ದೇಶಾದ್ಯಂತ ಕರೋನಾ ಭೀತಿಯಿಂದಾಗಿ ಜನ ಸಾಕಷ್ಟು ಚಿಂತಿತರಾಗಿದ್ದಾರೆ. ಸಾಮಾನ್ಯ ಜ್ವರ ಬಂದರೂ ಭಯಪಡುವಂತಹ ಸ್ಥಿತಿಯಿದೆ. ಅದರಲ್ಲೂ ಗರ್ಭಿಣಿ ಮಹಿಳೆಯರು ಈ ಸಂದರ್ಭದಲ್ಲಿ ಹೆಚ್ಚು ಪ್ಯಾನಿಕ್ ಆಗಿದ್ದಾರೆ. ಗರ್ಭದಲ್ಲಿ ಇನ್ನೊಂದು ಜೀವವನ್ನ ಹೊತ್ತುಕೊಂಡಿರುವ ಮಹಿಳೆ ತನ್ನ ಹಾಗೂ ಹುಟ್ಟುವ ಮಗು ಬಗ್ಗೆಯೂ ಸಾಕಷ್ಟು ಜಾಗರೂಕತೆ ವಹಿಸಬೇಕಾಗುತ್ತದೆ. ಆದ್ದರಿಂದ ಹೆರಿಗೆಗೆ ಹೋಗುವ ಗರ್ಭಿಣಿಯರು ಕರೋನಾ ಸೋಂಕಿನ ಬಗ್ಗೆ ಇತ್ತೀಚಿನ ದಿನಗಳಲ್ಲಿ ಭಯಪಡುತ್ತಿದ್ದಾರೆ. ಹೆರಿಗೆಗೆಂದು ಹೋಗುವ ಆಸ್ಪತ್ರೆಗಳು ಅದೆಷ್ಟರ ಮಟ್ಟಿಗೆ ಸೇಫ್? ಹಾಗೂ ನನ್ನ ಆರೋಗ್ಯ ಎಷ್ಟು ಸೇಫ್? ಅನ್ನೋದರ ಬಗ್ಗೆಯೂ ಗರ್ಭಿಣಿಯಾದವಳು ಹೆಚ್ಚು ಚಿಂತಿತಳಾಗುತ್ತಿದ್ದಾಳೆ. ಅದರಲ್ಲೂ ಕೆಲವೆಡೆ ಈಗಾಗಲೇ ಖಾಸಗಿ ಹೆರಿಗೆ ಆಸ್ಪತ್ರೆಗಳೂ ಬಾಗಿಲು ಮುಚ್ಚಿಕೊಂಡಿದ್ದು, ಕಾರಣ ತಿಳಿಯದೇ ಗರ್ಭಿಣಿ ಮಹಿಳೆಯರು ಮತ್ತು ಕುಟುಂಬಿಕರು ಹೆಚ್ಚು ಪರಿತಪಿಸುತ್ತಿದ್ದಾರೆ.
ಬೆಂಗಳೂರಿನ ಹೆಸರಾಂತ ಹೆರಿಗೆ ಆಸ್ಪತ್ರೆ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಪ್ರತಿದಿನ 60 ರಿಂದ 70 ರಷ್ಟು ಹೆರಿಗೆಗಳಾಗುತ್ತವೆ. ಅದರಲ್ಲೂ ಕರೋನಾ ಸೋಂಕಿನ ಭೀತಿಯ ನಂತರ ಸಂಖ್ಯೆ ಹೆಚ್ಚಿದೆ. ಕಾರಣ, ಖಾಸಗಿ ಆಸ್ಪತ್ರೆಗಳು ಬಾಗಿಲು ಎಳೆದುಕೊಂಡಿದ್ದು, ಅನಿವಾರ್ಯವಾಗಿ ಹೊರ ಜಿಲ್ಲೆಯ ಗರ್ಭಿಣಿ ಹೆಂಗಸರು ವಾಣಿ ವಿಲಾಸ ಆಸ್ಪತ್ರೆಯನ್ನೇ ಅವಲಂಬಿಸಬೇಕಿದೆ. ಆದ್ದರಿಂದ ಇಲ್ಲಿರುವ ಸುಮಾರು 300 ರಷ್ಟು ಸಿಬ್ಬಂದಿಗಳು ಸಾಕಷ್ಟು ಮುತುವರ್ಜಿ ವಹಿಸಿ ಚಿಕಿತ್ಸೆ ನೀಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಇದುವರೆಗೂ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಕರೋನಾ ಸೋಂಕಿತ ಒಟ್ಟು ಹದಿನೈದು ಗರ್ಭಿಣಿ ಮಹಿಳೆಯರು ಹಾಗೂ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದು, ಅದೃಷ್ಟವಶಾತ್ ಯಾರಲ್ಲೂ ಕೋವಿಡ್-19 ದೃಢಪಟ್ಟಿರಲಿಲ್ಲ.

“ಕರೋನಾ ಸೋಂಕಿತ ಗರ್ಭಿಣಿ ಹಾಗೂ ಮಕ್ಕಳು ಆಸ್ಪತ್ರೆಗೆ ಬಂದಾಗ ತಕ್ಷಣ ಅವರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡುತ್ತೇವೆ. ಎಂಟು ಗಂಟೆಯಲ್ಲಿ ಪರೀಕ್ಷೆಯ ವರದಿ ಕೈ ಸೇರುತ್ತಿದ್ದು, ಆ ಬಳಿಕ ವರದಿ ಅನ್ವಯ ಅವರಿಗೆ ಚಿಕಿತ್ಸೆ ನೀಡಲಾಗುತ್ತದೆ. ಒಂದು ವೇಳೆ ವರದಿ ಪಾಸಿಟಿವ್ ಆಗಿದ್ದಲ್ಲಿ, ತಕ್ಷಣ ICMR ಆದೇಶ ಪ್ರಕಾರ ಅವರಿಗೆ ಚಿಕಿತ್ಸೆ ನೀಡಲು ಸಿದ್ಧರಿದ್ದೇವೆ. ಅದಕ್ಕಾಗಿ ಮಕ್ಕಳು ಹಾಗೂ ಗರ್ಭಿಣಿಯರಿಗಾಗಿ ನಾಲ್ಕು ಪ್ರತ್ಯೇಕ ಕೋವಿಡ್-19 ಬೆಡ್‌ಗಳನ್ನು ಸಿದ್ಧಪಡಿಸಿದ್ದೇವೆ” ಎಂದು ವಾಣಿ ವಿಲಾಸ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾIಗೀತಾ ಶಿವಮೂರ್ತಿ ʼಪ್ರತಿಧ್ವನಿʼಗೆ ತಿಳಿಸಿದ್ದಾರೆ.
ಕರೋನಾ ಬಗ್ಗೆ ಗರ್ಭಿಣಿಯರಿಗೆ ಭಯಬೇಡ, ಆದರೆ ಎಚ್ಚರಿಕೆ ಇರಲಿ:
ಗರ್ಭಿಣಿ ಮಹಿಳೆಯ ಉದರದಲ್ಲಿದ್ದ ಮಗುವಿಗೆ ಕರೋನಾ ಸೋಂಕು ಎಲ್ಲೂ ಪತ್ತೆಯಾಗಿಲ್ಲ. ಇದಕ್ಕೆ ಕಾರಣ ಮಗುವಿಗೆ ಕವಚದಂತಿರುವ ‘Placental Barrier’ ಕಾರಣ ಇರಬಹುದು ಅನ್ನೋದು ಡಾ. ಗೀತಾ ಶಿವಮೂರ್ತಿ ಅವರ ಅಭಿಪ್ರಾಯ. ಅದಲ್ಲದೇ ತಾಯಿ ಎದೆಹಾಲಿನಲ್ಲಿ ಕರೋನಾ ವೈರಸ್ ಇದುವರೆಗೂ ಜಗತ್ತಿನ ಯಾವ ಸಂಶೋಧನೆಯಲ್ಲೂ ಪತ್ತೆಯಾಗಿಲ್ಲ. ಅಮೆರಿಕಾ, ಇಟೆಲಿಯಂತಹ ಕರೋನಾ ಜರ್ಜರಿತ ದೇಶಗಳಲ್ಲಿ ಹೆರಿಗೆ ಆದ ತಕ್ಷಣ ಮಗುವನ್ನ ತಾಯಿಯಿಂದ ಬೇರ್ಪಡಿಸುತ್ತಿದ್ದರು. ಈ ಮೂಲಕ ಹೆರಿಗೆ ನಂತರ ಕಾಯಿಲೆ ಬರಬಹುದಾದ ಸಾಧ್ಯತೆಯನ್ನು ಇಲ್ಲದಂತೆ ಮಾಡುತ್ತಿದ್ದರು.
ಇನ್ನು ಗರ್ಭಿಣಿ ಮಹಿಳೆಯರು ನೀಡುವ ಚುಚ್ಚುಮದ್ದು, ಔಷಧಿಗಳು, ಲಸಿಕೆಗಳು ಪಡೆಯುತ್ತಲೇ ಇರುವುದರಿಂದ ಅದು ಇನ್ನಿತರ ಸೋಂಕಿನಿಂಲೂ ಗರ್ಭಿಣಿಯರನ್ನು ರಕ್ಷಿಸುತ್ತದೆ ಅನ್ನೋದನ್ನು ಡಾ. ಗೀತಾ ಶಿವಮೂರ್ತಿ ತಿಳಿಸಿದ್ದಾರೆ.
ಹಾಗಂತ ಗರ್ಭಿಣಿ ಹೆಂಗಸರು ಮುನ್ನೆಚ್ಚರಿಕೆ ವಹಿಸದೆ ಕೂರುವಂತಿಲ್ಲ. ಕೈಗಳನ್ನು ತೊಳೆದುಕೊಳ್ಳುತ್ತಿರಬೇಕು. ಹ್ಯಾಂಡ್ ವಾಷ್‌ಗಳನ್ನು ಬಳಸುತ್ತಿರಬೇಕು. ಮಾತ್ರವಲ್ಲದೇ ಕುಟಂಬಿಕರಿಂದ, ಜನಸಮೂಹದಿಂದ ಅಂತರ ಕಾಯಬೇಕು. ಕನಿಷ್ಠ 2 ಮೀಟರ್ ಅಂತರದಲ್ಲಿರಬೇಕು. ಜ್ವರ ಲಕ್ಷಣ ಕಂಡುಬಂದರೆ ತಕ್ಷಣ ಸ್ಥಳೀಯ ಯಾವುದೇ ವೈದ್ಯರನ್ನಾದರೂ ಸಂಪರ್ಕಿಸಬೇಕು. ಅನಗತ್ಯ ಭಯಪಡುವ ಮೊದಲು ಸುರಕ್ಷತಾ ಕ್ರಮ ತೆಗೆದುಕೊಳ್ಳಬೇಕು.
ತಿಂಗಳ ಇಲ್ಲವೇ ವಾರಗಳಿಗೊಮ್ಮೆ ನಡೆಯುವ ತಪಾಸಣೆಗೆ ಯಾವುದೇ ಭಯವಿಲ್ಲದೇ ಹೋಗಬೇಕು. ಆ ರೀತಿ ಹೋಗಬೇಕಾದರೆ ಸಾಮಾಜಿಕ ಅಂತರ, ಕನಿಷ್ಠ ಸುರಕ್ಷತೆಯನ್ನು ಪಾಲಿಸಲೇಬೇಕು. ಸಾಧ್ಯವಾದರೆ ಮನೆಯಲ್ಲಿ ಕ್ವಾರೆಂಟೈನ್ ಮಾದರಿಯನ್ನೇ ಅನುಸರಿಸಿದರೆ ಉತ್ತಮ. ಆರೈಕೆ ನೇಮಿಸೋ ವ್ಯಕ್ತಿಯಿಂದ ಆದಷ್ಟು ಅಂತರ ಕಾಯ್ದುಕೊಂಡಿರಬೇಕು. ಸಾಧ್ಯವಾದರೆ ಮನೆಮಂದಿಯಿಂದಲೇ ಆರೈಕೆಯನ್ನು ಮಾಡಿಸಿಕೊಳ್ಳಬೇಕು.
ಸಮಾಧಾನದ ಸಂಗತಿ ಅಂದರೆ ಭಾರತದಲ್ಲಿ ಇದುವರೆಗೂ ಗರ್ಭಿಣಿ ಮಹಿಳೆಯರಲ್ಲಿ ಕರೋನಾ ಸೋಂಕು ಕಂಡುಬಂದಿಲ್ಲ. ಕಳೆದ ವಾರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬರು ಸಾವನ್ನಪ್ಪಿದ್ದರೂ ಅದಕ್ಕೆ ಕರೋನಾ ಸೋಂಕು ಭಾದೆಯೇ ಕಾರಣ ಎಂದು ಎಲ್ಲೂ ಸ್ಪಷ್ಟವಾಗಿಲ್ಲ.
ಇದರಿಂದಾಗಿ ಗರ್ಭಿಣಿ ಮಹಿಳೆಯರು ಹೆಚ್ಚು ಸುರಕ್ಷಿತರಾಗಿದ್ದು, ಆಯಾಯ ಸಮಯದಲ್ಲಿ ನಡೆಸುವ ಆರೋಗ್ಯ ತಪಾಸಣೆಗೆ ಯಾವುದೇ ಅಂಜಿಕೆಯಿಲ್ಲದೇ ತೆರಳಬೇಕು. ಕರೋನಾ ಸೋಂಕು ಬಗ್ಗೆ ಅಗತ್ಯ ಜಾಗೃತಿವೊಂದಿದ್ದರೆ ಸಾಕು ಅನಗತ್ಯ ಗೊಂದಲ ದೂರವಾಗುತ್ತದೆ.