ಕಳೆದ 24 ಗಂಟೆಗಳಲ್ಲಿ ಅತೀ ಹೆಚ್ಚು ಕರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ರಾಜ್ಯದಲ್ಲಿ ಒಂದೇ ದಿನ 1694 ಹೊಸ ಪ್ರಕರಣಗಳು ಕಂಡುಬಂದಿದ್ದು, ಕರೋನಾ ಸೋಂಕು ಸಮುದಾಯ ಪ್ರಸರಣವಾಗಿಲ್ಲ ಎಂಬ ವಾದ ಎದುರಿಡುವ ಸರ್ಕಾರದ ಹೇಳಿಕೆಯ ಮೇಲೆ ಅನುಮಾನದ ನೆರಳು ಸುಳಿಯುತ್ತದೆ.
ರಾಜ್ಯದಲ್ಲಿ ಒಟ್ಟು 19,710 ಕರೋನಾ ಪಾಸಿಟಿವ್ ಕಂಡುಬಂದಿದೆ. ಅದರಲ್ಲಿ 8805 ಮಂದಿ ಸೋಂಕುಮುಕ್ತರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ ರಾಜ್ಯದಲ್ಲಿ 10,608 ಸಕ್ರಿಯ ಕರೋನಾ ಪ್ರಕರಣಗಳಿವೆ. ಕಳೆದ ಒಂದೇ ದಿನದಲ್ಲಿ 21 ಮಂದಿ ಸೋಂಕಿತರು ಕರೋನಾದಿಂದಾಗಿ ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 293 ತಲುಪಿದೆ.
ಸದ್ಯ ರಾಜ್ಯದಲ್ಲಿ 201 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 04 ಮಂದಿ ಕರೋನಾ ಸೋಂಕಿತರು ಬೇರೆ ಕಾರಣಗಳಿಂದ ಮೃತಪಟ್ಟಿದ್ದಾರೆಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯ ರಾಜಧಾನಿಯಲ್ಲಿ 994 ಪ್ರಕರಣಗಳು ಒಂದೇ ದಿನದಲ್ಲಿ ಪತ್ತೆಯಾಗಿದ್ದು, ಹರಡುವಿಕೆಯ ವೇಗ ಹೆಚ್ಚಾಗಿದೆ. ಅದೇ ವೇಳೆ ರಾಜಧಾನಿಯಲ್ಲಿ ಚೇತರಿಸಿಕೊಳ್ಳುವವರ ಪ್ರಮಾಣ ತೀರಾ ಕಡಿಮೆಯಿದೆ. ಒಟ್ಟು 7173 ಕರೋನಾ ಪಾಸಿಟಿವ್ ಪ್ರಕರಣಗಳಲ್ಲಿ ಕೇವಲ 770 ಮಂದಿಯಷ್ಟೇ ಚೇತರಿಸಿಕೊಂಡಿದ್ದಾರೆ.
ಇನ್ನು ದೇಶಾದ್ಯಂತ 20,903 ಹೊಸ ಕರೋನಾ ಪ್ರಕರಣಗಳು ಕಂಡುಬಂದಿದ್ದು, ಸೋಂಕಿತರ ಒಟ್ಟು ಸಂಖ್ಯೆ 6 ಲಕ್ಷದ 25 ಸಾವಿರ ದಾಟಿದೆ. ಸದ್ಯ ದೇಶದಲ್ಲಿ 2,27,439 ಸಕ್ರಿಯ ಪ್ರಕರಣಗಳಿವೆ.ದೇಶದಲ್ಲಿ ಸಾವಿನ ಸಂಖ್ಯೆ 18,213 ತಲುಪಿದೆ. ಇದರಲ್ಲಿ ಸಕರಾತ್ಮಕ ಅಂಶವೇನಂದರೆ, 20,032 ಮಂದಿ ಕಳೆದ ಒಂದೇ ದಿನದಲ್ಲಿ ಚೇತರಿಸಿಕೊಂಡಿದ್ದು, ಸಕ್ರಿಯ ಪ್ರಕರಣಗಳ ಏರಿಕೆ ಕೇವಲ 492 ಮಾತ್ರ. ಇದುವರೆಗೂ ಒಟ್ಟು 3 ಲಕ್ಷದ 79 ಸಾವಿರದ 892 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಭಾರತದಲ್ಲಿ 63% ಮಂದಿ ಸೋಂಕಿನಿಂದ ಚೇತರಿಸಿಕೊಂಡಿರುವುದು ಧನಾತ್ಮಕ ಸೂಚನೆ.
