ಉತ್ತರ ಕನ್ನಡದಲ್ಲಿ ಕಾಳಿ, ಅಘನಾಶಿನಿ, ಬೇಡ್ತಿ- ಗಂಗಾವಳಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರಿನಲ್ಲಿ ಕುಮಾರಾಧಾರ, ನೇತ್ರಾವತಿ ನದಿಗಳು ಚಟುವಟಿಕೆಯ ಕೇಂದ್ರಬಿಂದುಗಳು. ಹುಟ್ಟೂರಿನಿಂದ ಸಮುದ್ರ ಸೇರುವವರೆಗೂ ಕೃಷಿ, ಮೀನುಗಾರಿಕೆ ಮತ್ತು ಆಹಾರದ ಆಧಾರವಾಗಿಯೂ ಇವು ಹರಿಯುತ್ತವೆ. ಹಿಂದಿನ ವರ್ಷದ ಪ್ರವಾಹೋಪಾದಿ ಮಳೆ ಈ ನದಿಗಳ ಇಕ್ಕೆಲಗಳಲ್ಲಿರುವ ಊರು ಕೇರಿಗಳನ್ನು ಮುಳುಗಿಸಿತ್ತು. ವಿದ್ಯುತ್ ತಂತಿಗಳು ಹರಿದುಬಿದ್ದಿದ್ದು. ಕಂಬಗಳು ಭೂಗತವಾಗಿದ್ದವು. ಮನೆ ಗೋಡೆ ಉರುಳಿಬಿದ್ದಿದ್ದವು. ಪಾಯ ಕಿತ್ತುಹೋಗಿದ್ದವು.. ದನ ಕರುಗಳಿಗೆ ಮೇವಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಮೂಲಭೂತ ಸೌಕರ್ಯಗಳು ಅಳಿಸಿಹೋಗಿದ್ದವು. ಕಂಬಳಿಯಲ್ಲಿ ಹೊತ್ತು ವೃದ್ಧರನ್ನು ಆಸ್ಪತ್ರೆಗೆ ಸಾಗಿಸುವಂತಂತಹ ಘಟನೆಯೂ ನಡೆದಿತ್ತು. ಎಲ್ಲಕ್ಕೂ ಮಿಗಿಲಾಗಿ ದೈತ್ಯ ಮರಗಳ ಸಾನಿಧ್ಯಗಳು ಬಯಲಾಗಿದ್ದವು.
ಬೆಳ್ತಂಗಡಿಯ ದಿಡುಪೆ ಮತ್ತು ಕೂಡಬೆಟ್ಟು ಆಸುಪಾಸಿನ ಬೆಟ್ಟಗಳಿಂದ ಮರಗಳು ಹಿಸಿದು ಬಂದಿದ್ದವು. ಬೆಳ್ತಂಗಡಿಯ ಮಲವಂತಿಗೆ ಗ್ರಾ. ಪಂ. ನ ಕಜಕೆ ಶಾಲೆಯ ಪ್ರಾಂಗಣದಲ್ಲಿ ನಿಂತರೆ ಎಡಕ್ಕೆ ಕುದುರೆಮುಖ ಶ್ರೇಣಿ. ಬಲಕ್ಕೆ ಬಲ್ಲಾಳರಾಯನ ದುರ್ಗ, ರಾಣಿ ಝರಿ ಮತ್ತು ದಿಡುಪೆ ಜಲಪಾತ. ಎರಡೂ ಪರ್ವತ ಶ್ರೇಣಿಗಳ ಕೊಂಡಿಯಾಗಿ ಕಜಕೆ, ದಿಡುಪೆ ಊರುಗಳ ಮೇಲಿನ ಬೆಟ್ಟಗಳು.ಎಡದ ಕುದುರೆಮುಖ ಶ್ರೇಣಿಯಿಂದ ಬಲದ ಬಲ್ಲಾಳರಾಯನ ದುರ್ಗದವರೆಗೆ ಒಂದು ಸುತ್ತು ಕತ್ತು ತಿರುಗಿಸಿದರೆ ಪರ್ವತ ಶ್ರೇಣಿಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಡೆ ಕುಸಿದದ್ದು ಸ್ಪಷ್ಟವಾಗಿ ಬರಿಗಣ್ಣಿಗೆ ಕಾಣುತ್ತಿತ್ತು. ಹಿಂದಿನ ವರ್ಷ ದಿಡುಪೆ ಜಲಪಾತದ ನೆತ್ತಿಯ ಮೇಲೆ,ಪಕ್ಕ, ಕುದುರೆಮುಖ ಪರ್ವತ ಶ್ರೇಣಿಗಳಲ್ಲಿ, ಘಟ್ಟದ ಅಡಿಪಾಯದಂತಿರುವ ಅರಿಶಿನಮಕ್ಕಿ, ಎರಡು ಮಲೆಕುಡಿಯರ ಮನೆಗಳೂ ಇರುವ ತಿಮ್ಮಯ್ಯಗದ್ದೆಯ ನೆತ್ತಿಯ ಮೇಲಿಂದ ಧಾವಿಸಿದ ನೀರ ರಾಶಿಯಲ್ಲಿ ತೇಲಿಬಂದ ಮರಗಳ ಸಂಖ್ಯೆ ಎಷ್ಟೆಂದು ಹೇಗೆ ಹೇಳುವುದು? ಹಸಿರಿಗೆ ಕೆಂಪು ಬರೆ ಎಳೆಯುವುದೆಂದರೆ ಇದೇ.
ಚಾರ್ಮಾಡಿ ಘಟ್ಟದ ರಸ್ತೆ ಪಕ್ಕದಲ್ಲಷ್ಟೆ ಮರಗಳು ಉರುಳಿರಲಿಲ್ಲ. ಘಾಟಿ ಆರಂಭದಲ್ಲಿ ಎಡಕ್ಕೆ ತಿರುಗಿದರೆ ಎತ್ತರದ ಗುಡ್ಡ ಕುಸಿದದ್ದು ಕಾಣಿಸುತ್ತಿದ್ದವು. ಅಲ್ಲೆಷ್ಟು ಮರಗಳು ಬಿದ್ದಿರಬಹುದು? ಗಣತಿ ಮಾಡುವುದು ಹೇಗೆ? ಮಾಡುವವರಾದರೂ ಯಾರು? ಅದಕ್ಕೂ ಹಿಂದಿನ ವರ್ಷಗಳಲ್ಲಿ ರಸ್ತೆ ಕುಸಿದಾಗ ಸಿಮೆಂಟು ಚೀಲದೊಳಗೆ ಮರಳು ತುಂಬಿ ಮೇಲೆ ತಾಡಪಾಲು ಮುಚ್ಚಲಾಗಿತ್ತು. ವರ್ಷವಿಡೀ ಈ ಚೀಲಗಳ ಅಡಿಪಾಯದ ಮೇಲೆ ವಾಹನಗಳು ಓಡಾಡಿದ್ದವು! ಘಾಟಿಯ ಬುಡದ ಊರುಗಳಾದ ಕೊಳಂಬೆ ದಿಡುಪೆ, ಬಂಜಾರುಮಲೆಗಳು ಘಟ್ಟದ ಮೇಲಿನ ನೀರಿನ ಜೊತೆ ತೇಲಿಬಂದ ಮರಗಳ ರಭಸಕ್ಕೆ ಊರುಗಳು ಕಣ್ಣೀರು ಸುರಿಸಿದವು. ವಾಹನ ಓಡಾಟದ ಒತ್ತಡದ ನಿಧಾನ ಪರಿಣಾಮವಿದು ಎಂಬುದನ್ನು ಈ ಮಳೆಗಾಲದಲ್ಲಿ ಉರುಳಿದ ಮರಗಳು ಸ್ಪಷ್ಟವಾಗಿಸಿದ್ದವು. ಬೇಡ್ತಿ, ಅಘನಾಶಿನಿ, ನೇತ್ರಾವತಿಯ ಸೂಕ್ಷ್ಮ ಕೊಳ್ಳಗಳಲ್ಲಿ ಉರುಳಿದ ಮರಗಳ ಅಳು ಒರೆಸುವ ಕರವಸ್ತ್ರ ತಯಾರಿಸಲು ಇದು ಸಕಾಲ ಎಂಬ ಭಾವನೆ ಮೂಡಿಸುವಂತಿತ್ತು ಆ ಪರಿಸ್ಥಿತಿ.
ಪ್ರವಾಹ ಬಂತು, ಮನೆ ಮಠ ನಾಶವಾಯಿತು ಎಂದು ದೂರುವಾಗ ನಮಗೆ ಸಹಜವಾಗಿ ಮಳೆಯ ಕುರಿತು ಆಕ್ರೋಶವಿರುತ್ತದೆ. ಆದರೆ ಇಷ್ಟೊಂದು ಹಾನಿಯುಂಟಾಗಲು ಬರೀ ಮಳೆಯೊಂದೇ ಕಾರಣವಲ್ಲ ಎಂಬ ಸೂಕ್ಷ್ಮ ಅರಿವು ನಮಗೆ ಈ ವರ್ಷದ ಮಳೆಗಾಲದ ಮೊದಲೇ ಆದರೆ ಒಳ್ಳೆಯದು.ಹಿಂದಿನ ಮಳೆಗಾಲದಲ್ಲಿ ಸೇತುವೆಗಳು ಸುಖಾಸುಮ್ಮನೆ ನಾಶವಾಗಿಲ್ಲ. ಅಪಾರ ಕೆಂಪು ನೀರು ಹೊತ್ತು ತಂದ ದಿಮ್ಮಿಗಳು, ಬೇರು ಸಹಿತದ ಮರಗಳು ಸೇತುವೆಗೆ ನೀರ ರಭಸದೊಟ್ಟಿಗೆ ಗುದ್ದಿದ ಪರಿಣಾಮ ಸೇತುವೆಗಳು ನೆಲಕಚ್ಚಿದ್ದವು. ಉತ್ತರ ಕನ್ನಡದ ಅಂಕೋಲಾ ತಾಲೂಕಿನ ರಾಮನಗುಳಿಯ ತೂಗುಸೇತುವೆ ಮುರಿದದ್ದು ಹೀಗೇ, ದಿಡುಪೆ ಬಳಿಯ ಕುಕ್ಕಾವಿನ ಬಳಿ ಆಗಿದ್ದೂ ಹೀಗೇ, ಸೇತುವೆಯ ಕೆಳಭಾಗದಿಂದ ತೂರಿಹರಿಯಲಾಗದ ಮರಗಳು ಸೇತುವೆ ಪಕ್ಕ ಬದಲಿ ಮಾರ್ಗ ಸೃಷ್ಟಿಸಿದವು. ಇಕ್ಕೆಲಗಳಲ್ಲಿ ಗದ್ದೆ ತೋಟಗಳು ಬಯಲಾದವು. ಘಟ್ಟದ ಮೇಲಿನ ಮರಗಳು ಪ್ರವಾಹದ ಪಳಯುಳಿಕೆಯಾಗಿ ಉಳಿದುಕೊಂಡವು. ಕುಕ್ಕಾವಿನ ಪ್ರವಾಹ ನಿರ್ಮಿತ ಬಯಲಲ್ಲಿ ಕೂಡಬೆಟ್ಟುವಿನ ಸಂತೃಸ್ತ ಮರಗಳು ಸ್ವಯಂಕೃತ ಅಪರಾಧದ ಪರಿಣಾಮ ಸ್ಥಳಕ್ಕೆ ತೆರಳಿದ್ದ ನಮ್ಮನ್ನು ನೋಡಿ ಸಿಟ್ಟಿಗೆದ್ದಂತೆ ಕಂಡಿದ್ದವು.
ಹಿಂದಿನ ಜುಲೈ ತಿಂಗಳ ಜೋರು ಮಳೆಗೆ ಉತ್ತರ ಕನ್ನಡದ ಯಲ್ಲಾಪುರದ ಅರಬೈಲ್ ಘಟ್ಟದ ಡಬ್ಗುಳಿ, ದೇವಿಮೂಲೆ,ಚಿಟ್ಟೇಪಾಲುಗಳಲ್ಲಿ ನೂರು ಅಡಿಗೂ ಎತ್ತರದ ಎರಡು ಗುಡ್ಡಗಳ ಮಧ್ಯದ ಝರಿಯಲ್ಲಿ ಮರಗಳು ತೇಲಿಬಂದಿದ್ದವು. ಅವು ಸಹಜ ಮುರಿದ ಮರಗಳಾಗಿರದೆ ಬುಡಸಮೇತ ಉರುಳಿದ್ದವು. ವರ್ಷದ ಹಿಂದೆ ಮಣ್ಣು ರೋಡಿಗೆ ದಾಂಬರು ಹಾಕಲು ವೈಬ್ರೇಟರ್ ಉಪಯೋಗಿಸಿದ ಪರಿಣಾಮ ಗುಡ್ಡದ ಮಣ್ಣು ಸಡಿಲವಾಗಿತ್ತು. ಐವತ್ತಕ್ಕೂ ಹೆಚ್ಚು ಮರಗಳು ರಾತ್ರಿ ಕಳೆದು ಬೆಳಗಾಗುವ ಹೊತ್ತಿಗೆ ಮಂಗಮಾಯವಾಗಿದ್ದವು. ಹಿಂದಿನ ಮಳೆಗಾಲ ಸುಣಜೋಗ ,ಶಿರ್ಲೆ, ತಳಕೆಬೈಲಿನ ಭೂಕಂಪವಲಯದ ಸಾಲಿಗೆ ಡಬ್ಗುಳಿಯನ್ನೂ ಸೇರಿಸಿತು. ಕುಮಟಾ ಅಂಕೋಲಾ ಹೊನ್ನಾವರಗಳ ಗುಡ್ಡಗಳು ಹೆದ್ದಾರಿಗಾಗಿ ಅರೆದೇಹಿಗಳಾಗುವುದು ಹೊಸತಲ್ಲ. ಅಲ್ಲಿಂದ ಶುರುವಾದ ಮರವುರುಳುವಿಕೆ ಈಗ ವಿಪರೀತಕ್ಕೆ ಬಂದುಮುಟ್ಟಿದೆ.
ಉತ್ತರ ಕನ್ನಡದ 7291 ಹೆಕ್ಟೇರ್ ಭತ್ತದ ಗದ್ದೆ ಬೇಸಾಯ ಮಾಡಲು ಅನುಪಯುಕ್ತವಾಗಿದೆ ಎಂದು ಆಗ ಸರ್ಕಾರ ಹೇಳಿತ್ತು. ಅಡಿಕೆ ತೆಂಗು ಟೀ ಕಾಫಿ ತೋಟಗಳಲ್ಲಾದ ನಷ್ಟ ಬೇರೆ. ಉತ್ತರ ಕನ್ನಡ ಜಿಲ್ಲೆಯಲ್ಲೇ ಲೆಕ್ಕಿಸಿದ ಅಂದಾಜು ಹಾನಿಯ ಮೊತ್ತ 418 ಕೋಟಿ. ಬೆಳ್ತಂಗಡಿಇ 250 ಕೋಟಿ ಹಾನಿ ಲೆಕ್ಕಿಸಲಾಗಿತ್ತು. ಈ ಲೆಕ್ಕದಲ್ಲಿ ಕುಸಿದ ಕಾಡು ಮರಗಳು ಸೇರಿಲ್ಲ ಎಂಬುದನ್ನು ನೆನಪಿಡಿ.
ಗುಜರಾತಿನಿಂದ ಕನ್ಯಾಕುಮಾರಿವರೆಗೆ ಹಬ್ಬಿರುವ ಪಶ್ಚಿಮ ಘಟ್ಟದ ಒಟ್ಟೂ ಉದ್ದ 1600 ಕೀಮಿಗಳು. ಬಹುಪಾಲು ಕರ್ನಾಟಕವನ್ನೇ ಮನೆ ಮಾಡಿಕೊಂಡಿರುವ ಪಶ್ಚಿಮ ಘಟ್ಟ ಶ್ರೇಣಿಗೆ ನಾವು ರಕ್ಷಣೆ ನೀಡುತ್ತಿದ್ದೇವೆಯೆ ಎಂದು ಕೇಳಿಕೊಳ್ಳುವ ಮನೋಭಾವವೂ ನಮಗಿಲ್ಲ.
ಮತ್ತೆ ಮಳೆ ಬೀಳುತ್ತಿದೆ.ಹವಾಮಾನ ಇಲಾಖೆ ಈ ವರ್ಷವೂ ಉತ್ತಮ ಮಳೆಯ ಭವಿಷ್ಯ ನುಡಿದಿದೆ. ಕರೋನಾ ಆರ್ಭಟದಲ್ಲಿ ಸರ್ಕಾರ ಮಳೆಗಾಲದ ತಯಾರಿ ಮರೆಯಬಾರದು. ಹಳೆ ನೆನಪುಗಳು ಕಹಿಯಾಗಿವೆ. ಮತ್ತೆ ಈ ಬಾರಿಯೂ ಕಹಿಯಾಗಲು ಅವಕಾಶ ನೀಡಬಾರದು. ತೆಗದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಹಲವಿವೆ.ಹಿಂದಿನ ವರ್ಷವೇನೋ ಆದ ಅನಾಹುತಗಳನ್ನು
ಸರ್ಕಾರ ಮತ್ತು ಹಲವು ಸಂಘಸಂಸ್ಥೆಗಳು ನಿಧಾನವಾಗಿ ಸರಿಪಡಿಸಿದವು. ಈಗಲೂ ಕೆಲವೆಡೆ ಕೆಲಸ ನಡೆಯುತ್ತಿದೆ. ಆದರೆ ಹಿಂದಿನ ವರ್ಷ ಕುಸಿದ ಸಂತೃಸ್ತ ಮರಗಳಿಗೆ ಪರಿಹಾರ ಕೊಡಬೇಕಾದದ್ದು ಹೆಚ್ಚಾಗಬೇಕಿದ್ದ ನಮ್ಮ ಪರಿಸರ ಕಾಳಜಿ ಹೊರತು ಮತ್ತೇನಲ್ಲ. ಹಿಂದಿನ ಮಳೆಗಾಲ ಕಲಿಸಿದ ಪಾಠಗಳು ನಮಗೆ ನೆನಪಿದೆಯೆ? ಉತ್ತರ ಕನ್ನಡದಲ್ಲಿ ಕಾಳಿ, ಅಘನಾಶಿನಿ, ಬೇಡ್ತಿ- ಗಂಗಾವಳಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರಿನಲ್ಲಿ ಕುಮಾರಾಧಾರ, ನೇತ್ರಾವತಿ ನದಿಗಳು ಚಟುವಟಿಕೆಯ ಕೇಂದ್ರಬಿಂದುಗಳು. ಹುಟ್ಟೂರಿನಿಂದ ಸಮುದ್ರ ಸೇರುವವರೆಗೂ ಕೃಷಿ, ಮೀನುಗಾರಿಕೆ ಮತ್ತು ಆಹಾರದ ಆಧಾರವಾಗಿಯೂ ಇವು ಹರಿಯುತ್ತವೆ. ಹಿಂದಿನ ವರ್ಷದ ಪ್ರವಾಹೋಪಾದಿ ಮಳೆ ಈ ನದಿಗಳ ಇಕ್ಕೆಲಗಳಲ್ಲಿರುವ ಊರು ಕೇರಿಗಳನ್ನು ಮುಳುಗಿಸಿತ್ತು. ವಿದ್ಯುತ್ ತಂತಿಗಳು ಹರಿದುಬಿದ್ದಿದ್ದು. ಕಂಬಗಳು ಭೂಗತವಾಗಿದ್ದವು. ಮನೆ ಗೋಡೆ ಉರುಳಿಬಿದ್ದಿದ್ದವು. ಪಾಯ ಕಿತ್ತುಹೋಗಿದ್ದವು.. ದನ ಕರುಗಳಿಗೆ ಮೇವಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಮೂಲಭೂತ ಸೌಕರ್ಯಗಳು ಅಳಿಸಿಹೋಗಿದ್ದವು. ಕಂಬಳಿಯಲ್ಲಿ ಹೊತ್ತು ವೃದ್ಧರನ್ನು ಆಸ್ಪತ್ರೆಗೆ ಸಾಗಿಸುವಂತಂತಹ ಘಟನೆಯೂ ನಡೆದಿತ್ತು. ಎಲ್ಲಕ್ಕೂ ಮಿಗಿಲಾಗಿ ದೈತ್ಯ ಮರಗಳ ಸಾನಿಧ್ಯಗಳು ಬಯಲಾಗಿದ್ದವು.
ಬೆಳ್ತಂಗಡಿಯ ದಿಡುಪೆ ಮತ್ತು ಕೂಡಬೆಟ್ಟು ಆಸುಪಾಸಿನ ಬೆಟ್ಟಗಳಿಂದ ಮರಗಳು ಹಿಸಿದು ಬಂದಿದ್ದವು. ಬೆಳ್ತಂಗಡಿಯ ಮಲವಂತಿಗೆ ಗ್ರಾ. ಪಂ. ನ ಕಜಕೆ ಶಾಲೆಯ ಪ್ರಾಂಗಣದಲ್ಲಿ ನಿಂತರೆ ಎಡಕ್ಕೆ ಕುದುರೆಮುಖ ಶ್ರೇಣಿ. ಬಲಕ್ಕೆ ಬಲ್ಲಾಳರಾಯನ ದುರ್ಗ, ರಾಣಿ ಝರಿ ಮತ್ತು ದಿಡುಪೆ ಜಲಪಾತ. ಎರಡೂ ಪರ್ವತ ಶ್ರೇಣಿಗಳ ಕೊಂಡಿಯಾಗಿ ಕಜಕೆ, ದಿಡುಪೆ ಊರುಗಳ ಮೇಲಿನ ಬೆಟ್ಟಗಳು.ಎಡದ ಕುದುರೆಮುಖ ಶ್ರೇಣಿಯಿಂದ ಬಲದ ಬಲ್ಲಾಳರಾಯನ ದುರ್ಗದವರೆಗೆ ಒಂದು ಸುತ್ತು ಕತ್ತು ತಿರುಗಿಸಿದರೆ ಪರ್ವತ ಶ್ರೇಣಿಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಡೆ ಕುಸಿದದ್ದು ಸ್ಪಷ್ಟವಾಗಿ ಬರಿಗಣ್ಣಿಗೆ ಕಾಣುತ್ತಿತ್ತು. ಹಿಂದಿನ ವರ್ಷ ದಿಡುಪೆ ಜಲಪಾತದ ನೆತ್ತಿಯ ಮೇಲೆ,ಪಕ್ಕ, ಕುದುರೆಮುಖ ಪರ್ವತ ಶ್ರೇಣಿಗಳಲ್ಲಿ, ಘಟ್ಟದ ಅಡಿಪಾಯದಂತಿರುವ ಅರಿಶಿನಮಕ್ಕಿ, ಎರಡು ಮಲೆಕುಡಿಯರ ಮನೆಗಳೂ ಇರುವ ತಿಮ್ಮಯ್ಯಗದ್ದೆಯ ನೆತ್ತಿಯ ಮೇಲಿಂದ ಧಾವಿಸಿದ ನೀರ ರಾಶಿಯಲ್ಲಿ ತೇಲಿಬಂದ ಮರಗಳ ಸಂಖ್ಯೆ ಎಷ್ಟೆಂದು ಹೇಗೆ ಹೇಳುವುದು? ಹಸಿರಿಗೆ ಕೆಂಪು ಬರೆ ಎಳೆಯುವುದೆಂದರೆ ಇದೇ.
ಚಾರ್ಮಾಡಿ ಘಟ್ಟದ ರಸ್ತೆ ಪಕ್ಕದಲ್ಲಷ್ಟೆ ಮರಗಳು ಉರುಳಿರಲಿಲ್ಲ. ಘಾಟಿ ಆರಂಭದಲ್ಲಿ ಎಡಕ್ಕೆ ತಿರುಗಿದರೆ ಎತ್ತರದ ಗುಡ್ಡ ಕುಸಿದದ್ದು ಕಾಣಿಸುತ್ತಿದ್ದವು. ಅಲ್ಲೆಷ್ಟು ಮರಗಳು ಬಿದ್ದಿರಬಹುದು? ಗಣತಿ ಮಾಡುವುದು ಹೇಗೆ? ಮಾಡುವವರಾದರೂ ಯಾರು? ಅದಕ್ಕೂ ಹಿಂದಿನ ವರ್ಷಗಳಲ್ಲಿ ರಸ್ತೆ ಕುಸಿದಾಗ ಸಿಮೆಂಟು ಚೀಲದೊಳಗೆ ಮರಳು ತುಂಬಿ ಮೇಲೆ ತಾಡಪಾಲು ಮುಚ್ಚಲಾಗಿತ್ತು. ವರ್ಷವಿಡೀ ಈ ಚೀಲಗಳ ಅಡಿಪಾಯದ ಮೇಲೆ ವಾಹನಗಳು ಓಡಾಡಿದ್ದವು! ಘಾಟಿಯ ಬುಡದ ಊರುಗಳಾದ ಕೊಳಂಬೆ ದಿಡುಪೆ, ಬಂಜಾರುಮಲೆಗಳು ಘಟ್ಟದ ಮೇಲಿನ ನೀರಿನ ಜೊತೆ ತೇಲಿಬಂದ ಮರಗಳ ರಭಸಕ್ಕೆ ಊರುಗಳು ಕಣ್ಣೀರು ಸುರಿಸಿದವು. ವಾಹನ ಓಡಾಟದ ಒತ್ತಡದ ನಿಧಾನ ಪರಿಣಾಮವಿದು ಎಂಬುದನ್ನು ಈ ಮಳೆಗಾಲದಲ್ಲಿ ಉರುಳಿದ ಮರಗಳು ಸ್ಪಷ್ಟವಾಗಿಸಿದ್ದವು. ಬೇಡ್ತಿ, ಅಘನಾಶಿನಿ, ನೇತ್ರಾವತಿಯ ಸೂಕ್ಷ್ಮ ಕೊಳ್ಳಗಳಲ್ಲಿ ಉರುಳಿದ ಮರಗಳ ಅಳು ಒರೆಸುವ ಕರವಸ್ತ್ರ ತಯಾರಿಸಲು ಇದು ಸಕಾಲ ಎಂಬ ಭಾವನೆ ಮೂಡಿಸುವಂತಿತ್ತು ಆ ಪರಿಸ್ಥಿತಿ.
]ಪ್ರವಾಹ ಬಂತು, ಮನೆ ಮಠ ನಾಶವಾಯಿತು ಎಂದು ದೂರುವಾಗ ನಮಗೆ ಸಹಜವಾಗಿ ಮಳೆಯ ಕುರಿತು ಆಕ್ರೋಶವಿರುತ್ತದೆ. ಆದರೆ ಇಷ್ಟೊಂದು ಹಾನಿಯುಂಟಾಗಲು ಬರೀ ಮಳೆಯೊಂದೇ ಕಾರಣವಲ್ಲ ಎಂಬ ಸೂಕ್ಷ್ಮ ಅರಿವು ನಮಗೆ ಈ ವರ್ಷದ ಮಳೆಗಾಲದ ಮೊದಲೇ ಆದರೆ ಒಳ್ಳೆಯದು.ಹಿಂದಿನ ಮಳೆಗಾಲದಲ್ಲಿ ಸೇತುವೆಗಳು ಸುಖಾಸುಮ್ಮನೆ ನಾಶವಾಗಿಲ್ಲ. ಅಪಾರ ಕೆಂಪು ನೀರು ಹೊತ್ತು ತಂದ ದಿಮ್ಮಿಗಳು, ಬೇರು ಸಹಿತದ ಮರಗಳು ಸೇತುವೆಗೆ ನೀರ ರಭಸದೊಟ್ಟಿಗೆ ಗುದ್ದಿದ ಪರಿಣಾಮ ಸೇತುವೆಗಳು ನೆಲಕಚ್ಚಿದ್ದವು. ಉತ್ತರ ಕನ್ನಡದ ಅಂಕೋಲಾ ತಾಲೂಕಿನ ರಾಮನಗುಳಿಯ ತೂಗುಸೇತುವೆ ಮುರಿದದ್ದು ಹೀಗೇ, ದಿಡುಪೆ ಬಳಿಯ ಕುಕ್ಕಾವಿನ ಬಳಿ ಆಗಿದ್ದೂ ಹೀಗೇ, ಸೇತುವೆಯ ಕೆಳಭಾಗದಿಂದ ತೂರಿಹರಿಯಲಾಗದ ಮರಗಳು ಸೇತುವೆ ಪಕ್ಕ ಬದಲಿ ಮಾರ್ಗ ಸೃಷ್ಟಿಸಿದವು. ಇಕ್ಕೆಲಗಳಲ್ಲಿ ಗದ್ದೆ ತೋಟಗಳು ಬಯಲಾದವು. ಘಟ್ಟದ ಮೇಲಿನ ಮರಗಳು ಪ್ರವಾಹದ ಪಳಯುಳಿಕೆಯಾಗಿ ಉಳಿದುಕೊಂಡವು. ಕುಕ್ಕಾವಿನ ಪ್ರವಾಹ ನಿರ್ಮಿತ ಬಯಲಲ್ಲಿ ಕೂಡಬೆಟ್ಟುವಿನ ಸಂತೃಸ್ತ ಮರಗಳು ಸ್ವಯಂಕೃತ ಅಪರಾಧದ ಪರಿಣಾಮ ಸ್ಥಳಕ್ಕೆ ತೆರಳಿದ್ದ ನಮ್ಮನ್ನು ನೋಡಿ ಸಿಟ್ಟಿಗೆದ್ದಂತೆ ಕಂಡಿದ್ದವು.
ಹಿಂದಿನ ಜುಲೈ ತಿಂಗಳ ಜೋರು ಮಳೆಗೆ ಉತ್ತರ ಕನ್ನಡದ ಯಲ್ಲಾಪುರದ ಅರಬೈಲ್ ಘಟ್ಟದ ಡಬ್ಗುಳಿ, ದೇವಿಮೂಲೆ,ಚಿಟ್ಟೇಪಾಲುಗಳಲ್ಲಿ ನೂರು ಅಡಿಗೂ ಎತ್ತರದ ಎರಡು ಗುಡ್ಡಗಳ ಮಧ್ಯದ ಝರಿಯಲ್ಲಿ ಮರಗಳು ತೇಲಿಬಂದಿದ್ದವು. ಅವು ಸಹಜ ಮುರಿದ ಮರಗಳಾಗಿರದೆ ಬುಡಸಮೇತ ಉರುಳಿದ್ದವು. ವರ್ಷದ ಹಿಂದೆ ಮಣ್ಣು ರೋಡಿಗೆ ದಾಂಬರು ಹಾಕಲು ವೈಬ್ರೇಟರ್ ಉಪಯೋಗಿಸಿದ ಪರಿಣಾಮ ಗುಡ್ಡದ ಮಣ್ಣು ಸಡಿಲವಾಗಿತ್ತು. ಐವತ್ತಕ್ಕೂ ಹೆಚ್ಚು ಮರಗಳು ರಾತ್ರಿ ಕಳೆದು ಬೆಳಗಾಗುವ ಹೊತ್ತಿಗೆ ಮಂಗಮಾಯವಾಗಿದ್ದವು. ಹಿಂದಿನ ಮಳೆಗಾಲ ಸುಣಜೋಗ ,ಶಿರ್ಲೆ, ತಳಕೆಬೈಲಿನ ಭೂಕಂಪವಲಯದ ಸಾಲಿಗೆ ಡಬ್ಗುಳಿಯನ್ನೂ ಸೇರಿಸಿತು. ಕುಮಟಾ ಅಂಕೋಲಾ ಹೊನ್ನಾವರಗಳ ಗುಡ್ಡಗಳು ಹೆದ್ದಾರಿಗಾಗಿ ಅರೆದೇಹಿಗಳಾಗುವುದು ಹೊಸತಲ್ಲ. ಅಲ್ಲಿಂದ ಶುರುವಾದ ಮರವುರುಳುವಿಕೆ ಈಗ ವಿಪರೀತಕ್ಕೆ ಬಂದುಮುಟ್ಟಿದೆ.
ಉತ್ತರ ಕನ್ನಡದ 7291 ಹೆಕ್ಟೇರ್ ಭತ್ತದ ಗದ್ದೆ ಬೇಸಾಯ ಮಾಡಲು ಅನುಪಯುಕ್ತವಾಗಿದೆ ಎಂದು ಆಗ ಸರ್ಕಾರ ಹೇಳಿತ್ತು. ಅಡಿಕೆ ತೆಂಗು ಟೀ ಕಾಫಿ ತೋಟಗಳಲ್ಲಾದ ನಷ್ಟ ಬೇರೆ. ಉತ್ತರ ಕನ್ನಡ ಜಿಲ್ಲೆಯಲ್ಲೇ ಲೆಕ್ಕಿಸಿದ ಅಂದಾಜು ಹಾನಿಯ ಮೊತ್ತ 418 ಕೋಟಿ. ಬೆಳ್ತಂಗಡಿಇ 250 ಕೋಟಿ ಹಾನಿ ಲೆಕ್ಕಿಸಲಾಗಿತ್ತು. ಈ ಲೆಕ್ಕದಲ್ಲಿ ಕುಸಿದ ಕಾಡು ಮರಗಳು ಸೇರಿಲ್ಲ ಎಂಬುದನ್ನು ನೆನಪಿಡಿ.
ಗುಜರಾತಿನಿಂದ ಕನ್ಯಾಕುಮಾರಿವರೆಗೆ ಹಬ್ಬಿರುವ ಪಶ್ಚಿಮ ಘಟ್ಟದ ಒಟ್ಟೂ ಉದ್ದ 1600 ಕೀಮಿಗಳು. ಬಹುಪಾಲು ಕರ್ನಾಟಕವನ್ನೇ ಮನೆ ಮಾಡಿಕೊಂಡಿರುವ ಪಶ್ಚಿಮ ಘಟ್ಟ ಶ್ರೇಣಿಗೆ ನಾವು ರಕ್ಷಣೆ ನೀಡುತ್ತಿದ್ದೇವೆಯೆ ಎಂದು ಕೇಳಿಕೊಳ್ಳುವ ಮನೋಭಾವವೂ ನಮಗಿಲ್ಲ.
ಮತ್ತೆ ಮಳೆ ಬೀಳುತ್ತಿದೆ.ಹವಾಮಾನ ಇಲಾಖೆ ಈ ವರ್ಷವೂ ಉತ್ತಮ ಮಳೆಯ ಭವಿಷ್ಯ ನುಡಿದಿದೆ. ಕರೋನಾ ಆರ್ಭಟದಲ್ಲಿ ಸರ್ಕಾರ ಮಳೆಗಾಲದ ತಯಾರಿ ಮರೆಯಬಾರದು. ಹಳೆ ನೆನಪುಗಳು ಕಹಿಯಾಗಿವೆ. ಮತ್ತೆ ಈ ಬಾರಿಯೂ ಕಹಿಯಾಗಲು ಅವಕಾಶ ನೀಡಬಾರದು. ತೆಗದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಹಲವಿವೆ.ಹಿಂದಿನ ವರ್ಷವೇನೋ ಆದ ಅನಾಹುತಗಳನ್ನು ಸರ್ಕಾರ ಮತ್ತು ಹಲವು ಸಂಘಸಂಸ್ಥೆಗಳು ನಿಧಾನವಾಗಿ ಸರಿಪಡಿಸಿದವು. ಈಗಲೂ ಕೆಲವೆಡೆ ಕೆಲಸ ನಡೆಯುತ್ತಿದೆ. ಆದರೆ ಹಿಂದಿನ ವರ್ಷ ಕುಸಿದ ಸಂತೃಸ್ತ ಮರಗಳಿಗೆ ಪರಿಹಾರ ಕೊಡಬೇಕಾದದ್ದು ಹೆಚ್ಚಾಗಬೇಕಿದ್ದ ನಮ್ಮ ಪರಿಸರ ಕಾಳಜಿ ಹೊರತು ಮತ್ತೇನಲ್ಲ. ಹಿಂದಿನ ಮಳೆಗಾಲ ಕಲಿಸಿದ ಪಾಠಗಳು ನಮಗೆ ನೆನಪಿದೆಯೆ?