ಕರೋನಾ ಸೋಂಕಿನಿಂದ ಕರ್ನಾಟಕ ದಿನದಿಂದ ದಿನಕ್ಕೆ ಜರ್ಜರಿತವಾಗುತ್ತಿದೆ. ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಲೇ ಇದೆ. ಸರ್ಕಾರ ತೆಗೆದುಕೊಳ್ಳುತ್ತಿರುವ ಮುಂಜಾಗ್ರತಾ ಕ್ರಮವೇ ಸಾಂಕ್ರಾಮಿಕ ಕರೋನಾ ವೈರಾಣುವಿಗೆ ಸ್ವರ್ಗ ಸಿಕ್ಕಂತಾಗಿದೆಯಾ..? ಎನ್ನುವ ಅನುಮಾನ ಎಲ್ಲರನ್ನೂ ಕಾಡಲು ಶುರು ಮಾಡಿದೆ. ಸರ್ಕಾರದ ಪಾಲಿಗೆ ನೆಮ್ಮದಿಯ ವಿಚಾರ ಏನಂದರೆ ಕರ್ನಾಟಕದಲ್ಲಿಯೇ ಇದ್ದ ಜನರಲ್ಲಿ ಅಷ್ಟೊಂದು ಪ್ರಮಾಣದ ಸೋಂಕು ಕಾಣಿಸುತ್ತಿಲ್ಲ. ಆದರೆ ಮಹಾರಾಷ್ಟ್ರ ಸೇರಿದಂತೆ ದೇಶ, ವಿದೇಶದ ಇತರೆ ಭಾಗಗಳಿಂದ ಆಗಮಿಸಿರುವ ಜನರಲ್ಲಿ ಕರೋನಾ ಸೋಂಕು ಉಲ್ಬಣವಾಗುತ್ತಲೇ ಸಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳು ತೆಗೆದುಕೊಳ್ಳುತ್ತಿರುವ ನಿಲುವುಗಳೇ ಕಾರಣ ಆಗುತ್ತಿದೆ. ಇದಕ್ಕೆ ಉದಾಹರಣೆ ಅಂದ್ರೆ ಉಡುಪಿ ಹಾಗೂ ಮಂಡ್ಯ ಜಿಲ್ಲೆಯ ಕ್ವಾರಂಟೈನ್ ಕೇಂದ್ರಗಳು.
ಉಡುಪಿಯ ಕುಂದಾಪುರಕ್ಕೆ ಮುಂಬೈನಿಂದ ಬಂದಿದ್ದ ವ್ಯಕ್ತಿಗೆ ಮೇ 13ರಂದು ಹೃದಯಾಘಾತವಾಗಿತ್ತು. ಕುಂದಾಪುರ ಆಸ್ಪತ್ರೆಗೆ ದಾಖಲು ಮಾಡಿದ ಬಳಿಕ ಸಮಸ್ಯೆ ತೀವ್ರವಾಗಿದ್ದು ಗೊತ್ತಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೇ 13ರಂದೇ ಕೆಎಂಸಿ ವೈದ್ಯರು ಆಪರೇಷನ್ ಮಾಡಿದ ಬಳಿಕ ಮೇ 14ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಮಹಾರಾಷ್ಟ್ರದಿಂದ ಆಗಮಿಸಿದ್ದವರು ಎನ್ನುವ ಕಾರಣಕ್ಕೆ ಕರೋನಾ ವೈರಾಣು ಟೆಸ್ಟ್‌ಗೆ ಗಂಟಲ ದ್ರವ ಕಳಹಿಸಲಾಗಿತ್ತು. ಶನಿವಾರ ಸಂಜೆ ಕರೋನಾ ಸೋಂಕು ಇತ್ತು ಎನ್ನುವ ಮಾಹಿತಿ ಖಚಿತವಾಗಿದ್ದು, ಭಾನುವಾರದ ಮಧ್ಯಾಹ್ನದ ಬುಲೆಟಿನ್‌ನಲ್ಲಿ ಸಾವಿನ ಸಂಖ್ಯೆ ಸೇರ್ಪಡೆಯಾಗಿದೆ. ಆದರೆ ವಿಚಾರ ಇಷ್ಟು ಸಣ್ಣದಾಗಿಲ್ಲ. ಇದೀಗ ಯಾವುದೇ ಪಿಪಿಇ ಕಿಟ್ ಬಳಸದೆ ಮೃತ ವ್ಯಕ್ತಿಗೆ ಚಿಕಿತ್ಸೆ ನೀಡಿದ ಕುಂದಾಪುರ ಸಾರ್ವಜನಿಕ ಆಸ್ಪತ್ರೆ ಹಾಗೂ ಮಣಿಪಾಲದ ವೈದ್ಯರು ಹಾಗೂ ಕೆಲವೊಂದು ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕದ 57 ಜನ ಹಾಗೂ ದ್ವಿತೀಯ ಸಂಪರ್ಕದ 38 ಜನರನ್ನು ಗುರುತಿಸಿದ್ದೇವೆ ಎಂದು ಸ್ವತಃ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಇನ್ನೂ ಇತ್ತ ಸಕ್ಕರೆ ನಾಡು ಮಂಡ್ಯದ ನಾಗಮಂಗಲ, ಕೆ.ಆರ್ ಪೇಟೆ ಹಾಗೂ ಹಾಸನದ ಚನ್ನರಾಯಪಟ್ಟಣ ಭಾಗದ ಬಹುತೇಕ ಮಂದಿ ಮುಂಬೈನಲ್ಲಿ ನೆಲೆ ಕಂಡು ಕೊಂಡಿದ್ದು, ಇದೀಗ ಕರೋನಾ ಸೋಂಕು ಮುಂಬೈನಲ್ಲಿ ರುದ್ರ ನರ್ತನ ಮಾಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಹುಟ್ಟೂರುಗಳಿಗೆ ವಾಪಸ್ ಆಗುತ್ತಿದ್ದಾರೆ. ಬಾಂಬೆಯಿಂದ ಮಂಡ್ಯಕ್ಕೆ ಬಂದಿರುವ 22 ಜನರಲ್ಲಿ ಕರೋನಾ ಸೋಂಕು ಪತ್ತೆಯಾಗಿದ್ದು, ಮಂಡ್ಯ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸುತ್ತಿದೆ. ಇನ್ನೂ ಕಲಬುರಗಿಯಲ್ಲೂ 10 ಪ್ರಕರಣಗಳು ಪತ್ತೆಯಾಗಿವೆ.
ಒಟ್ಟಾರೆ ಭಾನುವಾರದ ಮಧ್ಯಾಹ್ನ ಸರ್ಕಾರ ಬಿಡುಗಡೆ ಮಾಡಿರುವ 54 ಜನರ ಕರೋನಾ ಸೋಂಕಿತರ ಪಟ್ಟಿಯಲ್ಲಿ ಬರೋಬ್ಬರಿ 39 ಜನರಿಗೆ ಮಹಾರಾಷ್ಟ್ರದಿಂದ ಬಂದವರು ಎಂದು ಉಲ್ಲೇಖ ಮಾಡಲಾಗಿದೆ. ಇದರಲ್ಲಿ ಇನ್ನೂ ಕೆಲವರು ಪೇಷೆಂಟ್ ಸಂಪರ್ಕದಲ್ಲಿ ಇದ್ದವರು ಎಂದು ಉಲ್ಲೇಖಿಸಲಾಗಿದೆ. ಅದನ್ನೂ ತೆಗೆದುಕೊಂಡರೆ ಮತ್ತಷ್ಟು ಮಹಾರಾಷ್ಟ್ರ ಮೂಲಕ್ಕೇ ಬಂದು ನಿಲ್ಲುತ್ತದೆ. ಹಾಗಿದ್ದರೆ ಮಹಾರಾಷ್ಟ್ರದಲ್ಲಿ ಇರುವ ಹಾಗೂ ಇದ್ದ ಎಲ್ಲರಿಗೂ ಕರೋನಾ ಸೋಂಕು ಇದೆಯಾ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುವುದು ಸಹಜ. ಆದರೆ ಇದಕ್ಕೆ ಉತ್ತರ ನೋ. ಇದು ನಮ್ಮ ಸರ್ಕಾರ ಮಾಡುತ್ತಿರುವ ಎಡವಟ್ಟು ಕ್ರಮದಿಂದ ಆಗುತ್ತಿರುವ ಸೋಂಕು ಉಲ್ಬಣ.
ಮಹಾರಾಷ್ಟ್ರದಿಂದ ಬಂದವರನ್ನು ನೇರವಾಗಿ ಕ್ವಾರಂಟೈನ್ ಕೇಂದ್ರಕ್ಕೆ ರವಾನೆ ಮಾಡಲಾಗ್ತಿದೆ. ಅಲ್ಲಿನ ಶಾಲಾ ಕೊಠಡಿಗಳಲ್ಲಿ ಇರಿಸಲಾಗ್ತಿದೆ. ಗುಂಪು ಗುಂಪಾಗಿ ಜನರು ಇರುವಂತೆಯೇ ವ್ಯವಸ್ಥೆ ಮಾಡಿದೆ. ಹಾಗಾಗಿ ಸೋಂಕು ಸುಲಭವಾಗಿ ಎಲ್ಲರಿಗೂ ಹರಡುತ್ತಿದೆ. ಅದಾದ ಬಳಿಕ ಚಿಕಿತ್ಸೆ ಕೊಡುವುದಕ್ಕೆ ಕೋವಿಡ್ 19 ಆಸ್ಪತ್ರೆಗೆ ಶಿಫ್ಟ್ ಮಾಡಲಾಗ್ತಿದೆ. ಆದೇ ಕಾರಣಕ್ಕೆ ಉಡುಪಿ ಕುಂದಾಪುರದ ವ್ಯಕ್ತಿಗೆ ಸೋಂಕು ಇದೆಯೋ ಇಲ್ಲವೋ ಎಂದು ಬಾಂಬೆಯಿಂದ ಬಂದ ಮರುದಿನವೇ ತಪಾಸಣೆ ಮಾಡಿದ್ದರೆ, ಇದೀಗ ಆಸ್ಪತ್ರೆ ಡಾಕ್ಟರ್ಸ್ ಸೇರಿದಂತೆ 95 ಜನರನ್ನು ಕ್ವಾರಂಟೈನ್ ಮಾಡುವ ಅವಶ್ಯಕತೆ ಇರಲಿಲ್ಲ.
ಬಾಂಬೆಯಿಂದ ಬರುತ್ತಿದ್ದಂತೆಯೇ ಎಲ್ಲರನ್ನೂ ತಪಾಸಣೆ ನಡೆಸಿ, ಸೋಂಕಿತರನ್ನು ಪ್ರತ್ಯೇಕಿಸಿ, ಕ್ವಾರಂಟೈನ್ ಮಾಡಬೇಕು. ಕ್ವಾರಂಟೈನ್ ಮಾಡುವಾಗಲೂ ಸಾಮಾಜಿಕ ಅಂತರಕ್ಕೆ ಅವಕಾಶ ಕೊಡಬೇಕು. ಒಂದು ಕೊಠಡಿಯಲ್ಲಿ 25 ಜನರನ್ನು ಒಟ್ಟಿಗೆ ಮಲಗಲು ವ್ಯವಸ್ಥೆ ಮಾಡಿದಾಗ, ಅದರಿಂದ ಸೋಂಕು ಇಲ್ಲದಿರುವವರಿಗೂ ಹರಡುವ ಸಾಧ್ಯತೆ ಹೆಚ್ಚು. ಅದೇ ಕಾರಣಕ್ಕಾಗಿ ಅಲ್ಲವೇ ವಿದೇಶದಿಂದ ಬೆಂಗಳೂರಿಗೆ ಬಂದಿಳಿದ ಸಾವಿರಾರು ಜನರನ್ನು ಹೋಟೆಲ್ ಕ್ವಾರಂಟೈನ್ ಮಾಡಿರುವುದು. ಹೋಟೆಲ್ ಕ್ವಾರಂಟೈನ್ ಆಗಿರುವ ಜನರಲ್ಲಿ ಸೋಂಕು ಮಿತಿ ಮೀರಿ ಉಲ್ಬಣವಾಗುತ್ತಿಲ್ಲ. ಸರ್ಕಾರ ಮಾಡಿರುವ ಉಚಿತ ಕ್ವಾರಂಟೈನ್ ಕೇಂದ್ರಗಳು ಕರೋನಾ ಸೋಂಕಿನ ಕೇಂದ್ರಗಳಾಗಿ ಪರಿವರ್ತನೆ ಆಗುತ್ತಿವೆ. ಒಟ್ಟಾರೆ ಸರ್ಕಾರ ಆದಷ್ಟೂ ಶೀಘ್ರವಾಗಿ ಎಚ್ಚೆತ್ತುಕೊಂಡರೆ ಚಿಕಿತ್ಸೆ ಹೆಸರಲ್ಲಿ ಖರ್ಚು ಮಾಡುತ್ತಿರುವ ಕೋಟ್ಯಂತರ ರೂಪಾಯಿ ಹಣವನ್ನು ಉಳಿಸಬಹುದು ಹಾಗೂ ಜನರಿಗೆ ಕರೋನಾ ಸೋಂಕಿನ ಬಿಸಿ ಮುಟ್ಟದಂತೆ ಜನರ ಆರೋಗ್ಯವನ್ನೂ ಕಾಪಾಡಬಹುದು.