ದೇಶದ ಆರ್ಥಿಕ ಅಭಿವೃದ್ಧಿ ಕುಸಿತಕ್ಕೆ ಮೂಲ ಕಾರಣವಾಗಿರುವ ನಿರುದ್ಯೋಗ ಸಮಸ್ಯೆ ಮತ್ತೊಂದು ಮಜಲು ಮುಟ್ಟುತ್ತಿದೆ. ಅಪನಗದೀಕರಣದ ನಂತರದಲ್ಲಿ ಹೆಚ್ಚು ಸುರಕ್ಷಿತ ಉದ್ಯೋಗ ವಲಯ ಎಂದೇ ಗುರುತಿಸಲಾಗಿದ್ದ ಮಾಹಿತಿ ತಂತ್ರಜ್ಞಾನ ವಲಯದಲ್ಲೀಗ ಪಿಂಕ್ ಸ್ಲಿಪ್ ಮತ್ತು ಲೇಆಫ್ ಪದಗಳು ಐಟಿ ಉದ್ಯೋಗಿಗಳನ್ನು ದುಃಸ್ವಪ್ನದಂತೆ ಕಾಡುತ್ತಿವೆ. ನಿತ್ಯವೂ ಒಂದಿಲ್ಲೊಂದು ಕಂಪನಿ ತನ್ನ ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿರುವ ಸುದ್ದಿ ಅಲ್ಲಲ್ಲಿ ಬಿತ್ತರವಾಗುತ್ತಲೇ ಇದೆ. ಆತಂಕದ ಸಂಗತಿ ಎಂದರೆ ಇದಿನ್ನೂ ಆರಂಭ. ಮುಂಬರುವ ದಿನಗಳಲ್ಲಿ ಐಟಿ ಕ್ಷೇತ್ರದಲ್ಲಿನ ಉದ್ಯೋಗ ನಷ್ಟ ಬಹುದೊಡ್ಡ ಪ್ರಮಾಣದಲ್ಲಿರುತ್ತದೆ ಮತ್ತು ಅದು ಆರ್ಥಿಕತೆ ಮೇಲೆ ವ್ಯಾಪಕವಾದ ಪರಿಣಾಮ ಬೀರುತ್ತದೆ.
ಬೆಂಗಳೂರಿಗೆ ಮಾಹಿತಿ ತಂತ್ರಜ್ಞಾನ ರಾಜಧಾನಿ ಹೆಗ್ಗಳಿಕೆ ತಂದುಕೊಟ್ಟ ಇನ್ಫೊಸಿಸ್ ಸೇರಿದಂತೆ ಬಹುತೇಕ ಐಟಿ ಕಂಪನಿಗಳು ಉದ್ಯೋಗ ಕಡಿತಕ್ಕೆ ಮುಂದಾಗಿವೆ. ಕಾಗ್ನಿಜಂಟ್, ಟಿಸಿಎಸ್ ಸೇರಿದಂತೆ ಪ್ರಮುಖ ಕಂಪನಿಗಳೂ ಹಿಂದೆ ಬಿದ್ದಿಲ್ಲ. ಐಟಿ ವಲಯದಲ್ಲಿ ಉದ್ಯೋಗ ನಷ್ಟವಾದರೆ ಅದು ಆರ್ಥಿಕತೆಯ ಮೇಲೆ ಅಂತ್ಯಂತ ತ್ವರಿತವಾಗಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅದರಲ್ಲೂ ನಗದ ವಲಯದಲ್ಲಿನ ಆರ್ಥಿಕತೆ ಕುಸಿತಕ್ಕೆ ಪರೋಕ್ಷವಾಗಿ ಕಾರಣವಾಗಲಿದೆ. ಅಪನಗದೀಕರಣದ ನಂತರದಲ್ಲಿ ಅಸಂಘಟಿತ ವಲಯದಲ್ಲಿ ವ್ಯಾಪಕವಾಗಿ ಉದ್ಯೋಗ ನಷ್ಟವಾಯಿತು. ಅದು ನಿರ್ಮಾಣ ಮತ್ತು ಉತ್ಪಾದಕ ಕ್ಷೇತ್ರದಲ್ಲಿ ಹೆಚ್ಚಿತ್ತು. ಈ ಉಭಯ ಕ್ಷೇತ್ರದಲ್ಲಿನ ಸಂಘಟಿತ ವಲಯದಲ್ಲೂ ಉದ್ಯೋಗ ನಷ್ಟವಾಗಿತ್ತು. ನಿರ್ಮಾಣ ಮತ್ತು ಉತ್ಪಾದಕ ಕ್ಷೇತ್ರದ ಅಂಸಘಟಿತ ವಲಯದ ಉದ್ಯೋಗಗಳ ವ್ಯಾಪ್ತಿ ಬೃಹತ್ ಪ್ರಮಾಣದಲ್ಲಿದೆ. ಇಲ್ಲಿ ಕುಶಲರಹಿತರಿಗೆ ಹೆಚ್ಚು ಉದ್ಯೋಗ ಒದಗಿಸುವ ಈ ಕ್ಷೇತ್ರವು ಆರ್ಥಿಕ ಅಭಿವೃದ್ಧಿಗೆ ವೇಗವರ್ಧಕವಾಗಿದೆ. ಅಪನಗದೀಕರಣದ ನಂತರ ಏಕೆ ಆರ್ಥಿಕ ಪರಿಸ್ಥಿತಿ ಕುಸಿಯಿತು ಎಂದರೆ- ಸುಮಾರು ನೂರಕ್ಕೂ ಹೆಚ್ಚು ದಿನ ಇಡೀ ದೇಶದ ಆರ್ಥಿಕತೆಯೇ ಸ್ಥಗಿತಗೊಂಡಿತ್ತು. ನಿರ್ಮಾಣ ಮತ್ತು ಉತ್ಪಾದಕತೆಯು ತೀವ್ರವ ಪ್ರಮಾಣದಲ್ಲಿ ಕುಂಠಿತವಾಗಿತ್ತು. ಹೀಗಾಗಿ ಅರೆಕಾಲಿಕ ಮತ್ತು ಪೂರ್ಣಕಾಲಿಕ ಉದ್ಯೋಗದಲ್ಲಿ ತೊಡಗಿದ್ದ ಕುಶಲರಹಿತ ಕಾರ್ಮಿಕರು ನಗರ ಪ್ರದೇಶಗಳಿಂದ ತಮ್ಮ ತಮ್ಮ ಗ್ರಾಮಗಳಿಗೆ ತೆರಳಿದರು. ಆ ಕುಟುಂಬಗಳ ಆದಾಯ ಕಡಿತವಾಯ್ತು. ಮತ್ತು ಆ ಕುಟುಂಬಗಳ ಖರೀದಿ ಶಕ್ತಿ ಕ್ಷೀಣಿಸಿತು. ಅದು ಬೃಹದಾರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಎಲ್ಲಿ ನಿರುದ್ಯೋಗ ಇರುತ್ತದೋ ಅಲ್ಲಿ ಜನರ ಖರೀದಿ ಶಕ್ತಿ ಕುಂದುತ್ತದೆ. ಖರೀದಿ ಶಕ್ತಿ ಕುಂದುವುದೆಂದರೆ ಆರ್ಥಿಕತೆಯ ಚಕ್ರದ ವೇಗವು ಮಂದಗತಿಯಾಗುತ್ತe ಕೊನೆಗೆ ಸ್ಥಗಿತವಾಗುತ್ತದೆ. ಅದೇ ಆರ್ಥಿಕ ಕುಸಿತ ಮತ್ತು ಆರ್ಥಿಕ ಹಿಂಜರಿತದ ಹಂತಗಳು.
ನಿರ್ಮಾಣ ಮತ್ತು ಉತ್ಪಾದಕ ಕ್ಷೇತ್ರಗಳಲ್ಲಿನ ಹಿನ್ನಡೆಯ ನಡುವೆಯೂ ಭಾರತದ ವಿದೇಶಿ ವಿನಿಮಯ ಮೀಸಲು ಸ್ಥಿರತೆಯನ್ನು ಕಾಯ್ದುಕೊಂಡಿದೆ. ಎಂದರೆ ಈ ಪ್ರಾಥಮಿಕ ವಲಯಗಳ ಹಿನ್ನಡೆಯ ನಡುವೆಯೇ ಸೇವಾ ವಲಯಕ್ಕೆ ಪ್ರಮುಖ ಕೊಡುಗೆ ನೀಡುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದಿಂದ ವ್ಯಾಪಾಕವಾಗಿ ವಿದೇಶಿ ವಿನಿಮಯ ಹರಿದು ಬರುತ್ತಲೇ ಇದೆ. ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಟಿ ಕಂಪನಿಗಳ ಸೇವೆ ದೇಶೀಯ ಮಾರುಕಟ್ಟೆಗೆ ಅತ್ಯಲ್ಪ. ಹೀಗಾಗಿ ಅಪನಗದೀಕರಣದ ನಂತರವೂ ಐಟಿ ಕ್ಷೇತ್ರದಲ್ಲಿ ಅಂತಹ ಹೆಚ್ಚಿನ ಬದಲಾವಣೆ ಆಗಲಿಲ್ಲ. ಆಟೋಮೆಷನ್ ಅದರ ಸುಧಾರಿತ ರೂಪವಾದ ಆರ್ಟಿಫಿಷಿಯನಲ್ ಇಂಟೆಲಿಜೆನ್ಸ್ (ಎಐ) ಎಂಬ ‘ಭೂತ’ದ ಪರಿಣಾಮ ಐಟಿ ಕಂಪನಿಗಳಲ್ಲಿ ಒಂದು ಹಂತದಲ್ಲಿ ಉದ್ಯೋಗ ಕಡಿತ ಮಾಡಿದ್ದು ನಿಜ. ಆದರೆ, ವಿದೇಶಗಳಲ್ಲಿ ಸೇವೆಗಳನ್ನು ವಿಸ್ತರಿಸಿದಂತೆಲ್ಲ ಐಟಿ ಕಂಪನಿಗಳು ಮತ್ತೆ ‘ಹೆಡ್ ಹಂಟ್’ ಪ್ರಾರಂಭಿಸಿದ್ದವು. ಐಟಿ ವಲಯದಲ್ಲಿ ಸ್ಥಿರತೆ ಕಂಡು ಬಂದಿತ್ತು. ಐಟಿ ಕ್ಷೇತ್ರದಲ್ಲಿ ಆಟ್ರಿಷನ್ ಮಟ್ಟ ಯಾವಾಗಲೂ ಶೇ.7-10ರ ಆಜುಬಾಜಿನಲ್ಲಿರುತ್ತದೆ. ಇದು ಬಹುತೇಕ ವಾಲೆಂಟರಿ ಆಟ್ರಿಷನ್ ಆಗಿರುತ್ತದೆ. ಅಂದರೆ, ಉದ್ಯೋಗಿಗಳೇ ಹೊಸ ಹೊಸ ಉದ್ಯೋಗ ಹುಡಿಕಿಕೊಂಡು ಕೆಲಸ ಬಿಡುತ್ತಾರೆ. ಕಂಪನಿಗಳೂ ಅಷ್ಟೇ ಬೇರೆ ಕಂಪನಿಗಳಲ್ಲಿನ ನುರಿತ ಪ್ರತಿಭಾವಂತರನ್ನು ಹೆಚ್ಚು ವೇತನ ನೀಡಿ ಬೇಟೆಯಾಡುತ್ತವೆ. ಅದು ಐಟಿ ಕ್ಷೇತ್ರದಲ್ಲಿನ ಉದ್ಯೋಗ ಸಮೃದ್ಧತೆಗೆ ಸಾಕ್ಷಿ. ಆದರೆ, ಈಗಿನ ಪರಿಸ್ಥಿತಿ ಭಿನ್ನವಾಗಿದೆ. ನಾನ್ ವಾಲೆಂಟರಿ ಆಟ್ರಿಷನ್ ಪ್ರಮಾಣ ಹೆಚ್ಚುತ್ತಿದೆ. ನಾನ್ ವಾಲೆಂಟರಿ ಆಟ್ರಿಷನ್ ಎಂದರೆ – ಕಂಪನಿಯೇ ಉದ್ಯೋಗಿಗಳಿಗೆ ಕೆಲಸ ಬಿಡುವಂತೆ ಸೂಚಿಸುವುದು ಅರ್ಥಾತ್ ಕೆಲಸದಿಂದ ಕಿತ್ತಾಕುವುದು.
ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್ವೇರ್ ಅಂಡ್ ಸರ್ವೀಸ್ ಕಂಪನಿ (ನ್ಯಾಸ್ಕಾಮ್) ಅಂಕಿ ಅಂಶಗಳ ಪ್ರಕಾರ ಕಳೆದ ಸಾಲಿನಲ್ಲಿ 56,000 ಉದ್ಯೋಗಿಗಳನ್ನು ಲೇಆಫ್ ಮಾಡಲಾಗಿತ್ತು. ಪ್ರಸಕ್ತ ವಿತ್ತೀಯ ವರ್ಷದಲ್ಲಿ ಇದುವರೆಗೆ ಲೇಆಫ್ ಆದವರ ಸಮಗ್ರ ಅಂಕಿಅಂಶಗಳು ನ್ಯಾಸ್ಕಾಮ್ ಬಳಿ ಇಲ್ಲ. ಆದರೆ, ವ್ಯಾಪಕವಾಗಿ ಕೇಳಿಬರುತ್ತಿರುವ ಲೇಆಫ್ ಬಗ್ಗೆ ನ್ಯಾಸ್ಕಾಮ್ ಆತಂಕ ವ್ಯಕ್ತಪಡಿಸಿದೆ. ಇತ್ತೀಚೆಗೆ ಚನ್ನೈನಲ್ಲಿ ಆಲ್ ಇಂಡಿಯಾ ಫೋರಂ ಫಾರ್ ಐಟಿ/ಐಟೀಸ್ ಎಂಪ್ಲಾಯೀಸ್ (ಎಐಎಫ್ಐಟಿಇ) ಮತ್ತು ಯೂನಿಯನ್ ಆಫ್ ಐಟಿ ಅಂಡ್ ಐಟೀಸ್ ಎಂಪ್ಲಾಯೀಸ್ (ಯುಎನ್ಐಟಿಇ) ಜತೆ ಮಾತುಕತೆ ನಡೆಸಿದೆ. ತಮಿಳುನಾಡಿನ ಕಾರ್ಮಿಕ ಆಯುಕ್ತರು ಆಯೋಜಿಸಿದ್ದ ಸಭೆಗೆ ಇನ್ಫೊಸಿಸ್, ಕಾಗ್ನಿಝಂಟ್, ಟಿಸಿಎಸ್, ವಿಪ್ರೊ, ಕ್ಯಾಪ್ಜೆಮಿನಿ, ಎಚ್ಸಿಎಲ್ ಟೆಕ್ನಾಲಜೀಸ್, ಐಬಿಎಂ, ಅಕ್ಸೆಂಚರ್, ಟೆಕ್ ಮಹಿಂದ್ರ, ವೆರಿಜಾನ್ ಡೇಟಾ ಸರ್ವೀಸ್, ಆರ್ಬಿಎಸ್ ಸಲುಷನ್, ಮೆರಿಲ್ ಟೆಕ್ನಾಲಜಿ ಸರ್ವೀಸ್ ಸೇರಿದಂತೆ 19 ಕಂಪನಿಗಳು ಪಾಲ್ಗೊಂಡಿದ್ದವು. ಕಂಪನಿಗಳು ಏಕಾಏಕಿ ಲೇಆಫ್ ಮಾಡುತ್ತಿರುವ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು.
ಬೆಂಗಳೂರು ಅತಿ ಹೆಚ್ಚು ಐಟಿ ಕಂಪನಿಗಳು ಮತ್ತು ಅತಿಹೆಚ್ಚು ಐಟಿ ಉದ್ಯೋಗಿಗಳನ್ನು ಹೊಂದಿರುವ ನಗರ. ಐಟಿ ಕ್ಷೇತ್ರದಲ್ಲಿನ ತ್ವರಿತ ಬೆಳವಣಿಗೆಯಿಂದಾಗಿ ಬೆಂಗಳೂರಿನ ನಗರ ಪ್ರದೇಶದ ಆರ್ಥಿಕತೆಯು ಸದೃಢವಾಗಿದೆ. ಒಂದು ಕಡೆ ಸರ್ಕಾರಕ್ಕೆ ತೆರಿಗೆ ಮೂಲದ ಆದಾಯವನ್ನು ತಂದುಕೊಡುವ ಐಟಿ ಕ್ಷೇತ್ರವು ಪರ್ಯಾಯ ಉದ್ಯೋಗ ಮತ್ತು ಅವಕಾಶಗಳನ್ನು ಕಲ್ಪಿಸಿದೆ. ಐಟಿ ಉದ್ಯೋಗಿಗಳಿಗೆ ಹೆಚ್ಚಿನ ವೇತನ ಬರುವುದರಿಂದ ಅವರ ದೈನಂದಿನ ವೆಚ್ಚವೂ ಹೆಚ್ಚಿದೆ. ನಗರದಲ್ಲಿ ಐದು ಲಕ್ಷ ಕ್ಯಾಬ್ ಗಳಿದ್ದರೆ, ಈ ಪೈಕಿ ಶೇ.50ಕ್ಕಿಂತಲೂ ಹೆಚ್ಚು ಕ್ಯಾಬ್ ಗಳನ್ನು ಐಟಿ ಉದ್ಯೋಗಿಗಳೇ ಬಳಸುತ್ತಾರೆ. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಬೆಳೆದಿದ್ದರೆ, ಐಟಿ ಉದ್ಯೋಗಿಗಳು ಮಾಡಿರುವ ಹೂಡಿಕೆಯೂ ಕಾರಣ. ಐಟಿ ಉದ್ಯೋಗಿಗಳಿಂದಾಗಿ ಮನೆ ಬಾಡಿಗೆಯಿಂದಲೇ ಜೀವನ ನಡೆಸುತ್ತಿರುವರು ಸ್ಥಿತಿಯೂ ಸುಧಾರಿಸಿದೆ. ಹೊಟೆಲ್ ಉದ್ಯಮವೂ ಬೆಳೆದಿದೆ.
ಒಂದು ವೇಳೆ ಐಟಿ ಕ್ಷೇತ್ರದಲ್ಲಿ ಉದ್ಯೋಗ ಕಡಿತ ಆದರೆ, ಐಟಿ ಉದ್ಯೋಗಿಗಳಷ್ಟೇ ನಿರುದ್ಯೋಗಿಗಳಾಗುವುದಿಲ್ಲ. ಕ್ಯಾಬ್ ಡ್ರೈವರ್ ಗಳು, ಕ್ಯಾಬ್ ಒನರ್ ಗಳು, ಮನೆ ಬಾಡಿಗೆ ಕೊಟ್ಟವರು, ಮೇಲ್ಮಧ್ಯಮ ವರ್ಗದ ಹೋಟೆಲ್ ಗಳು, ಮತ್ತು ಇದಕ್ಕೆ ಪೂರಕ ಸೇವೆ ಒದಗಿಸುವ ಲಕ್ಷಾಂತರ ಮಂದಿ ಉದ್ಯೋಗ ಮತ್ತು ಆದಾಯ ಕಳೆದುಕೊಳ್ಳುತ್ತಾರೆ. ಸುಮಾರು ಹತ್ತು ಲಕ್ಷದಷ್ಟಿರುವ ಐಟಿ ಉದ್ಯೋಗಿಗಳಿಂದಾಗಿಯೇ ಬೆಂಗಳೂರಿನ ಮೇಲ್ಮಮಧ್ಯಮವರ್ಗದ ಆರ್ಥಿಕತೆ ವ್ಯಾಪಕವಾಗಿದೆ. ಇದು ಕೆಳಹಂತದಲ್ಲಿ ಪರ್ಯಾಯ ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ.
ಒಂದು ವೇಳೆ ಐಟಿ ಉದ್ಯಮದಲ್ಲಿ ಈಗ ಕೇಳಿಬರುತ್ತಿರುವ ವೇಗದಲ್ಲೇ ಲೇಆಫ್ ಗಳಾಗುತ್ತಾ ಬಂದರೆ ಅದರ ವ್ಯತಿರಿಕ್ತ ಪರಿಣಾಮ ಬೆಂಗಳೂರಿನ ಆರ್ಥಿಕತೆ ಮೇಲಾಗುತ್ತದೆ. ಜತೆಗೆ ಕುಸಿಯುತ್ತಿರುವ ಆರ್ಥಿಕತೆಯು ಮತ್ತಷ್ಟು ತ್ವರಿತವಾಗಿ ಕುಸಿಯಲಾರಂಭಿಸುತ್ತದೆ. ಆಗ ಹೊಸ ಹೊಸ ಸವಾಲುಗಳು ಎದುರಾಗುತ್ತವೆ. ಅದು ಅಪನಗದೀಕರಣದ ಕ್ಷೋಭೆಯ ದಿನಗಳ ಮುಂದುವರಿದ ಭಾಗವಾದರೂ ಅಚ್ಚರಿ ಇಲ್ಲ.