ರಾಜ್ಯ ವಿಧಾನಸಭೆ 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಮತಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಸೋಮವಾರ ಫಲಿತಾಂಶ ಹೊರಬೀಳಲಿದ್ದು, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಲ್ಲಿ ಕುತೂಹಲ, ಆತಂಕ ತೀವ್ರಗೊಂಡಿದೆ. ಬಿಜೆಪಿ ಸರ್ಕಾರ ಸುಭದ್ರವೇ? ಅನರ್ಹ ಶಾಸಕರನ್ನು ಸೋಲಿಸಿಯೇ ತೀರುತ್ತೇವೆ ಎಂಬ ಕಾಂಗ್ರೆಸ್, ಜೆಡಿಎಸ್ ಹೋರಾಟಕ್ಕೆ ಗೆಲುವು ಸಿಗಲಿದೆಯೇ? ಬಿಜೆಪಿ ಸರ್ಕಾರ ಅಲ್ಪಮತಕ್ಕೆ ಕುಸಿದು ಮರುಮೈತ್ರಿಗೆ ವೇದಿಕೆ ಸಿದ್ಧಪಡಿಸಲು ಅವಕಾಶ ಸಿಗುವುದೇ? ಎಂಬೆಲ್ಲಾ ಪ್ರಶ್ನೆಗೆ ಮಧ್ಯಾಹ್ನದ ವೇಳೆ ಉತ್ತರ ಸಿಗಲಿದೆ.
ರಾಜ್ಯದಲ್ಲಿ ಉಪ ಚುನಾವಣೆಗಳೇನೂ ಹೊಸದಲ್ಲ. ಆದರೆ, ಒಂದು ಸರ್ಕಾರವನ್ನು ಉರುಳಿಸಿ ಇನ್ನೊಂದು ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದು ತನ್ನ ಬಹುಮತ ಉಳಿಸಿಕೊಳ್ಳಲು ನಡೆಯುತ್ತಿರುವ ಉಪ ಚುನಾವಣೆ ಇದೇ ಮೊದಲು. ಅದರಲ್ಲೂ ಸರ್ಕಾರ ಉರುಳಲು ಕಾರಣರಾದ ಶಾಸಕರನ್ನು ಅನರ್ಹರು ಎಂಬ ಸ್ಪೀಕರ್ ಆದೇಶವನ್ನು ಸುಪ್ರೀ ಕೋರ್ಟ್ ಕೂಡ ಎತ್ತಿಹಿಡಿದಿರುವುದರಿಂದ ಅನರ್ಹ ಶಾಸಕರು ಚುನಾವಣೆ ಎದುರಿಸುತ್ತಿರುವುದು ಕೂಡ ಇದೇ ಪ್ರಥಮ.
ಈ ಕಾರಣಗಳಿಂದಾಗಿಯೇ ಉಪ ಚುನಾವಣೆ ಫಲಿತಾಂಶ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲ ಮೂಡಿಸಿದೆ. ಇಲ್ಲಿ ಆಡಳಿತಾರೂಢ ಬಿಜೆಪಿ ಹೆಚ್ಚು ಸ್ಥಾನ ಗೆದ್ದರೆ ಸರ್ಕಾರ ಭದ್ರವಾಗುತ್ತದೆ ಎಂಬುದಷ್ಟೇ ಮುಖ್ಯವಾಗುವುದಿಲ್ಲ. ಅನರ್ಹ ಶಾಸಕರು ಹೆಚ್ಚು ಸ್ಥಾನಗಳಲ್ಲಿ ಗೆದ್ದರೆ ಅನರ್ಹತೆ ಕುರಿತು ಸ್ಪೀಕರ್, ಕೋರ್ಟ್, ರಾಜಕೀಯ ನಾಯಕರು ಏನೇ ಹೇಳಿದರೂ ಜನರ ಮುಂದೆ ಅವರೆಲ್ಲರೂ ಅರ್ಹರಾಗುತ್ತಾರೆ. ಒಂದೊಮ್ಮೆ ಸೋತರೆ ಸ್ಪೀಕರ್, ಕೋರ್ಟ್ ಗೆ ಮಾತ್ರವಲ್ಲ, ಜನರ ಮುಂದೆಯೂ ಅವರು ಅನರ್ಹರು ಎನಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಜೀವನದಲ್ಲಿ ಮತ್ತೆ ರಾಜಕೀಯವಾಗಿ ಮೇಲೆ ಬರುವುದು ಕೂಡ ಕಷ್ಟವಾಗಬಹುದು.
ಯಡಿಯೂರಪ್ಪ ವರ್ಸಸ್ ಸಿದ್ದರಾಮಯ್ಯ
ಇನ್ನು ಈ ಚುನಾವಣೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡುವಿನ ಹೋರಾಟವೂ ಹೌದು. ಏಕೆಂದರೆ, ಯಡಿಯೂರಪ್ಪ ಅವರಿಗೆ ಈ ಫಲಿತಾಂಶ ರಾಜ್ಯದಲ್ಲಿನ ಅಧಿಕಾರ ಉಳಿಸಿಕೊಳ್ಳುವ ಪ್ರಶ್ನೆಯಾದರೆ, ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿನ ತಮ್ಮ ಸ್ಥಾನ-ಮಾನ ಉಳಿಸಿಕೊಳ್ಳುವ ಹೋರಾಟ. ಒಟ್ಟು 15 ಕ್ಷೇತ್ರಗಳ ಪೈಕಿ ಬಿಜೆಪಿಗೆ ಕನಿಷ್ಠ 6 ಸ್ಥಾನ ಬಾರದೇ ಇದ್ದಲ್ಲಿ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ. ಅತ್ತ ಬಿಜೆಪಿ ಸರ್ಕಾರ ಉರುಳಿಸದೇ ಇದ್ದಲ್ಲಿ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಅವರನ್ನು ದೂರ ಸರಿಸುವ ಪ್ರಯತ್ನ ಮತ್ತಷ್ಟು ತೀವ್ರಗೊಳ್ಳಲಿದೆ.
ಇದನ್ನು ಅರಿತೇ ಪ್ರಚಾರದ ವೇಳೆ ಬಿಜೆಪಿ ರಣತಂತ್ರಗಳನ್ನು ರೂಪಿಸಿತು. ಯಡಿಯೂರಪ್ಪ ಅವರನ್ನು ಗೆಲ್ಲಿಸಲು ಪಕ್ಷದ ನಾಯಕರು, ಸಚಿವ ಸಂಪುಟದ ಸದಸ್ಯರು ಜತೆಗೆ ಗಟ್ಟಿಯಾಗಿ ನಿಂತು ಸಾಥ್ ಕೊಟ್ಟಿದ್ದರು. ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿಕೊಂಡು ಮುಗಿಬಿದ್ದಿದ್ದರು. ಆದರೆ, ಸಿದ್ದರಾಮಯ್ಯ ಅವರ ಪರಿಸ್ಥಿತಿ ಭಿನ್ನವಾಗಿತ್ತು. ಒಂದಿಬ್ಬರನ್ನು ಹೊರತುಪಡಿಸಿ ಪಕ್ಷದ ಬಹುತೇಕ ನಾಯಕರಿಂದ ಸ್ಪಂದನೆಯೇ ಸಿಕ್ಕಿರಲಿಲ್ಲ. ಬಹುತೇಕ ಏಕಾಂಗಿಯಾಗಿಯೇ ಅವರು ಕಾಣಿಸಿಕೊಂಡರು. ಒಟ್ಟಿನಲ್ಲಿ ಚುನಾವಣಾ ಕಣ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ನಡುವಿನ ಜಿದ್ದಾಜಿದ್ದಿಗೆ ವೇದಿಕೆಯಾಗಿದ್ದು ಮಾತ್ರ ಸುಳ್ಳಲ್ಲ.
ಸೋಲು-ಗೆಲುವಿನ ಲೆಕ್ಕಾಚಾರಗಳು ಹೇಗಿವೆ
ಸಮೀಕ್ಷೆಗಳ ಪ್ರಕಾರ ಅಥಣಿ, ಯಲ್ಲಾಪುರ, ಹಿರೇಕೆರೂರು, ವಿಜಯನಗರ, ಮಹಾಲಕ್ಷ್ಮಿ ಲೇಔಟ್, ಕೆ.ಆರ್.ಪುರ ಕ್ಷೇತ್ರಗಳು ಬಿಜೆಪಿಗೆ ಸುಲಭದ ತುತ್ತು. ಗೋಕಾಕ್ , ಚಿಕ್ಕಬಳ್ಳಾಪುರಗಳಲ್ಲಿ ಕಾಂಗ್ರೆಸ್ ನಿಂದ ತೀವ್ರ ಪೈಪೋಟಿ ಇದ್ದರೂ ಬಿಜೆಪಿ ಮೇಲುಗೈ ಸಾಧಿಸುತ್ತದೆ. ಇನ್ನು ರಾಣೆಬೆನ್ನೂರು, ಯಶವಂತಪುರ, ಶಿವಾಜಿನಗರ, ಕೆ.ಆರ್.ಪೇಟೆ, ಹೊಸಕೋಟೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಥವಾ ಜೆಡಿಎಸ್ ಮಧ್ಯೆ ಗೆಲ್ಲುವ ಸಮಾನ ಅವಕಾಶಗಳಿವೆ. ಹುಣಸೂರು, ಕಾಗವಾಡ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸುಲಭವಾಗಿ ಗೆಲ್ಲಬಹುದು ಎನ್ನುತ್ತವೆ ಸಮೀಕ್ಷೆಗಳು.
ಈ ಲೆಕ್ಕಾಚಾರದ ಪ್ರಕಾರವೇ ನೋಡಿದರೆ ಬಿಜೆಪಿಗೆ ಎಂಟು ಸ್ಥಾನ ಖಚಿತ. ಅದರ ಪ್ರಕಾರವೇ ಬಿಜೆಪಿ ತನ್ನ ಅಧಿಕಾರ ಉಳಿಸಿಕೊಳ್ಳತ್ತದೆ. ಇನ್ನು ಫಿಫ್ಟಿ-ಫಿಫ್ಟಿ ಅವಕಾಶಗಳಿರುವ ಐದು ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳು ಬಂದರೂ ಸರ್ಕಾರ ಮತ್ತಷ್ಟು ಗಟ್ಟಿಯಾಗುತ್ತದೆ. ಈ ಕಾರಣಕ್ಕಾಗಿಯೇ ಬಿಜೆಪಿಯವರು ಸಮೀಕ್ಷೆ ಆಧರಿಸಿ ಸೋಮವಾರದ ಫಲಿತಾಂಶ ಗೆಲುವಿನ ಅಧಿಕೃತ ಘೋಷಣೆಯಷ್ಟೇ ಎಂಬ ಖುಷಿಯಲ್ಲಿದೆ.
ಇನ್ನು ಕಾಂಗ್ರೆಸ್ ಹಾಕಿರುವ ಲೆಕ್ಕದ ಪ್ರಕಾರ ಬಿಜೆಪಿ ಅಧಿಕಾರ ಉಳಿಸಿಕೊಳ್ಳಬಹುದಾದರೂ ನಿರೀಕ್ಷೆಯಷ್ಟು ಸ್ಥಾನ ಅದಕ್ಕೆ ಸಿಗುವುದಿಲ್ಲ. ಪ್ರಕಾರ ಅಥಣಿ, ಯಲ್ಲಾಪುರ, ಹಿರೇಕೆರೂರು, ವಿಜಯನಗರ, ಮಹಾಲಕ್ಷ್ಮಿ ಲೇಔಟ್, ಕೆ.ಆರ್.ಪುರಗಳಲ್ಲಿ ಮಾತ್ರ ಬಿಜೆಪಿ ಗೆಲ್ಲಬಹುದು. ಇನ್ನು ಕೆ.ಆರ್.ಪೇಟೆ ಮತ್ತು ಯಶವಂತಪುರ ಜೆಡಿಎಸ್ ಪಾಲಾದರೆ, ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸುತ್ತದೆ. ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಗೆಲ್ಲಬಹುದು. ಈ ರೀತಿಯ ಫಲಿತಾಂಶ ಬಂದರೆ ಸದ್ಯ ಬಿಜೆಪಿ ಸರ್ಕಾರ ಸೇಫ್ ಆದರೂ ಖಾಲಿ ಇರುವ ಇನ್ನೂ ಎರಡು ಕ್ಷೇತ್ರಗಳ ಉಪ ಚುನಾವಣೆ ಬಳಿಕ ಮತ್ತೆ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಬಿಜೆಪಿ ಸರ್ಕಾರ ಉರುಳಿಸಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ನಾಯಕರದ್ದು.
ಜೆಡಿಎಸ್ ನಾಯಕರೂ ಇದೇ ರೀತಿಯ ಲೆಕ್ಕಾಚಾರದಲ್ಲಿ ಇದ್ದಾರೆ. ಆದರೂ ಅಪಾಯ ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಒಮ್ಮೆ ಕಾಂಗ್ರೆಸ್, ಇನ್ನೊಮ್ಮೆ ಬಿಜೆಪಿ ಪರ ಮಾತನಾಡುತ್ತಾ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಅಂತಿಮವಾಗಿ ಗೆದ್ದೆತ್ತಿನ ಬಾಲ ಹಿಡಿಯುವುದು ಅವರ ಉದ್ದೇಶ.
ಆದರೆ, ಇವರೇನೇ ಲೆಕ್ಕಾಚಾರ ಹಾಕಿದರೂ ಅಂತಿಮ ನಿರ್ಧಾರ ಮತದಾರರದ್ದು. ಅದು ಎಲೆಕ್ಟ್ರಾನಿಕ್ ಮತಯಂತ್ರದೊಳಗೆ ಗಟ್ಟಿಯಾಗಿದೆ. ಏಕೆಂದರೆ, ಸಾಕಷ್ಟು ಉಪ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಮತ್ತು ಸಮೀಕ್ಷೆಗಳ ಲೆಕ್ಕಾಚಾರ ಏರುಪೇರಾಗಿದೆ. ಹೀಗಾಗಿ ಈ ಚುನಾವಣೆಯ ಪರಿಸ್ಥಿತಿ ಏನು ಎಂಬ ಬಗ್ಗೆ ಸೋಮವಾರ ಮಧ್ಯಾಹ್ನದವರೆಗೆ ಕಾದು ನೋಡಬೇಕು.