ಕ್ಷಾಮ ಮತ್ತು ಬರದಂತಹ ಪರಿಸ್ಥಿತಿಯನ್ನು ಎಲ್ಲಾ ಆಡಳಿತಗಳೂ ತಮ್ಮದೇ ಮೂಗಿನ ನೇರಕ್ಕೆ ನೋಡುತ್ತವೆ ಮತ್ತು ತಮ್ಮ ಅನುಕೂಲಕ್ಕೆ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತವೆ ಎಂಬ ಹಿನ್ನೆಲೆಯಲ್ಲಿ ಒಂದು ಒಳ್ಳೆಯ ಬರವನ್ನು ಎಲ್ಲರೂ ಇಷ್ಟಪಡುತ್ತಾರೆ ಎಂಬ ಮಾತಿದೆ.
ಅದು ಕರೋನಾ ಸೋಂಕಿನ ವಿಷಯದಲ್ಲಿಯೂ ಸುಳ್ಳಲ್ಲ ಎಂಬುದನ್ನು ಭಾರತ ಸರ್ಕಾರದ ಕಳೆದ ಮೂರು ತಿಂಗಳ ವರಸೆಗಳು ಹೇಳುತ್ತಿವೆ. ಅದು ಹೋರಾಟಗಾರರಿರಬಹುದು, ವಿದ್ಯಾರ್ಥಿ ಮುಖಂಡರಿರಬಹುದು, ಪತ್ರಕರ್ತರಿರಬಹುದು, ರಾಜಕೀಯ ವಿರೋಧಿಗಳಿರಬಹುದು, ಕೊನೆಗೆ ಕರೋನಾ ವಿರುದ್ಧದ ಸೆಣೆಸುತ್ತಿರುವ ವೈದ್ಯಕೀಯ ಸಿಬ್ಬಂದಿಯೂ ಸೇರಿದಂತೆ ಎಲ್ಲರ ವಿಷಯದಲ್ಲಿಯೂ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯದ, ತಮ್ಮ ಆಡಳಿತ ಮತ್ತು ನೀತಿಗಳ ಬಗ್ಗೆ ಭಿನ್ನಮತ ಹೊಂದಿರುವ, ಪ್ರತಿರೋಧದ ವ್ಯಕ್ತಪಡಿಸುವ, ಸರ್ಕಾರದ ನಡೆಗಳನ್ನು ಟೀಕಿಸುವ, ವಿಮರ್ಶಿಸುವ ಮಂದಿಯ ವಿರುದ್ಧ ಪ್ರಹಾರ ನಡೆಸಲು ಕರೋನಾ ಸಂಕಷ್ಟದ ಕಾಲವೇ ಪ್ರಧಾನಿ ಮೋದಿ ಸರ್ಕಾರಕ್ಕೆ ವರದಾನವಾಗಿ ಪರಿಣಮಿಸಿದೆ.
ಇದೀಗ ಪಿಂಜ್ರಾ ತೋಡ್ ಮಹಿಳಾ ವಿದ್ಯಾರ್ಥಿ ಸಂಘಟನೆಯ ಪ್ರಮುಖರನ್ನು ಒಬ್ಬೊಬ್ಬರನ್ನಾಗಿ ಬಂಧಿಸಿ, ಸಿಎಎ-ಎನ್ಆರ್‌ಸಿ ಕಾಯ್ದೆಯ ವಿರುದ್ಧ ಪ್ರಜಾಸತ್ತಾತ್ಮಕ ರೀತಿಯ ಹೋರಾಟ ನಡೆಸಿದ ಅವರ ವಿರುದ್ಧ ಭಯೋತ್ಪಾದನಾ ಚಟುವಟಿಕೆ ನಿಯಂತ್ರಣಕ್ಕೆ ಬಳಸುವ ಯುಎಪಿಎ(ಅನ್ ಲಾಫುಲ್ ಆಕ್ಟಿವಿಟೀಸ್ ಪ್ರಿವೆನ್ಷನ್ ಆಕ್ಟ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕಳೆದ ವಾರ ನಡೆದ ಈ ಬಂಧನ ಮತ್ತು ಗಂಭೀರ ಪ್ರಕರಣ ದಾಖಲು ಘಟನೆಗಳು ಸಹಜವಾಗೇ ದೇಶದ ಪ್ರಜಾಸತ್ತಾತ್ಮಕ ಹೋರಾಟಗಾರರಿಗೆ, ಸರ್ಕಾರದ ದಮನ ನೀತಿಗಳ ವಿರೋಧಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ದೆಹಲಿ ಪೊಲೀಸರ ವರಸೆಯನ್ನು 2014-15ರಿಂದಲೂ ನೋಡುತ್ತಲೇ ಬಂದಿರುವ ಯಾರಿಗೂ ಈ ಹೇಯ ನಡೆ ಅಚ್ಚರಿಯನ್ನೇನೂ ತಂದಿಲ್ಲ ಎಂಬುದು ಕೂಡ ವಾಸ್ತವ.

ಕರೋನಾ ಮಹಾಮಾರಿಯ ನಿಯಂತ್ರಣದ ಉದ್ದೇಶದಿಂದ ದೇಶವ್ಯಾಪಿ ಜಾರಿಯಾದ ಲಾಕ್‌ಡೌನ್ ಮತ್ತು ಅದರ ಜೊತೆಗೆ ಜಾರಿಗೆ ಬಂದ ವಿಶೇಷ ಕಾನೂನು ಮತ್ತು ನಿಯಮಗಳು ಸಹಜವಾಗೇ ಜನಸಾಮಾನ್ಯರ ಚಲನವಲನವನ್ನು ನಿಯಂತ್ರಿಸಿದರೆ, ಪೊಲೀಸರಿಗೆ ಇನ್ನಿಲ್ಲದ ಅಧಿಕಾರ ನೀಡಿದವು. ಸೋಂಕು ಭೀತಿಯಿಂದ ಮತ್ತು ಕಾನೂನು ಭಯದಿಂದ ರಸ್ತೆಗಿಳಿಯಲಾಗದ ಜನರ ಅಸಹಾಯಕತೆಯ ಸಂದರ್ಭವನ್ನೇ ಬಳಸಿಕೊಂಡು ಪೊಲೀಸರು ಸರ್ಕಾರದ ನೀತಿಗಳ ವಿರುದ್ಧ, ಆಡಳಿತ ವ್ಯವಸ್ಥೆಯ ಅನ್ಯಾಯಗಳ ವಿರುದ್ಧ ಆ ಮೊದಲು ಹೋರಾಟ ನಡೆಸಿದ, ಅಧಿಕಾರಸ್ಥರ ಸರ್ವಾಧಿಕಾರವನ್ನು ಪ್ರಶ್ನಿಸಿದ, ಸಂವಿಧಾನಬದ್ಧ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮಂಡಿಸಿದ, ಪ್ರತಿಭಟಿಸಿ ಜನರನ್ನು ಬೇಟೆಯಾಡತೊಡಗಿದರು.
ಆರಂಭದಲ್ಲಿ ದೆಹಲಿ ಗಲಭೆಯ ವಿಷಯದಲ್ಲಿ ಬೇಟೆ ಆರಂಭಿಸಿದ ದೆಹಲಿ ಪೊಲೀಸರು, ಗಲಭೆಗೆ ನೇರವಾಗಿ ಸಾರ್ವಜನಿಕರ ಎದುರೇ, ಟಿವಿ ಕ್ಯಾಮರಾಗಳ ಮುಂದೆಯೇ ಕುಮ್ಮಕ್ಕು ನೀಡಿದ ಬಿಜೆಪಿ ಶಾಸಕರು, ಕೇಂದ್ರ ಸಚಿವರಿಗೆ ರಕ್ಷಣೆ ನೀಡಿ, ಗಲಭೆಯ ಸಂತ್ರಸ್ತರಾದ ಬಹುತೇಕ ಅಲ್ಪಸಂಖ್ಯಾತರನ್ನು ಬಂಧಿಸಿದರು. ಕರೋನಾ ಸೋಂಕಿನ ಭೀತಿಯಲ್ಲಿ ಆತಂಕಕ್ಕೊಳಗಾಗಿದ್ದ ದೇಶದ ಜನತೆ ಮತ್ತು ಕರೋನಾದ ಕವರೇಜ್ ಮೇಲೆ ದೃಷ್ಟಿನೆಟ್ಟಿದ್ದ ಮಾಧ್ಯಮಗಳ ಕಣ್ಣು ಅತ್ತ ಹಾಯುವ ಮುನ್ನವೇ ಸರಣಿ ಬಂಧನಗಳು ಆಗಿಹೋದವು.
ಒಂದು ಕಡೆ, ಕರೋನಾ ಲಾಕ್ ಡೌನ್ ನಡುವೆಯೇ ಏಪ್ರಿಲ್ ಮಧ್ಯಭಾಗದಲ್ಲಿ ಅಂಬೇಡ್ಕರ್ ವಾದಿ ಚಿಂತಕ ಡಾ ಆನಂದ್ ತೇಲ್ತುಂಬ್ದೆ, ಸಾಮಾಜಿಕ ಹೋರಾಟಗಾರ ಗೌತಮ್ ನವಲೇಖ ಅವರನ್ನು ಎನ್ಐಎ ಬಂಧಿಸಿದರೆ , ಮತ್ತೊಂದು ಕಡೆ ದಿ ವೈರ್ ಸುದ್ದಿತಾಣದ ಸಂಪಾದಕ ಸಿದ್ಧಾರ್ಥ ವರದರಾಜನ್ ಅವರ ಬಂಧನಕ್ಕೆ ಉತ್ತರಪ್ರದೇಶ ಪೊಲೀಸರು ಜಾಮೀನುರಹಿತ ವಾರಂಟ್ ಜಾರಿ ಮಾಡಿದರು. ಈ ನಡುವೆ ಸಿಎಎ-ಎನ್ಆರ್‌ಸಿ ಕಾಯ್ದೆಯ ವಿರುದ್ಧ ಡಿಸೆಂಬರ್-ಫೆಬ್ರವರಿ ಅವಧಿಯಲ್ಲಿ ನಡೆಸಿದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ದೆಹಲಿಯ ಜಾಮಿಯಾ ವಿವಿ ವಿದ್ಯಾರ್ಥಿಗಳಾದ ಸಫೋರಾ ಝರ್ಗರ್, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್, ಆಸಿಫ್ ಇಕ್ಬಾಲ್ ಮತ್ತಿತರರನ್ನು ಬಂಧಿಸಿ, ದೆಹಲಿ ಪೊಲೀಸರ ಅವರ ವಿರುದ್ಧ ಕಠಿಣ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿದರು. ಅದರಲ್ಲೂ ತುಂಬು ಗರ್ಭಿಣಿ ಸಫೋರಾ ಅವರನ್ನು ಕನಿಷ್ಟ ರಿಯಾಯ್ತಿಯನ್ನೂ ನೀಡಿದೆ ಬಂಧಿಸಿ ಅಮಾನವೀಯ ರೀತಿಯಲ್ಲಿ ತಿಂಗಳುಗಟ್ಟಲೆ ಜೈಲಿನಲ್ಲಿಡಲಾಯಿತು.

ಆ ಬಳಿಕ ಅದೇ ಸಿಎಎ-ಎನ್ ಆರ್ ಸಿ ವಿರುದ್ದ ಹೋರಾಟಕ್ಕೆ ಸಂಬಂಧಿಸಿದಂತೆ ದೆಹಲಿಯ ಮಹಿಳಾ ವಿದ್ಯಾರ್ಥಿ ಸಂಘಟನೆ ಪಿಂಜ್ರಾ ತೋಡ್ನ ನಾಯಕಿಯರಾದ ದೆಬಾಂಗನಾ ಕಲಿತಾ ಮತ್ತು ನತಾಶಾ ನರ್ವಾಲ್ ಅವರುಗಳನ್ನು ಬಂಧಿಸಲಾಯಿತು. ದೆಹಲಿಯ ಜಫರ್ ಬಾದ್ ಪ್ರದೇಶದಲ್ಲಿ ಪ್ರತಿಭಟನೆ ವೇಳೆ ನಡೆದ ಗಲಭೆಗೆ ಸಂಬಂಧಿಸಿದಂತೆ ಅವರಿಬ್ಬರನ್ನು ಬಂಧಿಸಲಾಗಿತ್ತು. ಆದರೆ, ಪ್ರಕರಣದಲ್ಲಿ ಅವರಿಗೆ ನ್ಯಾಯಾಲಯ ಜಾಮೀನೂ ನೀಡಿತು. ಅದರ ಬೆನ್ನಲ್ಲೇ ದೆಹಲಿ ಪೊಲೀಸರು ಅವರಿಬ್ಬರ ವಿರುದ್ಧ ಮತ್ತೊಂದು ಪ್ರತ್ಯೇಕ ಪ್ರಕರಣ ಹೂಡಿ ಕೂಡಲೇ ಮತ್ತೆ ಬಂಧಿಸಿದರು. ಆ ಪೈಕಿ ನರ್ವಾಲ್ ವಿರುದ್ಧವೂ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಲಾಯಿತು ಮತ್ತು ಇಬ್ಬರನ್ನೂ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿತ್ತು. ಆ 14 ದಿನಗಳ ನ್ಯಾಯಾಂಗ ಬಂಧನ ಮುಗಿಯುತ್ತಿದ್ದಂತೆ ಸೋಮವಾರ ಮತ್ತೆ ಮತ್ತೊಂದು ಪ್ರಕರಣದಡಿ ಕಲಿತಾ ಅವರನ್ನು ಬಂಧಿಸಲಾಗಿದೆ.
ಇದೀಗ ಹೀಗೆ ಬಂಧಿತರಾಗಿರುವವರು ಪೊಲೀಸರ ತನಿಖೆಗೆ ಸಹಕರಿಸದಿರುವ ಬಗ್ಗೆಯಾಗಲೀ, ಪೊಲೀಸರು ಮಾಡಿರುವ ಆರೋಪಗಳಲ್ಲಿ ನೇರವಾಗಿ ಭಾಗಿಯಾದ ಬಗ್ಗೆಯಾಗಲೀ ಸಾಕ್ಷ್ಯಗಳಿಲ್ಲ. ಪೊಲೀಸರು ದೆಹಲಿಯ ಪ್ರತಿಭಟನೆ ಗಲಭೆಯ ವಿಷಯದಲ್ಲಿ ನಡೆಸುತ್ತಿರುವ ತನಿಖೆಗಳು ಸರಿದಾರಿಯಲ್ಲಿ ಇಲ್ಲ ಎಂದು ದೆಹಲಿ ನ್ಯಾಯಾಲಯವೇ ಹೇಳಿದೆ. ಅಲ್ಲದೆ, ಕಲಿತಾ ಅವರಿಗೆ ಜಾಮೀನನ್ನೂ ಮಂಜೂರು ಮಾಡಿದೆ.
ಅಂದರೆ, ದೆಹಲಿ ಪೊಲೀಸರು ವಿವಿಧ ವಿವಿಯಗಳ ಮತ್ತು ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿಗಳ ಬಂಧನದ ವಿಷಯದಲ್ಲಿ ಪಾರದರ್ಶಕವಾಗಿ ನಡೆದುಕೊಂಡಿಲ್ಲ ಮತ್ತು ಅನಗತ್ಯವಾಗಿ ಬಂಧಿಸಿ, ಕಠಿಣ ಕಾನೂನುಗಳನ್ನು ಹೇರಿದ್ದಾರೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಅಂದರೆ; ಕರೋನಾ ಸಂಕಷ್ಟದ ಹೊತ್ತಲ್ಲಿ ದೇಶದ ಜನತೆ ಸಾವು ಮತ್ತು ನೋವಿನ ಭೀತಿಯಲ್ಲಿರುವಾಗ, ಬಡವರು, ಕಾರ್ಮಿಕರು ಹೊತ್ತಿನ ಊಟ ಮತ್ತು ನಾಳೆಯ ಬದುಕಿನ ಆತಂಕದಲ್ಲಿರುವಾಗ, ವೈದ್ಯಕೀಯ ಲೋಕ ಮಹಾಮಾರಿಯ ವಿರುದ್ಧ ಜೀವ ಪಣಕ್ಕಿಟ್ಟು ಹೋರಾಡುತ್ತಿರುವಾಗ ದೆಹಲಿ ಪೊಲೀಸರು ಸರ್ಕಾರದ ಚುಕ್ಕಾಣಿ ಹಿಡಿದವರನ್ನು ಸಂತೃಷ್ಟಗೊಳಿಸಲು ಪ್ರಜಾಸತ್ತಾತ್ಮಕ ದಾರಿಗಳನ್ನು ಬದಿಗೊತ್ತಿ ಸರ್ವಾಧಿಕಾರಿ ವರಸೆಯಲ್ಲಿ ಸರಣಿ ಬಂಧನದ ಮೂಲಕ ಮುಕ್ತ ಮತ್ತು ದಿಟ್ಟ ದನಿಗಳ ದಮನದ ಬೇಟೆಗಿಳಿದಿದ್ದರು!

ಲಾಕ್ ಡೌನ್ ಅವಧಿ ಎಂಬುದು ಕೇವಲ ಅಧಿಕಾರಸ್ಥರ ತಪ್ಪುಗಳನ್ನು ಎತ್ತಿ ತೋರಿಸುವ ಮಾಧ್ಯಮದ ಮಂದಿ, ಜನರ ಹಕ್ಕುಗಳನ್ನು ಪ್ರತಿಪಾದಿಸುವ ಜನಪರ ಹೋರಾಟಗಾರರು, ಎನ್ ಆರ್ ಸಿ ಮತ್ತು ಸಿಎಎಯಂತಹ ಜನವಿರೋಧಿ ಕಾಯ್ದೆ ವಿರುದ್ಧದ ಪ್ರತಿಭಟನಾಕಾರರು, ವಿದ್ಯಾರ್ಥಿ ಮುಖಂಡರ ವಿರುದ್ಧ ಪೊಲೀಸ್ ಬಲ ಪ್ರಯೋಗದ ಅವಕಾಶವಾಗಿ ಮಾತ್ರ ಬಳಕೆಯಾಗಲಿಲ್ಲ. ಸ್ವತಃ ಕರೋನಾದ ವಿರುದ್ಧ ಜೀವ ಪಣಕ್ಕಿಟ್ಟು ಹೋರಾಡುತ್ತಿದ್ದ ವೈದ್ಯಕೀಯ ವಲಯದ ದಿಟ್ಟ ಮತ್ತು ನಿರ್ಭಿಢೆಯ ದನಿಗಳನ್ನು ಕೂಡ ಹತ್ತಿಕ್ಕಲು ಇದೇ ಪೊಲೀಸ್ ಬಲವನ್ನು ಬಳಸಲಾಯಿತು. ಅದಕ್ಕೆ ಉದಾಹರಣೆಯಾಗಿ ದೆಹಲಿಯ ಏಮ್ಸ್ ನಂತಹ ವಿಶ್ವಪ್ರಸಿದ್ಧ ವೈದ್ಯಕೀಯ ಸಂಸ್ಥೆಯಿಂದ ಆಂಧ್ರಪ್ರದೇಶದವರೆಗೆ ಹಲವು ಕಡೆ ಪಿಪಿಇ ಸೇರಿದಂತೆ ಅಗತ್ಯ ಸುರಕ್ಷಾ ಸಾಧನಗಳನ್ನು ಸಕಾಲಿಕವಾಗಿ ಸರಬರಾಜು ಮಾಡದ ಸರ್ಕಾರದ ಹೊಣೆಗೇಡಿತನದ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದೇ ಅಪರಾಧವೆಂಬಂತೆ ಅವರ ವಿರುದ್ಧ ಪ್ರಕರಣದ ದಾಖಲಿಸಲಾಯಿತು. ಆಡಳಿತ ಪಕ್ಷದ ಬೆಂಬಲಿಗರು ವೈದ್ಯರ ಮೇಲೆ ಹಲ್ಲೆ ನಡೆಸಿ ರಸ್ತೆಯಲ್ಲಿ ಎಳೆದಾಡಿದ ಘಟನೆಗಳೂ ನಡೆದವು.
ಒಟ್ಟಾರೆ, ದೇಶವನ್ನೇ ಸಂಕಷ್ಟಕ್ಕೆ ನೂಕಿದ, ನಾಳೆಯ ಬದುಕಿನ ಆತಂಕಕ್ಕೆ ದೂಡಿದ ಕರೋನಾ ಮಹಾಮಾರಿ, ಜನಸಾಮಾನ್ಯರ ಪಾಲಿಗೆ ಸಾವು- ನೋವಿನ ಪ್ರಶ್ನೆಯಾದರೆ, ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ಮಂದಿಯ ಪಾಲಿಗೆ ಇದು ತಮ್ಮ ದುರಾಡಳಿತದ ವಿರುದ್ಧದ ದನಿಗಳನ್ನು ದಮನ ಮಾಡಲು, ಪ್ರತಿರೋಧವನ್ನು ಬಗ್ಗುಬಡಿಯುವ ಸುವರ್ಣಾವಕಾಶವಾಗಿ ಒದಗಿಬಂದಿತು! ಇಂತಹ ಮಾನವೀಯ ಸಂಕಟದ ಹೊತ್ತಲ್ಲೂ ಅಮಾನವೀಯ, ಸರ್ವಾಧಿಕಾರಿ ದಬ್ಬಾಳಿಕೆ ಮತ್ತು ದಮನನೀತಿ ಅನುಸರಿಸಿದ ಈ ವರಸೆ, ನಿಜಕ್ಕೂ ದೇಶದ ಆಡಳಿತ ವ್ಯವಸ್ಥೆ ಎಷ್ಟು ಪ್ರಜಾಸತ್ತಾತ್ಮಕವಾಗಿದೆ ಎಂಬುದಕ್ಕೆ ಕನ್ನಡಿ ಹಿಡಿದಿದೆ. ಕರೋನಾ ಕಾಲದ ಆ ಕನ್ನಡಿಯಲ್ಲಿ ಕಂಡ ಭಾರತದ ಸದ್ಯದ ಆಡಳಿತದ ಕುರೂಪ ಮುಖ, ಚರಿತ್ರೆಯ ಪುಟದಲ್ಲಷ್ಟೇ ಅಲ್ಲ; ಭವಿಷ್ಯದ ಕಣ್ಣಲ್ಲೂ ಭೀಕರ ಚಿತ್ರಣವಾಗಿ ದಾಖಲಾಗಲಿದೆ!