ಸಾಮಾಜಿಕ ಅಂತರ್ಜಾಲ ತಾಣಗಳನ್ನು ಬಳಸಿದ ಕಾರಣಕ್ಕೆ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ (UAPA) ಯ ಅಡಿಯಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಪ್ರಕರಣಗಳನ್ನು ದಾಖಲಿಸಲು ಆರಂಭಿಸಿದ್ದಾರೆ. ಇಂಟರ್ನೆಟ್ ನಿಷೇಧ ಇರುವ ಹಿನ್ನೆಲೆಯಲ್ಲಿ VPN ಅಥವಾ Proxy ಸರ್ವರ್ಗಳನ್ನು ಬಳಸಿ ಅಂತರ್ಜಾಲ ತಾಣಗಳಲ್ಲಿ ಸಕ್ರೀಯರಾಗಿರುವವರ ಮೇಲೆ ಈಗ FIR ದಾಖಲಾಗಿದೆ.
ಕಣಿವೆ ರಾಜ್ಯದಲ್ಲಿ ಇಂಟರ್ನೆಟ್ ಸೇವೆಯನ್ನು ರದ್ದುಗೊಳಿಸಿದ ನಂತರ, ಇತ್ತೀಚಿಗೆ ಕೆಲವು ಭಾಗಗಳಲ್ಲಿ ಮಾತ್ರ ಇಂಟರ್ನೆಟ್ ಸೇವೆಯನ್ನು ಪುನರಾರಂಭಿಸಲಾಗಿತ್ತು. ಸುಮಾರು 350 ಅಂತರ್ಜಾಲ ತಾಣಗಳ ಬಳಕೆಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಯಾವುದೇ ಸಾಮಾಜಿಕ ಜಾಲತಾಣಗಳನ್ನು ಬಳಸಲು ಅವಕಾಶವನ್ನು ನೀಡಿರಲಿಲ್ಲ. ಈಗ ಯಾರೆಲ್ಲಾ ಸಾಮಾಜಿಕ ಜಾಲತಾಣಗಳನ್ನು ಬಳಸಲು ಪ್ರಯತ್ನಿಸಿದ್ದಾರೋ ಅವರ ಮೇಲೆ UAPA ಬಳಸಿ ಜಮ್ಮು ಕಾಶ್ಮೀರ ಪೊಲೀಸರು ಪ್ರಕರಣವನ್ನು ದಾಖಲಿಸುತ್ತಾ ಇದ್ದಾರೆ.
ಜಮ್ಮುವಿನ ಹುರಿಯತ್ ನಾಯಕ ಸಯ್ಯದ್ ಗಿಲಾನಿ ಅವರ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿದ ಬಳಿಕ ಜಮ್ಮು ಕಾಶ್ಮೀರ ಪೊಲೀಸ್ ಈ ಕ್ರಮ ಕೈಗೊಳ್ಳುತ್ತಿದ್ದಾರೆ. “ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡುವುದರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಆದೇಶವನ್ನು ಪಾಲಿಸದ ಕಾರಣಕ್ಕಾಗಿ ಹಾಗೂ ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಿದಕ್ಕಾಗಿ ಕಾಶ್ಮೀರದ ಶ್ರೀನಗರ್ನ ಸೈಬರ್ ಪೊಲೀಸ್ ಸ್ಟೇಷನ್ನಲ್ಲಿ ಹಲವು ಮಂದಿಯ ಮೇಲೆ FIR ದಾಖಲಾಗಿದೆ,” ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿರುವ ಕುರಿತು ಹಲವು ಮಾಹಿತಿಗಳು ಲಭ್ಯವಾಗುತ್ತಿವೆ. ಇಂತಹ ಕೃತ್ಯಗಳಲ್ಲಿ ತೊಡಗಿಕೊಳ್ಳುವವರಿಗೆ ಸಾಮಾಜಿಕ ಜಾಲತಾಣಗಳು ಉತ್ತಮ ವೇದಿಕೆ ಒದಗಿಸಿಕೊಟ್ಟಂತಾಗುತ್ತದೆ, ಎಂದೂ ಪೊಲೀಸರು ಹೇಳಿದ್ದಾರೆ.
ಪ್ರತ್ಯೇಕತಾವಾದಿ ಚಿಂತನೆಗಳನ್ನು ಹಾಗೂ ಭಯೋತ್ಪಾದನೆಯನ್ನು ವಿಜೃಂಭಿಸುವಂತಹ ಸಂದೇಶಗಳನ್ನು ಹರಿಬಿಡಲಾಗುತ್ತಿದೆ. ಈ ಕೃತ್ಯ ಎಸಗಲು VPN ಹಾಗೂ Proxy ಸರ್ವರ್ಗಳ ಬಳಕೆಯನ್ನು ಮಾಡಲಾಗಿದೆ, ಎಂದು ಪೊಲೀಸರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
UAPAಯ ಸೆಕ್ಷನ್ 13, ಇಂಡಿಯನ್ ಪೀನಲ್ ಕೋಡ್ (IPC)ಯ ಸೆಕ್ಷನ್ 188 ಮತ್ತು 505 ಹಾಗೂ, ಐಟಿ ಆಕ್ಟ್ನ ಸೆಕ್ಷನ್ 66-A (b)ಯ ಅಡಿಯಲ್ಲಿ FIR ದಾಖಲಿಸಲಾಗಿದೆ. ಇಲ್ಲಿ ಗಮನಿಸಬೇಕಾಗಿರುವ ಪ್ರಮುಖ ಅಂಶವೇನೆಂದರೆ, ಐಟಿ ಆಕ್ಟ್ನ ಸೆಕ್ಷನ್ 66ನ್ನು ಈಗಾಗಲೇ ರದ್ದುಗೊಳಿಸಲಾಗಿದೆ. ಈ ಕಾರಣಕ್ಕಾಗಿ ದಾಖಲಾಗಿರುವ FIR ಊರ್ಜಿತವಾಗುವುದಿಲ್ಲ. ಮತ್ತು UAPAಯ ಬಳಕೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ? ಎಂಬ ಪ್ರಶ್ನೆಯೂ ಉದ್ಬವವಾಗುತ್ತದೆ.
ಮಾರ್ಚ್ 24, 2015ರಂದು ಸುಪ್ರಿಂ ಕೋರ್ಟ್ ಐಟಿ ಆಕ್ಟ್ನ ಸೆಕ್ಷನ್ 66A ಅನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಆದರೆ, ಕಾಶ್ಮೀರದ ಪೊಲೀಸರಿಗೆ ಇದು ಅರ್ಥವಾಗದೇ, ಹಲವು FIRಗಳನ್ನು ಈಗಾಗಲೇ ದಾಖಲಿಸಿದ್ದಾರೆ. ಇನ್ನು ಈ ಕುರಿತಾಗಿ ಇನ್ನೊಂದು ಆದೇಶ ಹೊರಡಿಸಿದ್ದ ಸುಪ್ರಿಂ ಕೋರ್ಟ್ ಎಲ್ಲಾ ರಾಜ್ಯಗಳೂ ತಮ್ಮ ಪೊಲೀಸ್ ಪಡೆಗೆ ಸೆಕ್ಷನ್ ರದ್ದಾಗಿರುವ ಕುರಿತು ಮಾಹಿತಿಯನ್ನು ನೀಡಬೇಕೆಂದು ಹೇಳಿತ್ತು. ಆದರೆ, ಇದೀಗ ಮತ್ತೆ ಐಟಿ ಆಕ್ಟ್ನ ಸೆಕ್ಷನ್ 66A ಬಳಸಿ FIR ದಾಖಲಿಸಿದ ಕುರಿತು ವರದಿಯಾಗುತ್ತಿದೆ.
ಕೃಪೆ: ದಿ ವೈರ್