ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಕ್ತ ಸಂದರ್ಭದಲ್ಲಿ ಅಗತ್ಯ ಇರುವಷ್ಟು ಮತ್ತು ಆಯಾ ರಾಜ್ಯಗಳಿಗೆ ಅರ್ಹವಾಗಿ ಸಲ್ಲಬೇಕಿರುವಷ್ಟು ಹಣವನ್ನು ಕೊಡುತ್ತಿಲ್ಲ ಎಂಬುದು ಬಹಳ ಹಳೆಯ ಆರೋಪ. ಆದರೆ ಜಗತ್ತನ್ನೇ ಜಗ್ಗಾಡುತ್ತಿರುವ ಕರೋನಾದ ಪರಿಸ್ಥಿತಿ ಭಿನ್ನವಾದುದು. ಒಂದೆಡೆ ಕರೋನಾ ಸೋಂಕು ಹರಡುವಿಕೆಯನ್ನು ನಿಯಂತ್ರಿಸಬೇಕು. ಇನ್ನೊಂದೆಡೆ ಲಾಕ್‌ಡೌನ್ ತಂದೊಡ್ಡಿರುವ ಸಮಸ್ಯೆಗಳನ್ನು ಪರಿಹರಿಸಬೇಕು. ಎರಡೂ ಸಂಕೀರ್ಣ ಸಮಸ್ಯೆಗಳನ್ನು ಏಕಕಾಲಕ್ಕೆ ನಿಭಾಯಿಸುವುದು, ಅದರಲ್ಲೂ ಸಂಪನ್ಮೂಲ ಕೊರತೆಯ ನಡುವೆಯೂ ನಿರ್ವಹಿಸುವುದು ಎಂಥದೇ ಸರ್ಕಾರಗಳಿಗೂ ಸವಾಲೇ ಆಗಲಿದೆ. ಇಂಥ ಸವಾಲನ್ನು ಈಗ ದೇಶದ ಅಷ್ಟೂ ರಾಜ್ಯಗಳು ಎದುರಿಸುತ್ತಿವೆ. ಆ ಪೈಕಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುತ್ತಿರುವ ರಾಜ್ಯಗಳು ದನಿ ಎತ್ತಿವೆ.
ಕರೋನಾ ಮತ್ತು ಲಾಕ್‌ಡೌನ್ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರ ಹಣ ಕೊಡದೆ ಸತಾಯಿಸುತ್ತಿದೆ, ಅಸಹಕಾರ ತೋರುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುತ್ತಿರುವ ರಾಜ್ಯಗಳಾದ ಪಂಜಾಬ್, ರಾಜಸ್ಥಾನ, ಪುದುಚೇರಿ ಮತ್ತು ಛತ್ತೀಸ್ಗಢ ಮುಖ್ಯಮಂತ್ರಿಗಳು ಆಕ್ಷೇಪ ಎತ್ತಿದ್ದಾರೆ. ಜೊತೆಗೆ ಇಂಥ ದುರ್ದಿನಗಳಲೂ ಹಣ ಕೊಡದಿದ್ದರೆ ತಮ್ಮ ರಾಜ್ಯಗಳಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವುದಾದರೂ ಹೇಗೆ? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಪತ್ರ ಬರೆದಿದ್ದಾರೆ. ಪತ್ರದಲ್ಲಿ 1) ಕರೋನಾ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಕೂಡಲೇ ರಾಜ್ಯಗಳಿಗೆ ಹಣ ಬಿಡುಗಡೆ ಮಾಡಬೇಕು. 2) 3 ತಿಂಗಳವರೆಗೆ ವಿಶೇಷ ಕೋವಿಡ್ ನಿಧಿ ನೀಡಬೇಕು. ಮತ್ತು 3) ಹಣಕಾಸು ಆಯೋಗದ ಶಿಫಾರಸ್ಸನ್ನು ಪರಿಶೀಲಿಸಬೇಕು ಎಂಬ ಮೂರು ಪ್ರಮುಖ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಪ್ರಧಾನಿಗೆ ಪತ್ರ ಬರೆದಿರುವುದಲ್ಲದೆ ಈ ಮೂರು ಪ್ರಮುಖ ಅಂಶಗಳ ಬಗ್ಗೆ ನೀವೂ ಗಮನ ಹರಿಸಿ ಎಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಪತ್ರವನ್ನು ಕಳುಹಿಸಿಕೊಟ್ಟಿದ್ದಾರೆ.
ಕರೋನಾ ಸಂಕಷ್ಟ ಉದ್ಭವಿಸಿದ ಮೇಲೆ ಕೇಂದ್ರ ಸರ್ಕಾರದಿಂದ ಹಣ ಕೇಳುತ್ತಿರುವುದು ಇದು ಮೊದಲೇನೂ ಅಲ್ಲ. ಕಾಂಗ್ರೆಸ್ ರಾಜ್ಯಗಳು ಮಾತ್ರವೇ ಕೇಳುತ್ತಿಲ್ಲ. ಅದರಲ್ಲೂ ಜಿಎಸ್ ಟಿ ಕಾಂಪನ್ಸೇಷನ್ ಅನ್ನು ರಾಜ್ಯಗಳಿಗೆ ಕೊಡುವ ವಿಚಾರ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳ ನಡುವೆ ನಡೆದ ವಿಡಿಯೋ ಕಾನ್ಫರೆನ್ಸ್ ವೇಳೆ ಕೂಡ ಚರ್ಚೆಯಾಗಿದೆ. ವಿವಿಧ ರಾಜ್ಯಗಳು ಹಣ ಬಿಡುಗಡೆಗೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿವೆ. ಸಹಜವಾಗಿ ಬಿಜೆಪಿ ಆಡಳಿತ ಇರುವ ರಾಜ್ಯಗಳು ಜಾಣ ಮೌನ ತೆಳೆದಿವೆ.
ಮೊನ್ನೆಯಷ್ಟೇ ಛತ್ತೀಸ್ಘಡದ ಮುಖ್ಯಮಂತ್ರಿ ಭೂಪೇಶ್ ಭಘೇಲ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು 30 ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಆ ಪೈಕಿ 10 ಸಾವಿರ ಕೋಟಿ ರೂಪಾಯಿಗಳನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಇವತ್ತು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಪತ್ರ ಬರೆದಿದ್ದಾರೆ. ಏಪ್ರಿಲ್ 27ರಂದು ನಡೆಯಲಿರುವ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳ ನಡುವೆ ನಡೆದ ವಿಡಿಯೋ ಕಾನ್ಫರೆನ್ಸ್ ವೇಳೆ ಮತ್ತೊಮ್ಮೆ ಚರ್ಚೆಯಾಗುವ ಸಾಧ್ಯತೆಯೂ ಕಂಡುಬರುತ್ತಿದೆ.
ಕರ್ನಾಟಕದಲ್ಲಿ ಕರೋನಾ ತಂದೊಡ್ಡಿರುವ ಸಂಕಷ್ಟ ನಿವಾರಣೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಡಿಎ ಸೀಟುಗಳನ್ನು ಮಾರಿ ಸಂಪನ್ಮೂಲ ಕ್ರೋಢೀಕರಿಸಲು ಮುಂದಾಗಿದ್ದು ಒಂದು ಉದಾಹರಣೆಯಷ್ಟೇ. ಬೇರೆ ಬೇರೆ ರಾಜ್ಯಗಳಲ್ಲಿ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ ಇದೆ. ಈಗಲೂ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದರೆ ಕೇಂದ್ರ ಸರ್ಕಾರದ ಬಳಿಯೇ ಹಣ ಇಲ್ಲ ಎಂದು ಪರಿಗಣಿಸಬೇಕೆ?
ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ ರಾಜನ್ ‘ದೇಶದಲ್ಲಿ ಸಂಪನ್ಮೂಲದ ಕೊರತೆ ಇಲ್ಲ. ಇರುವ ಸಂಪನ್ಮೂಲವನ್ನು ಬಡವರಿಗೆ ಅಗತ್ಯವಾಗಿ ಕೊಡಬೇಕು’ ಎಂದು ಹೇಳಿದ್ದರು. ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಕೂಡ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸಂಪನ್ಮೂಲ ಹಂಚಿಕೆ ಮಾಡಬೇಕೆಂದು ಸಲಹೆ ನೀಡಿದ್ದರು. ಹಿಂದೆ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಕೂಡ ‘ದೇಶದಲ್ಲಿ ಹಣದ ಸಮಸ್ಯೆಯೂ ಇಲ್ಲ, ಆಹಾರದ ಸಮಸ್ಯೆಯೂ ಇಲ್ಲ, ಎರಡೂ ಕೂಡ ಕಷ್ಟಕಾಲಕ್ಕೆ ಆಗದಿದ್ದರೆ ವ್ಯರ್ಥ’ ಎಂದಿದ್ದರು. ಈ ಮೂವರ ಹೇಳಿಕೆಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಲ್ಲಗೆಳೆದಿಲ್ಲ. ಬೇರೆ ಬೇರೆ ವಿಷಯಗಳ ಬಗ್ಗೆ ಬೆಂಕಿ ಉಗುಳುವ ನಿರ್ಮಲಾ ಸೀತಾರಾಮನ್ ಅವರದೇ ಇಲಾಖೆ ಬಗೆಗಿನ ಬಲು ಗಂಭೀರವಾದ ವಿಷಯದಲ್ಲಿ ಮಾತ್ರ ಬಾಯಿ ಬಿಡುತ್ತಿಲ್ಲ. ಅವರ ಮೌನದಲ್ಲಿ ಸಮ್ಮತಿ ಅಡಗಿದೆ ಎಂದು ಅರ್ಥವೇ? ಕೇಂದ್ರ ಸರ್ಕಾರ ಈ ಕಷ್ಟಕಲಾದಲ್ಲಾದರೂ ಉದಾರವಾಗಿ ನಡೆದುಕೊಳ್ಳಬೇಕಲ್ಲವೇ?