ಗಡಿ ರಕ್ಷಣಾ ಪಡೆಯ 67 ಯೋಧರಲ್ಲಿ ಕರೋನಾ ಸೋಂಕು ಪಾಸಿಟಿವ್ ಕಂಡುಬಂದಿದೆ ಎಂದು BSF ಸೋಮವಾರ ಮಧ್ಯರಾತ್ರಿ ಹೇಳಿದೆ. ಒಟ್ಟು ತ್ರಿಪುರದಲ್ಲಿ 24 ಪ್ರಕರಣಗಳು ಪತ್ತೆಯಾಗಿದ್ದು ಸೋಮವಾರದಂದು ಪರೀಕ್ಷೆ ಮಾಡಿದಾಗ ಹೊಸ 13 ಪ್ರಕರಣಗಳು BSF ಕ್ಯಾಂಪಸಲ್ಲಿ ಪತ್ತೆಯಾಗಿದೆ ಎಂದು ʼಹಿಂದುಸ್ತಾನ್ ಟೈಮ್ಸ್ʼ ವರದಿ ಮಾಡಿದೆ.
ತ್ರಿಪುರದ BSF ಕ್ಯಾಂಪಸ್ಸಿನಲ್ಲಿ ಸೋಮವಾರ ಕಂಡುಬಂದ 13 ಪ್ರಕರಣಗಳಲ್ಲಿ 10 ಪ್ರಕರಣಗಳು BSF ಯೋಧರಲ್ಲಿ ಕಂಡು ಬಂದಿದ್ದು, ಭಾನುವಾರದಂದು ಸೋಂಕು ಕಂಡುಬಂದಿದ್ದ ಓರ್ವ ಯೋಧನ ಹೆಂಡತಿ ಮತ್ತು ಎರಡು ಮಕ್ಕಳಲ್ಲಿ ಉಳಿದ ಮೂರು ಪ್ರಕರಣಗಳು ಕಂಡು ಬಂದಿದೆ.
ರಾಜಧಾನಿ ದೆಹಲಿಯಲ್ಲಿ 41 BSF ಯೋಧರು ಸೋಂಕಿಗೆ ತುತ್ತಾಗಿದ್ದು ಕಲ್ಕತ್ತಾದಲ್ಲಿ ಓರ್ವ ಯೋಧನಿಗೆ ಕೋವಿಡ್-19 ಪಾಸಿಟಿವ್ ಇರುವ ಕುರಿತು ವರದಿಯಾಗಿದೆ. ರಜೆಯ ನಿಮಿತ್ತ ತೆರಳಿರುವ ಇನ್ನೋರ್ವ ಯೋಧನಲ್ಲಿಯೂ ಕರೋನಾ ವೈರಸ್ ಪತ್ತೆಯಾಗಿದ್ದು ಯೋಧನನ್ನು ತನ್ನ ಊರಿನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಊರಿನ ಹೆಸರನ್ನು ಉಲ್ಲೇಖಿಸದೆ BSF ಹೇಳಿದೆ.
ದೆಹಲಿ BSF ಹೆಡ್‌ಕ್ವಾರ್ಟರ್ಸ್‌ನ ಸಿಬ್ಬಂದಿಗಳಲ್ಲಿ ಸೋಂಕು ಕಂಡು ಬಂದ ಹಿನ್ನಲೆಯಲ್ಲಿ ಎರಡು ಅಂತಸ್ತನ್ನು ಸಂಪೂರ್ಣ ಸೀಲ್ ಮಾಡಲಾಗಿದೆ. ಕೇಂದ್ರದ ಏಳು ಸಶಸ್ತ್ರ ಪಡೆಗಳಲ್ಲಿ CRPF ನಲ್ಲಿ ಹೆಚ್ಚು ಪ್ರಕರಣಗಳು ಕಂಡು ಬಂದಿದೆ. ಸೋಮವಾರ ಮತ್ತೆರಡು ಪ್ರಕರಣಗಳ ಸೇರ್ಪಡೆಯೊಂದಿಗೆ ಪಡೆಯ ಮಯೂರ್ ವಿಹಾರ್ ಕ್ಯಾಂಪಿನಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 137 ಕ್ಕೇರಿದೆ. CRPF ಗೆ ಹೋಲಿಸಿದರೆ BSF ಪಡೆಯಲ್ಲಿ ಪ್ರಕರಣಗಳು ಕಡಿಮೆಯಿದೆ. ಕೇಂದ್ರ ಸಶಸ್ತ್ರ ಪಡೆಯ ಇನ್ನೊಂದು ವಿಭಾಗ ಇಂಡೋ-ಟಿಬೇಟಿಯನ್ ಗಡಿ ಪೋಲೀಸರಲ್ಲಿ 5 ಸಿಬ್ಬಂದಿಗಳಿಗೆ ಕರೋನಾ ಪಾಸಿಟಿವ್ ಪತ್ತೆಯಾಗಿದೆಯೆಂದು ಮೇ 1 ರಂದು ʼಎಕನಾಮಿಕ್ ಟೈಮ್ಸ್ʼ ವರದಿ ಮಾಡಿತ್ತು.