ಭಾರತದಲ್ಲಿ ಕರೋನಾ ವೈರಸ್ ದಾಂದಲೆ ಎಬ್ಬಿಸುತ್ತಿರುವ ಈ ಸಂದರ್ಭದಲ್ಲಿ ಎಲ್ಲೆಡೆ ಕೇಳಿಬರುತ್ತಿರುವ ಮಾತುಗಳಲ್ಲಿ “ಸ್ವಚ್ಛತೆ ಕಾಪಾಡಿ”, “ಆಗಾಗ ಕೈ ತೊಳೆಯಿರಿ” ಎಂಬುದೂ ಸೇರಿವೆ. ಇದು ಅತ್ಯಂತ ಅಗತ್ಯ ಕೂಡಾ. ಆದರೆ ಸ್ನಾನ, ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು ಇತ್ಯಾದಿ ದಿನನಿತ್ಯದ ಮನೆವಾರ್ತೆಗಳಿಗೆ ಬಿಡಿ, ಅಡುಗೆಗೆ ಬೇಕಾದ ಮತ್ತು ಕುಡಿಯುವ ನೀರಿಗಾಗಿಯೇ, ತತ್ವಾರ ಪಡಬೇಕಾದ, ಒಂದೆರಡು ಕೊಡ ನೀರಿಗೆ ಮೈಲುಗಟ್ಟಲೆ ನಡೆಯಬೇಕಾದ ಹಳ್ಳಿಗಳು ಭಾರತದಲ್ಲಿ ಸಾವಿರಾರು ಸಂಖ್ಯೆಯಲ್ಲಿವೆ.
ಮಹತ್ವಾಕಾಂಕ್ಷೆಯ ಸರಕಾರಿ ಕಾರ್ಯಕ್ರಮಗಳ ಹೊರತಾಗಿಯೂ ಭಾರತದ ಬಹಳಷ್ಟು ಗ್ರಾಮೀಣ ಪ್ರದೇಶಗಳು ಸುರಕ್ಷಿತ ಕುಡಿಯುವ ನೀರಿನ ಸೌಲಭ್ಯದಿಂದ ವಂಚಿತವಾಗಿವೆಯಾದರೆ, ನಗರ ಪ್ರದೇಶಗಳಲ್ಲಿ ಕೂಡಾ ಎಲ್ಲರಿಗೂ ಕುಡಿಯುವ ನೀರು ಸಿಗುತ್ತಿಲ್ಲ. ಮುಖ್ಯವಾಗಿ ಬಡವರು ಮತ್ತು ಕೊಳೆಗೇರಿ ನಿವಾಸಿಗಳು ನೀರಿಗಾಗಿ ಪರದಾಡುತ್ತಲೇ ಬಂದಿದ್ದಾರೆ. ಈ ಸಂದರ್ಭದಲ್ಲಿ ಆತಂಕದ ಪರಿಸ್ಥಿತಿ ಉಂಟುಮಾಡಬಹುದಾದ ಮತ್ತು ತಾತ್ಕಾಲಿಕ ನೆಲೆಯಲ್ಲಿಯಾದರೂ ತಕ್ಷಣ ಪರಿಹಾರ ಕಂಡುಕೊಳ್ಳಬೇಕಾಗಿರುವ ಸಮಸ್ಯೆಗಳಲ್ಲಿ ಇದೂ ಒಂದು.
ನಮ್ಮಲ್ಲಿ ಉಳ್ಳವರು, ಮಧ್ಯಮವರ್ಗದ ಜನರು, ಹೊಟ್ಟೆತುಂಬಿದವರು ಆರಾಮವಾಗಿ ಮನೆಯಲ್ಲಿಯೇ ಕುಳಿತು, “ಮನೆಯಿಂದ ಹೊರಬಂದವರಿಗೆ ಗುಂಡು ಹೊಡೆಯಬೇಕು” ಎಂದು ಹೇಳುತ್ತಾ, ಶ್ರೀಮಂತರು ವಿಮಾನ ಮೂಲಕ ತಂದ ವೈರಸನ್ನು ಹರಡುತ್ತಿರುವ ಆರೋಪವನ್ನು ಬಡಜನರ ಮೇಲೆ ಹೋರಿಸುತ್ತಿದ್ದಾರೆ. ಅವರು ಸ್ಯಾನಿಟೈಸರ್ ಬಳಸುವ ಮಾತನಾಡುತ್ತಿದ್ದಾರೆ. ಇದು ಬಿಜೆಪಿ ಸರಕಾರದ ಚಿಂತನೆಯಂತೆ ಸಿರಿವಂತರು ಮತ್ತು ಮಧ್ಯಮವರ್ಗದವರಷ್ಟೇ ಭಾರತೀಯರು ಎಂದು ಭಾವಿಸಿರುವುದರ ಪರಿಣಾಮ.
ಸ್ಯಾನಿಟೈಸರ್ ಬಿಡಿ, ಮೂಲಭೂತ ಆವಶ್ಯಕತೆಗಳಾದ ಸಾಬೂನು ಮತ್ತು ನೀರು ಸಿಗದ ಕೋಟ್ಯಂತರ ಜನ ನಮ್ಮಲ್ಲಿದ್ದಾರೆ ಎಂಬುದನ್ನು ಅವರು ಮರೆತೇ ಬಿಡುತ್ತಾರೆ. ಈ ಹತಭಾಗ್ಯರ ಒಂದೇ ಚಿಂತೆ ದಿನದ ಕೂಳು ಹೊಂದಿಸುವುದರ ಜೊತೆಗೆ, ಕುಡಿಯಲು ಮತ್ತು ಅಡುಗೆಗೆ ನೀರು ಎಲ್ಲಿಂದ ತರುವುದು ಎಂಬುದಾಗಿದೆ.
ಇನ್ನು ಸ್ವಚ್ಛತೆಯ ವಿಷಯಕ್ಕೆ ಬಂದರೆ ಲಕ್ಷಾಂತರ ನಗರ ಮತ್ತು ಗ್ರಾಮೀಣ ಜನವಸತಿಗಳಲ್ಲಿ ಮನೆ ಮನೆಗಳಿಗೆ ನಳ್ಳಿ ಸಂಪರ್ಕಗಳಿಲ್ಲ. ನಗರಗಳ ಕೊಳೆಗೇರಿಗಳಲ್ಲಂತೂ ನಳ್ಳಿಗಳು ಕೊಳಚೆ ತುಂಬಿದ ಚರಂಡಿಗಳು, ನಾರುವ ಕಸದ ರಾಶಿಗಳ ಬದಿಯಲ್ಲಿಯೇ ಇವೆ. ರಾಜಧಾನಿ ದಿಲ್ಲಿ, ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿಯೇ ಇದು ನಿಜವೆಂದಾದರೆ, ದೇಶದ ಇತರ ಭಾಗಗಳಲ್ಲಿ ಪರಿಸ್ಥಿತಿ ಹೇಗಿರಬಹುದು? ಈ ನೀರಿನಲ್ಲಿ ಕೈತೊಳೆದರೆ, ಕರೋನಾ ವೈರಸ್ ತೊಲಗುವ ಬದಲು ಬೇರೆ ವೈರಸ್ಗಳು ವಕ್ಕರಿಸಬಹುದು ಎಂಬ ಮಾತಿನಲ್ಲಿ ಹೆಚ್ಚಿನ ಉತ್ಪ್ರೇಕ್ಷೆ ಏನಿಲ್ಲ. ನಗರ ಪ್ರದೇಶಗಳ 20 ಶೇಕಡಾ ಜನರಿಗೆ ನೀರಿನ ವ್ಯವಸ್ಥೆ ಇಲ್ಲವೆಂದು ಕೂಡಾ ಯುನಿಸೆಫ್ ಹೇಳಿದೆ.
ಇದು ಗಂಭೀರ ಸಮಸ್ಯೆಗಳನ್ನು ಉಂಟುಮಾಡುವುದು ಖಂಡಿತ. ರೋಗದ ಹರಡುವಿಕೆಯನ್ನು ನಿಧಾನಗೊಳಿಸಲು ಅತ್ಯಗತ್ಯವಾದ ಸಾಮಾಜಿಕ ಅಂತರ (ಭಾರತದಲ್ಲಿ ಇದು ದೈಹಿಕ ಅಂತರವಾಗಬೇಕು. ಏಕೆಂದರೆ, ಜಾತಿಧರ್ಮಗಳ ಹೆಸರಿನಲ್ಲಿ ಇಲ್ಲಿ ಸಾಮಾಜಿಕ ಅಂತರವನ್ನು ಶತಶತಮಾನಗಳಿಂದ ಆಚರಿಸಲಾಗುತ್ತಿದೆ.) ಕಾದುಕೊಳ್ಳುವುದೇ ಒಂದು ಸವಾಲು. ಭಾರತದಲ್ಲಿ “ಊರಿಗೆ ಬಂದವಳು ನೀರಿಗೆ ಬರದಿರುತ್ತಾಳೆಯೇ?”, “ಬಾವಿ ಕಟ್ಟೆ ಪಂಚಾಯಿತಿ” ಇತ್ಯಾದಿ ಮಾತುಗಳು ಹಿಂದಿನಿಂದಲೂ ಚಾಲ್ತಿಯಲ್ಲಿವೆ. ಇವುಗಳ ವ್ಯಾಖ್ಯಾನ ಲಾಕ್ಡೌನ್ ಮತ್ತು ನೀರಿನ ಅಭಾವದ ಸಂದರ್ಭದಲ್ಲಿ ಹೇಗೆ? ಜನರು ನೀರಿಗಾಗಿ ಮುಗಿಬೀಳುವುದನ್ನು ಹೇಗೆ ತಡೆಯುತ್ತೀರಿ? ಲಾಠಿಚಾರ್ಜ್ ಮಾಡುತ್ತೀರೋ, ಗುಂಡು ಹೊಡೆಯುತ್ತೀರೋ? ಮೇಲಾಗಿ, ಸವರ್ಣೀಯರು ಬಳಸುವ ಕೆರೆಬಾವಿಗಳನ್ನು ದಲಿತರು ಮುಟ್ಟಬಾರದು ಎಂಬ ನಿಷೇಧವಿರಃವ ಸಾವಿರಾರು ಹಳ್ಳಿಗಳಿವೆ. ಇದಕ್ಕಾಗಿ ನಡೆದ ಕಲಾಟೆ, ಹಲ್ಲೆ, ಕೊಲೆಗಳ ಲೆಕ್ಕ ಇಟ್ಟವರು ಯಾರು?
ಅಂದರೆ- ಹಳ್ಳಿ, ನಗರಗಳಲ್ಲಿ ಜನರು, ಮುಖ್ಯವಾಗಿ ಮಹಿಳೆಯರು ನೀರಿಗಾಗಿ ನಳ್ಳಿ,, ಬಾವಿ, ಕೆರೆ, ತೊರೆಗಳ ಬಳಿ ನೆರೆಯುವುದು ಸಾಮಾನ್ಯ ಮತ್ತು ಅನಿವಾರ್ಯ. ನಳ್ಳಿ-ಬಾವಿ ಜಗಳಗಳೂ, ರಾದ್ಧಾಂತಗಳೂ ನಮ್ಮಲ್ಲಿ ಸಾಮಾನ್ಯ. ಈಗ ವೈರಸ್ ಹಾವಳಿ ಮತ್ತು ಲಾಕ್ಡೌನ್ ಸಂಕಷ್ಟಗಳ ನಡುವೆ ಪರಿಸ್ಥಿತಿ, ಪರಿಣಾಮ ಏನಾಗಬಹುದು ಯೋಚಿಸಿ, ಸರಕಾರವೂ ಇದೇ ರೀತಿ ಯೋಚಿಸುತ್ತದೆ ಎಂದು ಆಶಿಸಿ. ಸೋಂಕು ತಗಲಿದ ಮಹಿಳೆ ಮನೆಗೆ ಬಂದಾಗ ಆಕೆಯ ಮಕ್ಕಳ ಪಾಡೇನು? ಈ ಸಂದರ್ಭದಲ್ಲಿ ಸರಕಾರ ಈ ಪರಿಸ್ಥಿತಿಗೆ ಎಷ್ಟು ಕಾರಣ ಎಂಬುದನ್ನು ಅಂಕಿಅಂಶಗಳ ಆಧಾರದಲ್ಲಿ ನೋಡೋಣ. “ಅಚ್ಛೇದಿನ್”, “ಸಬ್ಕಾ ವಿಕಾಸ್”, “ವಿಶ್ವಗುರು”, “ಐದು ಟ್ರಿಲಿಯನ್ ಡಾಲರ್ ಇಕಾನಮಿ” ಇತ್ಯಾದಿ ಆಕರ್ಷಕ ಬೊಗಳೆಗಳ ನಡುವೆ ಸರಕಾರದ ಸಾಧನೆಯಾದರೂ ಏನು?
ಲಭ್ಯವಿರುವ 2018ರ ಆಗಸ್ಟ್ ತಿಂಗಳ ಸರಕಾರಿ ಲೆಕ್ಕಪರಿಶೋಧಕರ ವರದಿಯ ಪ್ರಕಾರ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯ ಅಡಿಯಲ್ಲಿ 2017ರವರೆಗಿನ ಐದು ವರ್ಷಗಳಲ್ಲಿ ಬಜೆಟ್ ನಿಗದಿ ಮೊತ್ತವಾದ 89,956 ಕೋಟಿ ರೂ.ಗಳಲ್ಲಿ 90 ಶೇಕಡಾದಷ್ಟನ್ನು ಮುಗಿಸಿದರೂ, 16.3 ಕೋಟಿ ಭಾರತೀಯರು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದರು. ಅಂದರೆ, ಇದು ರಷ್ಯಾದಂತಹ ಅತಿದೊಡ್ಡ ದೇಶದ ಜನಸಂಖ್ಯೆಗಿಂತಲೂ ಹೆಚ್ಚು. ಹೊಸ ಅಂಕಿಅಂಶವನ್ನು ನೀಡಬೇಕೆಂದರೆ, ಭಾರತದಲ್ಲಿ 13 ಕೋಟಿ ಜನರು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ ಎಂದು ಯುನಿಸೆಫ್ ಹತ್ತು ದಿನಗಳ ಹಿಂದಷ್ಟೇ ಹೇಳಿದೆ.
ಶೇಕಡಾ 35ರಷ್ಟು ಗ್ರಾಮೀಣ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿ, ಪ್ರತಿ ವ್ಯಕ್ತಿಗೆ ದಿನಕ್ಕೆ 40 ಲೀಟರ್, ಅಂದರೆ ಎರಡು ಬಕೆಟ್ ನೀರು ಒದಗಿಸುವುದು ಕಾರ್ಯಕ್ರಮದ ಗುರಿಯಾಗಿತ್ತು. ಆದರೆ, ‘ಖಾಸಗಿಯವರಿಗೆ ಗುತ್ತಿಗೆ’, ‘ಕಳಪೆ ಅನುಷ್ಠಾನ’ ಮತ್ತು ‘ದುರ್ಬಲ ಗುತ್ತಿಗೆ ನಿರ್ವಹಣೆ’ಯ ಕಾರಣದಿಂದ ಅರ್ಧಕ್ಕಿಂತಲೂ ಕಡಿಮೆ ಗುರಿ ಸಾಧಿಸಲಾಗಿದೆ ಎಂದು ಕಂಪ್ಟ್ರೋಲರ್ ಎಂಡ್ ಅಡಿಟರ್ ಜನರಲ್ (ಸಿಎಜಿ) ವರದಿ ತಿಳಿಸಿತ್ತು. ಸುಮಾರು ಹದಿನೇಳು ಲಕ್ಷ ಗ್ರಾಮೀಣ ಜನವಸತಿಗಳ (habitat) ಪೈಕಿ 78 ಶೇಕಡಾದಷ್ಟರಲ್ಲಿ ಕನಿಷ್ಟ ನಿಗದಿತ ಅಗತ್ಯ ಪ್ರಮಾಣವಾದ- ಪ್ರತಿ ವ್ಯಕ್ತಿಗೆ, ಪ್ರತಿದಿನಕ್ಕೆ 40 ಲೀಟರ್ ನೀರಿನ ಸೌಲಭ್ಯ ಇದೆಯಾದರೂ, ಅವರೆಲ್ಲರೂ ವಾಸ್ತವವಾಗಿ ಇದನ್ನು ಪಡೆಯುತ್ತಿದ್ದಾರೆಂದು ಇದರ ಅರ್ಥವಲ್ಲ ಎಂದು ತಜ್ಞರು ಹೇಳುತ್ತಾರೆ.
ಸರಕಾರವು 2018 ಜುಲೈ ತಿಂಗಳಲ್ಲಿ ಸಂಸತ್ತಿಗೆ ನೀಡಿದ ಪ್ರತಿಕ್ರಿಯೆಯ ಪ್ರಕಾರವೇ ಸುಮಾರು 18 ಶೇಕಡಾ ಗ್ರಾಮೀಣ ಜನವಸತಿಗಳು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮದ ಅಡಿಯಲ್ಲಿ ನಿಗದಿತವಾದ “ಪ್ರತಿ ವ್ಯಕ್ತಿಗೆ ಪ್ರತಿದಿನ 40 ಲೀಟರ್” ಗಿಂತಲೂ ಕಡಿಮೆ ನೀರನ್ನು ಪಡೆಯುತ್ತಿವೆ.
ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ವೆಬ್ಸೈಟ್ ಪ್ರಕಾರ, ಕೇಂದ್ರ ಸರಕಾರ ಪ್ರಾಯೋಜಿತ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮವು ಗ್ರಾಮೀಣ ಪ್ರದೇಶದ ಪ್ರತಿ ವ್ಯಕ್ತಿಗೂ ಕುಡಿಯಲು, ಅಡುಗೆ ಮಾಡಲು ಮತ್ತಿತರ ಮನೆ ಅಗತ್ಯಗಳಿಗೆ ಸುಸ್ಥಿರ ರೀತಿಯಲ್ಲಿ ‘ಸಾಕಷ್ಟು ಮತ್ತು ಸುರಕ್ಷಿತ’ ನೀರು ಒದಗಿಸುವ ಗುರಿ ಹೊಂದಿದೆ.
ಆದರೆ, ಸರಕಾರದ ವೈಫಲ್ಯವನ್ನು ಸಿಎಜಿ ವರದಿಯೇ ಎತ್ತಿ ತೋರಿಸುತ್ತದೆ.
ಸಿಎಜಿ ವರದಿ ಉಲ್ಲೇಖಿಸುವಂತೆ ದಿನಕ್ಕೆ ನಲ್ವತ್ತು ಲೀಟರ್ ಮಾನದಂಡದಂತೆ ಕೇವಲ ಎಂಟು ಶೇಕಡಾ ಸಾಧನೆಯಾಗಿದೆ. ಈ ಮಾನದಂಡವನ್ನು ನಲವತ್ತು ಲೀಟರಿಗೆ ಬದಲಾಗಿ ಐವತ್ತೈದು ಲೀಟರಿಗೆ ಏರಿಸಿದರೆ, ಈ ಸಾಧನೆಯೂ ದೊಡ್ಡದೆಂದು ಕಾಣುವಷ್ಟು ದೊಡ್ಡದಲ್ಲ! ಮುಖ್ಯವಿಷಯ ಎಂದರೆ, ಇಡೀ ಪ್ರಪಂಚದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ನೀರುವಂಚಿತ ಜನರು ನಮ್ಮ ದೇಶದಲ್ಲಿದ್ದಾರೆ. ಈ ವಿಷಯದಲ್ಲಿ ಭಾರತವು ಇಥಿಯೋಪಿಯಾದಂತಹ ಹಿಂದುಳಿದ ದೇಶಗಳ ಜೊತೆ ಇದೆ. ಆದರೂ, ಸರಕಾರ ಮಹಾನ್ ಸಾಧನೆಯ ಹುರುಳಿಲ್ಲದ ಜಳ್ಳನ್ನೇ ಜನರತ್ತ ತೂರುತ್ತಾ ಬಂದಿದೆ.
ಸರಕಾರವು 2017ರ ಆಗಸ್ಟ್ನಲ್ಲಿ ಸಂಸತ್ತಿಗೆ ತಿಳಿಸಿದಂತೆ 2022ರ ಒಳಗೆ 90 ಶೇಕಡಾ ಗ್ರಾಮೀಣ ಮನೆಗಳಿಗೆ ನಳ್ಳಿನೀರು ಒದಗಿಸುವ ಗುರಿ ಹೊಂದಲಾಗಿದೆ. ಆದರೆ, ಮೂಲ ಗುರಿಯು ಇದಕ್ಕಿಂತ ಬೇರೆಯೇ ಆಗಿತ್ತು. ಅದು ಹೀಗಿದೆ: ಎಲ್ಲಾ ಗ್ರಾಮೀಣ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವುದು; 50 ಶೇಕಡಾದಷ್ಟು ನಳ್ಳಿಯ ಮೂಲಕ ದಿನಕ್ಕೆ ಪ್ರತಿ ವ್ಯಕ್ತಿಗೆ 55 ಲೀಟರ್ನಂತೆ ಕುಡಿಯುವ ನೀರು ಒದಗಿಸುವುದು; 35 ಶೇಕಡಾ ಗ್ರಾಮೀಣ ಮನೆಗಳಿಗೆ ಯಾವುದೇ ರೀತಿಯಲ್ಲಿ ನೂರು ಮೀಟರ್ ಮೀರದಷ್ಟು ಹತ್ತಿರದಲ್ಲಿ “ಯಾವುದೇ ಸಾಮಾಜಿಕ ಅಥವಾ ಆರ್ಥಿಕ ತಾರತಮ್ಯ ಇಲ್ಲದೆ ನಳ್ಳಿ ಸಂಪರ್ಕ ಕಲ್ಪಿಸುವುದು.
ವಾಸ್ತವವಾಗಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ 2011-2022ರ ಕಾರ್ಯತಂತ್ರದ ಗುರಿಗಳಲ್ಲಿ ಒಂದೆಂದರೆ ಪ್ರತಿಯೊಬ್ಬ ಗ್ರಾಮೀಣ ಭಾರತೀಯನಿಗೆ ಅವರ ಮನೆಯ ಹಿತ್ತಿಲಲ್ಲೇ ಅಥವಾ ಯಾವುದೇ ರೀತಿಯಲ್ಲಿ 50 ಮೀಟರ್ ಮೀರದಂತೆ ದಿನಕ್ಕೆ 70 ಲೀಟರ್ ಕುಡಿಯುವ ನೀರು ಒದಗಿಸುವುದಾಗಿತ್ತು.
ಆದರೆ, 2017ರ ಡಿಸೆಂಬರ್ ತನಕ ಕೇವಲ 44 ಶೇಕಡಾ ಗ್ರಾಮೀಣ ಜನವಸತಿಗಳಿಗೆ ಮತ್ತು 85 ಶೇಕಡಾ ಗ್ರಾಮೀಣ ಶಾಲೆ ಮತ್ತು ಅಂಗನವಾಡಿಗಳಿಗೆ ಮಾತ್ರ ಸುರಕ್ಷಿತ ಕುಡಿಯುವ ನೀರು ಒದಗಿಸಲಾಗಿದೆ. ಅಷ್ಟು ಮಾತ್ರವಲ್ಲದೆ, ಕೇವಲ 18 ಶೇಕಡಾ ಗ್ರಾಮೀಣ ಜನಸಂಖ್ಯೆಗೆ ಮಾತ್ರ ನಳ್ಳಿ ಮೂಲಕ ಸುರಕ್ಷಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಮತ್ತು ಕೇವಲ 17 ಶೇಕಡಾ ಗ್ರಾಮೀಣ ಮನೆಗಳಿಗೆ ಮಾತ್ರವೇ ನಳ್ಳಿ ಸಂಪರ್ಕ ಒದಗಿಸಲಾಗಿದೆ. ಇದು ಸಿಎಜಿ ವರದಿಯಲ್ಲಿ ಹೇಳಿರುವ ವಿಷಯ.ಇದು ಸರಕಾರದ ಸಾಧನೆ.
ವರದಿಯು ‘ಕಾಮಗಾರಿಗಳ ಕಳಪೆ ಅನುಷ್ಟಾನ’, ‘ದುರ್ಬಲ ಗುತ್ತಿಗೆ ನಿರ್ವಹಣೆ’, ‘ಪೂರ್ತಿಗೊಳ್ಳದ, ನಡುವಲ್ಲೇ ಕೈಬಿಟ್ಟ, ಕಾರ್ಯರೂಪಕ್ಕೆ ಬರದ ಕಾಮಗಾರಿಗಳು’, ‘ಸಾಮಗ್ರಿಗಳ ಮೇಲಿನ ಅನುತ್ಪಾದಕ ವೆಚ್ಚ’, ‘ಉಪಯೋಗಕ್ಕೇ ಬರದ ಸ್ಥಾಪನೆಗಳು’ ಇತ್ಯಾದಿ ಕಾರಣಗಳಿಂದ ಹೀಗಾಗಿದೆ ಎಂದು ಹೇಳಿದೆ. ಯಾವುದೇ ಉಪಯೋಗ ಇಲ್ಲದೇ ವ್ಯರ್ಥವಾದ ಹಣದ ಮೌಲ್ಯ 2,212.44 ಕೋಟಿ ರೂ.ಗಳಾಗಬಹುದೆಂದು ವರದಿ ಲೆಕ್ಕಹಾಕಿದೆ.
ಖಾಸಗೀಕರಣದ ಆತಂಕದ ಜೊತೆಯೂ, ಇನ್ನಷ್ಟು ಹಣ ವೆಚ್ಚ ಮಾಡಿದರೂ, ಈಗಿನಂತೆ ನಡೆದರೆ ಗ್ರಾಮೀಣ ಭಾರತಕ್ಕೆ ಸುರಕ್ಷಿತ ನೀರು ಪೂರೈಕೆಯ ಗುರಿ ತಲಪುವುದು ಕಷ್ಟ ಸಾಧ್ಯ ಎಂದು ತಜ್ಞರು ಹೇಳುತ್ತಾರೆ.
ಭ್ರಷ್ಟಾಚಾರ ಒತ್ತಟ್ಟಿಗಿರಲಿ, ಉಪಯೋಗಿಸಬಹುದಾದ ನೀರಿನ ಲಭ್ಯತೆ, ಅಂತರ್ಜಲ ಕುಸಿತ ಇತ್ಯಾದಿಗಳೂ ಗುರಿ ಸಾಧನೆಗೆ ತೊಡಕಾಗಬಹುದೆಂಬುದು ಅವರ ಒಟ್ಟಭಿಪ್ರಾಯ. ಉದಾಹರಣೆಗೆ, ದೇಶದಲ್ಲಿ ನಾಲ್ಕೂವರೆ ಕೋಟಿ ಜನರನ್ನು ಬಾಧಿಸುವ 68,529 ವಿಷಕಾರಿ ನೀರಿರುವ ಜನ ವಸತಿಗಳನ್ನು ಗುರುತಿಸಲಾಗಿದೆ. ಇವೆಲ್ಲವನ್ನೂ ಪರಿಗಣಿಸದೇ ಕೋಟಿಗಟ್ಟಲೆ ಹಣ, ಅಂಕಿ ಅಂಶಗಳ ಜಾಲದಲ್ಲಿ ಗ್ರಾಮೀಣ ಜನರಿಗೆ ನೀರು ಸಿಗಲಾರದು; ನೀರಿಗಾಗಿ ಕಾದಿರಿಸಿದ ಹಣ ಚರಂಡಿಯಲ್ಲಿ ಸೋರಿಹೋಗಬಹುದೆಂಬುದೇ ತಜ್ಞರ ಅಭಿಪ್ರಾಯ.
ಇವೆಲ್ಲದರ ನಡುವೆ ಕರೋನಾ ಪಿಡುಗು ಇಡೀ ಸಮಸ್ಯೆಯನ್ನು ಇನ್ನಷ್ಟು ಜಟಿಲ ಮತ್ತು ಅಪಾಯಕಾರಿಯನ್ನಾಗಿ ಮಾಡಿದೆ. ಸರಕಾರ ನೀರಿನ ಸಮಸ್ಯೆಯ ಕುರಿತು ತುರ್ತು ಯೋಜನೆ ರೂಪಿಸದಿದ್ದಲ್ಲಿ ಇನ್ನಷ್ಟು ದುರಂತಗಳು ಸಂಭವಿಸಬಹುದು. ಭಾರತದಲ್ಲಿ ಪ್ರತೀ ವರ್ಷ ಎರಡು ಲಕ್ಷ ಜನರು ಜಲ ಸಂಬಂಧಿ ರೋಗಳಿಂದ ಸಾಯುತ್ತಿದ್ದಾರೆ ಎಂಬುದನ್ನೂ ಮರೆಯದಿರೋಣ. ಆದರೆ, ಸರಕಾರ ಈ ಕುರಿತು ಯೋಚನೆಯನ್ನು ಮಾಡಿದಂತೆ ಕೂಡಾ ಕಾಣುವುದಿಲ್ಲ. ಪ್ರಧಾನಿ ಮೋದಿಯಂತೂ ಟಿವಿಯಲ್ಲಿ ಎಂಟು ಗಂಟೆಗೆ “ರಾಷ್ಟ್ರವನ್ನುದ್ದೇಶಿಸಿ ಭಾಷಣ” ಮಾಡುತ್ತಾ, ಜಾಗಟೆ ಬಡಿಯಲು, ದೀಪ ಹಚ್ಚಲು ಹೇಳುತ್ತಿದ್ದಾರೆಯೇ ಹೊರತು ಸ್ಪಷ್ಟವಾದ ಯೋಜನೆ ಅಥವಾ ಕಾರ್ಯಸೂಚಿಯನ್ನು ಜನರ ಮುಂದಿಡುತ್ತಿಲ್ಲ. ಅವರು ಟಿವಿಯಲ್ಲಿ ಬಂದ ಮರುದಿನ ಜನರು ಹುಚ್ಚೆದ್ದು, ಬಿಜೆಪಿಯ ಸ್ಥಳೀಯ ನಾಯಕರ ಬೀದಿಗಿಳಿದು ಲಾಕ್ಡೌನ್ ನಿಯಮಗಳನ್ನು ಪೊಲೀಸರ ಎದುರೇ ಉಲ್ಲಂಘಿಸುತ್ತಿರುವ ಸಾವಿರಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಅವರು, ಮಧ್ಯಮ ವರ್ಗಗಳ “ಗ್ಯಾಲರಿಯನ್ನುದ್ದೇಶಿಸಿ” ತಾನಾಡುವ ಮಾತುಗಳಿಂದಲೇ ಕರೋನಾ ಓಡಿಹೋಗಲಿದೆ, ಎಲ್ಲಾ ಸಮಸ್ಯೆಗಳು ನಿವಾರಣೆಯಾಗಲಿವೆ ಎಂದು ಭಾವಿಸಿದಂತಿದೆ. ಈ ಕುರಿತು ಜಾಗೃತಿ ಮೂಡಿಸಿ, ಸರಕಾರವನ್ನು ಎಚ್ಚರಿಸಬೇಕಾದ ಮಾಧ್ಯಮಗಳು ಭಜನೆಯಲ್ಲಿ ತೊಡಗಿರುವುದು ಮಾತ್ರವಲ್ಲ; ನಿರಾಧಾರ ಮತ್ತು ಸುಳ್ಳು ಸುದ್ದಿಗಳನ್ನು ಹರಡುತ್ತಾ, ಏನು ಮಾಡಬಾರದೋ, ಅದನ್ನೇ ಮಾಡುತ್ತಿವೆ. ಅದೆಂದರೆ, ಜನರಲ್ಲಿ ಅಕಾರಣ ಭಯ ಹುಟ್ಟಿಸುವುದು, ಒಂದು ಪಿಡುಗಿಗೆ ಕೋಮುಬಣ್ಣ ಹಚ್ಚುವುದು ಮತ್ತು ಜನರು ತಾಳ್ಮೆ ಕಳೆದುಕೊಡು ಎಲ್ಲಾ ಸುರಕ್ಷಾ ನಿಯಮಗಳನ್ನು ಗಾಳಿಗೆ ತೂರುವಂತೆ ಮಾಡುವುದು! ಪ್ರಧಾನಿ ಮೋದಿಗೆ ಬೇಕಾಗಿರುವುದೂ ಇದೇ ಅಲ್ಲ ತಾನೆ?