ಕರೋನಾ ವೈರಸ್ ಸೋಂಕು ಮಾನವ ನಿರ್ಮಿತ ಎನ್ನುವ ವಾದವೊಂದು ಕೇಳಿ ಬರುತ್ತಲೇ ಇದೆ. ಕೆಲವು ದಿಗ್ಗಜ ರಾಷ್ಟ್ರಗಳು ಇಡೀ ವಿಶ್ವದ ಮೇಲೆ ನಿಯಂತ್ರಣ ಹೊಂದುವ ಉದ್ದೇಶದಿಂದ ಕೆಲವೊಂದು ಕುತಂತ್ರಗಳನ್ನು ಮಾಡುತ್ತಲೇ ಬರುತ್ತವೆ. ಯುದ್ಧ ಪರಿಸ್ಥಿತಿ ನಿರ್ಮಾಣ ಮಾಡುವುದು ಅಭಿವೃದ್ಧಿ ರಾಷ್ಟ್ರಗಳ ಪ್ರಮುಖ ಅಜೆಂಡಾ. ಆದರೆ ಇತ್ತೀಚಿನ ದಿನಗಳಲ್ಲಿ ಬಯೋ ವಾರ್ ಎನ್ನುವ ಹೆಸರು ಸಾಕಷ್ಟು ಕುಖ್ಯಾತಿ ಗಳಿಸಿದ್ದು, ಚೀನಾ ಕೂಡ ಇದೇ ರೀತಿಯ ಯುದ್ಧವನ್ನು ವಿಶ್ವದ ಮೇಲೆ ಸಾರಿದೆ ಎನ್ನುವ ಆತಂಕವನ್ನು ವಿಶ್ವದ ಅನೇಕ ಮಂದಿ ವ್ಯಕ್ತಪಡಿಸಿದ್ದರು. ಆದರೆ ಇದೇ ವೇಳೆ ಕೆಲವೊಂದಿಷ್ಟು ಮಂದಿ ವಿಜ್ಞಾನಿಗಳು ಕರೋನಾ ವೈರಸ್ ಎನ್ನುವುದು ಮಾನವ ನಿರ್ಮಿತ ಅಲ್ಲವೇ ಅಲ್ಲ. ಯಾಕಂದ್ರೆ ಕರೋನಾ ವೈರಸ್ ಜಾತಿಯ ವೈರಸ್ ವಿಶ್ವದಲ್ಲಿ ಈಗಾಗಲೇ ಬಂದು ಹೋಗಿದೆ ಎಂದು ವಾದಿಸಿದ್ದರು. ಆದರೂ ಈ ಕೋವಿಡ್ – 19 ಎನ್ನುವ ವೈರಸ್ ಅನ್ನು ಚೀನಾವೇ ನಿರ್ಮಿಸಿದೆ ಎಂದು ಹೇಳುವ ಬಲವಾದ ವಾದವೊಂದು ಕೇಳಿಬಂದಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಕೋವಿಡ್ – 19 ಚೀನಾ ನಿರ್ಮಿತ ವೈರಸ್ ಎನ್ನುವುದನ್ನು ಬಹಳ ಸೂಕ್ಷ್ಮವಾಗಿ ʼಚೀನಿ ವೈರಸ್ʼ ಎಂದು ಈ ಹಿಂದೆಯೇ ಕರೆದಿದ್ದರು. ಇದೀಗ ಅಮೆರಿಕ ಚೀನಾ ವಿರುದ್ಧ ತನ್ನ ಗುಪ್ತಚರ ಇಲಾಖೆ ಮೂಲಕ ತನಿಖೆ ನಡೆಸುತ್ತಿದೆ. ತನ್ನ ದೇಶದ ತನಿಖಾ ಪರಿಣಿತರನ್ನು ಚೀನಾ ದೇಶಕ್ಕೆ ಕಳುಹಿಸಲು ಮುಂದಾಗಿದೆ. ಒಂದು ವೇಳೆ ಚೀನಾದ ವುಹಾನ್ ವೈರಾಲಜಿ ಸಂಸ್ಥೆಯಿಂದ ಹೊರಬಂದಿರುವ ವೈರಸ್ ಇಷ್ಟೆಲ್ಲಾ ದುರಂತಕ್ಕೆ ಕಾರಣ ಎನ್ನುವುದು ಖಚಿತವಾದರೆ ತಕ್ಕ ಪಶ್ಚಾತ್ತಾಪ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದೆ. ವೈಟ್‌ಹೌಸ್ ನಲ್ಲಿ ಕರೋನಾ ಸೋಂಕಿನ ಬಗ್ಗೆ ಮಾತನಾಡುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಲ್ಯಾಬ್ ನಿಂದ ಹೊರಬಂದಿದೆ ಎನ್ನುವುದಕ್ಕೆ ಸೂಕ್ತ ಸಾಕ್ಷಿ ಲಭ್ಯವಾಗಿಲ್ಲ ಎಂದಿದ್ದಾರೆ. ಆದರೆ ನೊಬೈಲ್ ಪುರಸ್ಕೃತ ವಿಜ್ಞಾನಿ ಮಾತ್ರ ಚೀನಾ ದೇಶದ ಲ್ಯಾಬ್ನಿಂದಲೇ ಕರೋನಾ ವೈರಸ್ ಪ್ರಪಂಚಕ್ಕೆ ಹರಡಿದೆ ಎಂದಿದ್ದಾರೆ.

2008ರಲ್ಲಿ ಏಡ್ಸ್ ಸೋಂಕಿಗೆ ಲಸಿಕೆ ಪತ್ತೆ ಮಾಡಿ ಇನ್ನಿಬ್ಬರು ವಿಜ್ಞಾನಿಗಳ ಜೊತೆ ನೋಬೆಲ್ ಪ್ರಶಸ್ತಿ ಹಂಚಿಕೊಂಡಿದ್ದ ವಿಜ್ಞಾನಿ ಮಾಂಟಾಗ್ನೈರ್, ಚೀನಾದ ವುಹಾನ್ನ ರಾಷ್ಟ್ರೀಯ ವೈರಾಣು ಅಧ್ಯಯನ ಕೇಂದ್ರದ ( Wuhan National Biosafety Laboratory ) ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಫ್ರೆಂಚ್ ನ್ಯೂಸ್ ಚಾನೆಲ್ಗೆ ಸಂದರ್ಶನ ಕೊಟ್ಟಿರುವ ವಿಜ್ಞಾನಿ ಮಾಂಟಾಗ್ನೈರ್, ಕರೋನಾ ವೈರಸ್ನಲ್ಲಿ ಏಡ್ಸ್ ಹಾಗೂ ಮಲೇರಿಯಾಗೆ ಸಂಬಂಧಿಸಿದ ಅಂಶ ಪತ್ತೆಯಾಗಿವೆ. ಯಾವುದೇ ಕಾರಣಕ್ಕೂ ಕರೋನಾ ವೈರಸ್ ನೈಸರ್ಗಿಕವಾಗಿ ಉದ್ಬವಿಸಿದಲ್ಲ. ಇದನ್ನು ಕೈಗಾರಿಕಾ ಅಪಘಾತ ಎಂದು ಕರೆಯಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ನೋಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಮಾಂಟಾಗ್ನೈರ್ ಸಂದರ್ಶನದಲ್ಲಿ ಹೇಳಿರುವ ಮಾಹಿತಿ ಬಳಿಕ ಅಮೆರಿಕದ ತನಿಖೆ ಚುರುಕುಗೊಂಡಿದೆ. ನೋಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಮಾಂಟಾಗ್ನೈರ್ ಅವರಿಗೆ ಈ ರೀತಿಯ ವಿವಾದಗಳು ಹೊಸದೇನು ಅಲ್ಲ. ಈಗಾಗಲೇ ವಿವಾದಾತ್ಮಕ ಅಧ್ಯಯನ ಪ್ರಬಂಧ ಮಂಡಿಸಿ ಭಾರೀ ಸುದ್ದಿಯಾಗಿದ್ದರು. ಇದೀಗ ಈ ರೀತಿಯ ಹೇಳಿಕೆ ಕೊಟ್ಟಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಫ್ರೆಂಚ್ ನ ಮತ್ತೋರ್ವ ವೈರಾಣು ವಿಜ್ಞಾನಿ ಎಟಿಯೆನ್ ಸೈಮನ್ ಲೋರಿಯರ್ ನೊಬೆಲ್ ಪುರಸ್ಕೃತ ವಿಜ್ಞಾನಿ ಮಾಂಟಾಗ್ನೈರ್ ನೀಡಿರುವ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಮಾಂಟಾಗ್ನೈರ್ ನೀಡಿರುವ ಹೇಳಿಕೆಗೆ ಕಸಕ್ಕೆ ಸಮ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಹೇಳಿಕೆ ನೀಡುವ ಮುನ್ನ ಸ್ವಲ್ಪ ಪ್ರಜ್ಞೆ ಇಟ್ಟುಕೊಳ್ಳಬೇಕು. ಕರೋನಾ ವೈರಸ್ನ ಕುಟುಂಬಕ್ಕೆ ಸೇರಿದ ಮತ್ತೊಂದು ವೈರಸ್ ಕೋವಿಡ್ – 19 ಎಂದು AFP (Agence France-Presse) ಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಚೀನಾದ ವಿದೇಶಾಂಗ ಸಚಿವಾಲಯ ಕೂಡ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದು, ವುಹಾನ್ ಲ್ಯಾಬ್ ನಿಂದಲೇ ಹೊರಬಂದಿದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ ಎಂದಿದೆ. ಅಮೆರಿಕ ವೈರಸ್ನ ಮೂಲ ಹುಡುಕಲು ಹೊರಟಿದೆ. ಒಟ್ಟಾರೆ, ವಿಶ್ವವನ್ನೇ ಸಾವಿನ ಮನೆಗೆ ಕರೆದೊಯ್ಯುತ್ತಿರುವ ಕರೋನಾ ಮೂಲ ಸಿಕ್ಕಿದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಏನೆಲ್ಲಾ ಅನಾಹುತ ಸಂಭವಿಸುವುದೋ ಬಲ್ಲವರಾರು..!!








