ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತದೆಯೇ ಇಲ್ಲವೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಅನರ್ಹತೆ ಪ್ರಶ್ನಿಸಿ 17 ಶಾಸಕರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇನ್ನೂ ತನ್ನ ತೀರ್ಪು ನೀಡಬೇಕಿದೆ. ತೀರ್ಪು ಹೊರಬಿದ್ದ ಬಳಿಕ ಅನರ್ಹ ಶಾಸಕರ ಸ್ಥಿತಿ ಏನಾಗುತ್ತದೆ? ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗುವುದೇ, ಅನರ್ಹತೆ ರದ್ದಾದರೆ ಅನರ್ಹರ ಪೈಕಿ ಕೆಲವರು ಕಾಂಗ್ರೆಸ್ಸಿನಲ್ಲೇ ಮುಂದುವರಿಯುತ್ತಾರೆಯೇ ಎಂಬ ಪ್ರಶ್ನೆಗಳಿಗೂ ಇನ್ನೂ ಉತ್ತರ ಸಿಕ್ಕಿಲ್ಲ. ಇದರ ಮಧ್ಯೆಯೇ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಚುನಾವಣಾ ಸಿದ್ಧತೆಗಳನ್ನು ಚುರುಕುಗೊಳಿಸಿವೆ. ಈ ವಿಚಾರದಲ್ಲಿ ಎಲ್ಲಕ್ಕಿಂತ ಮುಂದೆ ಇರುವ ಕಾಂಗ್ರೆಸ್ 15 ಕ್ಷೇತ್ರಗಳ ಪೈಕಿ ಎಂಟು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನೂ ಅಂತಿಮಗೊಳಿಸಿದೆ.
ಇಲ್ಲಿ ಅದಕ್ಕಿಂತ ಪ್ರಮುಖ ವಿಚಾರವೊಂದಿದೆ. ರಾಜ್ಯ ಕಾಂಗ್ರೆಸ್ ನಲ್ಲಿ ಮಾಜಿ ಮುಖ್ಯಮಂತ್ರಿ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಮೂಲ ಕಾಂಗ್ರೆಸ್ಸಿಗರ ಅಸಮಾಧಾನ ಹೆಚ್ಚುತ್ತಿರುವ ನಡುವೆಯೂ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೇ ಮಣೆ ಹಾಕಿದೆ. ಅಂತಿಮಗೊಂಡಿರುವ ಎಂಟು ಅಭ್ಯರ್ಥಿಗಳ ಆಯ್ಕೆಯಲ್ಲಿ ಸಿದ್ದರಾಮಯ್ಯ ಅವರ ಕೈ ಮೇಲಾಗಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಒಪ್ಪಿಗೆ ಪಡೆದು ಪಕ್ಷದ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಬಿಡುಗಡೆ ಮಾಡಿರುವ ಎಂಟು ಅಭ್ಯರ್ಥಿಗಳ ಪೈಕಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು ಮತ್ತು ಆಪ್ತ ವಲಯದಲ್ಲಿದ್ದವರ ಕುಟುಂಬದವರಿಗೆ ಅವಕಾಶ ಸಿಕ್ಕಿದೆ. ಇದರೊಂದಿಗೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿಯನ್ನೂ ಕಾಂಗ್ರೆಸ್ ವರಿಷ್ಠರು ಸಿದ್ದರಾಮಯ್ಯ ಹೆಗಲಿಗೆ ಹೊರಿಸಿದ್ದಾರೆ ಎಂಬುದು ಸ್ಪಷ್ಟ. ಜಾರಿ ನಿರ್ದೇಶನಾಲಯದ ಕುಣಿಕೆಯಲ್ಲಿ ಸಿಕ್ಕಿಬಿದ್ದಿರುವ ಡಿ. ಕೆ. ಶಿವಕುಮಾರ್ ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದರೂ ಅವರಿಗೆ ಉಪ ಚುನಾವಣೆಯಲ್ಲಿ ಆದ್ಯತೆ ಸಿಕ್ಕಿಲ್ಲ.
ಎಂಟರಲ್ಲಿ ಸಿದ್ದರಾಮಯ್ಯ ಆಪ್ತರಿಗೇ ಸಿಂಹಪಾಲು
ಸಿದ್ದರಾಮಯ್ಯ ಅವರ ಒಂದು ಕಾಲದ ಆಪ್ತ, ಅವರದ್ದೇ ಸಮುದಾಯಕ್ಕೆ ಸೇರಿರುವ ಅನರ್ಹ ಶಾಸಕ ಎಂ. ಟಿ. ಬಿ. ನಾಗರಾಜ್ ಪ್ರತಿನಿಧಿಸುವ ಹೊಸಕೋಟೆ ಕ್ಷೇತ್ರದಿಂದ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಹೆಬ್ಟಾಳ ಶಾಸಕ ಬೈರತಿ ಸುರೇಶ್ ಅವರ ಪತ್ನಿ ಪದ್ಮಾವತಿ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ. ಇದರೊಂದಿಗೆ ಬಿಜೆಪಿ ಟಿಕೆಟ್ ಸಿಗುವುದಿಲ್ಲ ಎಂದು ರೆಬೆಲ್ ಆಗಿರುವ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಸಂಸದ ಬಿ. ಎನ್. ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಅವರಿಗೆ ಕಾಂಗ್ರೆಸ್ ಬಾಗಿಲು ಮುಚ್ಚಿದೆ.
ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಿಂದ ಟಿಕೆಟ್ ಗಾಗಿ ತೀವ್ರ ಲಾಬಿ ನಡೆಸಿದ್ದ ಡಿ. ಕೆ. ಶಿವಕುಮಾರ್ ಶಿಷ್ಯ ಹಾಗೂ 2018 ರ ವಿಧಾನಸಭೆ ಚುನಾವಣೆಯ ಅಭ್ಯರ್ಥಿ ಮಂಜುನಾಥ್ ಅವರಿಗೆ ಈ ಬಾರಿ ಟಿಕೆಟ್ ಸಿಕ್ಕಿಲ್ಲ. ಅವರ ಬದಲಾಗಿ ಸಿದ್ದರಾಮಯ್ಯ ಶಿಷ್ಯ ಹಾಗೂ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎಂ. ಶಿವರಾಜು ಅವರಿಗೆ ಮಣೆ ಹಾಕಲಾಗಿದೆ. ಕಾಂಗ್ರೆಸ್ ನ ಅನರ್ಹ ಶಾಸಕ ಭೈರತಿ ಬಸವರಾಜು ಅವರ ಕ್ಷೇತ್ರವಾಗಿರುವ ಕೆ. ಆರ್. ಪುರ ಕ್ಷೇತ್ರದಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂಬ ಕೂಗು ಜೋರಾಗಿತ್ತು. ಮೂಲ ಕಾಂಗ್ರೆಸ್ಸಿಗರೂ ಇದಕ್ಕಾಗಿ ಪಟ್ಟುಹಿಡಿದಿದ್ದರು. ಅದರೆ, ಅದಾವುದನ್ನೂ ಪರಿಗಣಿಸದೆ ವಿಧಾನ ಪರಿಷತ್ ಸದಸ್ಯ ಎಂ. ನಾರಾಯಣಸ್ವಾಮಿ ಟಿಕೆಟ್ ಪಡೆದಿದ್ದಾರೆ. ವರಿಷ್ಠರ ಈ ತೀರ್ಮಾನದ ಹಿಂದೆಯೂ ಸಿದ್ದರಾಮಯ್ಯ ಅವರ ಕೈವಾಡವಿದೆ ಎಂಬ ಮಾತು ಪಕ್ಷದಲ್ಲಿ ಕೇಳಿಬರುತ್ತಿದೆ.
ಶತ್ರುವಿನ ಶತ್ರು ಮಿತ್ರನಾದಾಗ!
ಕೇಂದ್ರದ ಮಾಜಿ ಸಚಿವರಾದ ಕೋಲಾರ ಕ್ಷೇತ್ರದ ಮಾಜಿ ಸಂಸದ ಕೆ. ಎಚ್. ಮುನಿಯಪ್ಪ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದ ಮಾಜಿ ಸಂಸದ ಡಾ. ಎಂ. ವೀರಪ್ಪ ಮೊಯ್ಲಿ ಅವರ ಮಧ್ಯೆ ಮೊದಲಿನಿಂದಲೂ ಭಿನ್ನಾಭಿಪ್ರಾಯವಿದೆ. ಕೆ. ಎಚ್. ಮುನಿಯಪ್ಪ ಅವರು ಮೂಲತಃ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಶಿಡ್ಲಘಟ್ಟ ಮೂಲದವರು. ಹೀಗಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಮಾಡುವಾಗ ಅವರನ್ನು ಪರಿಗಣಿಸುವುದು ಹಿಂದಿನ ಸಂಪ್ರದಾಯವಾಗಿತ್ತು. ಆದರೆ, ಸಿದ್ದರಾಮಯ್ಯ ಅವರು ರಾಜ್ಯ ಕಾಂಗ್ರೆಸ್ ಮುಂಚೂಣಿ ನಾಯಕರಾದ ಮೇಲೆ ಆ ಸಂಪ್ರದಾಯಕ್ಕೆ ತಿಲಾಂಜಲಿ ನೀಡಿದ್ದರು. ಈ ಬಾರಿಯೂ ಅದನ್ನೇ ಮುಂದುವರಿಸಲಾಗಿದೆ. ಶತ್ರುವಿನ ಶತ್ರು ಮಿತ್ರ ಎಂಬಂತೆ ಕಾಂಗ್ರೆಸ್ ಅನರ್ಹ ಶಾಸಕ ಡಾ. ಸುಧಾಕರ್ ಪ್ರತಿನಿಧಿಸುವ ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ ಅವರ ಶಿಷ್ಯ ಎಂ. ಆಂಜಿನಪ್ಪ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
2013ರಲ್ಲಿ ಟಿಕೆಟ್ ಸಿಗದೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ಪಕ್ಷ ತೊರೆದಿದ್ದ ಆಂಜಿನಪ್ಪ ಕಳೆದ ಚುನಾವಣೆ ಸಂದರ್ಭದಲ್ಲಿ ಮತ್ತೆ ಸೇರಿಕೊಂಡಿದ್ದರು. ಇಲ್ಲಿ ಅವರಿಗೆ ಟಿಕೆಟ್ ನೀಡುವುದು ಕೆ. ಎಚ್. ಮುನಿಯಪ್ಪ ಅವರಿಗೆ ಸುತಾರಾಂ ಇಷ್ಟವಿರಲಿಲ್ಲ. ಹೀಗಿದ್ದರೂ ಆಂಜಿನಪ್ಪ ಅವರಿಗೆ ಟಿಕೆಟ್ ಸಿಕ್ಕಿದ್ದು, ಇದರ ಹಿಂದೆಯೂ ಸಿದ್ದರಾಮಯ್ಯ ಅವರ ಕೃಪಾಕಟಾಕ್ಷವಿದೆ.
ಉತ್ತರ ಕನ್ನಡ ಜಿಲ್ಲೆ ಕಾಂಗ್ರೆಸ್ ಪಕ್ಷದ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಪ್ರತಿನಿಧಿಸುತ್ತಿದ್ದ ಯಲ್ಲಾಪುರ ಕ್ಷೇತ್ರದಲ್ಲಿ ಆರ್. ವಿ. ದೇಶಪಾಂಡೆ ಆಪ್ತ ಭೀಮಣ್ಣ ನಾಯ್ಕ ಅವರಿಗೆ ಸುಲಭವಾಗಿ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ. ದೇಶಪಾಂಡೆ ಮತ್ತು ಸಿದ್ದರಾಮಯ್ಯ ಇಬ್ಬರೂ ಜನತಾ ಪರಿವಾರ ಮೂಲದವರಾಗಿದ್ದು, ಇವರ ನಡುವೆ ಉತ್ತಮ ಬಾಂಧವ್ಯ ಮುಂದುವರಿದಿರುವುದು ಭೀಮಣ್ಣ ನಾಯ್ಕ್ ಟಿಕೆಟ್ ಪಡೆಯಲು ಕಾರಣವಾಗಿದೆ.
ಜೆಡಿಎಸ್ ಅನರ್ಹ ಶಾಸಕ ಎಚ್. ವಿಶ್ವನಾಥ್ ಪ್ರತಿನಿಧಿಸುತ್ತಿದ್ದ ಹುಣಸೂರು ಕ್ಷೇತ್ರದಲ್ಲೂ ಸಿದ್ದರಾಮಯ್ಯ ಅವರ ಆಪ್ತ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರಿಗೆ ಪಕ್ಷದ ಟಿಕೆಟ್ ಸಿಕ್ಕಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಎಚ್.ವಿಶ್ವನಾಥ್ ವಿರುದ್ಧ ಪರಾಭವಗೊಂಡಿದ್ದ ಮಂಜುನಾಥ್, ಸೋಲಿನ ಹೊಣೆಯನ್ನು ಕಾರ್ಯಕರ್ತರ ಮೇಲೆ ಹಾಕಿದ್ದರು. ನಾನು ಮತದಾರರಿಗೆ ಹಂಚಲು ಕೊಟ್ಟಿದ್ದ ಹಣವನ್ನು ಕಾರ್ಯಕರ್ತರು ಬೆಟ್ಟಿಂಗ್ ಆಡಿ ಸೋತಿದ್ದಾರೆ. ಅವರು ದುಡ್ಡು ಹಾಳು ಮಾಡಿಕೊಂಡಿದ್ದಾರೆ. ನನ್ನ ಬಳಿ ಕೆಟ್ಟ ಹುಡುಗರಿದ್ದಾರೆ ಎನ್ನುವ ಮೂಲಕ ಸ್ಥಳೀಯ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣರಾಗಿದ್ದರು. ಹೀಗಾಗಿ ಅವರಿಗೆ ಉಪ ಚುನಾವಣೆ ಟಿಕೆಟ್ ಬೇಡ ಎಂಬ ಒತ್ತಾಯ ಕಾರ್ಯಕರ್ತರ ಕಡೆಯಿಂದ ಬಂದರೂ ಅದನ್ನು ಲೆಕ್ಕಿಸದೆ ಸಿದ್ದರಾಮಯ್ಯ ಅವರು ತಮ್ಮ ಆಪ್ತನ ಪರ ನಿಂತು ಟಿಕೆಟ್ ಕೊಡಿಸಿದ್ದಾರೆ. ಇನ್ನು ಹಿರೆಕೆರೂರು ಕ್ಷೇತ್ರಕ್ಕೆ ಎಚ್. ಕೆ. ಪಾಟೀಲ್ ಆಪ್ತರಾಗಿರುವ ಬಿ. ಎಚ್. ಬನ್ನಿಕೋಡ್ ಹಾಗೂ ರಾಣೆಬೆನ್ನೂರು ಕ್ಷೇತ್ರಕ್ಕೆ ನಿರೀಕ್ಷೆಯಂತೆ ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ. ಬಿ. ಕೋಳಿವಾಡ್ ಅವರಿಗೆ ಟಿಕೆಟ್ ನೀಡಲಾಗಿದೆ. ಸದ್ಯ ಕೋಳಿವಾಡ್ ಅವರು ಮಾತ್ರ ಸಿದ್ದರಾಮಯ್ಯ ಅವರ ವಿರೋಧದ ನಡುವೆಯೂ ಪಕ್ಷದ ಟಿಕೆಟ್ ಪಡೆದವರು.
ಇನ್ನುಳಿದ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ತೀವ್ರ ಗೊಂದಲವಿದೆ. ಜತೆಗೆ ಅನರ್ಹತೆ ರದ್ದಾದರೆ ಒಂದಿಬ್ಬರು ಶಾಸಕರು ಪಕ್ಷದಲ್ಲೇ ಉಳಿದುಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಕಾರಣಕ್ಕಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿಲ್ಲ. ಬಿಜೆಪಿ ಟಿಕೆಟ್ ಸಿಗದೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಒಲವು ತೋರಿದವರಿಗೆ ಟಿಕೆಟ್ ನೀಡುವ ಬಗ್ಗೆ ಯೋಚನೆ ನಡೆಯುತ್ತಿದೆ. ಅದರಲ್ಲೂ ಕಾಗವಾಡ ಕ್ಷೇತ್ರದಲ್ಲಿ ಮಾಜಿ ಶಾಸಕ ರಾಜು ಕಾಗೆ ಅವರು ತಮಗೆ ಬಿಜೆಪಿ ಟಿಕೆಟ್ ಸಿಗದಿದ್ದಲ್ಲಿ ಕಾಂಗ್ರೆಸ್ ಸೇರಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಈ ಏಳು ಕ್ಷೇತ್ರಗಳಿಗೆ ಅನರ್ಹ ಶಾಸಕರ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪು ಬಂದ ಮೇಲೆ ಟಿಕೆಟ್ ಹಂಚಿಕೆಯಾಗಲಿದೆ.
ಸಿದ್ದರಾಮಯ್ಯಗೆ ಖೆಡ್ಡಾ ತೋಡುತ್ತಿದ್ದಾರೆಯೇ?
ಹೀಗೊಂದು ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ನಮ್ಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಹೇಳುತ್ತಿದ್ದರೂ, ಅವರಿಬ್ಬರ ಮಧ್ಯೆ ಬೆಂಕಿ ಹಚ್ಚಲು ಮೂಲ ಕಾಂಗ್ರೆಸ್ಸಿಗರು ಕಾಯುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಬಗ್ಗೆ ಇರುವ ಅಸಮಾಧಾನವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕಮಾಂಡ್, ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಸಾಮರ್ಥ್ಯವನ್ನು ಪಣಕ್ಕಿಟ್ಟು ಗೆಲುವಿನ ಲೆಕ್ಕಾಚಾರ ಹಾಕಿದೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರದರ್ಶನ ತೃಪ್ತಿದಾಯಕವಾಗದೇ ಇದ್ದರೆ ಆಗ ಸಿದ್ದರಾಮಯ್ಯ ಅವರನ್ನು ಹೊಣೆ ಮಾಡಿ ನಾಯಕತ್ವ ಬದಲಿಸಲು ರಾಜ್ಯ ಕಾಂಗ್ರೆಸ್ ನಿಂದ ಒತ್ತಡ ಬಂದರೆ ಅದನ್ನು ಪರಿಗಣಿಸಲು ಯೋಚಿಸಿದ್ದಾರೆ. ವರಿಷ್ಠರ ಈ ಯೋಚನೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಮೂಲ ಕಾಂಗ್ರೆಸ್ಸಿಗರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಸಕ್ರಿಯವಾಗಿ ಕೆಲಸ ಮಾಡದೆ ಸಿದ್ದರಾಮಯ್ಯ ಅವರಿಗೆ ಖೆಡ್ಡಾ ತೋಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.