ಕರೋನಾ ಕುರಿತು ಯಾವುದೇ ಚಿಂತೆ ಇಲ್ಲದ ಜನರು ಒಂದು ಕಡೆಯಾದರೆ, ಬದುಕು ಕಟ್ಟಿಕೊಳ್ಳುವುದು ಹೇಗೆ ಎಂದು ಚಿಂತಿಸುತ್ತಾ ದಿನದೂಡುತ್ತಿರುವ ಜನರ ಬವಣೆ ಮತ್ತೊಂದು ಕಡೆ. ಈ ನಡುವೆ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ ಬುಡಕಟ್ಟು ಜನಾಂಗದ ಯುವ ಜೋಡಿ ಸಾಹಸ ಸವಾರಿ ಮಾಡಿ ಜನರ ಮರುಕ ಗಿಟ್ಟಿಸಿದೆ. ಚೊಚ್ಚಲ ಕಂದಮ್ಮನ ಕನಸು ಕಟ್ಟಿಕೊಂಡ ಹೆಣ್ಣುಮಗಳು ಬದುಕಿನ ಕನಸು ನನಸಾಗಿಸಲು 1200 ಕಿಲೋ ಮೀಟರ್ ದೂರ ಪ್ರಯಾಣ ಮಾಡಿದ್ದಾಳೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಹರಿಯಾಣದ ಗುರುಗ್ರಾಮದಿಂದ ಬಿಹಾರದ ಪುಟ್ಟ ಹಳ್ಳಿಗೆ 1200 ಕಿಲೋ ಮೀಟರ್ ದೂರ ಸೈಕಲ್‌ನಲ್ಲಿ ಪ್ರಯಾಣ ಮಾಡಿದ್ದ ಬಾಲಕಿ ಜ್ಯೋತಿ ಪಾಸ್ವಾನ್ ಬಗ್ಗೆ ಇಡೀ ವಿಶ್ವವೇ ಒಂದು ಕ್ಷಣ ನಿಬ್ಬೆರಗಾಗಿತ್ತು. ಇದೀಗ ಈ ಬುಡಕಟ್ಟು ಜನಾಂಗದ ಯುವಕ ಹಾಗೂ ಆತನ ಪತ್ನಿಯ ಸಾಹಸಮಯ ಯಶೋಗಾಥೆಗೆ ಸಾವಿರಾರು ಜನರ ಹೃದಯ ಮಿಡಿದಿದೆ. ಕರೋನಾ ಸಂಕಷ್ಟದ ನಡುವೆಯೂ ಸೂಕ್ತ ಸೌಲಭ್ಯಗಳು ಇಲ್ಲದಿದ್ದರೂ ಪಟ್ಟು ಬಿಡದೆ ಪರೀಕ್ಷೆಗಳನ್ನು ಒಂದಾದ ಮೇಲೆ ಒಂದರಂತೆ ನಡೆಸುತ್ತಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕಣ್ಣೀರಿನ ಶಾಪ ಹಾಕುತ್ತಿದ್ದಾರೆ.
ಘಟನೆ ವಿವರ:
ಜಾರ್ಖಂಡ್ ಹೇಳಿ ಕೇಳಿ ದಟ್ಟ ಅರಣ್ಯದಿಂದ ಆವೃತವಾಗಿರುವ ರಾಜ್ಯ. ಇಲ್ಲಿ ಬಹುತೇಕ ಬುಡಕಟ್ಟು ಜನಾಂಗ ಬೆಟ್ಟಗುಡ್ಡಗಳಲ್ಲಿಯೇ ವಾಸ ಮಾಡುತ್ತಾರೆ. ಇದೇ ರೀತಿ ವಾಸ ಮಾಡ್ತಿದ್ದ ಗೊಡ್ಡ ಜಿಲ್ಲೆಯ ಗಂಟಾ ಟೊಲಾ ಗ್ರಾಮದ ದಂಪತಿಗಳು ಪರೀಕ್ಷೆ ಬರೆಯುವುದಕ್ಕಾಗಿ 1200 ಕಿಲೋ ಮೀಟರ್ ದೂರ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡಿದ್ದಾರೆ. ಕರೋನಾ ಸೋಂಕು ಉಲ್ಬಣ ಆದ ಬಳಿಕ ಸಾರಿಗೆ ಸಂಚಾರ ಸ್ಥಗಿತವಾಗಿದ್ದು, ಉಳ್ಳವರು ಸ್ವಂತ ವಾಹನ ಬಳಕೆ ಮಾಡುತ್ತಿದ್ದಾರೆ. ಆದರೆ ಈ ದಂಪತಿ ತಮ್ಮ ಬಳಿಯಿದ್ದ ದ್ವಿಚಕ್ರ ವಾಹನದಲ್ಲಿ ಹೋಗುವ ನಿರ್ಧಾರ ಮಾಡಿ ಯಶಸ್ಸು ಸಾಧಿಸಿದ್ದಾರೆ.
ತನ್ನ ಗರ್ಭಿಣಿ ಪತ್ನಿ 24 ವರ್ಷದ ಸೋನಿ ಹೆಮ್ರಾಮ್‌ಳನ್ನು ಮೊಪೆಡ್‌ನಲ್ಲಿ ಕೂರಿಸಿಕೊಂಡು ಮಧ್ಯಪ್ರದೇಶದ ಗ್ವಾಲಿಯರ್‌ಗೆ ಸಂಚಾರ ಮಾಡಿದ್ದಾನೆ 26 ವರ್ಷದ ಯುವಕ ಧನಂಜಯ. ಅಡುಗೆ ಕೆಲಸ ಮಾಡುವ ನಾನು ಮೆಟ್ರಿಕ್ಯುಲೇಷನ್ ಸಹ ಓದಿಲ್ಲ. ನಮ್ಮ ಮನೆಯಲ್ಲಿ ಒಬ್ಬರು ಶಿಕ್ಷಕರು ಇರಬೇಕು ಎನ್ನುವ ಕಾರಣಕ್ಕೆ ಪತ್ನಿಯನ್ನು ಓದಿಸುತ್ತಿದ್ದೇನೆ. (D.El.Ed) 2ನೇ ವರ್ಷದ Diploma in elementary education ಓದುತ್ತಿರುವ ಈಕೆ ಪರೀಕ್ಷೆ ಬರೆಯಲೇ ಬೇಕಿತ್ತು. ಅದಕ್ಕಾಗಿ ದ್ವಿಚಕ್ರ ವಾಹನದಲ್ಲಿಯೇ ಕೂರಿಸಿಕೊಂಡು ಬಂದಿದ್ದೇನೆ ಎಂದಿದ್ದಾನೆ ಧನಂಜಯ.

ಅದೂ ಅಲ್ಲದೆ ರೈಲು ಆರಂಭವಾಗಿತ್ತು. ಆದರೆ ಕೆಲವು ದಿನಗಳ ಹಿಂದೆ ಸಂಚಾರ ರದ್ದಾಗಿದೆ. ಕ್ಯಾಬ್‌ನಲ್ಲಿ ಹೋಗೋಣ ಎಂದು ಕೇಳಿದರೆ 30 ಸಾವಿರ ರೂಪಾಯಿ ಕೇಳಿದರು. ಅಷ್ಟೊಂದು ಹಣ ಕೊಡುವ ಶಕ್ತಿ ನಮ್ಮಲ್ಲಿ ಇಲ್ಲವಾಗಿದ್ದರಿಂದ ಮೊಪೆಡ್‌ನಲ್ಲೇ ಪ್ರಯಾಣ ಮಾಡುವ ನಿರ್ಧಾರ ಮಾಡಿದೆವು. ತಮ್ಮ ದ್ವಿಚಕ್ರ ವಾಹನದಲ್ಲಿ ಗ್ವಾಲಿಯರ್‌ನ ಪರೀಕ್ಷಾ ಕೇಂದ್ರಕ್ಕೆ ತೆರಳಬೇಕಿದ್ದರೆ ಅದಕ್ಕಾದರೂ ಪೆಟ್ರೋಲ್ ಹಾಕಿಸಬೇಕಾಗುತ್ತೆ. ಇದಕ್ಕಾಗಿ ಪತ್ನಿಯ ಆಭರಣವನ್ನು ಅಡಮಾನ ಇಟ್ಟುಕೊಂಡು 10 ಸಾವಿರ ರೂಪಾಯಿ ಪಡೆದು ಖರ್ಚಿಗೆ ಹೊಂದಿಸಿಕೊಂಡೆವು. ಆಗಸ್ಟ್ 28 ರಂದು ಗೊಡ್ಡಾದಿಂದ ಹೊರಟು ಮುಜಫರಾಬಾದ್, ಲಕ್ನೋ ಮತ್ತು ಆಗ್ರಾ ಮೂಲಕ ಆಗಸ್ಟ್ 30ರ ಸಂಜೆ ಗ್ವಾಲಿಯರ್ ತಲುಪಿದೆವು ಎನ್ನುತ್ತಾರೆ ಸಾಹಸಿ ಯುವಕ ಧನಂಜಯ್.
ಬಡ ದಂಪತಿ ನೋವಿಗೆ ಮಿಡಿದ ಶ್ರೀಮಂತ ಹೃದಯ..!
ಈ ಸುದ್ದಿ ಸ್ಥಳೀಯ ಮಾಧ್ಯಮಗಳಲ್ಲಿ ಬಂದಿದ್ದನ್ನು ಗಮನಿಸಿದ ಉದ್ಯಮಿ ಗೌತಮ್ ಅದಾಮಿ ಪತ್ನಿ ಪ್ರೀತಿ ಅದಾನಿ, ಅದಾನಿ ಫೌಂಡೇಶನ್ ಮೂಲಕ ವಾಪಸ್ ಆಗಲು ವಿಮಾನ ಪ್ರಯಾಣಕ್ಕೆ ಟಿಕೆಟ್ ಕೊಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರೀತಿ ಅದಾನಿ, ಧನಂಜಯ್ ಮತ್ತು ಸೋನಿಯ ಮ್ಯಾರಥಾನ್ ಪ್ರಯಾಣವು ಬದುಕನ್ನು ಕಟ್ಟಿಕೊಳ್ಳುವುದಕ್ಕಾಗಿ ಆಗಿದೆ. ಅವರ ಆಶಾದಾಯಕ ಪ್ರಯಾಣವನ್ನು ಗೌರವಿಸುತ್ತಾ, ನಾವು ಅದಾನಿ ಫೌಂಡೇಶನ್‌ವ ತಿಯಿಂದ ವಾಪಸ್ ವಿಮಾನ ಪ್ರಯಾಣಕ್ಕೆ ಟಿಕೆಟ್ ಕೊಡಿಸುತ್ತೇವೆ. ಈ ರೀತಿಯ ಸ್ಫೂರ್ತಿದಾಯಕ ಸುದ್ದಿ ಮೂಲಕ ಗಮನ ಸೆಳೆದ ಮಾಧ್ಯಮಕ್ಕೂ ಧನ್ಯವಾದ ತಿಳಿಸಿದ್ದಾರೆ.

ಅದಾನಿ ಫೌಂಡೇಶನ್ ಸೆಪ್ಟೆಂಬರ್ 16 ಕ್ಕೆ ಗ್ವಾಲಿಯರ್ ನಿಂದ ರಾಂಚಿಗೆ ವಿಮಾನ ಟಿಕೆಟ್ ಕೊಟ್ಟಿದೆ. ಗ್ವಾಲಿಯರ್‌ನಿಂದ ರಾಂಚಿಗೆ ನೇರ ವಿಮಾನ ಇಲ್ಲದಿರುವುದರಿಂದ ನಾವು ಹೈದರಾಬಾದ್ ಮೂಲಕ ಅಲ್ಲಿಗೆ ತೆರಳಲು ತಿಳಿಸಿದ್ದಾರೆ. ರಾಂಚಿಯಿಂದ ರಸ್ತೆ ಮೂಲಕ ಗೊಡ್ಡಾ ಜಿಲ್ಲೆಯ ತಮ್ಮ ಗ್ರಾಮಕ್ಕೆ ತೆರಳುತ್ತೇವೆ ಗ್ವಾಲಿಯರ್ ಗೆ ಆಗಮಿಸಲು ಬಳಸಿದ್ದ ದ್ವಿಚಕ್ರ ವಾಹನವನ್ನು ವಾಪಸ್ ಜಾರ್ಖಂಡ್‌ನ ನಮ್ಮ ಮನೆಗೆ ವಾಪಸ್ ಕಳುಹಿಸಲು ಫೌಂಡೇಶನ್ ವ್ಯವಸ್ಥೆ ಮಾಡುವುದಾಗಿಯೂ ತಿಳಿಸಿದ್ದಾರೆ ಎನ್ನುವಾಗ ಕಣ್ಣಂಚು ತೇವವಾಗುತ್ತದೆ.
Dhananjay and Soni's marathon travel was a journey of survival, resilience & great optimism. We @AdaniFoundation are humbled to arrange for their comfortable return journey to Godda & thankful to the local media for bringing this inspiring story to light.https://t.co/CLfOVTLs26
— Priti Adani (@AdaniPriti) September 5, 2020
ರಾಂಚಿಯಿಂದ ಮನೆಗೆ ತಲುಪಲು ವಾಹನ ವ್ಯವಸ್ಥೆ ಮಾಡುತ್ತೇವೆ ಎಂದು ಗೊಡ್ಡಾ ಜಿಲ್ಲಾಡಳಿತ ದೂರವಾಣಿ ಮೂಲಕ ತಿಳಿಸಿದೆ. ಇದಕ್ಕೂ ಮುನ್ನ ಗ್ವಾಲಿಯರ್ ಜಿಲ್ಲಾಡಳಿತ ದಂಪತಿಗಳಿಗೆ ಪರೀಕ್ಷಾ ಕೇಂದ್ರದ ಬಳಿ ವಸತಿ ವ್ಯವಸ್ಥೆ ಮಾಡಿ ಸಹಕರಿಸಿತ್ತು. ಗ್ವಾಲಿಯರ್ ತಲುಪಲು ಖರ್ಚಿಗಾಗಿ ಒಡವೆಯನ್ನು 10 ಸಾವಿರಕ್ಕೆ ಅಡಮಾನ ಇಟ್ಟಿದ್ದ ಚಿನ್ನವನ್ನು ವಾಪಸ್ ಬಿಡಿಸಿಕೊಳ್ಳಲು ಮುಂಬೈ ಮೂಲದ ಬಾಲಕಿಯೊಬ್ಬಳು 10 ಸಾವಿರ ರೂಪಾಯಿ ಹಣವನ್ನು ಈಗಾಗಲೇ ಧನಂಜಯ್ ಖಾತೆಗೆ ಜಮಾ ಮಾಡಿದ್ದಾಗಿ ತಿಳಿಸಿದ್ದಾರೆ.

ಅಡುಗೆ ಕೆಲಸ ಮಾಡುತ್ತಿದ್ದ ಧನಂಜಯ್ ಲಾಕ್‌ಡೌನ್ ಕಾರಣದಿಂದ ಕೆಲಸ ಕಳೆದುಕೊಂಡು ಹುಟ್ಟೂರಿಗೆ ವಾಪಸ್ ಆಗಿದ್ದರು. ಕಳೆದ ಡಿಸೆಂಬರ್‌ನಲ್ಲಿ ಮದುವೆಯಾಗಿದ್ದ ಧನಂಜಯ್ ತನ್ನ ಪತ್ನಿಯನ್ನು ಓದಿಸುವ ಹಂಬಲ ಮಾತ್ರ ಬಿಟ್ಟಿರಲಿಲ್ಲ. ಈ ಬಗ್ಗೆ ಮಾತನಾಡಿರುವ ಸೋನಿ, ನಾನು ಈ ಪರೀಕ್ಷೆಯಲ್ಲಿ ಹಾಜರಾಗಲು ಸಾಧ್ಯವಿಲ್ಲ ಎಂದು ನಾನು ಭಾವಿಸಿದ್ದೆ ಆದರೆ ನನ್ನ ಗಂಡನ ದೃಢ ನಿರ್ಧಾರ ಮತ್ತು ಧೈರ್ಯವನ್ನು ನೋಡಿದ ಬಳಿಕ ನಾನೂ ಕೂಡ ಈ ಸುದೀರ್ಘ ಪ್ರಯಾಣಕ್ಕೆ ಸಿದ್ಧಳಾದೆ ಎಂದಿದ್ದಾರೆ. ಮಾರ್ಗ ಮಧ್ಯೆ ಮಳೆಯಿಂದಾಗಿ ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದೇವೆ. ಮಾರ್ಗ ಮಧ್ಯದಲ್ಲಿ ಸ್ವಲ್ಪ ಜ್ವರ ಕೂಡ ಬಂದಿತು. ಆದರೆ ಈಗ ಎಲ್ಲವೂ ಸರಿಯಾಗಿದೆ. ನಾನು ಜಾರ್ಖಂಡ್‌ನಲ್ಲಿ ಬೋಧನಾ ಕೆಲಸಕ್ಕೆ ಅರ್ಜಿ ಸಲ್ಲಿಸಲಿದ್ದು ಆಯ್ಕೆಯಾಗುತ್ತೇನೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.











