ಕರೋನಾವನ್ನು ವಿಶ್ವವೇ ಮಹಾಮಾರಿ ಎಂದು ಬಣ್ಣಿಸಿದೆ. ಇಂಥ ಮಹಾಮಾರಿ ಮನೆಗೆ ವಕ್ಕರಿಸಿದಾಗ ಮನೆಯ ಯಜಮಾನ ಅಂದರೆ ದೇಶ ಮುನ್ನಡೆಸುವ ನಾಯಕ ಅಥವಾ ಸರ್ಕಾರ, ಮನೆಯ ಮಂದಿ ಬಗ್ಗೆ ಅಂದರೆ ದೇಶವಾಸಿಗಳ ಬಗ್ಗೆ ಯಾವ ರೀತಿ ವರ್ತಿಸಬೇಕು? ಎಂಬುದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರಕ್ಕೆ ಗೊತ್ತಿಲ್ಲ. ಅಥವಾ ಗೊತ್ತಿದ್ದೂ ಹಾಗೇ ಮಾಡುತ್ತಿಲ್ಲ. ಇಂಥ ದುರ್ದಿನಗಳಲ್ಲಿ ರಾಜಕಾರಣ ಮೊದಲಾಗಬಾರದು. ಆದರೆ ಮೋದಿ ಮತ್ತವರ ಸರ್ಕಾರ ಅದನ್ನೇ ಮಾಡುತ್ತಿದೆ.
ಹೀಗೆ ನೇರವಾಗಿ, ಕಟುವಾಗಿ ಹೇಳುವುದಕ್ಕೆ ಹಿನ್ನೆಲೆ ಇದೆ. ಕರೋನಾ ಎಂಬ ಮಹಾಮಾರಿ ದೇಶವನ್ನು ಪ್ರವೇಶ ಮಾಡಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಚ್ಚರಿಸಿದ್ದರು. ಇದರಿಂದ ಉಂಟಾಗುವ ಭೀಕರವಾದ ಆರ್ಥಿಕ ಪರಿಣಾಮದ ಬಗ್ಗೆಯೂ ಮಾತನ್ನಾಡಿದ್ದರು. ರಾಹುಲ್ ಗಾಂಧಿ ಅವರ ಆ ಎಚ್ಚರಿಕೆಯ ಟ್ವೀಟ್ ಗಳಿಗೆ ಬಿಜೆಪಿಯಲ್ಲಿ ‘ಸಜ್ಜನ’ ಎಂದೇ ಕರೆಸಿಕೊಳ್ಳುವ ಕೇಂದ್ರ ಆರೋಗ್ಯ ಮಂತ್ರಿ ಡಾ. ಹರ್ಷವರ್ಧನ್ ತಮ್ಮ ಪಕ್ಷದ ‘ಫ್ರಿಂಜ್ ಎಲಿಮೆಂಟ್ಸ್’ಗಳ ರೀತಿಯಲ್ಲಿ ಉತ್ತರಿಸಿದ್ದರು. ತಾಂತ್ರಿಕವಾಗಿ ಕಾಂಗ್ರೆಸ್ ಪ್ರತಿಪಕ್ಷವಲ್ಲ, ರಾಹುಲ್ ಗಾಂಧಿ ಪ್ರತಿಪಕ್ಷದ ನಾಯಕ ಅಲ್ಲ. ಅಥವಾ ಬೇರೆ ನಾಯಕರೇ ಇರಲಿ. ಪ್ರತಿಪಕ್ಷದ ಪಾಳೆಯದಿಂದ ಇಂಥದೊಂದು ಎಚ್ಚರಿಕೆಯ ಮಾತು ಕೇಳಿಬಂದಾಗ ಅವರನ್ನು ಸಂಪರ್ಕಿಸುವ ಅಥವಾ ಪ್ರತಿಕ್ರಿಯಿಸುವ ಸೌಜನ್ಯ ತೋರದೇ ಇದ್ದರೂ ಕಡೆಪಕ್ಷ ಅವರು ಹೇಳುವ ಸಮಸ್ಯೆ ಬಗ್ಗೆ ಗಮನ ಹರಿಸಬೇಕಿತ್ತಲ್ಲವೇ? ಅದಾಗಲಿಲ್ಲ.
ರಾಹುಲ್ ಗಾಂಧಿ ಅವರ ವಿಚಾರ ಬಿಟ್ಟುಬಿಡಿ. ನೆರೆಯ ಚೀನಾದಲ್ಲಿ ಈ ವರ್ಷದ ಆರಂಭದಲ್ಲೇ ಕರೋನಾ ಕಾಣಿಸಿಕೊಂಡಿತು. ಹುವಾನ್ ನಲ್ಲಿ ಹುಟ್ಟಿಕೊಂಡ ಕಿಲ್ಲರ್ ಕರೋನಾ ಹೊಸ ವರ್ಷಾಚರಣೆ ವೇಳೆ ಚೀನಾದ್ಯಂತ ಹರಡಿತು. ನಂತರ ಇಟಲಿಗೆ ಪಸರಿಸಿತು. ಈ ಬೆಳವಣಿಗೆ ಬಗ್ಗೆ ಆಗಾಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕಪಡಿಸುತ್ತಲೇ ಇತ್ತು. ಪಕ್ಕದ ಮನೆಗೆ ಬೆಂಕಿ ಬಿದ್ದಾಗಲಾದರೂ ಎಚ್ಚೆತ್ತುಕೊಳ್ಳಬೇಕಿತ್ತಲ್ಲವೇ? ಅದಾಗಲಿಲ್ಲ.
ಈಗ ’21ದಿನ ಎಂಥದೇ ಪರಿಸ್ಥಿತಿ ಎದುರಾದರೂ ಮನೆ ಬಿಟ್ಟು ಹೊರಬರಬೇಡಿ, ಒಂದೊಮ್ಮೆ ಈ ಲಾಕ್ ಡೌನ್ ಉಲ್ಲಂಘಿಸಿದರೆ ಭಾರತ 21ವರ್ಷ ಹಿಂದೆ ಹೋಗಲಿದೆ. ಕರೋನಾ ಮಹಾಮಾರಿ ಅಂತಹ ದುಷ್ಪರಿಣಾಮ ಬೀರಲಿದೆ’ ಎಂದು ದೇಶವಾಸಿಗಳಿಗೆ ಎಚ್ಚರಿಕೆ ಕೊಟ್ಟ ಪ್ರಧಾನ ಮಂತ್ರಿ ಆಲಿಯಾಸ್ ಪ್ರಧಾನ ಸೇವಕರೇ ನೀವು 21 ದಿನ ಮೊದಲೇ ಎಚ್ಚೆತ್ತುಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಅಲ್ಲವೇ? ದೇಶ ಮುನ್ನಡೆಸುವ ನಾಯಕನಿಂದ ಇಂಥದೊಂದು ದೂರದೃಷ್ಟಿಯನ್ನು ನಿರೀಕ್ಷಿಸುವುದು ಪ್ರತಿ ನಾಗರೀಕನ ಹಕ್ಕು. ನೀವು ಇದಕ್ಕೂ ಮೊದಲು ‘ಮಾರ್ಚ್ 22ರಂದು ಚಪ್ಪಾಳೆ ತಟ್ಟಿ ಕರೋನ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಧನ್ಯವಾದ ಹೇಳಿ’ ಎಂದು ಕರೆಕೊಟ್ಟಿದ್ದಿರಿ. ವೈದ್ಯರಿಗೆ ಧನ್ಯವಾದ ಹೇಳುವುದಕ್ಕೂ ನಿಮ್ಮಲ್ಲಿ ಸ್ವಂತಿಕೆ ಇರಲಿಲ್ಲ. ಸ್ಪೇನ್ ದೇಶದಿಂದ ‘ಚಪ್ಪಾಳೆ ತಂತ್ರ’ವನ್ನು ಕದ್ದು ತಂದಿರಿ. ಚಪ್ಪಾಳೆ ತಟ್ಟಿದವರು ಮರುಕ್ಷಣವೇ ‘ಕರೋನಾ ಎಂಬ ಮಹಾಮಾರಿಯನ್ನು ತಡೆಗಟ್ಟಲು ಸಾಧ್ಯವಿರುವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ’ ಎಂಬ ಮೂಲ ಮಂತ್ರವನ್ನೇ ಮರೆತರು. ಇದೇನಾ ದೇಶವಾಸಿಗಳಲ್ಲಿ ನೀವು ಅರಿವು ಮೂಡಿಸಿದ್ದು? ‘ನೀವು ಹೇಳಿದ್ದನ್ನು ಅವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎನ್ನುವುದಾರೆ ಅದು ಅವರ ಅಜ್ಞಾನ ಮಾತ್ರವಲ್ಲ, ಅವರಿಗೆ ನೀವು ಸರಿಯಾಗಿ ಮಾನವರಿಕೆ ಮಾಡಿಕೊಡುವುದರಲ್ಲಿ ವಿಫಲರಾದಿರಿ ಎಂದೂ ಕೂಡ ಹೇಳಬಹುದು.
ಇದು ನೀವು ಸೋಲಬೇಕಾದ ಸಂದರ್ಭವಲ್ಲ ಪ್ರಧಾನ ಮಂತ್ರಿಗಳೇ. ನೀವು ಗೆಲ್ಲಲೇಬೇಕು. ನೀವು ಗೆಲ್ಲುವ ಮೂಲಕ ದೇಶವೂ ಕರೋನ ವಿರುದ್ಧ ಗೆಲ್ಲಬೇಕು. ನೀವು ಗೆಲ್ಲುವ ತಾಕತ್ತು ಉಳ್ಳವರು. ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ನಂತರ ಅಪಾರ ಜನಬೆಂಬಲ ಉಳ್ಳವರು ನೀವು. ಅದ್ಭುತವಾಗಿ ಮಾತನಾಡಬಲ್ಲ ಕಲೆ ನಿಮಗೆ ಕರಗತ. ಇಷ್ಟು ದೊಡ್ಡ ದೇಶದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದೀರಾ ಎಂದರೆ ನಿಮ್ಮ ರಾಜಕೀಯ ಶಾಣ್ಯತನವೂ ಕಮ್ಮಿ ಇಲ್ಲ. ಆದರೆ ನೀವು ಈ ಸಂದರ್ಭವನ್ನು ಗೆಲ್ಲಬೇಕಿರುವುದು ರಾಜಕಾರಣಿಯಾಗಿ ಅಲ್ಲ. ಮುತ್ಸದ್ದಿಯಾಗಿ.

ಈ ದೇಶ ಹಲವಾರು ರಾಜಕಾರಣಿಗಳನ್ನು ಕಂಡಿದೆ. ನಿಮ್ಮ ಪಕ್ಷವೂ. ಆದರೆ ಮುತ್ಸದ್ದಿಗಳು ವಿರಳ. ನಿಮ್ಮ ಪಕ್ಷದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಬಿಟ್ಟು ಮತ್ತೊಂದು ಹೆಸರು ಹೇಳಿ ನೋಡೋಣ. ಸಾಧ್ಯವಿಲ್ಲ ಅಲ್ಲವೇ? ನಿಮ್ಮ ಹೆಸರೇ ಏಕಾಗಬಾರದು. ನೀವು ಮುತ್ಸದ್ದಿ ಆಗುವ ಕಾಲ ಈಗ ಕೂಡಿ ಬಂದಿದೆ. 2002ರ ಗೋಧ್ರಾ ಘಟನೆಯನ್ನೂ ಬಿಡಿ. ಮೊನ್ನೆ ಮೊನ್ನೆ ನಡೆದ ದೆಹಲಿ ಹಿಂಸಾಚಾರವನ್ನೂ ಪಕ್ಕಕ್ಕಿಡಿ (ಅಲ್ಲಿನ್ನೂ ಸಹಜ ಸ್ಥಿತಿ ಇಲ್ಲ). ಈ ಕರೋನಾ ತಂದೊಡ್ಡಿರುವ ಸಂಕಷ್ಟದ ಸಮಯದಲ್ಲಿ ದೇಶವಾಸಿಗಳಿಗೆ ‘ಸಂಕಲ್ಪ ಮತ್ತು ಸಂಯಮ’ದ ಬಗ್ಗೆ ನೀವೇ ಮಾಡಿದ್ದ ಪಾಠವನ್ನು ನೆನಪಿಸಿಕೊಳ್ಳಿ. ಅದೇ ರೀತಿ ನೀವು ಕೂಡ ‘ಪರಿಸ್ಥಿತಿಯನ್ನು ರಾಜಕೀಯ ದೃಷ್ಟಿಯಿಂದ ನೋಡುವುದಿಲ್ಲ’ ಎಂದು ದೃಢ ಸಂಕಲ್ಪ ಮಾಡಿ. ನೀವು ಕರೋನಾ ವನ್ನು ಮೂರನೇ ಮಹಾಯುದ್ಧಕ್ಕೆ ಹೋಲಿಸಿದ್ದಿರಿ. ಈಗ ಎಂಥದೇ ಪರಿಸ್ಥಿತಿ ಎದುರಾದರೂ ಸಂಯಮದಿಂದ ಕರೋನಾ ವಿರುದ್ಧ ಹೋರಾಡುತ್ತೇನೆಂದು ಪಣ ತೊಡಿ.
ನೀವು 56 ಇಂಚಿನ ಎದೆಗಾರಿಕೆ ಉಳ್ಳವನೆಂದು ಹೇಳಿಕೊಳ್ಳುತ್ತೀರಿ. ಆದರೆ ಇಂಥ ಗೋಳಿನ ವೇಳೆ ಎದೆಗಾರಿಕೆ ಮುಖ್ಯವಲ್ಲ, ಹೃದಯವಂತಿಕೆ ಬೇಕು. ಪರಿಸ್ಥಿತಿಯನ್ನು ನಿಭಾಯಿಸಬೇಕಿರುವುದು ಲೆಕ್ಕಾಚಾರದಿಂದ ಅಲ್ಲ, ‘ತಲೆ’ಯಿಂದ ಅಲ್ಲ, ಹೃದಯದಿಂದ. ಆದರೆ ನಿಮ್ಮದು ಹಾಗೂ ನಿಮ್ಮ ಸರ್ಕಾರದ್ದು ಪಕ್ಕಾ ಲೆಕ್ಕಾಚಾರ ಎಂಬುದಕ್ಕೆ ನಿಮ್ಮ ಹಣಕಾಸಿನ ಸಚಿವೆ (ದೇಶದ ಹಣಕಾಸಿನ ಸಚಿವರ ರೀತಿ ವರ್ತಿಸದ ಕಾರಣಕ್ಕೆ ಅವರು ನಿಮ್ಮ ಮಾತ್ರ) ನಿರ್ಮಲಾ ಸೀತಾರಾಮನ್ ಪ್ರಕಟಿಸಿದ 1.7 ಲಕ್ಷ ಕೋಟಿ ರೂ. ಪ್ಯಾಕೇಜ್ ಬಹಳ ಒಳ್ಳೆಯ ಉದಾಹರಣೆ.
ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ ಪ್ಯಾಕೇಜ್ ಸುಳ್ಳಿನ ಸರಮಾಲೆಯಾಗಿದೆ. ಕೇಂದ್ರ ಸರ್ಕಾರ ಕರೋನಾಗೆಂದೇ ಈ 1.7 ಲಕ್ಷ ಕೋಟಿ ರೂಪಾಯಿ ಯೋಜನೆಯನ್ನು ಮಾಡಿಲ್ಲ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಹಣವನ್ನು ಈ ಕಷ್ಟ ಕಾಲಕ್ಕೆ ಬಳಸಿಕೊಳ್ಳುತ್ತಿದೆಯಷ್ಟೇ. ಇರಲಿ, ಈ ಹಣವನ್ನು ಸಂಪೂರ್ಣವಾಗಿ ಲಾಕ್ ಡೌನ್ ನಿಂದ ತೀವ್ರತೊಂದರೆಗೆ ಒಳಗಾಗುವ ವಲಸೆ ಕಾರ್ಮಿಕರು, ನಿರ್ಗತಿಕರು, ರಸ್ತೆ ಬದಿ ವ್ಯಾಪರಸ್ಥರು, ಕಟ್ಟಡ ಕಾರ್ಮಿಕರು, ಕೂಲಿಗಳು, ಬೆಳೆದ ಪದಾರ್ಥಗಳಿಗೆ ಸರಿಯಾದ ಮಾರುಕಟ್ಟೆ ಸಿಗದೆ ಸೊರಗುವ ಸಣ್ಣಪುಟ್ಟ ರೈತರು, ಸಣ್ಣಪುಟ್ಟ ಕೆಲಸಗಳನ್ನೇ ನೆಚ್ಚಿಕೊಂಡಿರುವ ಬಡವರಿಗೆ ಮೀಸಲಿಡಲಾಗಿದೆಯೇ? ಅದೂ ಇಲ್ಲ.
ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆಯ ಹಣ ಪಡೆದು ಆರೋಗ್ಯ ಕ್ಷೇತ್ರದಲ್ಲಿ, ತುರ್ತು ಸೇವೆಗಳಲ್ಲಿ ಕೆಲಸ ಮಾಡುವವರಿಗೆ ಕ್ರಮವಾಗಿ ತಲಾ 50 ಮತ್ತು 20 ಲಕ್ಷದವರೆಗೆ ಜೀವವಿಮೆ ನೀಡಲಾಗಿದೆ. ಖಂಡಿತಕ್ಕೂ ಆರೋಗ್ಯ ಕ್ಷೇತ್ರ ಮತ್ತು ತುರ್ತು ಸೇವೆಗಳಲ್ಲಿ ತೊಡಗಿಸಿಕೊಂಡಿರುವವರಿಗೆ ವಿಮೆಯನ್ನು ನೀಡಬೇಕು. ಆದರೆ ಅದು ಬಡವರ ದುಡ್ಡಿನಿಂದಲ್ಲ. ಕೇಂದ್ರ ಸರ್ಕಾರ ಅದಕ್ಕಾಗಿ ಬೇರೆ ಮೂಲದಿಂದ ಹಣ ಮೀಸಲಿಡಬೇಕಾಗಿತ್ತು.
ಕಿಸಾನ್ ಸಮ್ಮಾನ್ ಯೋಜನೆಯ ಮೊದಲ ಕಂತಿನ ಹಣ ತಲಾ 2 ಸಾವಿರ ರೂಪಾಯಿಯನ್ನು ಅವರ ಬ್ಯಾಂಕ್ ಖಾತೆಗಳಿಗೆ ಹಾಕಲಾಗುವುದು ಎಂದು ಹೇಳಿದ್ದಾರೆ ನಿರ್ಮಲಾ ಸೀತಾರಾಮನ್. ಈ ಕರೋನಾ ಕಷ್ಟ ಬಂದೊದಗದಿದ್ದರೂ ರೈತರ ಆ ಹಣವನ್ನು ನೀಡಲೇಬೇಕಿತ್ತಲ್ಲವೇ? ಇದೇ ರೀತಿ ಹಿರಿಯ ನಾಗರೀಕರು, ಅಂಗವಿಕಲರು ಮತ್ತು ವಿಧವೆಯರಿಗೆ ಪ್ರೋತ್ಸಾಹ ಧನ ನೀಡಲಾಗುವುದು ಎಂದಿದ್ದಾರೆ. ಆದರೆ ಇದು ಅವರಿಗೆ ಈಗಾಗಲೇ ನೀಡುತ್ತಿರುವ ಮಾಸಿಕ ಪ್ರೋತ್ಸಾಹಧನವೋ ಅಥವಾ ಈ ಪರಿಸ್ಥಿತಿಯಲ್ಲಿ ಅವರಿಗೆ ಹೆಚ್ಚುವರಿಯಾಗಿ ಪ್ರೋತ್ಸಾಹ ಧನ ನೀಡಲಾಗುತ್ತಿದೆಯೋ ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ. ರೈತರಿಗಾಗಲೀ ಅಥವಾ ಹಿರಿಯ ನಾಗರೀಕರು, ಅಂಗವಿಕಲರು ಮತ್ತು ವಿಧವೆಯರಿಗಾಗಲಿ ಅವರ ಹಕ್ಕಿನ ಹಣವನ್ನು ಅವರಿಗೆ ನೀಡಲು ಈ ಹೊಸ ಪ್ಯಾಕೇಜ್ ಘೋಷಣೆ ಮಾಡುವ ಅಗತ್ಯವಾದರೂ ಏನಿತ್ತು?
1.7 ಲಕ್ಷ ಕೋಟಿ ಹಣವನ್ನು ಹೊಂದಿಸಲು ಮಿನರಲ್ ಫಂಡ್, ಪ್ರಾವಿಡೆಂಟ್ ಫಂಡ್ ಮತ್ತು ಕಟ್ಟಡ ಕಾರ್ಮಿಕರ ಫಂಡ್ ಬಳಕೆ ಮಾಡಿಕೊಳ್ಳಲಾಗುವುದು ಎಂದಿದ್ದಾರೆ. ಮಿನಿರಲ್ ಫಂಡ್ ಯಾರದ್ದು? ರಾಜ್ಯ ಸರ್ಕಾರದ್ದೋ? ಕೇಂದ್ರ ಸರ್ಕಾರದ್ದೋ? ರಾಜ್ಯ ಸರ್ಕಾರದ್ದಾಗಿದ್ದರೆ ನೀವು ಹೇಗೆ ಬಳಸಿಕೊಳ್ಳುತ್ತೀರಿ? ಕೇಂದ್ರ ಸರ್ಕಾರದ್ದೇ ಆದರೂ ಬೇರೆ ಉದ್ದೇಶಕ್ಕಾಗಿ ಇರುವ ಆ ಹಣವನ್ನು ಈ ಪ್ಯಾಕೇಜ್ ಗೆ ಹೇಗೆ ಬಳಸಿಕೊಳ್ಳುತ್ತೀರಿ? ಪ್ರಾವಿಡೆಂಟ್ ಫಂಡ್ ಮತ್ತು ಕಟ್ಟಡ ಕಾರ್ಮಿಕರ ಫಂಡ್ ಕಾರ್ಮಿಕರಿಗೆ ಮೀಸಲಾದುದು. ಅದನ್ನೇಕೆ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುತ್ತೀರಿ? ಹಾಗೆ ಮಾಡಿದರೆ ಅದು ಕಾರ್ಮಿಕರಿಗೆ ಮಾಡಿದ ದ್ರೋಹ ಆಗುವುದಿಲ್ಲವೇ?
ಉದ್ಯೋಗ ಖಾತರಿ ಯೋಜನೆಯಲ್ಲಿ ದಿನದ ಕೂಲಿಯನ್ನು 20 ರೂಪಾಯಿ ಮಾತ್ರ ಹೆಚ್ಚಳ ಮಾಡಿದ್ದಾರೆ. ದಿನಗಳ ಸಂಖ್ಯೆಯನ್ನು ಹೆಚ್ಚಿಸಿಲ್ಲ. ಮೇಲಾಗಿ ವಾರ್ಷಿಕವಾಗಿ ಮಾಡಬೇಕಾದ ಹೆಚ್ಚಳವನ್ನು ಕೇಂದ್ರ ಸರ್ಕಾರ ಈ ಪರಿಸ್ಥಿತಿಯಲ್ಲಿ ಮಾಡಿದೆ. 20 ರೂಪಾಯಿ ಹೆಚ್ಚಿಸಿ ಕೈತೊಳೆದುಕೊಂಡರೆ ಸಾಕೆ? ಬಡವರಿಗೆ ದಿನಸಿ ಕೊಡುವುದು ನಿಜಕ್ಕೂ ಸ್ವಾಗತಾರ್ಹ. ಆದರೆ ಈಗಾಗಲೇ ಕೊಡುತ್ತಿರುವ ಪಡಿತರದ ಜೊತೆಗೆ ಹೆಚ್ಚುವರಿಯಾಗಿ ಕೊಟ್ಟರೆ ಮಾತ್ರ. ಹಾಗೆ ಕೊಡದಿದ್ದರೆ ಈ ಸರ್ಕಾರ ಅನ್ನದ ಹೆಸರಿನಲ್ಲೂ ಸುಳ್ಳು ಹೇಳುತ್ತಿದೆ ಎಂದೇ ಅರ್ಥ.
ಇನ್ನೊಂದೆಡೆ ಮಾರ್ಚ್ 19ರಂದು ಮೋದಿ ಕರೋನಾ ಸೋಂಕು ತಡೆ ಮತ್ತು ಚಿಕಿತ್ಸೆಗೆ ವೈದ್ಯಕೀಯ ಸಲಕರಣೆಗಳಿಗಾಗಿ 15 ಸಾವಿರ ರೂಪಾಯಿ ಕೋಟಿ ಮಾತ್ರ ಕೊಟ್ಟಿದ್ದಾರೆ. ಸೋಂಕು ಹರಡುತ್ತಿರುವ ತೀವ್ರತೆ ಮತ್ತು ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನೋಡಿದರೆ ಇದು ಬಹಳ ಕಡಿಮೆ ಎಂದೇ ಹೇಳಬಹುದು. ಕೇಂದ್ರ ಸರ್ಕಾರ ಹೀಗೆ ‘ಏನೋ ಕೊಟ್ಟೆ’ ಎಂದು ಕೊಚ್ಚಿಕೊಳ್ಳುತ್ತಿದೆ. ಆದರೆ ಅದು ‘ಏನೂ ಅಲ್ಲ’ ಎಂಬುದನ್ನು ಮೋದಿ ಮತ್ತು ನಿರ್ಮಲಾ ಸೀತಾರಾಮನ್ ನೀಡಿರುವ ಅಪೂರ್ಣ ಮಾಹಿತಿಗಳೇ ಸ್ಪಷ್ಟಪಡಿಸಿವೆ. ಇದಕ್ಕೂ ಮೊದಲು ಕರೋನಾ ಸೋಂಕು ಹರಡುವಿಕೆ ಆರಂಭಿಕ ಹಂತದಲ್ಲಿದ್ದಾಗ ಪರಿಸ್ಥಿತಿಯನ್ನು ರಾಜ್ಯ ಸರ್ಕಾರಗಳು ತಮ್ಮ ಎಸ್.ಡಿ.ಆರ್.ಎಫ್ ಮೂಲಕ ನಿಭಾಯಿಸಬೇಕು ಎಂದಿದ್ದರು. ಆಗ ಎನ್.ಡಿ.ಆರ್.ಎಫ್ ನೆರವನ್ನೂ ನೀಡಬಹುದಿತ್ತಲ್ಲವೇ?
ಮೋದಿ ಮುತ್ಸದ್ದಿ ಆಗುವ ಬಗ್ಗೆ ಇಂದಿರಾ ಗಾಂಧಿ ಅವರನ್ನು ಉದಾಹರಿಸಿ ಹೇಳಲಾಗಿತ್ತಲ್ಲವೇ? ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯಲ್ಲೂ ಏನಾದರೂ ಒಳ್ಳೆಯದನ್ನು ಮಾಡಬೇಕೆಂದು ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದ್ದರು. ಜನ ಈಗಲೂ ಅವರನ್ನು ನೆನೆಯುತ್ತಾರೆ. ಮೋದಿ ಕರೋನಾ ಪರಿಸ್ಥಿತಿ ನಿಭಾಯಿಸಲು ಈಗ ಸ್ಪೇನ್ ಮಾಡಿರುವಂತೆ ಎಲ್ಲಾ ಆಸ್ಪತ್ರೆಗಳನ್ನು ರಾಷ್ಟ್ರೀಕರಣಗೊಳಿಸಬಹುದಿತ್ತು. ಕರೋನಾ ಬಿಡಿ, ನಿಜಕ್ಕೂ ಈಗ ಜನ ಆಸ್ಪತ್ರೆಗಳ ಬಗ್ಗೆ ಆತಂಕಗೊಂಡಿದ್ದಾರೆ. ಅಂಥವರೆಲ್ಲರೂ ಮುಂದೆ ಮೋದಿಯನ್ನು ನೆನೆಯುತ್ತಿದ್ದರು. ದೇಶವನ್ನು ಮುನ್ನಡೆಸಲು ರಾಜಕಾರಣಿಯೇ ಬೇಕಾಗಿಲ್ಲ ಎಂಬುದನ್ನು ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ನಿರೂಪಿಸಿದ್ದಾರೆ. ಮೋದಿ ರಾಜಕೀಯ ಇಚ್ಛಾಶಕ್ತಿ, ನಾಯಕತ್ವ, ಮಹತ್ವದಿತನಗಳೆಲ್ಲವನ್ನೂ ಮಿಳಿತಗೊಳಿಸಿ ಪರಿಸ್ಥಿತಿಗೆ ಮುಖಾಮುಖಿಯಾದರೆ ಈ ನಿರ್ಣಾಯಕ ಹೋರಾಟದಲ್ಲಿ ಅವರೂ ಗೆಲ್ಲಬಹುದು. ದೇಶವೂ ಗೆಲ್ಲುತ್ತದೆ.