ರಾಜ್ಯದಲ್ಲಿ ಇವತ್ತು ಒಂದೇ ದಿನ ಬರೋಬ್ಬರಿ 22 ಜನರಲ್ಲಿ ಹೊಸದಾಗಿ ಕರೋನಾ ಸೋಂಕು ಪತ್ತೆಯಾಗಿದೆ. ಇವತ್ತಿನ ಸೋಂಕಿತರ ಸೇರಿ ರಾಜ್ಯದಲ್ಲಿ ಕರೋನಾ ಪೀಡಿತರ ಸಂಖ್ಯೆ 557ಕ್ಕೆ ಏರಿಕೆ ಆಗಿದೆ. ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ಇವತ್ತು ಒಂದೇ ದಿನ 14 ಕರೋನಾ ಕೇಸ್ ಪತ್ತೆಯಾಗುವ ಮೂಲಕ ರಾಜ್ಯದ ಹಾಟ್ಸ್ಪಾಟ್ ಆಗಿದೆ. ಇನ್ನುಳಿದಂತೆ ಬೆಂಗಳೂರಲ್ಲಿ 3, ವಿಜಯಪುರದಲ್ಲಿ 2, ದಾವಣಗೆರೆಯಲ್ಲಿ 1, ತುಮಕೂರಲ್ಲಿ 1, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1 ಕೇಸ್ ಪತ್ತೆಯಾಗಿದೆ. ಇದರಲ್ಲಿ ಬೆಳಗಾವಿ ಪ್ರಕರಣ ಬೆಚ್ಚಿ ಬೀಳಿಸುವಂತಿದೆ.
ಬೆಳಗಾವಿ ಜಿಲ್ಲೆಯಲ್ಲಿ ಒಂದೇ ದಿನ ಬರೋಬ್ಬರಿ 14 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಕುಂದಾನಗರಿಯಲ್ಲಿ ಒಟ್ಟು ಕರೋನಾ ಸೋಂಕಿತರ ಸಂಖ್ಯೆ 69ಕ್ಕೆ ಏರಿಕೆಯಾಗಿದೆ. ಹಿರೇಬಾಗೇವಾಡಿಯ 11 ಜನರಿಗೆ ಹಾಗೂ ಸಂಕೇಶ್ವರದ ಮೂವರರಿಗೆ ಇಂದು ಸೋಂಕು ದೃಢಪಟ್ಟಿದೆ. ಇಲ್ಲೀವರೆಗೂ ಹಿರೇಬಾಗೇವಾಡಿಯಲ್ಲಿ 36, ಸಂಕೇಶ್ವರದಲ್ಲಿ 5, ಕುಡಚಿಯಲ್ಲಿ 18, ಕ್ಯಾಂಪ್ನಲ್ಲಿ 6, ಬೆಳಗುಂದಿಯಲ್ಲಿ 1, ಪೀರನವಾಡಿಯಲ್ಲಿ 1, ಆಜಾದ್ ನಗರದಲ್ಲಿ 1, ಯಳ್ಳೂರಲ್ಲಿ ಒಬ್ಬರಲ್ಲಿ ಸೋಂಕು ಕಾಣಿಸಿದ್ದು ಜಿಲ್ಲೆಯಾದ್ಯಂತ ಒಟ್ಟು 69 ಪ್ರಕರಣಗಳಿವೆ. ಇದರಲ್ಲಿ 7 ಜನ ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನುಳಿದ 62 ಆ್ಯಕ್ಟಿವ್ ಕೇಸ್ಗಳಿವೆ. ಬೆಂಗಳೂರು, ಮೈಸೂರು, ಕಲಬುರಗಿ ಬಳಿಕ ಬೆಳಗಾವಿ ಕರೋನಾ ಹಾಟ್ಸ್ಪಾಟ್ ಆಗಿ ಬದಲಾಗಿದೆ.
ಬೆಳಗಾವಿಯಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಆಗುತ್ತಿದ್ದು ಕುಂದಾನಗರಿ ಜನ ಬೆಚ್ಚಿ ಬೀಳುತ್ತಿದ್ದಾರೆ. ಸಂಕೇಶ್ವರ ಪಟ್ಟಣದಲ್ಲಿ ಅಜ್ಜಿ ಮತ್ತು ಮೊಮ್ಮಕ್ಕಳಿಗೆ ಕರೋನಾ ಸೋಂಕು ಹರಡಿದೆ. ಸೋಂಕಿತ ಬಾಲಕನೊಂದಿಗೆ ಆಟವಾಡಿದ್ದ ಇಬ್ಬರು ಮಕ್ಕಳಿಗೂ ಸೋಂಕು ಹರಡಿದೆ. 8 ವರ್ಷದ ಬಾಲಕಿ, 9 ವರ್ಷದ ಬಾಲಕ ಸೇರಿ ಅಣ್ಣ ತಂಗಿ ಮತ್ತು ಅಜ್ಜಿಗೆ ಕರೋನಾ ಸೋಂಕು ಹಬ್ಬಿದೆ. ಸೋಂಕಿತ ವಾಸವಿದ್ದ ಪ್ರದೇಶದ ವಾಸವಿದ್ದ ಅಜ್ಜಿ ಮತ್ತು ಮೊಮ್ಮಕ್ಕಳು, ದೆಹಲಿಯ ಮರ್ಕಜ್ನಿಂದ ಮರಳಿದ್ದ ಸೋಂಕಿತ ಪೇಷೆಂಟ್ ನಂಬರ್ 293 ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ. ಒಂದೇ ಗ್ರಾಮದಲ್ಲಿ 750ಕ್ಕೂ ಹೆಚ್ಚು ಜನರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.

ತುಮಕೂರಿನಲ್ಲಿ ಐದನೇ ಕರೋನಾ ಪ್ರಕರಣ ಬೆಳಕಿಗೆ ಬಂದಿದ್ದು, ಪೇಷೆಂಟ್ ನಂಬರ್ 553 ಮಹಿಳೆ ಜೊತೆಗೆ ಸಂಪರ್ಕ ಹೊಂದಿದ್ದ ಮಹಿಳೆಯಲ್ಲಿ ಕರೋನಾ ಸೋಂಕು ದೃಢಪಟ್ಟಿದೆ. ಗಂಡನಿಂದಾಗಿ ಪತ್ನಿಗೆ ಕರೋನಾ ಸೋಂಕು ದೃಢಪಟ್ಟಿದೆ. ಇನ್ನೂ ಪೇಷೆಂಟ್ ನಂಬರ್ 535ರ ಮನೆಯಲ್ಲಿ ನಾಲ್ಕು ಜನ ಇದ್ದರು. ಎಲ್ಲರ ಗಂಟಲು ದ್ರವವನ್ನು ಲ್ಯಾಬ್ಗೆ ಕಳಿಸಿದ್ದೆವು. ನಾಲ್ಕು ಜನರಲ್ಲಿ ಮೂರು ನೆಗೆಟಿವ್ ಬಂದಿದೆ. ಸೋಂಕಿತನ ಪತ್ನಿಗೆ ಮಾತ್ರ ಪಾಸಿಟಿವ್ ಬಂದಿದೆ ಎಂದು ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಹೇಳಿದ್ದಾರೆ. ಪ್ರೈಮರಿ ಕಾಂಟ್ಯಾಕ್ಟ್ನ ಎಲ್ಲರೂ ಐಸೊಲೇಟ್ ಮಾಡಲಾಗಿದ್ದು, 12 ದಿನಗಳ ಬಳಿಕ ಮತ್ತೊಮ್ಮೆ ಟೆಸ್ಟ್ ಮಾಡುವುದಾಗಿ ತಿಳಿಸಿದ್ದಾರೆ.
ಅತ್ತ ಬೆಣ್ಣೆನಗರಿ ದಾವಣಗೆರೆಯಲ್ಲಿ ಮತ್ತೊಂದು ಕರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ. 69 ವರ್ಷದ ವೃದ್ಧನಿಗೆ ಕರೋನಾ ಪಾಸಿಟಿವ್ ಬಂದಿದ್ದು, ಜಾಲಿ ನಗರ ಸೀಲ್ಡೌನ್ ಮಾಡುತ್ತಿದ್ದಾರೆ. ಡಯಾಬಿಟಿಸ್ನಿಂದ ಬಳಲುತ್ತಿದ್ದ ವೃದ್ಧನಿಗೆ ಉಸಿರಾಟದ ತೊಂದರೆ ಆಗಿತ್ತು. ಹಾಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ರು. ಇದೀಗ ಕರೋನಾ ಸೋಂಕು ಇರುವುದು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ತಿಳಿಸಿದ್ದಾರೆ. ವೃದ್ಧನ ಕುಟುಂಬದ ಒಂದೂವರೆ ವರ್ಷದ ಮಗು ಹಾಗೂ 3 ವರ್ಷದ ಮಗು ಸೇರಿ ಒಟ್ಟು ಒಂಬತ್ತು ಜನರನ್ನು ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ನಿನ್ನೆ ಬೆಂಗಳೂರಿನಲ್ಲಿ ಯಾವುದೇ ಕರೋನಾ ಸೋಂಕು ಇರಲಿಲ್ಲ. ಆದರೆ ಇಂದು ಪಾದರಾಯನಪುರದಲ್ಲಿ ಮೂವರಿಗೆ ಸೋಂಕು ದೃಢವಾಗಿದೆ. ಹಾಗಾಗಿ ಬೆಂಗಳೂರಿನ ಜನರ ನೆಮ್ಮದಿ ಮತ್ತೆ ಆತಂಕಕ್ಕೆ ಕಾರಣವಾಗಿದೆ. ಒಟ್ಟಾರೆ ರಾಜ್ಯದಲ್ಲಿ ಕರೋನಾ ಸೋಂಕು ಕಡಿಮೆಯಾಗುತ್ತಿದೆ ಎಂದು ಸರ್ಕಾರ ಒಂದೊಂದೇ ವ್ಯವಹಾರ ನಡೆಸಲು ಅನುಮತಿ ಕೊಡುತ್ತಿದೆ. ಆದರೆ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ನಡುವೆ ರಾಜ್ಯ ಸರ್ಕಾರ ಇಂದೂ ಕೂಡ ಕೆಲವೊಂದು ಸಡಿಲಿಕೆ ಮಾಡಲು ನಿರ್ಧಾರ ಮಾಡಿದೆ.
ಕರೋನಾ ಕೇಸ್ನಿಂದ ಕಂಟೋನ್ಮೆಂಟ್ ಝೋನ್ ಎಂದು ಗುರುತಿಸಿರುವ ಪ್ರದೇಶಗಳನ್ನು ಬಿಟ್ಟು ಉಳಿದ ಕಡೆಗಳಲ್ಲಿ ಕೈಗಾರಿಕೆಯನ್ನು ಆರಂಭಿಸಲು ಅವಕಾಶ ನೀಡಲಾಗಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಮೇ 3 ರಂದು 2ನೇ ಹಂತದ ಲಾಕ್ಡೌನ್ ಮುಕ್ತಾಯವಾಗಲಿದ್ದು ಮೇ 4 ರಿಂದ ಕಾರ್ಖಾನೆಗಳನ್ನು ಆರಂಭ ಮಾಡಬಹುದು. ಆದರೆ ಮಾಲ್ಗಳನ್ನ ತೆರೆಯುವಂತಿಲ್ಲ, ಹೊಟೇಲ್ಗಳಲ್ಲಿ ಕೇವಲ ಪಾರ್ಸೆಲ್ ಮಾತ್ರ ಮುಂದುವರಿಸಬೇಕು. ಮೇ 3ರ ಬಳಿಕ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದಂತೆ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ. ಜೊತೆಗೆ ಕರೋನಾ ವೈರಸ್ ಮಹಾಮಾರಿ ಇನ್ನೂ ಎರಡು-ಮೂರು ತಿಂಗಳು ಮುಂದುವರಿದರೂ ಆಶ್ಚರ್ಯ ಇಲ್ಲ ಎಂದಿದ್ದಾರೆ. ಈ ನಡುವೆ ಗ್ರೀನ್ ಝೋನ್ ಆಗಿರುವ ಪ್ರದೇಶಗಳಲ್ಲಿ ಈಗಾಗಲೇ ಎಲ್ಲಾ ವ್ಯವಹಾರ ನಡೆಸಲು ಸರ್ಕಾರ ಸಮ್ಮತಿ ಸೂಚಿಸಿದೆ. ಈ ನಡುವೆ ಜಿಲ್ಲೆ, ಅಂತಾರಾಜ್ಯದಿಂದಲೂ ವಲಸೆ ಕಾರ್ಮಿಕರನ್ನು ವಾಪಸ್ ಕರೆತರಲು ಸರ್ಕಾರ ನಿರ್ಧಾರ ಮಾಡಿದೆ. ಕರೋನಾ ಸೋಂಕು ಹೆಚ್ಚಳವಾಗುತ್ತಾ ಎನ್ನುವ ಆತಂಕ ಜನರ ಮನಸ್ಸಲ್ಲಿ ಮೂಡಿದೆ.