ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್ ಗೆ 10 ಡಾಲರ್ ಗೆ ಕುಸಿಯುವ ಸಾಧ್ಯತೆ ಇದೆ ಎಂದು ಏಪ್ರಿಲ್ 1ರಂದು ‘ಪ್ರತಿಧ್ವನಿ’ ವರದಿ ಮಾಡಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆ ತಜ್ಞರ ವಿಶ್ಲೇಷಣೆಗಳನ್ನು ಆಧರಿಸಿ ‘ಪ್ರತಿಧ್ವನಿ’ ಈ ಅಂದಾಜು ಮಾಡಿತ್ತು. ಅದಾದ ಮೂರೇ ವಾರಗಳಲ್ಲಿ ‘ಪ್ರತಿಧ್ವನಿ’ ಅಂದಾಜು ನಿಜವಾಗಿದೆ. ಡಬ್ಲ್ಯೂಟಿಐ (ವೆಸ್ಟ್ ಟೆಕ್ಸಾಸ್ ಇಂಟರ್ಮಿಡಿಯೆಟ್) ಕಚ್ಚಾ ತೈಲ ಸೋಮವಾರದ ವಹಿವಾಟಿನಲ್ಲಿ ತ್ವರಿತ ಕುಸಿತ ಕಂಡಿದ್ದು, ಪ್ರತಿ ಬ್ಯಾರೆಲ್ ಗೆ 10.36 ಡಾಲರ್ ಗೆ ಇಳಿದು ಮತ್ತಷ್ಟು ಕುಸಿದು 1.5 ಡಾಲರ್ ನಲ್ಲಿ ವಹಿವಾಟಾಗಿದೆ.ನಂತರ ಕೆಲವೇ ಕ್ಷಣಗಳಲ್ಲಿ ಮತ್ತಷ್ಟು ಕುಸಿದು 0.01 ಡಾಲರ್ ಗೆ ಕುಸಿದಿದೆ. ಹೆಚ್ಚು ಕಮ್ಮಿ ಇದು ಶೂನ್ಯ ದರದ ಮಟ್ಟವಾಗಿದೆ. ಒಂದೇ ದಿನದ ವಹಿವಾಟಿನಲ್ಲಿ ಶೇ.99.09 ರಷ್ಟು ಕುಸಿದಿದೆ. ಆದರೆ ಬ್ರೆಂಟ್ ಕಚ್ಚಾ ತೈಲ ಶೇ.6ರಷ್ಟು ಕುಸಿತ ದಾಖಲಿಸಿದೆ.
ಉತ್ಪಾದನೆ ಕಡಿತ ಮಾಡುವ ಒಪ್ಪಂದ ನಂತರವೂ ಸೌದಿ ಅರೆಬಿಯಾ ಉತ್ಪಾದನೆ ಯಥಾಸ್ಥಿತಿ ಕಾಯ್ದುಕೊಂಡಿರುವುದು ಒಂದು ಕಾರಣವಾದರೆ ಇಡೀ ಜಗತ್ತಿನ್ನು ಕಾಡುತ್ತಿರುವ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಗಣನೀಯವಾಗಿ ಕುಸಿದಿರುವುದು ಮತ್ತೊಂದು ಕಾರಣವಾಗಿದೆ. ಇದು ಕಚ್ಚಾ ತೈಲಾಧಾರಿತ ಆರ್ಥಿಕ ದೇಶಗಳ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಬೀರಲಿದೆ. ಪ್ರತಿ ಬ್ಯಾರೆಲ್ ದರ 10 ಡಾಲರ್ ಇದ್ದಾಗಲೂ ಕಚ್ಚಾ ತೈಲ ಉತ್ಪಾದಿಸಿದರೆ ಕೇವಲ ಸೌದಿ ಅರೇಬಿಯಾ ಮಾತ್ರ ಬದುಕುಳಿಯಲು ಸಾಧ್ಯ. ಉಳಿದ ತೈಲೋದ್ಯಮ ಆಧಾರಿತ ದೇಶಗಳಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲವನ್ನು ಉತ್ಪಾದಿಸಲು 20 ಡಾಲರ್ ಮತ್ತು ಅದಕ್ಕಿಂತ ಹೆಚ್ಚು ವೆಚ್ಚವಾಗುತ್ತದೆ. ಹೀಗಾಗಿ ಸೌದಿ ಅರೇಬಿಯಾ ಆರಂಭಿಸಿದ ದರ ಸಮರವು ಆರೋಗ್ಯಕರ ಆರ್ಥಿಕತೆ ಮುನ್ನುಡಿ ಬರೆಯುವ ಬದಲು ತೈಲೋದ್ಯಮ ದೇಶಗಳ ಆರ್ಥಿಕ ಪ್ರಳಯಕ್ಕೆ ನಾಂದಿ ಹಾಡುತ್ತಿದೆ.
Also Read: ಹ್ಯಾಪಿ ಯುಗಾದಿ..! ಶೀಘ್ರದಲ್ಲೇ ಆಗಲಿದೆ ಪೆಟ್ರೋಲ್, ಡಿಸೇಲ್ ಬೆಲೆ 8 ರೂಪಾಯಿ ಏರಿಕೆ..!!
ಈ ಬೆಳವಣಿಗೆ ಶೇ.85ರಷ್ಟು ತೈಲವನ್ನು ಆಮದು ಮಾಡಿಕೊಳ್ಳುವ ಭಾರತದ ಪಾಲಿಗೆ ವರದಾನವೂ ಹೌದು. ಆದರೆ, ಕೊರೊನಾ ಸೋಂಕಿನಿಂದಾಗಿ ಇಡೀ ಜಾಗತಿಕ ಆರ್ಥಿಕತೆಯೇ ಹಿಂಜರಿತದತ್ತ ದಾಪುಗಾಲು ಹಾಕುತ್ತಿದೆ. ಹೊತ್ತಿನಲ್ಲಿ ಕಚ್ಚಾ ತೈಲ ದರ ಕುಸಿವು ಜಾಗತಿಕ ಆರ್ಥಿಕತೆಯು ಹಿಂಜರಿತದತ್ತ ಮತ್ತಷ್ಟು ವೇಗವಾಗಿ ಚಲಿಸಲು ಉದ್ದೀಪಿಸುತ್ತದೆ. ತೈಲ ಉತ್ಪಾದನೆಯ ರಾಷ್ಟ್ರಗಳ ಆರ್ಥಿಕತೆ ಕುಸಿದರೆ ಪರೋಕ್ಷವಾಗಿ ಅದು ಭಾರತದ ರಫ್ತು ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಈಗ ಮುಖ್ಯ ವಿಷಯ ಏನೆಂದರೆ- ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಕುಸಿದಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ಕುಸಿಯಲಿದೆಯೇ?
ಸದ್ಯದ ಪರಿಸ್ಥಿತಿಯಲ್ಲಿ ಅಂತಹ ಯಾವುದೇ ಆಶಾದಾಯಕ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಏಕೆಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಶೂನ್ಯಕ್ಕೆ ಇಳಿದರೂ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ದರವನ್ನು 70 ರುಪಾಯಿ ಮಟ್ಟಕ್ಕಿಂತ ಕೆಳಕ್ಕೆ ಇಳಿಸಲು ಪ್ರಧಾನಿ ನರೇಂದ್ರ ಮೋದಿ ಅವಕಾಶ ನೀಡುವುದಿಲ್ಲ.
ಕೊರೊನಾ ಭೀತಿಯಿಂದಾಗಿ ಜನರು ತಮ್ಮ ತಮ್ಮ ಮನೆಗಳಲ್ಲಿ ತಾವೇ ಬಂಧಿಯಾಗಿರುವ ಹೊತ್ತಿನಲ್ಲಿ ಏಪ್ರಿಲ್ 1ರಂದು ಪ್ರಧಾನಿ ಮೋದಿ ಅವರು ದೇಶೀಯ ಮಾರುಕಟ್ಟೆಯಲ್ಲಿನ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಏರಿಸಿ ಅಚ್ವರಿ ಮೂಡಿಸಿದ್ದರು. ಅಚ್ಚರಿ ಏಕೆಂದರೆ ಏಪ್ರಿಲ್ 1ರಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ 18 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು. ಪ್ರತಿ ಬ್ಯಾರೆಲ್ ಗೆ 20 ಡಾಲರ್ ಆಜುಬಾಜಿನಲ್ಲಿ ವಹಿವಾಟಾಗುತ್ತಿತ್ತು.
Also Read: ಗ್ರಾಹಕರ ಜೇಬಿಗೆ ನರೇಂದ್ರ ಮೋದಿ ಸರ್ಕಾರದಿಂದ ಕನ್ನ; ಪೆಟ್ರೋಲ್, ಡಿಸೇಲ್ ಮೇಲೆ ₹3 ತೆರಿಗೆ ಹೇರಿಕೆ
ಜನವರಿ ಆರಂಭದಲ್ಲಿ ಪ್ರತಿ ಬ್ಯಾರೆಲ್ ಗೆ 60 ಡಾಲರ್ ಇದ್ದ ಕಚ್ಚಾ ತೈಲ 20ಡಾಲರ್ ಗೆ ಕುಸಿದಾಗಲೂ ಏಪ್ರಿಲ್ 1ರಿಂದ (ಮಾರ್ಚ್ 31ರ ಮಧ್ಯರಾತ್ರಿ 12ರ ನಂತರ) ಪೆಟ್ರೋಲ್ ಮತ್ತು ಡೀಸೆಲ್ ದರವು ಶೇ.2.30ರಷ್ಟು ಏರಿಕೆಯಾಗಿತ್ತು. ರುಪಾಯಿ ಲೆಕ್ಕದಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 1.65 ರುಪಾಯಿ ಏರಿಕೆಯಾಗಿದ್ದರೆ, ಡಿಸೇಲ್ 1.62 ರುಪಾಯಿ ಏರಿತ್ತು. ಇಡೀ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿನ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ದರ ಗಣನೀಯವಾಗಿ ಕುಸಿದಿದೆ. ಕುಸಿಯುತ್ತಲೇ ಇದೆ. ಆದರೆ, ಕಚ್ಚಾ ತೈಲವು 60 ಡಾಲರ್ ಗಳಿಂದ 20 ಡಾಲರ್ ಗಳಿಗೆ ಕುಸಿದರೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಯದೇ ಇರುವುದು ಭಾರತದಲ್ಲಿ ಮಾತ್ರ!
ಪ್ರಧಾನಿ ಮೋದಿ ಕಾಪಾಡುವರೇ ಬಡಪಾಯಿ ಗ್ರಾಹಕನನ್ನು???
ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಇಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಬಡಪಾಯಿ ಗ್ರಾಹಕರಿಗೆ ನೆರವಾಗುವರೇ? ಕಚ್ಚಾ ತೈಲ ದರ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕುಸಿದಿರುವಾಗ ಇಂತಹದ್ದೊಂದು ಆಶಾದಾಯಕ ನಿರಿಕ್ಷೆ ಜನರಲ್ಲಿ ಬರುವುದು ಸಹಜ. ಐತಿಹಾಸಿಕ ಬಹುಮತ ಪಡೆದು ಮತ್ತೆ ಪ್ರಧಾನಿ ಆಗಿರುವ ಮೋದಿಗೆ ಜನರ ಋಣ ತೀರಿಸಲು ಇದೊಂದು ಅವಕಾಶ. ದರ ಇಳಿಸಿ ಜನರ ಸಂಕಷ್ಟವನ್ನು ಸ್ವಲ್ಪಮಟ್ಟಿಗೆ ತಗ್ಗಿಸಬಹುದು.
ಆದರೆ ದರ ಇಳಿಯುವುದಿರಲಿ ಈಗಿರುವ ದರ ಏರಿಸದೇ ಇದ್ದರೆ ಸಾಕು. ಏಕೆಂದರೆ ಬರುವ ದಿನಗಳಲ್ಲಿ ಮೋದಿ ಸರ್ಕಾರವು ಇನ್ನೂ 6.35 ರುಪಾಯಿ ಪೆಟ್ರೋಲ್ ದರ ಏರಿಕೆ ಮಾಡುವ ಸಾಧ್ಯತೆ ಇದೆ. ಕೊರೊನಾ ಸೋಂಕು ತಡೆಯಲು ಲಾಕ್ ಡೌನ್ ಹೇರುವ ಮುನ್ನಾ ದಿನ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ತಾನು ಬಯಸಿದ ಯಾವುದೇ ಸಮಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಜ್ ಸುಂಕವನ್ನು ಲೀಟರ್‌ಗೆ 8 ರುಪಾಯಿ ಹೆಚ್ಚಿಸಲು ಅನುವು ಮಾಡಿಕೊಡುವ ನಿಬಂಧನೆಗೆ ಅನುಮೋದನೆ ಪಡೆದಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಅಬಕಾರಿ ಸುಂಕದ ಮಿತಿಯನ್ನು ಕ್ರಮವಾಗಿ ಲೀಟರ್‌ಗೆ 18 ಮತ್ತು 12 ರುಪಾಯಿಗೆ ಏರಿಸಲು ಹಣಕಾಸು ಕಾಯ್ದೆ ಎಂಟನೇ ಪರಿಚ್ಛೇದಕ್ಕೆ ತಿದ್ದುಪಡಿ ಮಾಡಲಾಗಿದೆ. ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಿದ 2020 ರ ಹಣಕಾಸು ಮಸೂದೆಗೆ ತಿದ್ದುಪಡಿ ಮಸೂದೆಯು ಯಾವುದೇ ಚರ್ಚೆಯಿಲ್ಲದೇ ಅಂಗೀಕಾರವಾಗಿದೆ. ಹಿಂದಿನ ಮಿತಿ ಪೆಟ್ರೋಲ್‌ಗೆ ಲೀಟರ್‌ಗೆ 10 ಮತ್ತು ಡೀಸೆಲ್‌ಗೆ 4 ರುಪಾಯಿ ಇತ್ತು. ‘ಕೋವಿಡ್-19’ ನಿಂದ ಉದ್ಭವಿಸಿರುವ ಸಂಕಷ್ಟದಿಂದ ಏಕಾಏಕಿ ಬಂದ ಅನಿರೀಕ್ಷಿತ ವೆಚ್ಚಗಳನ್ನು ಭರಿಸಲು ಸುಂಕ ಹೇರಲು ಮೋದಿ ಸರ್ಕಾರ ಮುಂದಾಗಿದೆ.
Also Read: ಕರೋನಾ ನೆನಪಿಸಿದ ನರೇಂದ್ರ ಮೋದಿ ಸರ್ಕಾರದ ‘ಆರ್ಥಿಕ ಅನಕ್ಷರತೆ’ ಮತ್ತು ಗಗನಚುಂಬಿ ಪ್ರತಿಮೆ!
ಮಾರ್ಚ್ 14ರಂದು ಏರಿಸಿದ ಎಕ್ಸೈಜ್ ಸುಂಕ ತಲಾ 3 ರುಪಾಯಿಗಳಿಂದ ವಾರ್ಷಿಕ 39,000 ಕೋಟಿ ಹೆಚ್ಚುವರಿ ಆದಾಯಗಳಿಸಲಿದೆ. 3 ರುಪಾಯಿ ಪೈಕಿ ವಿಶೇಷ ಹೆಚ್ಚುವರಿ ಎಕ್ಸೈಜ್ ಸುಂಕ 2 ರುಪಾಯಿ ಮತ್ತು ರಸ್ತೆ ಮತ್ತು ಮೂಲಭೂತ ಸೌಕರ್ಯಗಳ ಮೇಲಿನ ಉಪಕರ (ಸೆಸ್) 1 ರುಪಾಯಿ ಸೇರಿದೆ. ಉದ್ದೇಶಿತ ತಿದ್ದುಪಡಿಯು ಕೇಂದ್ರ ಸರ್ಕಾರಕ್ಕೆ ಯಾವಾಗ ಬೇಕಾದರೂ 8 ರುಪಾಯಿ ಏರಿಕೆ ಮಾಡುವ ಅಧಿಕಾರವನ್ನು ನೀಡಿದೆ. ಆ ಅಧಿಕಾರವನ್ನು ಬಳಸಿಕೊಂಡು ನರೇಂದ್ರ ಮೋದಿ ಸರ್ಕಾರವು ದೇಶವ್ಯಾಪಿ ಬೇಡಿಕೆಯೇ ಇಲ್ಲದ ಹೊತ್ತಿನಲ್ಲಿ ಏಪ್ರಿಲ್ 1 ರಂದು ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಕ್ರಮವಾಗಿ 1.65 ಮತ್ತು 1.62 ರುಪಾಯಿ ಏರಿಕೆ ಮಾಡಿದೆ. ಈಗಾಗಲೇ ಸಂಸತ್ತಿನಲ್ಲಿ ಅನುಮೋದನೆ ಪಡೆದಿರುವ 8 ರುಪಾಯಿಗಳಷ್ಟನ್ನೂ ಏರಿಕೆ ಮಾಡಿದರೆ ಪೆಟ್ರೋಲ್ ದರವು 80 ರುಪಾಯಿಗೆ, ಡಿಸೇಲ್ ದರವು 73.50ರ ಆಜುಬಾಜಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಲಾಕ್ ಡೌನ್ ತೆರವುಗೊಂಡು ದೇಶದ ಆರ್ಥಿಕ ಚಟುವಟಿಕೆಗಳು ಸಾಮಾನ್ಯ ಸ್ಥಿತಿಗೆ ಬಂದ ನಂತರ ಜನರು ಮತ್ತಷ್ಟು ಭಾರ ಹೊರಬೇಕಾಗಬಹುದು!