ವಿಶೇಷ ಸಾಂವಿಧಾನಿಕ ಸ್ಥಾನಮಾನ ಕಲ್ಪಿಸುವ 370ನೆಯ ವಿಧಿಯನ್ನು ರದ್ದು ಮಾಡಿದ ನಂತರ ಕಾಶ್ಮೀರದಲ್ಲಿ ಎಲ್ಲವೂ ಎಂದಿನಂತಿದೆ ಎಂದು ಹೊರಜಗತ್ತನ್ನು ನಂಬಿಸುವ ಕಸರತ್ತುಗಳಲ್ಲಿ ತೊಡಗಿದೆ ಕೇಂದ್ರ ಸರ್ಕಾರ. ಯೂರೋಪಿನ 23 ಸಂಸದರ ನಿಯೋಗದ ಕಾಶ್ಮೀರ ಭೇಟಿಯ ಏರ್ಪಾಡು ಕೂಡ ಇದೇ ಸಾಲಿಗೆ ಸೇರುವ ಸಾರ್ವಜನಿಕ ಸಂಪರ್ಕ ಕ್ರಿಯೆ.
ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ಕುರಿತು ಪಾಕಿಸ್ತಾನ ನಡೆಸಿರುವ ಅಪಪ್ರಚಾರದ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ವಿದೇಶೀ ನಿಯೋಗಗಳನ್ನು ಕಾಶ್ಮೀರಕ್ಕೆ ಬರ ಮಾಡಿಕೊಳ್ಳುವುದು ಸರಿಯಾದ ನಡೆ. ಆದರೆ ಈ ನಿರ್ದಿಷ್ಟ ಸೈದ್ಧಾಂತಿಕ ಹಿನ್ನೆಲೆಯ ನಿಯೋಗಗಳಿಗೆ ಮಾತ್ರವೇ ರತ್ನಗಂಬಳಿ ಹಾಸುವುದು ತರವಲ್ಲ. ಮೊನ್ನೆ ಭೇಟಿ ನೀಡಿದ ಇಟಲಿ, ಫ್ರ್ಯಾನ್ಸ್, ಬ್ರಿಟನ್, ಪೋಲೆಂಡ್, ಜರ್ಮನಿಯ ಸಂಸದರ ಪೈಕಿ ತೀವ್ರ ಬಲಪಂಥೀಯರೇ ಬಹು ಸಂಖ್ಯೆಯಲ್ಲಿದ್ದಾರೆಂಬ ಕಟು ಟೀಕೆಯನ್ನು ಸರ್ಕಾರ ಎದುರಿಸಿದೆ. ಈ ಸಂಸದರು ತಮ್ಮ ದೇಶಗಳ ಮುಖ್ಯಧಾರೆಯ ರಾಜಕೀಯ ಪಕ್ಷಗಳಿಗೆ ಸೇರಿದವರಲ್ಲ. ಬ್ರಿಟನ್ನಿನ ಕ್ರಿಸ್ ಡೇವಿಸ್ ಮತ್ತು ತೆರೇಸಾ ಗ್ರಿಫಿನ್ ಎಂಬ ಇಬ್ಬರು ಸಂಸದರು ಪೊಲೀಸ್ ಮತ್ತು ಸೇನೆಯ ಕಣ್ಗಾವಲಿನಿಂದ ಆಚೆಗೆ ಸ್ವತಂತ್ರವಾಗಿ ಕಾಶ್ಮೀರದ ಜನರನ್ನು ಭೇಟಿಯಾಗುವ ಇರಾದೆ ವ್ಯಕ್ತಪಡಿಸಿದ್ದರು. ಈ ಕಾರಣಕ್ಕಾಗಿ ಅವರಿಗೆ ನಿಯೋಗದಲ್ಲಿ ಜಾಗ ಸಿಗಲಿಲ್ಲ. ಐರೋಪ್ಯ ಸಂಸದರ ಭೇಟಿಯನ್ನು ಏರ್ಪಾಡು ಮಾಡಿದ್ದು ತನ್ನನ್ನು ತಾನು ಅಂತಾರಾಷ್ಟ್ರೀಯ ಬ್ಯೂಸಿನೆಸ್ ಬ್ರೋಕರ್ ಸಂಸ್ಥೆ ಎಂದು ಕರೆದುಕೊಳ್ಳುವ ಸ್ವಯಂಸೇವಾ ಸಂಸ್ಥೆ. ಕೇಂದ್ರ ಸರ್ಕಾರದ ಕೃಪಾಪೋಷಿತ ಚಿಂತಕರ ಚಾವಡಿ.
ಈ ಸಂಸದರು ಅಧಿಕೃತ ನಿಯೋಗದ ಸದಸ್ಯರೇನೂ ಅಲ್ಲ. ಹೀಗಾಗಿ ಈ ಭೇಟಿಯಲ್ಲಿ ಅವರು ಐರೋಪ್ಯ ಒಕ್ಕೂಟವನ್ನಾಗಲಿ, ತಮ್ಮ ತಮ್ಮ ದೇಶಗಳನ್ನಾಗಲಿ ಅಥವಾ ತಮ್ಮ ತಮ್ಮ ಕ್ಷೇತ್ರಗಳನ್ನೇ ಆಗಲಿ ಪ್ರತಿನಿಧಿಸುವ ಸ್ಥಿತಿಯಲ್ಲೂ ಇಲ್ಲ. ಈ ನಿಯೋಗ ಅಧಿಕೃತ ಅಲ್ಲವೆಂದು ಐರೋಪ್ಯ ಒಕ್ಕೂಟ ಮತ್ತು ಭಾರತದ ವಿದೇಶಾಂಗ ಮಂತ್ರಾಲಯ ಸಾರಿವೆ. ಇದೊಂದು ಖಾಸಗಿ ನೆಲೆಯ ವ್ಯಕ್ತಿಗತ ಭೇಟಿ ಮಾತ್ರ. ಈ ಸಂಸದರ ಪೈಕಿ ಹಿಟ್ಲರನ ಜರ್ಮನಿಯ ಅಮಾನುಷ ನಾಜೀವಾದದ ಸಮರ್ಥಕರು, ಇಸ್ಲಾಮ್ ಧರ್ಮವನ್ನು ದ್ವೇಷಿಸುವವರು, ಈ ಧರ್ಮದ ಭಯದಿಂದ ಬಳಲುವ ತೀವ್ರ ಬಲಪಂಥೀಯರಿಂದ ತುಂಬಿ ಹೋಗಿದ್ದ ಅನಧಿಕೃತ ನಿಯೋಗವಿದು.
ಈ ಭೇಟಿಯು ಜಮ್ಮು-ಕಾಶ್ಮೀರ-ಲದ್ದಾಖಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಯನ್ನು ಯೂರೋಪಿಯನ್ ಸಂಸದರಿಗೆ ಅರ್ಥ ಮಾಡಿಸಲು ನೆರವಾಗಲಿದೆ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಾತು ಬಹುದೊಡ್ಡ ವಿಡಂಬನೆಯೇ ಸರಿ. ಜಮ್ಮು-ಕಾಶ್ಮೀರದ ಜನರ ಸ್ಥಿತಿಗತಿ ಕುರಿತು ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯು ಕಣಿವೆಯ ಜನರಿಗೆ ಮಾನವ ಹಕ್ಕುಗಳನ್ನು ಮರಳಿಸಬೇಕೆಂದು ಯೂರೋಪಿಯನ್ ಸಂಸದರು ಕಾಶ್ಮೀರಕ್ಕೆ ಭೇಟಿ ನೀಡಿದ ದಿನದಂದೇ ಭಾರತ ಸರ್ಕಾರವನ್ನು ಒತ್ತಾಯಪಡಿಸಿದ್ದು ಸಾಧಾರಣ ಬೆಳವಣಿಗೆಯೇನೂ ಅಲ್ಲ.
ಯೂರೋಪಿಯನ್ ಸಂಸದರಿಗೆ ದೊರೆತ ಈ ವಿಶೇಷಾಧಿಕಾರವನ್ನು ನಮ್ಮದೇ ಸಂಸದರಿಗೆ ಯಾಕೆ ನಿರಾಕರಿಸಲಾಗಿದೆ ಎಂಬ ಪ್ರಶ್ನೆಗೆ ಸರ್ಕಾರ ಸಮಾಧಾನಕರ ಉತ್ತರವನ್ನು ನೀಡುವ ಸ್ಥಿತಿಯಲ್ಲಿ ಇಲ್ಲ. ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ತೀರ್ಮಾನ ಹೊರಬಿದ್ದ ದಿನದಿಂದ (2019ರ ಆಗಸ್ಟ್ 5) ನಮ್ಮ ಸಂಸದರು ಮತ್ತು ಹಿರಿಯ ರಾಜಕೀಯ ಮುಂದಾಳುಗಳಿಗೆ ಕಾಶ್ಮೀರ ಭೇಟಿಯನ್ನು ನಿರಾಕರಿಸುತ್ತ ಬರಲಾಗಿದೆ. ರಾಹುಲ್ ಗಾಂಧಿ, ಯಶವಂತ ಸಿನ್ಹಾ ಮತ್ತು ಪ್ರತಿಪಕ್ಷದ ಇತರೆ ರಾಜಕೀಯ ನಾಯಕರನ್ನು ಶ್ರೀನಗರ ವಿಮಾನ ನಿಲ್ದಾಣದಿಂದಲೇ ವಾಪಸು ಕಳಿಸಲಾಯಿತು. ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯೂ ಆಗಿದ್ದ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಅವರು ಮೂರು ಸಲ ಶ್ರೀನಗರ ವಿಮಾನ ನಿಲ್ದಾಣದಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ದೆಹಲಿಗೆ ಮರಳಬೇಕಾಯಿತು. ಕಡೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ನಂತರ ಗುಲಾಮ್ ನಬಿ ಮತ್ತು ಸಿಪಿಐ (ಎಂ) ನಾಯಕ ಸೀತಾರಾಮ ಯೆಚ್ಚೂರಿ ಅವರಿಗೆ ಕಾಶ್ಮೀರ ಭೇಟಿಗೆ ಅವಕಾಶ ನೀಡಲಾಯಿತು.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿರುವ ಕೇಂದ್ರ ಸರ್ಕಾರ, ಕಾಶ್ಮೀರ ಕಣಿವೆಯಲ್ಲಿ ಹೇರಿರುವ ಹಲವು ಬಗೆಯ ನಿರ್ಬಂಧಗಳನ್ನು ಈವರೆಗೆ ಹೆಚ್ಚೇನೂ ಸಡಿಲಿಸಿಲ್ಲ. ಅಷ್ಟೇ ಅಲ್ಲ, ಕಣಿವೆಯ ರಾಜಕೀಯ ಮುಂದಾಳುಗಳು ಮತ್ತು ಜನಪ್ರತಿನಿಧಿಗಳನ್ನು ಈಗಲೂ ಬಂಧನದಿಂದ ಬಿಡುಗಡೆ ಮಾಡಿಲ್ಲ. ಕಣಿವೆಯ ಬಹುತೇಕ ಜನರಲ್ಲಿ ತಮ್ಮ ದಿಗ್ಬಂಧನದ ಕುರಿತು ತೀವ್ರ ಅಸಮಾಧಾನ ನೆಲೆಸಿದೆ ಎಂಬ ಕಟು ವಾಸ್ತವವನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಂಡು ಗುರುತಿಸಬೇಕು. ವಿಶೇಷ ಸಾಂವಿಧಾನಿಕ ಸ್ಥಾನಮಾನ ರದ್ದು ಮತ್ತು ರಾಜ್ಯದ ವಿಭಜನೆಯ ಕ್ರಮವು ಕಾಶ್ಮೀರಕ್ಕೆ ಮಾಡಿದ ಅವಹೇಳನ ಎಂದೇ ಕಣಿವೆಯ ಜನ ಭಾವಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಅಪಪ್ರಚಾರವನ್ನು ಸೋಲಿಸುವ ಜೊತೆಗೆ ಕಾಶ್ಮೀರದ ಜನರ ವಿಶ್ವಾಸವನ್ನು ಗಳಿಸಲು ಕೇಂದ್ರ ಸರ್ಕಾರ ಈವರೆಗೆ ಗಂಭೀರ ಪ್ರಯತ್ನ ನಡೆಸಬೇಕಿದೆ. ಈ ದಿಸೆಯಲ್ಲಿ ನಿಚ್ಚಳ ಸೂಚನೆಗಳು ಇನ್ನೂ ಒಡಮೂಡಿಲ್ಲ. ಜಮ್ಮು-ಕಾಶ್ಮೀರದಲ್ಲಿ ಎಂದಿನ ಸಹಜ ಪರಿಸ್ಥಿತಿ ಮರಳಿದ ನಂತರ ಪೂರ್ಣ ರಾಜ್ಯದ ಸ್ಥಾನಮಾನವನ್ನು ಪುನಃ ನೀಡುವುದಾಗಿ ಗೃಹಮಂತ್ರಿ ಅಮಿತ್ ಶಾ ಆರಂಭದಲ್ಲಿ ಸಾರಿದ್ದರು. ಈ ಮಾತನ್ನು ತಪ್ಪದೆ ನಡೆಸಿಕೊಡಬೇಕು.
ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಜರುಗಿದೆ ಮತ್ತು ಭಾರತೀಯ ಸೇನೆಯಿಂದ ದೌರ್ಜನ್ಯಗಳು ಮುಂದುವರೆದಿವೆ ಎಂದು ಪಾಕಿಸ್ತಾನ ಕಂಡ ಕಂಡ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಚೀರತೊಡಗಿದೆ. ಆದರೆ ಇದೇ ಪಾಕಿಸ್ತಾನ ಕಾಶ್ಮೀರದಲ್ಲಿ ಭಾರತದ ವಿರುದ್ಧ ದಶಕಗಳಿಂದ ಮುಸುಕಿನ ಸಮರ ನಡೆಸಿದೆ. ಕಣಿವೆಯಲ್ಲಿ ಬೆಳೆದ ಸೇಬಿನ ಹಣ್ಣುಗಳ ವ್ಯಾಪಾರಕ್ಕೆ ಕಲ್ಲು ಹಾಕಲು ಸೇಬು ಸಾಗಣೆ ಟ್ರಕ್ ಗಳ ಮೇಲೆ ಬಾಂಬು ಸಿಡಿಸುವುದು, ಟ್ರಕ್ ನಡೆಸುವವರನ್ನು ಕೊಂದು ಹಾಕುವುದು, ನಾಗರಿಕರ ಮೇಲೆ ಗ್ರೆನೇಡ್ ದಾಳಿ, ಬಂಗಾಳಿ ಕೂಲಿಕಾರರ ಹತ್ಯೆ, ಭಯೋತ್ಪಾದಕರು ಗಡಿ ದಾಟಿ ಕಾಶ್ಮೀರ ನುಸುಳಲು ಏರ್ಪಾಡು ಮಾಡುವ ಹಲವು ಬಗೆಯ ಪಾಕ್ ಹುನ್ನಾರಗಳು ಅಂತಾರಾಷ್ಟ್ರೀಯ ಸಮುದಾಯಕ್ಕೂ ಕಾಣತೊಡಗಿವೆ.
ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ನಿರ್ಧಾರ ಅಚಲ ಮತ್ತು ಈ ವಿದ್ಯಮಾನ ಭಾರತದ ಆಂತರಿಕ ವಿಷಯ ಎಂಬುದನ್ನು ಬಹುಪಾಲು ದೇಶಗಳು ಒಪ್ಪಿಕೊಂಡಿವೆ. ಆದರೆ ಮೂರು ತಿಂಗಳ ನಂತರವೂ ಮುಂದುವರೆದಿರುವ ಕಾಶ್ಮೀರದ ಜನರ ನಾಗರಿಕ ಹಕ್ಕುಗಳ ದಮನವನ್ನು ಯಾರೂ ಸಮರ್ಥಿಸುವುದಿಲ್ಲ.