ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿರುವ ಮೂರು ಕೃಷಿ ಮಸೂದೆಗಳು, ಎನ್‌ಡಿಎ ಮೈತ್ರಿಕೂಟದಲ್ಲಿ ಬಿರುಕು ಮೂಡುವಂತೆ ಮಾಡಿದೆ. ಹರ್‌ಸಿಮ್ರತ್ ಕೌರ್ ಬಾದಲ್ ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ, ಈಗ ಹರ್ಯಾಣದ ಜನನಾಯಕ್ ಜನತಾ ಪಾರ್ಟಿಯ ಮೇಲೆ ಎನ್‌ಡಿಎ ಮೈತ್ರಿ ಕೂಟ ತೊರೆಯುವಂತೆ ಒತ್ತಡ ಹೇರಲಾಗುತ್ತಿದೆ. ಪಂಜಾಬ್ ಮತ್ತು ಹರ್ಯಾಣದಲ್ಲಿ ರೈತ ಸಂಘಟನೆಯ ಒತ್ತಡದಿಂದ ಜೆಜೆಪಿ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೇವಲ ರೈತರಷ್ಟೇ ಅಲ್ಲದೇ, ವಿರೋಧ ಪಕ್ಷಗಳು ಕೂಡಾ ಜೆಜೆಪಿ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸಿದ್ದು, ಹರ್ಯಾಣದ ಉಪ ಮುಖ್ಯಮಂತ್ರಿಯಾಗಿರುವ ದುಷ್ಯಂತ್ ಸಿಂಗ್ ಚೌಟಾಲಾ ಅವರಿಗೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಕಾಂಗ್ರೆಸ್ ಆಗ್ರಹಿಸಿದೆ. ಕಾಂಗ್ರೆಸ್ ಮುಖಂಡ ರಣ್‌ದೀಪ್ ಸುರ್ಜೇವಾಲ ಅವರು, “ಹರ್‌ಸಿಮ್ರತ್ ಕೌರ್ ನಾಟಕವನ್ನು ತಾವೂ ಆಡಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಆದರೆ, ನಿಮಗೆ ರೈತರಿಗಿಂತ ನಿಮ್ಮ ಖುರ್ಚಿಯ ಮೇಲಿನ ವ್ಯಾಮೋಹ ಹೆಚ್ಚಿದೆ ಎಂದು,” ಎಂದು ಹೇಳಿದ್ದಾರೆ.
ದುಷ್ಯಂತ್ ಚೌಟಾಲ ಅವರ ಪಕ್ಷದ ಶಾಸಕರು ಕೂಡಾ ಚೌಟಾಲ ಅವರ ನಾಯಕತ್ವದ ವಿರುದ್ದ ದನಿ ಎತ್ತಿದ್ದು, ಚೌಡಾಲ ಅವರು ಕೃಷಿ ಮಸೂದೆಯ ವಿರುದ್ದ ಸಾರ್ವಜನಿಕವಾಗಿ ಇನ್ನೂ ತಮ್ಮ ವಿಚಾರಗಳನ್ನು ಬಹಿರಂಗಪಡಿಸಿಲ್ಲ.
Also Read: ದಿಢೀರ್ ಬಾದಲ್ ಬಂಡಾಯಕ್ಕೆ ಕಾರಣವಾಯಿತೇ ಕುಸಿದುಬಿದ್ದ ಮೋದಿ ವರ್ಚಸ್ಸು?
ಜೆಜೆಪಿ ಶಾಸಕ ದೇವೆಂದರ್ ಬಬ್ಲಿ ಅವರು ಪಕ್ಷದ ನಾಯಕತ್ವವನ್ನು ಬದಲಾಯಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಇವರೊಂದಿಗೆ ಶಾಸಕರಾದ ರಾಮ್ ಕುಮಾರ್ ಗೌತಮ್ ಅವರು ಕೂಡಾ ತಮ್ಮ ದನಿಗೂಡಿಸಿದ್ದು, ಪಕ್ಷದ ನಾಯಕರಿಗೆ ನ್ಯಾಯ ಕೊಡಿಸಲು ಕೂಡಾ ಚೌಟಾಲ ಅವರು ಅಸಮರ್ಥರಾಗಿದ್ದಾರೆ ಎಂದು ಹೇಳಿದ್ದಾರೆ.
ಶಿರೋಮಣಿ ಅಕಾಲಿದಳದ ಹರ್‌ಸಿಮ್ರತ್ ಕೌರ್ ಬಾದಲ್ ಅವರ ನಡೆ ರೈತರಿಂದ ಪ್ರಶಂಸೆಗೆ ಒಳಗಾಗಿದೆ. ಆದರೆ, ಶಿರೋಮಣಿ ಅಕಾಲಿದಳವು ಎನ್‌ಡಿಎ ಮೈತ್ರಿಕೂಟದಿಂದ ಹೊರಬರಬೇಕೆಂಬ ಕೂಗು ಜೋರಾಗಿಯೇ ಕೇಳಿ ಬರುತ್ತಿದೆ. ಕೇವಲ ಸರ್ಕಾರದ ಸಚಿವ ಸ್ಥಾನ ತ್ಯಜಿಸಿದರೆ ಮಾತ್ರ ರೈತರ ಪರವಾಗಿದ್ದೇವೆ ಎಂದು ಸಿದ್ದಗೊಳ್ಳುವುದಿಲ್ಲ. ಬಿಜೆಪಿಯೊಂದಿಗಿನ ಮೈತ್ರಿಯನ್ನೇ ತೊರೆದರೆ ಅದು ಸ್ಪಷ್ಟವಾದ ಸಂದೇಶವನ್ನು ರವಾನಿಸುತ್ತದೆ ಎಂದು ರೈತ ಮುಖಂಡರ ಹಾಗೂ ವಿರೋಧ ಪಕ್ಷದವರ ವಾದ.

ಕಾಂಗ್ರೆಸ್ ಮುಖಂಡರು ಬಾದಲ್ ಅವರ ರಾಜಿನಾಮೆಯನ್ನು ʼನಾಟಕʼ ಎಂದು ಕರೆದಿದ್ದು, ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ಈಗಾಗಲೇ ಬಹಳ ತಡವಾಗಿ ಹೋಗಿದೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ, ಬಾದಲ್ ಅವರ ರಾಜಿನಾಮೆ ʼರೈತ ಪರʼ ಎಂದು ಹೇಳಿಕೊಳ್ಳುತ್ತಿದ್ದ ಪ್ರಾದೇಶಿಕ ಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ರೈತ ವಿರೋಧಿ ಧೋರಣೆಗಳಿಗೆ ಹೆಸರಾಗಿರುವ ಬಿಜೆಪಿ ಜೊತೆಗೆ ಕೈಜೋಡಿಸಿರುವ ಇತರ ಪಕ್ಷಗಳ ನಿರ್ಧಾರ ಏನು ಎಂದು ಇನ್ನಷ್ಟೇ ತಿಳಿಯಬೇಕಿದೆ.