ಕೇರಳದ ಬಿಜೆಪಿ ಶಾಸಕ ಓ ರಾಜಗೋಪಾಲ ಕೇರಳ ಸರಕಾರ ಮಂಡಿಸಿರುವ ಕೃಷಿ ವಿರೋಧಿ ಕಾಯ್ದೆ ನಿರ್ಣಯವನ್ನು ಬೆಂಬಲಿಸಿದ್ದಾರೆ. ಕೇಂದ್ರ ಸರಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಗುರುವಾರ ವಿಧಾನಸಭೆಯಲ್ಲಿ ಅಂಗೀಕರಿಸಿದ ನಿರ್ಣಯವನ್ನು ರಾಜಗೋಪಾಲ ಬೆಂಬಲಿಸಿರುವುದಾಗಿ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಕೇಂದ್ರ ಸರ್ಕಾರ ತಂದಿರುವ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ ವಿಧೇಯಕ ಮಂಡಿಸಿತ್ತು. ನಿರ್ಣಯವನ್ನು ಚರ್ಚೆಗೆ ತಂದಾಗ, ಬಿಜೆಪಿಯ ಏಕೈಕ ಶಾಸಕರಾಗಿರುವ ರಾಜಗೋಪಾಲ್ ಕೃಷಿ ಕಾನೂನುಗಳ ಕೆಲವು ಅಂಶಗಳನ್ನು ಸಮರ್ಥಿಸಿಕೊಂಡಿದ್ದಾರೆ. ಅದಾಗ್ಯೂ ನಿರ್ಣಯದ ಮತದಾನ ನಡೆಯುತ್ತಿರುವಾಗ ಸರಕಾರದ ಪ್ರಸ್ತಾಪಕ್ಕೆ ಮತವನ್ನು ಹಾಕಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷ ವಿಧಾನಸಭೆ ಅಧಿವೇಶನದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಓ ರಾಜಗೋಪಾಲ್ ಅವರು ಕೇರಳ ಸರ್ಕಾರದ ನಿರ್ಣಯದ ಪರವಾಗಿ ಮತ ಚಲಾಯಿಸುವುದನ್ನು ಸಮರ್ಥಿಸಿಕೊಂಡಿದ್ದಾರೆ.
ʼಇದರ ಕುರಿತು ಕೆಲ ಆಕ್ಷೇಪಣೆಗಳನ್ನು ಸೂಚಿಸಿದ್ದೇನೆ. ರಾಜ್ಯದ ಹಿತದೃಷ್ಟಿಯಿಂದ ಹಾಗೂ ರೈತರ ಹಿತದೃಷ್ಟಿಯಿಂದ ಸರಕಾರ ವಿಶೇಷ ಅಧಿವೇಶನ ಕರೆದು ಕೃಷಿಕಾಯ್ದೆ ವಿರುದ್ಧ ನಿರ್ಣಯ ಮಂಡಿಸಿದಾಗ ನಾನು ಬಿಜೆಪಿಯವನು ಎಂಬ ಕಾರಣಕ್ಕೆ ವಿರೋಧಿಸಿದರೆ ಅರ್ಥವಿರುವುದಿಲ್ಲ. ರೈತರು ಹಾಗೂ ರಾಜ್ಯದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಣಯಕ್ಕೆ ಬೆಂಬಲಿಸಿದ್ದೇನೆ ಎಂದು ರಾಜಗೋಪಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.