ದೇಶದಲ್ಲಿ ಕರೋನಾ ಸೋಂಕು ಸತತ ಎರಡನೇ ದಿನ 11 ಸಾವಿರ ಜನರಿಗೆ ಹರಡಿದೆ. ಜೂನ್ ಮಧ್ಯಂತರದಲ್ಲಿ ಪ್ರತಿದಿನ 16 ಸಾವಿರಕ್ಕೆ ಹೋಗಲಿದೆ ಎಂದು ತಜ್ಞರು ಭಾರತವನ್ನು ಈಗಾಗಲೇ ಎಚ್ಚರಿಸಿದ್ದಾರೆ. ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಿಗೂ ಒಂದು ಅಂದಾಜು ಸೋಂಕಿತರ ಲೆಕ್ಕಾಚಾರ ಈಗಾಗಲೇ ಲಭ್ಯವಾಗಿದ್ದು, ಪರಿಸ್ಥಿತಿ ನಿಭಾಯಿಸಲು ಸಜ್ಜಾಗುವಂತೆ ಕೇಂದ್ರ ಸರ್ಕಾರದಿಂದ ಸಂದೇಶ ರವಾನೆಯಾಗಿದೆ. ಜೊತೆಗೆ ಶನಿವಾರ ಕೇಂದ್ರ ಆರೋಗ್ಯ ಸಚಿವರು ಮತ್ತೊಂದು ಮಾಹಿತಿ ಹೊರ ಹಾಕಿದ್ದು, ವಾಸನೆಯನ್ನು ಗ್ರಹಿಸುವ ಶಕ್ತಿ ಹಾಗೂ ರುಚಿಯನ್ನು ಪತ್ತೆ ಮಾಡುವ ಶಕ್ತಿ ಕಳೆದುಕೊಂಡರೂ ಕರೋನಾ ಸೋಂಕು ಬಂದಿದೆ ಎಂದರ್ಥ ಎಂದಿದ್ದಾರೆ.
ಸಚಿವರೊಂದಿಗೆ ಪ್ರಧಾನಿ ಮೋದಿ ತುರ್ತು ಸಭೆ..!
ಕರೋನಾ ನಿಯಂತ್ರಣ ಮಾಡಲಾದೆ ದೇಶದಲ್ಲಿ ಸೋಂಕಿತರ ಸಂಖ್ಯೆ ಮಿತಿಮೀರಿ ಹೋಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ ನಡೆಸಿದ್ದಾರೆ. ದೇಶದಲ್ಲಿ ಕರೋನಾ ಸೋಂಕು ಉಲ್ಬಣವಾಗುತ್ತಿದ್ದು, ನಿಯಂತ್ರಣ ಮಾಡಲು ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎನ್ನುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರದ ಹಿರಿಯ ಸಚಿವರ ಜೊತೆಗೆ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಸಚಿವ ಸಂಪುಟದ ಹಿರಿಯ ಸಚಿವರು ಮತ್ತು ಪ್ರಮುಖ ಅಧಿಕಾರಿಗಳು ಭಾಗಿಯಾಗಿದೆ. ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಮೋದಿ ಚರ್ಚೆ ನಡೆಸಿದ್ದಾರೆ. ಕರೋನಾ ಹರಡುವಿಕೆ ಬಗ್ಗೆ ಸಭೆಯಲ್ಲಿ ಪರಿಶೀಲನೆ ನಡೆಸಿದ್ದು, ರಾಜ್ಯಗಳ ಮಟ್ಟದಲ್ಲಿ ಈಗ ಏನೇನು ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗಿದೆ.
ದೇಶದ ಮೂರನೇ ಎರಡು ಭಾಗದಷ್ಟು ಕರೋನಾ ಸೋಂಕಿನ ಪ್ರಕರಣಗಳು ಕೇವಲ 5 ರಾಜ್ಯಗಳಲ್ಲಿವೆ. ದೊಡ್ಡ ದೊಡ್ಡ ನಗರಗಳಲ್ಲಿ ಹೆಚ್ಚು ಪ್ರಕರಣಗಳಿವೆ. ಈ ಸಮಸ್ಯೆ ಬಗೆಹರಿಸಲು ಏನು ಮಾಡಬೇಕು..? ಎನ್ನುವ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿದ್ದಾರೆ. ಕರೋನಾ ಪರೀಕ್ಷೆಯನ್ನು ಹೆಚ್ಚಿಸಲು ಏನು ಮಾಡಬೇಕು..? ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಸಿಗೆಗಳ ಹೆಚ್ಚಳ ಮತ್ತು ಆರೋಗ್ಯ ಸೇವೆ ಹೆಚ್ಚಿಸಲು ಏನು ಕ್ರಮ ಕೈಗೊಳ್ಳಬೇಕು? ಎನ್ನುವ ಬಗ್ಗೆಯೂ ಮಾಹಿತಿ ಸಂಗ್ರಹ ಮಾಡಿಕೊಳ್ಳಲಾಗಿದೆ.
ದೆಹಲಿಯಲ್ಲಿ ಪ್ರತಿಯೊಬ್ಬರ ತಪಾಸಣೆಗೆ ನಿರ್ಧಾರ..!
ದೆಹಲಿಯಲ್ಲಿ ಜುಲೈ ಅಂತ್ಯದ ವೇಳೆಗೆ ಐದೂವರೆ ಲಕ್ಷ ಜನರಿಗೆ ಸೋಂಕು ಹರಡಲಿದೆ ಎನ್ನುವ ಲೆಕ್ಕಾಚಾರಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ನಡುವೆ ದೆಹಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ದೆಹಲಿಯ ಪ್ರತಿಯೊಬ್ಬ ಪ್ರಜೆಯನ್ನೂ ತಪಾಸಣೆಗೆ ಒಳಪಡಿಸಲು ನಿರ್ಧಾರ ಮಾಡಿದೆ. 60 ಸಾವಿರ ಹಾಸಿಗೆಗಳನ್ನು ಸಿದ್ಧ ಮಾಡಿಟ್ಟುಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಗಿದೆ. ಇನ್ನೂ ಆಸ್ಪತ್ರೆಗಳಲ್ಲಿ ಹಾಸಿಗೆ ಇಲ್ಲದೆ ಚಿಕಿತ್ಸೆ ಸಿಗದೆ ಇರಬಹುದು ಎನ್ನುವ ಕಾರಣಕ್ಕೆ ಹಣವಂತರ ತಮ್ಮ ಮನೆಗಳಲ್ಲೇ ವೈದ್ಯಕೀಯ ಸೌಲಭ್ಯ ಸಿಗುವಂತೆ ಮಾಡಿಸಿಟ್ಟುಕೊಳ್ಳುತ್ತಿದ್ದಾರೆ ಎನ್ನುವುದು ಗಾಬರಿ ಹುಟ್ಟಿಸುವಂತಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಸಭೆಯಲ್ಲಿ ಚರ್ಚೆ ನಡೆದಿದ್ದು, ಮುಂದಿನ 2 ತಿಂಗಳ ಅವಧಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಜೊತೆಗೆ ತುರ್ತು ಸಭೆ ನಡೆಸಲು ಪ್ರಧಾನಮಂತ್ರಿ ಸೂಚನೆ ಕೊಟ್ಟಿದ್ದಾರೆ.

ಪ್ರಧಾನಿಯವರು ಮುಖ್ಯಮಂತ್ರಿಗಳ ಸಭೆ ಕರೆದಿದ್ದು ಯಾಕೆ..?
ಜೀವ ಹಾಗೂ ಜೀವನ ಎರಡು ಆಯ್ಕೆಯಲ್ಲಿ ನಮ್ಮ ಆಯ್ಕೆ ಜೀವ ಆಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ, ಆ ಬಳಿಕ ಜೀವ ಹೋದರೂ ಪರವಾಗಿಲ್ಲ ಎನ್ನುವಂತೆ ಜೀವನವನ್ನು ಆಯ್ಕೆ ಮಾಡಿಕೊಂಡರು. ವಿಡಿಯೋ ಕಾನ್ಫರೆನ್ಸ್ ಮೂಲಕ ಜೂನ್ 16 ಹಾಗೂ 17ರಂದು ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ. ಜೂನ್ 16ರಂದು 21 ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಹಾಗೂ ಜೂನ್ 17ರಂದು 15 ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಿಎಂಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಸದ್ಯ ಕರೋನಾ ಹರಡುವಿಕೆಯ ಪ್ರಮಾಣ ಹಾಗೂ ಅನ್‌ಲಾಕ್ ಜಾರಿಯಾಗುತ್ತಿರುವ ರೀತಿ, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಕರ್ನಾಟಕದ ಸಿಎಂ ಯಡಿಯೂರಪ್ಪ ಜೊತೆ 17ರಂದು ಮಧ್ಯಾಹ್ನ 3 ಗಂಟೆಗೆ ಚರ್ಚೆ ನಡೆಸಲಿದ್ದಾರೆ.
ಚೀನಾ ದೇಶವನ್ನೇ ಫಾಲೋ ಮಾಡುತ್ತಾ ಭಾರತ..!?
ಚೀನಾದಲ್ಲಿ ಮತ್ತೆ ಕರೋನಾ ಸೋಂಕು ಉಲ್ಬಣಿಸುತ್ತಿದೆ. ಹಾಗಾಗಿ ಚೀನಾ ಸರ್ಕಾರ ಲಾಕ್‌ಡೌನ್ ಮೊರೆ ಹೋಗಿದೆ. ಚೀನಾ ರಾಜಧಾನಿ ಬೀಜಿಂಗ್ ನಗರದ ಕೆಲವು ಪ್ರದೇಶಗಳನ್ನು ಲಾಕ್‌ಡೌನ್ ಮಾಡಲಾಗಿದೆ. ವುಹಾನ್ ನಗರದಲ್ಲಿ ಲಾಕ್‌ಡೌನ್ ಅಸ್ತ್ರ ಬಳಕೆ ಕರೋನಾ ಸೋಂಕು ನಿಯಂತ್ರಿಸಲು ಸಹಕಾರಿಯಾಗಿತ್ತು. ಇದೀಗ ಚೀನಾ ಮತ್ತೆ ಲಾಕ್‌ಡೌನ್ ಮೊರೆ ಹೋಗಿದೆ. ಚೀನಾ ದೇಶವನ್ನೇ ಭಾರತ ಫಾಲೋ ಮಾಡುತ್ತಾ ಎನ್ನುವ ಅಭಿಪ್ರಾಯ ಜನರಲ್ಲಿ ಮೂಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ ನಡೆಸಿರುವುದು. ಮುಖ್ಯಮಂತ್ರಿಗಳ ಸಭೆ ನಿಗದಿ ಮಾಡಿರುವುದು ಎಲ್ಲವನ್ನು ಜನರು ನೋಡುತ್ತಿರುವ ಕಾರಣ ಲಾಕ್‌ಡೌನ್ ಜಾರಿ ಮಾಡಬಹುದಾ..? ಎನ್ನು ಊಹೆ ಮಾಡಲಾಗ್ತಿದೆ.
ಲಾಕ್‌ಡೌನ್ ಜಾರಿ ಮಾಡಿದರೂ ಅಚ್ಚರಿಯೇನಿಲ್ಲ..!?
ಭಾರತದಲ್ಲಿ ಮಾರ್ಚ್ 24ರಂದು ಏಕಾಏಕಿ ಲಾಕ್‌ಡೌನ್ ಜಾರಿ ಮಾಡಿದ್ದೇ ಕರೋನಾ ಸೋಂಕು ಇಷ್ಟು ಪ್ರಮಾಣದಲ್ಲಿ ಹರಡಲು ಕಾರಣವಾಯ್ತು ಎನ್ನುವ ಮಾತು ತಜ್ಞರ ವಯಲಯದಲ್ಲಿ ಕೇಳಿ ಬಂದಿದೆ. ಅದೂ ಸತ್ಯವೂ ಹೌದು. ವಲಸೆ ಕಾರ್ಮಿಕರನ್ನು ಹುಟ್ಟೂರುಗಳಿಗೆ ತೆರಳಲು ಅವಕಾಶ ಕೊಟ್ಟು ನಂತರ ಲಾಕ್‌ಡೌನ್ ಜಾರಿ ಮಾಡಿದ್ದರೆ, ಇಷ್ಟೊಂದು ಪ್ರಮಾಣದಲ್ಲಿ ಸೋಂಕು ಹರಡುತ್ತಿರಲಿಲ್ಲ. ಕೇವಲ 600ರ ಒಳಗೆ ಸೋಂಕಿತರು ಇದ್ದರು. ಅದರು 5 ಸಾವಿರಕ್ಕೆ ಏರಿಕೆ ಆದರೂ ಜನಸಾಂದ್ರತೆ ಹಾಗೂ ಕಾರ್ಮಿಕರ ಸಂಕಷ್ಟ ಕಡಿಮೆ ಆಗುತ್ತಿದ್ದ ಕಾರಣ ಜನರಿಗೆ ಹರಡುವುದನ್ನು ತಡೆಯಬಹುದಾಗಿತ್ತು. ಆದರೆ, ಪ್ರಧಾನಿ ಮೋದಿ ಯಾವುದಕ್ಕೂ ಅವಕಾಶ ಕೊಡದೆ ಕೇವಲ 4 ಗಂಟೆ ಅವಧಿಯಲ್ಲಿ ಲಾಕ್‌ಡೌನ್ ಜಾರಿ ಮಾಡಿದ್ದು, ಭಾರೀ ಪ್ರಮಾಣದ ಸೋಂಕಿಗೆ ಕಾರಣವಾಗಿದೆ. ಇದೀಗ ವಲಸೆ ಕಾರ್ಮಿಕರನ್ನು ತಮ್ಮ ಹುಟ್ಟೂರುಗಳಿಗೆ ಹೋಗಲು ಅವಕಾಶ ಕೊಡಲಾಗಿದೆ. ಜನರು ಅನಿವಾರ್ಯ ಇದ್ದವರು ಮಾತ್ರ ನಗರಗಳಲ್ಲಿ ಇದ್ದಾರೆ. ಇದೀಗ ಮತ್ತೊಮ್ಮೆ ಲಾಕ್‌ಡೌನ್ ಜಾರಿ ಮಾಡಿ ಕರೋನಾ ನಿಯಂತ್ರಣ ಮಾಡುತ್ತಾರಾ ಎನ್ನುವ ಆಶಾಭಾವನೆ ಜನರಲ್ಲಿದೆ. ಆದರೆ ಕೇಂದ್ರ ಸರ್ಕಾರ ಜೀವ ರಕ್ಷಣೆ ಬಿಟ್ಟು ಜೀವನದ ಕಡೆಗೆ ಮುಖ ಮಾಡಿ. ಹಾಗಾಗಿ ಮತ್ತೊಮ್ಮೆ ಲಾಕ್‌ಡೌನ್ ಮೊರೆ ಹೋಗುವುದು ಕಷ್ಟಸಾಧ್ಯ ಎನ್ನುತ್ತಿದ್ದಾರೆ ಆರ್ಥಿಕ ತಜ್ಞರು.