ದೇಶದಲ್ಲಿ ಜನವರಿ 30ನೇ ತಾರೀಕಿಗೆ ಮೊದಲ ಕರೋನಾ ಸೋಂಕು ಪತ್ತೆಯಾದ ಸರಿಸುಮಾರು ಒಂದೂವರೆ ತಿಂಗಳ ಕಾಲ ಭಾರತ ಅಷ್ಟಾಗಿ ಎಚ್ಚೆತ್ತುಕೊಂಡಿರಲಿಲ್ಲ. ಕೇರಳದಲ್ಲಿ ಸೋಂಕು ಪತ್ತೆಯಾದರೂ ಮಾರ್ಚ್ ತಿಂಗಳ ಅರ್ಧದವರೆಗೂ ಯಾರೂ ಗಂಭೀರವಾಗಿರಲಿಲ್ಲ. ಅದಾಗಲೇ ವಿಶ್ವ ಆರೋಗ್ಯ ಸಂಸ್ಥೆ ಕೂಡಾ ʼಆರೋಗ್ಯ ತುರ್ತು ಪರಿಸ್ಥಿತಿʼ ಘೋಷಿಸಿತ್ತು. ಆದರೂ ʼಸರಿ ಹೋಗುತ್ತೆʼ ಎಂದು ಭಾವಿಸಿಕೊಂಡಿದ್ದ ಭಾರತದಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದಂತೆ ಲಾಕ್‌ಡೌನ್ ಘೋಷಿಸಲಾಯಿತು. ಮೊದಲ ಲಾಕ್‌ಡೌನ್ ಮಾರ್ಚ್ 24 ರಿಂದ ಎಪ್ರಿಲ್ ತಿಂಗಳ 14, ಎರಡನೇ ಹಂತದ ಲಾಕ್‌ಡೌನ್ ಎಪ್ರಿಲ್ 15ರಿಂದ ಮೇ 3 ಹಾಗೂ ಇದೀಗ ಮೂರನೇ ಹಂತದ ಕರೋನಾ ಲಾಕ್‌ಡೌನ್ ಮೇ 17ರ ವರೆಗೆ ಇರಲಿದ್ದು, ಮತ್ತೂ ಮುಂದುವರಿದರೆ ಅಚ್ಚರಿಯಿಲ್ಲ. ಆದರೆ ಲಾಕ್‌ಡೌನ್ ಮುಂದುವರಿಯುತ್ತಲೇ ಬಹುತೇಕ ರಾಜ್ಯಗಳಲ್ಲಿ ಲಾಕ್‌ಡೌನ್ ನಲ್ಲಿ ಒಂದಿಷ್ಟು ಸಡಿಲಿಕೆ ಕೂಡಾ ಮಾಡಲಾಗುತ್ತಿದೆ.
ಎರಡನೇ ಹಂತದ ಲಾಕ್‌ಡೌನ್ ಕಠಿಣಾತಿಕಠಿಣ ಎಂದಿದ್ದರೂ ಆ ನಂತರ ದಿನ ಕಳೆಯುತ್ತಲೇ ಕೊಂಚ ಸಡಿಲಿಕೆಯೂ ಆಗುತ್ತಾ ಬಂದಿತ್ತು. ಇದೀಗ ಮೂರನೇ ಹಂತದ ಲಾಕ್‌ಡೌನ್ ಬಹುತೇಕ ಸಡಿಲಿಕೆ ಆಗಿದ್ದರೂ ವಾಹನ ಸಂಚಾರ, ಶಾಲಾ-ಕಾಲೇಜು ಪರೀಕ್ಷೆಗಳಿಗೆ ಅವಕಾಶ ನೀಡಿಲ್ಲ. ಈಗಾಗಲೇ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿ ಒಂದೂವರೆ ತಿಂಗಳಾಗುತ್ತ ಬರುತ್ತಿದೆ. ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಇದು ಅನಿವಾರ್ಯ ಎನ್ನಲಾಗುತ್ತಿದ್ದರೂ, ಎರಡನೇ ಹಂತದ ಅಂದ್ರೆ ಮೇ 3ರ ವರೆಗೆ ಮಾಡಲಾದ ಲಾಕ್‌ಡೌನ್ ನಿಂದ ಎಷ್ಟರ ಮಟ್ಟಿಗೆ ಕರೋನಾ ಸೋಂಕು ತಡೆಗಟ್ಟೋದಕ್ಕೆ ಭಾರತಕ್ಕೆ ಸಾಧ್ಯವಾಗಿದೆ ಅನ್ನೋ ಪ್ರಶ್ನೆಯನ್ನೂ ಹುಟ್ಟುಹಾಕಿದೆ. ಕಾರಣ, ಮೇ 2ನೇ ತಾರೀಕಿನ ಒಂದೇ ದಿನ 2,411 ಹೊಸ ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿದೆ. ಮಾತ್ರವಲ್ಲದೇ ಎರಡನೇ ಲಾಕ್ ಡೌನ್ ಮುಗಿಯುತ್ತಿರುವ ಮೇ 3ರಂದು 2487 ಹೊಸ ಪ್ರಕರಣಗಳು ದೇಶಾದ್ಯಂತ ದಾಖಲಾಗಿದೆ.
ಆದರೆ ದೇಶದಲ್ಲಿ ಲಾಕ್‌ಡೌನ್ ನಿಂದ ಸಾವಿನ ಪ್ರಕರಣ ಕಡಿಮೆಯಾಗಿದ್ದರೂ, ದೇಶವೆನಿಸಿಕೊಂಡಷ್ಟರ ಮಟ್ಟಿಗೆ ನಿಯಂತ್ರಣದಲ್ಲಿಲ್ಲ ಅನ್ನೋದನ್ನ ʼIndia Spend’ ಅನ್ನೋ ಸಂಸ್ಥೆ ತನ್ನ ಅಧ್ಯಯನದಲ್ಲಿ ತಿಳಿಸಿದೆ. ಬೇರೆ ಎಂಟು ದೇಶಗಳ ಜೊತೆಗೆ ಭಾರತವನ್ನ ಹೋಲಿಸಿರುವ ಸಂಸ್ಥೆಯು ಆ ಎಂಟು ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕರೋನಾ ಸೋಂಕು ಹರಡುವಿಕೆ ಕಡಿಮೆಯಾಗಿಲ್ಲ ಅನ್ನೋದನ್ನ ಸ್ಪಷ್ಟಪಡಿಸಿದೆ. ರಷ್ಯಾ, ಬೆಲ್ಜಿಯಂ, ಜರ್ಮನಿ, ಯುನೈಟೆಡ್ ಕಿಂಗ್‌ಡಮ್ (ಬ್ರಿಟನ್), ಡೆನ್ಮಾರ್ಕ್, ಐರ್ಲ್ಯಾಂಡ್, ಫ್ರಾನ್ಸ್, ಸ್ಪೇಯ್ನ್ ಮುಂತಾದ ಎಂಟು ದೇಶಗಳ ಜೊತೆ ಭಾರತವನ್ನಿಟ್ಟು ನೋಡಿದಾಗ ಲಾಕ್‌ಡೌನ್ ಹಾಕಿದ ಹೊರತಾಗಿಯೂ ದೇಶದಲ್ಲಿ 38 ದಿನಗಳಲ್ಲಿ ಮಾರ್ಚ್ 25ರಿಂದ ಮೇ 2ರ ವರೆಗೆ ಅಂದ್ರೆ 38 ದಿನಗಳಲ್ಲಿ 97.35ರಷ್ಟು ಏರಿಕೆ ಕಂಡಿದ್ದನ್ನ ʼIndia Spend’ ಪತ್ತೆ ಹಚ್ಚಿದೆ. ಆ ಎಂಟು ದೇಶಗಳಲ್ಲಿ ಬಹುತೇಕ ಲಾಕ್‌ಡೌನ್ ತಿಂಗಳು, ಇನ್ನು ಕೆಲವೆಡೆ 20 ದಿನಗಳಲ್ಲಿಯೇ ಅಪಾಯದ ಹಂತ ತಲುಪಿತ್ತಾದರೂ, ಆ ನಂತರ ಕರೋನಾ ಸೋಂಕಿನ ಪ್ರಮಾಣ ತಡೆಗಟ್ಟುವಲ್ಲಿ ಸಾಕಷ್ಟು ಯಶಸ್ವಿಯಾಗಿದ್ದಾವೆ. ಆದರೆ ಭಾರತ ಮಾತ್ರ ಮೇ 2ರ ವರೆಗೂ ವ್ಯತಿರಿಕ್ತ ಫಲಿತಾಂಶ ಎದುರಿಸುತ್ತಿದೆ.
ಮೊದಲ ಹಂತದ ಲಾಕ್‌ಡೌನ್ ಘೋಷಿಸುವ ಹೊತ್ತಿಗೆ ಅಂದ್ರೆ ಮಾರ್ಚ್ 23ರ ವರೆಗೆ ಭಾರತದಲ್ಲಿ 519 ಪ್ರಕರಣಗಳು ಪತ್ತೆಯಾಗಿದ್ದರೆ, ಅದೇ ಮೊದಲ ಹಂತದ ಲಾಕ್‌ಡೌನ್ (ಎಪ್ರಿಲ್ 14) ಮುಗಿಯುವ ಹೊತ್ತಿಗೆ ಪ್ರಕರಣಗಳ ಸಂಖ್ಯೆ 10,815ಕ್ಕೆ ಏರಿತ್ತು. ಇನ್ನು ಎರಡನೇ ಹಂತದ ಲಾಕ್‌ಡೌನ್ (ಮೇ 3) ರಂದು ಕರೋನಾ ಸೋಂಕಿತರ ಸಂಖ್ಯೆ 40 ಸಾವಿರದ ಗಡಿ ದಾಟಿದೆ. ಸಾವಿನ ಸಂಖ್ಯೆ 1,300ಕ್ಕೂ ಅಧಿಕವಾಗಿದೆ. ಈ ಮಧ್ಯೆ ಮೇ 17ರ ವರೆಗೆ ಮತ್ತೆ ʼಕರೋನಾʼ ಲಾಕ್ ಡೌನ್ ಮುಂದುವರೆಸಿದ್ದು, ಮುಂದಿನ ಎರಡು ವಾರ ಅದೆಷ್ಟು ಮುಖ್ಯವಾಗುತ್ತೆ ಅನ್ನೋದು ತಿಳಿಯಲಿದೆ. ಈ ಹಂತದಲ್ಲಿ ಕರೋನಾ ಸೋಂಕು ನಿಯಂತ್ರಿಸದೇ ಹೋದಲ್ಲಿ ಮತ್ತಷ್ಟು ವಾರಗಳ ಕಾಲ ಕಠಿಣ ಲಾಕ್‌ಡೌನ್ ಅಳವಡಿಸಬೇಕಾದ ಅನಿವಾರ್ಯತೆಯೂ ಎದುರಾಗಲಿದೆ.
ಆದ್ದರಿಂದ ಒಂದಂತೂ ಸ್ಪಷ್ಟವಾಗುತ್ತಿದೆ. ಕೇವಲ ಲಾಕ್‌ಡೌನ್ ನಿಂದ ಮಾತ್ರ ರೋಗ ನಿಯಂತ್ರಿಸಲು ಸಾಧ್ಯವಿಲ್ಲ. ಬದಲಾಗಿ, ಮಾರ್ಚ್ 25 ರಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದಂತೆ, ಲಾಕ್‌ಡೌನ್ ಅಳವಡಿಕೆ ಜೊತೆಗೆ ʼಪತ್ತೆಹಚ್ಚುವಿಕೆ, ಪ್ರತ್ಯೇಕಿಸುವಿಕೆ, ಪರೀಕ್ಷೆ, ಹಾಗೂ ಚಿಕಿತ್ಸೆʼ ಇವುಗಳು ಕೂಡಾ ಜೊತೆಯಾಗಿ ನಡೆಯಬೇಕಿದೆ. ಸದ್ಯ ದೇಶಕ್ಕೆ ಬೇಕಿರುವುದು ಕೂಡಾ ಅದೇ. ಈ ವಿಚಾರದಲ್ಲಿ ಭಾರತ ಸಾಕಷ್ಟು ಹಿಂದುಳಿದಿದೆ. ಆ ಕಾರಣದಿಂದಾಗಿ ದೇಶದಲ್ಲಿ ಸೋಂಕು ಹರಡುವ ಸಾಧ್ಯತೆಗಳು ಇನ್ನೂ ಜಾಸ್ತಿಯಾಗುತ್ತಲೇ ಇವೆ. ಪ್ರತಿ 10 ಲಕ್ಷ ಜನರಲ್ಲಿ ಭಾರತ ಕೇವಲ 722 ಜನರನ್ನಷ್ಟೇ ಪರೀಕ್ಷಿಸಲು ಸಾಧ್ಯವಾಗಿದೆ. 130 ಕೋಟಿಗೂ ಅಧಿಕ ಜನಸಂಖ್ಯೆಯ ಭಾರತದಲ್ಲಿ ʼಪರೀಕ್ಷೆ ನಡೆಸುವಿಕೆʼ ಹಾಗೂ ʼಪತ್ತೆ ಹಚ್ಚುವಿಕೆʼ ಸವಾಲಾಗಿದ್ದೇ ರೋಗ ಉಲ್ಬಣಿಸಲು ಕಾರಣವಾಗುತ್ತಿದೆ.
ಆದ್ದರಿಂದ ಪ್ರತಿದಿನವೂ ಸೋಂಕಿತರ ಸಂಖ್ಯೆ ಅನ್ನೋದು ಏರಿಕೆ ಆಗುತ್ತಲೇ ಇದೆ. ಲಾಕ್‌ಡೌನ್ ಮೂರನೇ ಹಂತ ತಲುಪಿದರೂ ರೋಗ ಹರಡುವ ವೇಗ ಕಡಿಮೆಯಾಗಿಲ್ಲ. ರ್ಯಾಪಿಡ್ ಟೆಸ್ಟ್ ಸಮರ್ಪಕವಾಗಿ ಇಲ್ಲದಿರುವುದು, ಜನ ಸಾಮಾನ್ಯರಲ್ಲಿ ರೋಗದ ಕುರಿತಾದ ಅಸಡ್ಡೆ ಇವುಗಳೆಲ್ಲವೂ ರೋಗ ಮಿತಿ ಮೀರಿ ಹೋಗುವುದಕ್ಕೆ ಕಾರಣವಾಗುತ್ತಿದೆ. ದೇಶದಲ್ಲಿ ಕಳೆದ ಮಾರ್ಚ್ 3 ರಿಂದ ಮೇ 2 ರವರೆಗಿನ ಅಂಕಿ ಅಂಶಗಳನ್ನೇ ಪರಿಗಣಿಸೋದೆ ಆದರೂ ಈ ಪರಿಣಾಮ ಸ್ಪಷ್ಟವಾಗುತ್ತಿದೆ.
ಆದ್ದರಿಂದ ಜನಸಾಮಾನ್ಯರು ಲಾಕ್‌ಡೌನ್ ಸಡಿಲಿಕೆ ನೆಪವನ್ನೊಡ್ಡಿ ಅಸಡ್ಡೆ ತೋರಿದರೆ ಮೇ 17ರ ನಂತರ ಮತ್ತೆ ಕಠಿಣ ದಿನಗಳನ್ನ ನೋಡಬೇಕಾದೀತು. ಸರಕಾರದ ಆಜ್ಞೆಗಳಿಗಿಂತಲೂ ತಾನು ಸ್ವಯಂ ಇಚ್ಛೆಯಿಂದ ಸೋಂಕಿನ ವಿರುದ್ಧ ಹೋರಾಡುವ ನಿರ್ಧಾರ ಕೈಗೊಳ್ಳಬೇಕಿದೆ. ಮಾತ್ರವಲ್ಲದೇ ಸಾಮಾಜಿಕ ಅಂತರ, ಸುರಕ್ಷತೆಗಳನ್ನ ಪಾಲಿಸಬೇಕಿದೆ. ಅದಿಲ್ಲದೇ ಹೋದಲ್ಲಿ ಕರೋನಾ ನಮ್ಮನ್ನು ಬಿಟ್ಟು ಹೋಗದು. ಆದ್ದರಿಂದ ನಾವು ಬೀದಿಗಳಿಯುವ ಮುನ್ನ ನೂರು ಬಾರಿ ಆಲೋಚಿಸಬೇಕಿದೆ. ತನ್ನೊಬ್ಬನಿಂದಾಗಿ ಇಡೀ ಕುಟಂಬ ಕ್ವಾರೆಂಟೈನ್, ರೋಗ ಭಾದಿತರಾಗದಂತೆ ಆಲೋಚಿಸಬೇಕು. ಇದಕ್ಕೂ ಜಾಸ್ತಿಯಾಗಿ ಬೀದಿಗಿಳಿದು ಕರೋನಾ ವೈರಾಣು ಅನ್ನೋ ಮಹಾಮಾರಿಯನ್ನ ʼನಾನು ಮನೆಗೆ ಕರೆತರಲಾರೆʼ ಅನ್ನೋ ನಿರ್ಧಾರ ನಾವೇ ಮಾಡಿಕೊಳ್ಳಬೇಕಿದೆ.
ಕೃಪೆ: ದಿ ವೈರ್