ದೇಶದಲ್ಲಿ ಹತ್ತು ಹಲವಾರು ಸಾಮಾಜಿಕ ಮಾಧ್ಯಮ ಆ್ಯಪ್ ಗಳು ಇದ್ದಾಗ್ಯೂ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಕೇವಲ ಮುಕೇಶ್ ಅಂಬಾನಿ ಒಡೆತನದ ಜಿಯೋ ಚಾಟ್ ಗೆ ಮಾತ್ರ ಅನುಮತಿ ನೀಡಿರುವುದು ಹಲವು ಅನುಮಾನಗಳಿಗೆ ಆಸ್ಪದ ಕೊಟ್ಟಿದೆ. ಕಳೆದ ವರ್ಷ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರ ಕಣಿವೆ ರಾಜ್ಯಕ್ಕೆ ಹಲವು ದಶಕಗಳಿಂದ ಕೊಡಲಾಗುತ್ತಿದ್ದ ವಿಶೇಷ ಸ್ಥಾನಮಾನವನ್ನು ವಾಪಸ್ ಪಡೆದ ಹಿನ್ನೆಲೆಯಲ್ಲಿ ಸುಮಾರು ಐದು ತಿಂಗಳವರೆಗೆ ಎಲ್ಲಾ ಇಂಟರ್ನೆಟ್, ದೂರವಾಣಿ ಸೇವೆಯನ್ನು ಸ್ಥಗಿತಗೊಳಿಸಿತ್ತು.
ಸುಪ್ರೀಂಕೋರ್ಟ್ ಸೂಚನೆ ನೀಡಿದ ನಂತರ ಕಳೆದ ವಾರ ಈ ಸೇವೆಗಳನ್ನು ಪುನಾರಂಭಿಸಿದೆ. ಮುಂಜಾಗ್ರತಾ ಕ್ರಮವನ್ನು ಅವಲೋಕಿಸಿ ಸರ್ಕಾರ ಆಯ್ದ 301 ವೆಬ್ ಸೈಟ್ ಗಳನ್ನು ಬಳಕೆ ಮಾಡಲು ಅವಕಾಶ ನೀಡಿದೆ. ಈ ಸರ್ಕಾರ ಅನುಮೋದಿತ ಸೇವೆಗಳ ಪೈಕಿ ಮುಕೇಶ್ ಅಂಬಾನಿ ಒಡೆತನದ ಸಾಮಾಜಿಕ ಮಾಧ್ಯಮ ಆ್ಯಪ್ ಆದ ಜಿಯೋ ಚಾಟ್ ಸೇರಿದೆ.
ಏಕೆಂದರೆ, ಸರ್ಕಾರವೇ ಹೇಳಿದಂತೆ ಆ್ಯಪ್ ಆಧಾರಿತ ನೆಟ್ ವರ್ಕ್ ಗಳಿಗೆ ಅವಕಾಶ ಮಾಡಿಕೊಟ್ಟರೆ ಉಗ್ರಗಾಮಿಗಳು ಒಂದು ಗುಂಪು ಮಾಡಿಕೊಂಡು ದೇಶದಲ್ಲಿ ಅಥವಾ ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯವನ್ನು ನಡೆಸಬಹುದು. ಇದರಿಂದ ಕಣಿವೆ ರಾಜ್ಯದಲ್ಲಿ ದೇಶದ್ರೋಹಿಗಳು ಹುಟ್ಟಿಕೊಳ್ಳುತ್ತಾರೆ. ಆದ್ದರಿಂದ ಇಂತಹ ಆ್ಯಪ್ ಗಳ ಬಳಕೆಯನ್ನು ಸದ್ಯದ ಮಟ್ಟಿಗೆ ನಿಷೇಧಿಸಲಾಗಿದೆ ಎಂದಿದೆ.
ಆದರೆ, ಜಿಯೋ ಚಾಟ್ ಗೂ ಇನ್ನಿತರೆ ಆ್ಯಪ್ ಆಧಾರಿತ ನೆಟ್ ವರ್ಕ್ ಅಥವಾ ಚಾಟ್ ಸೇವೆಗಳನ್ನು ಗಮನಿಸೋಣ. ವಾಟ್ಸಪ್, ಟೆಲಿಗ್ರಾಮ್, ಸಿಗ್ನಲ್ ಮತ್ತು ಹೈಕ್ ನಂತಹ ಆ್ಯಪ್ ಗಳು ಚಾಟ್ ಆಧಾರಿತ ಸಾಮಾಜಿಕ ಮಾಧ್ಯಮಗಳಾಗಿವೆ. ಇವುಗಳಲ್ಲಿ 200 ರಿಂದ 260 ಜನರು ಒಂದು ಗ್ರೂಪ್ ಮಾಡಿಕೊಂಡು ಪರಸ್ಪರ ಚಾಟ್ ಮಾಡಿಕೊಳ್ಳಬಹುದಾಗಿದೆ. ಇಂತಹ ಸೇವೆಗಳನ್ನು ನೀಡಿದರೆ ದೇಶದ್ರೋಹಿಗಳು ಸುಲಭವಾಗಿ ಸಂಪರ್ಕ ಸಾಧಿಸಿ ವಿಧ್ವಂಸಕ ಕೃತ್ಯಗಳನ್ನು ಎಸಗಬಹುದಾಗಿದೆ. ಇದೇ ಕಾರಣದಿಂದ ಕೇಂದ್ರ ಸರ್ಕಾರ ಈ ಸೇವೆಗಳನ್ನು ನಿಷೇಧಿಸಿರುವುದು ಸ್ವಾಗತಾರ್ಹ ಎಂದೇ ಹೇಳಬಹುದು.
ಆದರೆ, ಈ ಸಾಮಾಜಿಕ ಮಾಧ್ಯಮಗಳಿಗಿಂತಲೂ ಹೆಚ್ಚು ಜನರ ಗ್ರೂಪ್ ಮಾಡಿಕೊಳ್ಳಬಹುದಾದ ಜಿಯೋ ಚಾಟ್ ಗೆ ಏಕೆ ಅವಕಾಶ ಮಾಡಿಕೊಡಲಾಗಿದೆ? ಈ ಸೇವೆಯನ್ನು ಬಳಸಿಕೊಂಡು ಮೇಲಿನ ಮಾಧ್ಯಮಗಳಿಗಿಂತ ಹೆಚ್ಚು ಜನರು ಗ್ರೂಪ್ ಮಾಡಿಕೊಳ್ಳಲು ಅವಕಾಶವಿದೆ. ಅಂದರೆ, ಜಿಯೋಚಾಟ್ ನಲ್ಲಿ 500 ಜನರವರೆಗೆ ಒಂದು ಗ್ರೂಪ್ ಮಾಡಿಕೊಳ್ಳಬಹುದು. ಹಾಗಾದರೆ, ಜಿಯೋ ಚಾಟ್ ಮೂಲಕ ಹೆಚ್ಚು ಉಗ್ರಗಾಮಿಗಳು ಅಥವಾ ದೇಶದ್ರೋಹಿಗಳು ಗ್ರೂಪ್ ಮಾಡಿಕೊಂಡು ವಿಧ್ವಂಸಕ ಕೃತ್ಯಗಳನ್ನು ನಡೆಸುವುದಿಲ್ಲವೇ?
ವಾಟ್ಸಪ್, ಟೆಲಿಗ್ರಾಮ್, ಸಿಗ್ನಲ್ ಮತ್ತು ಹೈಕ್ ನಂತಹ ಸಾಮಾಜಿಕ ಮಾಧ್ಯಮಗಳಿಗಿಂತ ಹೆಚ್ಚು ಚಾಟಿಂಗ್ ಸೇವೆಗಳನ್ನು ನೀಡುತ್ತಿರುವುದು ಹೆಚ್ಚು ಅಪಾಯಕಾರಿ ಎಂಬ ಸಾಮಾನ್ಯ ಜ್ಞಾನವೂ ಕೇಂದ್ರ ಸರ್ಕಾರಿ ಅಧಿಕಾರಿಗಳಿಗೆ ಇಲ್ಲವಾಯಿತೇ? ಅಥವಾ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಅಧಿಕಾರಿಗಳು ಜಿಯೋ ಚಾಟ್ ಗೆ ಅನುಮತಿ ನೀಡಿ ಕೈತೊಳೆದುಕೊಂಡರೆ? ಎಂಬ ಅನುಮಾನಗಳು ದಟ್ಟವಾಗತೊಡಗಿವೆ.
ಮೋದಿ ಪ್ರಧಾನಮಂತ್ರಿಯಾದ ನಂತರ ದೇಶದ ದೈತ್ಯ ಉದ್ಯಮಿ ಮುಕೇಶ್ ಅಂಬಾನಿ ಅವರಿಗೆ ಕೇಂದ್ರ ಸರ್ಕಾರ ಸಾಕಷ್ಟು ಅನುಕೂಲಗಳನ್ನು ಮಾಡಿಕೊಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇಂತಹ ಆರೋಪಗಳಿಗೆ ಪೂರಕವಾಗಿ ಕೇಂದ್ರ ಸರ್ಕಾರ ಇದೀಗ ದೇಶದ ಭದ್ರತೆಯನ್ನೂ ಒತ್ತೆ ಇಟ್ಟು ಮುಕೇಶ್ ಅಂಬಾನಿ ಒಡೆತನ ಜಿಯೋಗೆ ಮಾತ್ರ ಅನುಮತಿ ನೀಡಿರುವುದು ಹಲವು ಗುಮಾನಿಗಳಿಗೆ ಆಸ್ಪದ ನೀಡುತ್ತಿದೆ.
ಇಡೀ ದೇಶದ ದೂರಸಂಪರ್ಕ ಕ್ಷೇತ್ರವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಬೇಕೆಂದು ಪ್ರಯತ್ನ ನಡೆಸುತ್ತಿರುವ ಮುಕೇಶ್ ಅಂಬಾನಿಗೆ ಕೇಂದ್ರ ಸರ್ಕಾರ ಇಂತಹ ನಿರ್ಧಾರಗಳಿಂದ ರೆಡ್ ಕಾರ್ಪೆಟ್ ಹಾಸಿಕೊಡುತ್ತಿದೆ.
ಒಂದು ವೇಳೆ ರಾಜ್ಯದಲ್ಲಿ ಸಾಮಾಜಿಕ ಮಾಧ್ಯಮಗಳ ಸೇವೆಗಳನ್ನು ಪುನಾರಂಭಿಸಿದರೆ ಸುಳ್ಳು ಸುದ್ದಿಗಳು, ಸುಳ್ಳು ಫೋಟೋ/ವಿಡಿಯೋಗಳು ಹರಿದಾಡಿ ಗಲಭೆಗಳು ಉಂಟಾಗುತ್ತವೆ. ಉಗ್ರಗಾಮಿಗಳು ತಲೆ ಎತ್ತಿ ಉಪಟಳ ಆರಂಭಿಸುತ್ತಾರೆ. ಈ ಹಿನ್ನೆಲೆಯಲ್ಲಿ ವಾಟ್ಸಪ್, ಟೆಲಿಗ್ರಾಮ್, ಸಿಗ್ನಲ್ ನಂತಹ ಸೇವೆಗಳನ್ನು ನಿಷೇಧಿಸಲಾಗಿದೆ ಎಂದು ಗೃಹ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.
ಆದರೆ, ಜಿಯೋಚಾಟ್ ಅನ್ನು ಮಾತ್ರ ಕೇಂದ್ರ ಸರ್ಕಾರ ಅಗತ್ಯ ಸೇವೆಗಳ ಪಟ್ಟಿಯಲ್ಲಿ ಸೇರಿಸಿ ಅವಕಾಶ ನೀಡಿದೆ. ಈ ಮೇಲಿನ ಸೇವೆಗಳಿಗಿಂತಲೂ ಅಪ್ ಗ್ರೇಡ್ ಮತ್ತು ಹೆಚ್ಚು ಹೆಚ್ಚು ಆಯ್ಕೆಗಳಿರುವ ಆಗಿರುವ ಜಿಯೋ ಚಾಟ್ ಗೆ ಅನುಮತಿ ನೀಡಿದೆ. ಅಂದರೆ, ಇದರಲ್ಲಿ ಗ್ರೂಪ್ ಮಿತಿ 500 ಕ್ಕಿದೆ. ಅಂದರೆ ಇತರೆ ಆ್ಯಪ್ ಗಳಿಗಿಂತ ದುಪ್ಪಟ್ಟು ಜನರು ಒಂದು ಗ್ರೂಪ್ ಮಾಡಿಕೊಳ್ಳಲು ಅವಕಾಶವಿದೆ. ಅಲ್ಲದೇ, ವಿಡಿಯೋಚಾಟ್ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಪಡೆಯಬಹುದು.
ಜಮ್ಮು ಮತ್ತು ಕಾಶ್ಮೀರದಲ್ಲಿ ಜಿಯೋ ಚಾಟ್ 2ಜಿ ನೆಟ್ ವರ್ಕ್ ನಲ್ಲೂ ಕಾರ್ಯನಿರ್ವಹಿಸುತ್ತದೆ. ಆದರೆ, ವಾಟ್ಸಪ್ ಗೆ ಇದು ಸಾಧ್ಯವಾಗುವುದಿಲ್ಲ. ಆಂಡ್ರಾಯ್ಡ್ ಮತ್ತು ಆ್ಯಪಲ್ ಕಾರ್ಯನಿರ್ವಹಣೆ ಮಾಡುವುದಿಲ್ಲ. ಹಾಲಿ ಜಿಯೋ ಚಾಟ್ ಹೊಂದಿರುವವರು ಮಾತ್ರ ಜಿಯೋಚಾಟ್ ಸೇವೆಗಳನ್ನು ಪಡೆಯಬಹುದಾಗಿದೆ. ಆದರೆ, ಇತರೆ ನೆಟ್ ವರ್ಕ್ ಗಳ ಬಳಕೆದಾರರಿಗೆ ಇದು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಆದರೆ, ಜಿಯೋಚಾಟ್ ಬಳಕೆದಾರರು ಸುಳ್ಳು ಸುದ್ದಿಗಳನ್ನು ಹಬ್ಬಿಸುವುದಾಗಲೀ ಅಥವಾ ಇತರೆ ನೆಟ್ ವರ್ಕ್ ಗಳಿಗಿಂತ ಹೆಚ್ಚು ಜನರು ಸೇರಿ ಗ್ರೂಪ್ ಮಾಡಿಕೊಂಡು ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವುದಿಲ್ಲವೇ? ಎಂಬ ಪ್ರಶ್ನೆಗೆ ಮಾತ್ರ ಕೇಂದ್ರ ಸರ್ಕಾರದ ಅಧಿಕಾರಿಗಳ ಬಳಿ ಉತ್ತರವಿಲ್ಲದಂತಾಗಿದೆ. ಬಳಕೆದಾರರ ಸಂದೇಶಗಳು, ಹಂಚಿಕೊಳ್ಳುವ ವಿಡಿಯೋ ಸೇರಿದಂತೆ ಇನ್ನಿತರೆ ಮಾಹಿತಿಗಳ ಮೇಲೆ ಕಣ್ಣಿಡಲೆಂದೇ ಕೇಂದ್ರ ಸರ್ಕಾರ ಜಿಯೋಚಾಟ್ ಗೆ ಅನುಮತಿ ನೀಡಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ, ಜಿಯೋದಿಂದ ಸುಲಭವಾಗಿ ಮಾಹಿತಿಗಳು ಮತ್ತು ಡೇಟಾಗಳನ್ನು ಪಡೆಯಬಹುದಾಗಿದೆ ಎಂಬ ಲೆಕ್ಕಾಚಾರ ಕೇಂದ್ರ ಸರ್ಕಾರದ್ದಾಗಿದೆ.
ಆದಾಗ್ಯೂ, ಮುಕೇಶ್ ಅಂಬಾನಿಯವ ಕಂಪನಿಗೆ ಅನುಕೂಲ ಮಾಡಿಕೊಡಲೆಂದೇ ಕೇಂದ್ರ ಸರ್ಕಾರ ಜಿಯೋಚಾಟ್ ಅನ್ನು ಆಯ್ಕೆ ಮಾಡಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ತನ್ನ ಸಂಪೂರ್ಣ ಹಿಡಿತ ಸಾಧಿಸಬೇಕೆಂಬ ಮುಕೇಶ್ ಅಂಬಾನಿಯವರ ಆಶಯಕ್ಕೆ ಈ ಕೇಂದ್ರ ಸರ್ಕಾರ ಪೂರಕವಾಗಿದೆ.