಗೆ ಉತ್ಸುಕವಾಗಿವೆ. ಅದರಲ್ಲೂ ಶಿಕ್ಷಕರಿಗೆ ವೇತನ ನೀಡಲು ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿರುವ ಸಂಸ್ಥೆಗಳು ಶಾಲಾ ದಾಖಲಾತಿ ಆರಂಭವಾಗದೆ ಸಂಕಷ್ಟದಲ್ಲಿವೆ. ಹಾಗಾಗಿ ಆ ಕಾರಣಕ್ಕೆ ಬಹುತೇಕ ಸಂಸ್ಥೆಗಳು ತರಗತಿಗಳ ಪುನರಾರಂಭಕ್ಕೆ ಉತ್ಸುಕವಾಗಿವೆ.
ಮುಖ್ಯವಾಗಿ ಶಾಲೆಗಳಲ್ಲಿ ಭೌತಿಕ ಅಂತರ ಕಾಯುವುದು ಮತ್ತು ಮಕ್ಕಳಿಗೆ ಮಾಸ್ಕ್ ಧರಿಸುವುದು, ಕೈ ತೊಳೆಯುವುದು, ಇತರರ ವಸ್ತುಗಳನ್ನು (ಪೆನ್ನು, ಪೆನ್ಸಿಲ್, ನೋಟ್ ಬುಕ್) ಮುಟ್ಟದಿರುವಂತೆ ನೋಡಿಕೊಳ್ಳುವುದು ಸವಾಲಿನ ಕೆಲಸ. ಸಾವಿರಾರು ಮಕ್ಕಳು ಒಂದೆ ಕಡೆ ಸೇರುವ, ಆಟೋಟದಲ್ಲಿ ಭಾಗಿಯಾಗುವ ಸಂದರ್ಭದಲ್ಲಿ ಯಾರೊಬ್ಬರಿಗೆ ಸೋಂಕು ಇದ್ದರೂ ಅದು ಇಡೀ ಶಾಲೆಗೆ ಶೀಘ್ರಗತಿಯಲ್ಲಿ ಹರಡುವ, ಶಾಲೆಯನ್ನೇ ಸೀಲ್ ಡೌನ್ ಗೆ ತಳ್ಳುವ ಸಾಧ್ಯತೆ ಇದೆ. ಜೊತೆಗೆ ಶಾಲೆಗೆ ಹೋಗಿಬರಲು ಮಕ್ಕಳು ಬಳಸುವ ಸಾರಿಗೆ ಸೌಕರ್ಯ ಕೂಡ ಅಪಾಯಕ್ಕೆ ಎಡೆಮಾಡಬಹುದು. ಹಾಗಾಗಿ ಸರ್ಕಾರ ಕನಿಷ್ಟ ಸೋಂಕು ಪ್ರಕರಣಗಳು ಇಳಿಮುಖವಾಗುವವರೆಗಾದರೂ ಕಾಯುವುದು ಒಳಿತು ಎಂಬುದು ಪೋಷಕರ ಅನಿಸಿಕೆ.
Also Read: ಲಾಕ್‌ಡೌನ್‌ಎಫೆಕ್ಟ್: ಮನೆಯಲ್ಲೇ ಮಕ್ಕಳಿಗೆ ಶಿಕ್ಷಣ..! ಆನ್ಲೈನ್ ತರಗತಿಗಳ ಸವಾಲುಗಳೇನು..?
ಜೊತೆಗೆ ಖಾಸಗೀ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದು ಸರ್ಕಾರ ತರಾತುರಿಯಲ್ಲಿ ಈ ಹೆಜ್ಜೆ ಇಡುತ್ತಿದೆ. ಇದು ಅನಾಹುತಕಾರಿ. ಮಕ್ಕಳ ಜೀವಕ್ಕಿಂತ ಶಿಕ್ಷಣ ಮುಖ್ಯವೇನಲ್ಲ. ಈಗ ಇಡೀ ದೇಶದಲ್ಲಿ ದಿನದಿಂದ ದಿನಕ್ಕೆ ಸೋಂಕು ಪ್ರಮಾಣದ ಆಘಾತಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹೊತ್ತಿನಲ್ಲಿ ಶಾಲೆಗಳನ್ನು ಆರಂಭಿಸುವ ಚಿಂತನೆ ನಡೆಸುವುದೇ ಅನಾಹುತಕಾರಿ. ಸರ್ಕಾರ ಜನರ ಹಿತದೃಷ್ಟಿಯಿಂದ, ಮಕ್ಕಳ ಹಿತದೃಷ್ಟಿಯಿಂದ ಯೋಚಿಸಬೇಕೇ ವಿನಃ ಕೆಲವೇ ಮಂದಿ ಶಿಕ್ಷಣ ಸಂಸ್ಥೆಗಳ ಹಿತದೃಷ್ಟಿಯಿಂದ ಅಲ್ಲ. ಹೀಗೆ ಕೆಲವೇ ಮಂದಿಯ ಹಿತದೃಷ್ಟಿಯಿಂದ ಯೋಚಿಸಿಯೇ ಸರಿಯಾದ ಬಿಗಿ ಕ್ರಮಗಳನ್ನು ಜಾರಿಗೊಳಿಸದೆ ದೇಶದೊಳಕ್ಕೆ ಮೊದಲು ಕರೋನಾ ಸೋಂಕು ಬಿಟ್ಟುಕೊಂಡು ದೇಶವನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ. ಈಗ ಮತ್ತೊಮ್ಮೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕೆಲವೇ ಮಂದಿಯ ಹಿತ ಕಾಯಲು ಮಕ್ಕಳ ಬದುಕನ್ನು ಬಲಿಕೊಡುವುದು ಬೇಡ ಎಂಬ ಆಕ್ರೋಶ ಕೂಡ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ.
ಮೂಲತಃ ಕೇಂದ್ರ ಸರ್ಕಾರ ಶಾಲಾ ಕಾಲೇಜುಗಳನ್ನು ಜೂನ್ ನಿಂದಲೇ ಆರಂಭಿಸುವ ಚಿಂತನೆ ನಡೆಸಿತ್ತು. ಇದೀಗ ಕರೋನಾ ನಿರೀಕ್ಷೆಗೂ ಮೀರಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕನಿಷ್ಟ ಜುಲೈನಿಂದಲಾದರೂ ಪುನರಾರಂಭಿಸುವ ಯೋಚನೆ ನಡೆಸಿ, ಆ ದಿಸೆಯಲ್ಲಿ ಪೋಷಕರು ಮತ್ತು ಶಾಲಾ ಸಮಿತಿಗಳ ಅಭಿಪ್ರಾಯ ಸಂಗ್ರಹಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಿದೆ. ಹಾಗಾಗಿ ರಾಜ್ಯ ಸರ್ಕಾರ ಹೊಸ ಸುತ್ತೋಲೆ ಹೊರಡಿಸಿದೆ ಎನ್ನಲಾಗುತ್ತಿದೆ. ಅಂದರೆ, ವಿವೇಚನಾಹೀನ ಲಾಕ್ ಡೌನ್ ಹೇರಿಕೆಯಿಂದಾಗಿ ಅತ್ತ ಸೋಂಕೂ ನಿಯಂತ್ರಣಕ್ಕೆ ಬಂದಿಲ್ಲ; ಇತ್ತ ದೇಶವನ್ನು ಆರ್ಥಿಕತೆಯನ್ನು ಉಳಿಸಿಕೊಳ್ಳಲಾಗಲಿಲ್ಲ. ಇದೀಗ ಶಾಲೆಗಳ ವಿಷಯದಲ್ಲಿಯೂ ಕೇಂದ್ರ ಸರ್ಕಾರ ಮತ್ತೊಂದು ಅನಾಹುತಕಾರಿ ಪ್ರಯತ್ನಕ್ಕೆ ಮುಂದಾಗಿದೆ ಎಂಬುದು ಹಲವರ ಆತಂಕ.
ಈ ನಡುವೆ ಶಿಕ್ಷಣ ವ್ಯವಸ್ಥೆಯೇ ದೇಶದ ಬೊಕ್ಕಸಕ್ಕೆ ಹೊರೆ. ಅನುತ್ಪಾದಕ ಇಲಾಖೆ. ಹಾಗಾಗಿ ಈ ಕರೋನಾ ಸಂದರ್ಭವನ್ನೇ ಬಳಸಿಕೊಂಡು ಶಿಕ್ಷಕರು ಮತ್ತು ಬೋಧಕರ ವೇತನ ಮತ್ತು ಶಿಕ್ಷಣ ಮೂಲಸೌಕರ್ಯಕ್ಕಾಗಿ ಮಾಡುತ್ತಿರುವ ವೆಚ್ಚವನ್ನು ಕಡಿತ ಮಾಡಲು ಕೇಂದ್ರ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದೆ. ರಜೆ ಅವಧಿಯಲ್ಲಿ ಆನ್ ಲೈನ್ ಶಿಕ್ಷಣಕ್ಕೆ ಒಗ್ಗುತ್ತಿರುವ ವಿದ್ಯಾರ್ಥಿಗಳು ಮತ್ತು ಪೋಷಕರ ಅನಿವಾರ್ಯತೆಯನ್ನೇ ಬಳಸಿಕೊಂಡು ಮುಂದೆ ಶಾಶ್ವತವಾಗಿ ಶೈಕ್ಷಣಿಕ ವರ್ಷವನ್ನೇ ಅರ್ಧದಷ್ಟು ಕಡಿತ ಮಾಡಿ, ಕೇವಲ 100 ದಿನ ಶಾಲೆ-ಕಾಲೇಜು ನಡೆಸುವುದು ಉಳಿದ ದಿನಗಳಲ್ಲಿ ಆನ್ ಲೈನ್ ಮೂಲಕ ಶಿಕ್ಷಣ ನೀಡಲು ಸರ್ಕಾರ ಯೋಚಿಸಿದೆ. ಆ ಮೂಲಕ ಶಿಕ್ಷಕರ ವೇತನ ಮತ್ತು ಮೂಲಸೌಕರ್ಯಕ್ಕೆ ವ್ಯಯಮಾಡುತ್ತಿರುವ ಮೊತ್ತದಲ್ಲಿ ಭಾರೀ ಉಳಿತಾಯ ಮಾಡಬಹುದು ಎಂಬುದು ಕೇಂದ್ರ ಬಿಜೆಪಿ ಸರ್ಕಾರದ ಚಿಂತನೆ. ಸದಾ ವೈಚಾರಿಕ ಚಿಂತನೆ, ಶಿಕ್ಷಣದ ವಿಷಯದಲ್ಲಿ ಒಂದು ರೀತಿಯ ಅಸಹನೆಯನ್ನು ಬೆಳೆಸಿಕೊಂಡಿರುವ ಸಂಪ್ರದಾಯವಾದಿ ಬಿಜೆಪಿ ಶಿಕ್ಷಣದ ವಿಷಯದಲ್ಲಿ ಕೂಡ ಕರೋನಾ ಸಂದರ್ಭವನ್ನೇ ಬಳಸಿಕೊಂಡು ವೈಜ್ಞಾನಿಕ ಶಿಕ್ಷಣ ಪದ್ಧತಿಗೆ ಕೋಕ್ ಕೊಡಲು ಹುನ್ನಾರ ನಡೆಸಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಇಂತಹ ಹುನ್ನಾರದ ಭಾಗವಾಗಿಯೇ ಈಗ ಪೋಷಕರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಸೋಂಕಿನ ಆತಂಕದಲ್ಲಿರುವ ಪೋಷಕರು ಶಾಲೆ ಆರಂಭಕ್ಕೆ ವಿರೋಧ ವ್ಯಕ್ತಪಡಿಸುವುದು ನಿರೀಕ್ಷಿತ. ಅದೇ ಜನಾಭಿಪ್ರಾಯವನ್ನು ಮುಂದಿಟ್ಟುಕೊಂಡು ಶಾಶ್ವತವಾಗಿ ಶಾಲಾ ಕಾಲೇಜುಗಳ ವಾರ್ಷಿಕ ಶೈಕ್ಷಣಿಕ ವರ್ಷಕ್ಕೆ ಕತ್ತರಿ ಹಾಕಿ ಕೇವಲ ನೂರು ದಿನಕ್ಕೆ ಇಳಿಸುವ ಲೆಕ್ಕಾಚಾರ ಕೂಡ ಕೇಂದ್ರ ಸರ್ಕಾರದದ್ದಾಗಿರಬಹುದು. ಹಾಗಾಗಿ ಈಗ ಪೋಷಕರು ಮತ್ತು ಶಾಲಾ ಸಮಿತಿಗಳು ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ ಎಂಬ ಸಲಹೆಯೂ ಇದೆ.
ಈ ನಡುವೆ ಕೆಲವು ಸಾಂಕ್ರಾಮಿಕ ರೋಗ ತಜ್ಞರು ಮತ್ತು ಅನುಭವಿ ವೈದ್ಯರು, ಶಾಲಾ ಮಕ್ಕಳಲ್ಲಿ ಸೋಂಕು ಹರಡುವ ಮತ್ತು ಅದು ಗಂಭೀರ ಆರೋಗ್ಯ ಸಮಸ್ಯೆಗೆ ಎಡೆಮಾಡುವ ಪ್ರಮಾಣ ತೀರಾ ಕಡಿಮೆ. ಜಾಗತಿಕ ಮಟ್ಟದಲ್ಲಿ ಕೂಡ ಅಂಕಿಅಂಶಗಳನ್ನು ಅವಲೋಕಿಸಿದರೆ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿರುವುದು ಮತ್ತು ಅವರಿಗೆ ಮಾರಣಾಂತಿಕವಾಗಿರುವುದು ಇಲ್ಲವೇ ಇಲ್ಲ ಎಂಬಷ್ಟು ವಿರಳ. ಹಾಗಾಗಿ ಶಾಲಾ ಕಾಲೇಜುಗಳನ್ನು ತೆರೆಯುವುದರಲ್ಲಿ ಯಾವುದೇ ತೊಂದರೆ ಇಲ್ಲ. ವಾಸ್ತವವಾಗಿ ಶಾಲಾ ಕಾಲೇಜು ಮುಚ್ಚಿ ಮಕ್ಕಳನ್ನು ಮನೆಯಲ್ಲಿ ಕೂಡಿಹಾಕುವುದು ಅವರ ಕಲಿಕೆ ಮತ್ತು ದೈಹಿಕ ಆರೋಗ್ಯಕ್ಕೂ ಮಾರಕ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆ, ಸರ್ಕಾರದ ಪ್ರಸ್ತಾವನೆ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದು ಅದರಲ್ಲಿನ ಗೊಂದಲಗಳು, ಶಂಕೆ, ಮತ್ತು ವಾಸ್ತವಿಕ ಸವಾಲುಗಳ ಕುರಿತ ಪೋಷಕರು ಮತ್ತು ಶಾಲಾ ಸಮಿತಿಗಳಿಗೆ ಎಷ್ಟರಮಟ್ಟಿಗೆ ಮನವರಿಕೆ ಮಾಡಿಕೊಡುತ್ತದೆ ಎಂಬುದರ ಮೇಲೆ ಶಾಲೆಗಳ ಪುನರಾರಂಭದ ದಿನಾಂಕ ನಿರ್ಧಾರವಾಗಲಿದೆ!










