ಕರೋನಾ ಸೋಂಕು ಲಕ್ಷಣಗಳಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು 18 ಆಸ್ಪತ್ರೆ ಸುತ್ತಿದರೂ ಚಿಕಿತ್ಸೆ ಸಿಗದೇ ಆಸ್ಪತ್ರೆಯ ಬಾಗಿಲ್ಲಲ್ಲೇ ಸಾವು ಕಂಡ ಘಟನೆ ಬೆಂಗಳೂರಿನಲ್ಲಿ ಮಂಗಳವಾರ ನಡೆದಿದೆ.
ಸೋಮವಾರಷ್ಟೇ ಉತ್ತರಪ್ರದೇಶದ ಕನೂಜ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟ ಒಂದೂವರೆ ವರ್ಷದ ಮಗುವನ್ನು ಎದೆಗವಚಿಕೊಂಡು ನೆಲದ ಮೇಲೆ ಬಿದ್ದುಹೊರಳಿ ಗೋಳಾಡಿದ ತಂದೆತಾಯಿಯರ ಹೃದಯವಿದ್ರಾವಕ ಘಟನೆಯ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಅಂತಹದ್ದೇ ದುರಂತ ಘಟನೆ ನಡೆದಿದೆ. ಕೇವಲ ಐದು ದಿನಗಳ ಹಿಂದಷ್ಟೇ ಧಾರವಾಡದಲ್ಲಿ ಕೂಡ ನಡೆದ ಇಂತಹದ್ದೇ ಘಟನೆಯಲ್ಲಿ 30 ವರ್ಷದ ಯುವಕನೊಬ್ಬ ಕಾಮಾಲೆಗೆ ಬಲಿಯಾಗಿದ್ದಾರೆ.
ಈ ನಡುವೆ ಕೋವಿಡ್-19ರ ರೋಗ ಲಕ್ಷಣ ಹೊಂದಿದ್ದ ವ್ಯಕ್ತಿಯೊಬ್ಬರು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರೂ ಹಾಕಿದ್ದ ಕೃತಕ ಉಸಿರಾಟದ ವ್ಯವಸ್ಥೆಯನ್ನು ತೆಗೆದುಹಾಕಿದ ವೈದ್ಯರ ಕ್ರಮದಿಂದಾಗಿ ಆತ ದಾರುಣ ಸಾವು ಕಂಡ ಘಟನೆ ಸೋಮವಾರ ಹೈದರಾಬಾದಿನಲ್ಲಿ ಬೆಳಕಿಗೆ ಬಂದಿದೆ. ವಾಸ್ತವವಾಗಿ ಆತ ಜೂ.26ರಂದೇ ಸಾವು ಕಂಡಿದ್ದು, ಸಾವಿಗೆ ಮುನ್ನ ಆತ ತನ್ನ ಗೋಳನ್ನು ವೀಡಿಯೋ ರೆಕಾರ್ಡ್ ಮಾಡಿ ತನ್ನ ತಂದೆಗೆ ಕಳಿಸಿದ್ದು, ಈಗ ಆ ದಾರಣು ವೀಡಿಯೋ ವೈರಲ್ ಆಗಿದೆ.
ಜೂ.24ರಂದೇ ತನ್ನ ಮಗನಿಗೆ ತೀವ್ರ ಜ್ವರ ಬಂದಿತ್ತು. ಹಾಗಾಗಿ ಚಿಕಿತ್ಸೆಗಾಗಿ ಹೈದರಾಬಾದಿನ ಹಲವು ಆಸ್ಪತ್ರೆಗಳಿಗೆ ಹೋದೆವು. ಆದರೆ, ಹಲವು ಕಡೆ ಚಿಕಿತ್ಸೆ ನೀಡಲು ಒಪ್ಪಿಕೊಳ್ಳಲಿಲ್ಲ. ಕೊನೆಗೆ ಚೆಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದೆವು. ಆದರೆ, 26ರಂದು ಆತನ ವೈದ್ಯರು ಆಮ್ಲಜನಕದ ಸರಬರಾಜು ನಿಲ್ಲಿಸಿದ್ದರಿಂದ ಸಾವು ಕಂಡಿದ್ದಾನೆ. ಆಸ್ಪತ್ರೆ ಆತನ ಸಾವನ್ನು ಘೋಷಿಸುವ ಒಂದು ಗಂಟೆ ಮುನ್ನ ಆತ ಮಾಡಿರುವ ವೀಡಿಯೋ ರೆಕಾರ್ಡಿನಲ್ಲಿ ಆತ ಸ್ಪಷ್ಟವಾಗಿ “ತನಗೆ ಹಾಕಿದ್ದ ಆಮ್ಲಜನಕವನ್ನು ತೆಗೆದಿದ್ದಾರೆ. ಮೂರು ಗಂಟೆಯಿಂದ ಆಮ್ಲಜನಕ ಕೊಡಿ ಎಂದು ಬೇಡುತ್ತಿದ್ದರೂ ಕೊಡುತ್ತಿಲ್ಲ. ಹಾಗಾಗಿ ನಾನು ಬದುಕುವುದಿಲ್ಲ. ನನಗೆ ಉಸಿರಾಡಲಾಗುತ್ತಿಲ್ಲ. ಬರೀ ಶ್ವಾಸಕೋಶದ ಮೇಲೆ ಉಸಿರಾಡಲು ಸಾಧ್ಯವಿಲ್ಲ. ಹಾಗಾಗಿ ನಾನು ಸಾಯುತ್ತಿದ್ದೇನೆ. ಬೈ ಡ್ಯಾಡಿ, ಬೈ ..” ಎಂಬ ಆತನ ಮಾತುಗಳು ವ್ಯವಸ್ಥೆಯ ಅಮಾನವೀಯತೆಗೆ ಸಾಕ್ಷಿಯಾಗಿವೆ.

ಇದು, ಕಳೆದ ಒಂದೆರಡು ದಿನಗಳಲ್ಲಿ ಮೇಲ್ನೋಟಕ್ಕೆ ಕಣ್ಣಿಗೆ ಬಿದ್ದಿರುವ ಕೋವಿಡ್ ಕಾಲದ ದುರಂತ ಸಾವುಗಳು. ಬದುಕುಳಿಯುವ ಎಲ್ಲಾ ಸಾಧ್ಯತೆಗಳಿದ್ದರೂ ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯ, ಆಸ್ಪತ್ರೆಗಳ ಭೀತಿ ಮತ್ತು ಉದಾಸೀನ, ವೈದ್ಯಕೀಯ ಜೀವರಕ್ಷಕ ಉಪಕರಣಗಳು ಮತ್ತು ಸೌಲಭ್ಯಗಳ ಕೊರತೆಯ ಕಾರಣಕ್ಕೆ ಈ ಎಲ್ಲ ನತದೃಷ್ಟರ ಬದುಕು ಅಂತ್ಯವಾಗಿದೆ. ಹೈದರಾಬಾದಿನ ವ್ಯಕ್ತಿಯ ವಿಷಯದಲ್ಲಂತೂ; ಸಾವಿಗೆ ಎರಡು ದಿನ ಮುಂಚೆಯೇ ಆಸ್ಪತ್ರೆಗೆ ದಾಖಲಾಗಿದ್ದರೂ ಅವರಿಗೆ ತುರ್ತು ವೈರಾಣು ಪರೀಕ್ಷೆ ಮಾಡುವಲ್ಲಿ ಆಸ್ಪತ್ರೆ ವಿಫಲವಾಗಿತ್ತು. ಆತನ ಸಾವಿನ ಮಾರನೇ ದಿನ ಕರೋನಾ ವೈರಾಣು ಪರೀಕ್ಷೆ ಫಲಿತಾಂಶ ಬಂದಿತ್ತು ಮತ್ತು ಕರೋನಾ ಇರುವುದು ದೃಢಪಟ್ಟಿತ್ತು! ಅಷ್ಟೊಂದು ತಡವಾಗಿ ವರದಿಬರಲು(ತುರ್ತು ಪರಿಸ್ಥಿತಿಯಲ್ಲೂ) ಕಾರಣ, ಹೈದರಾಬಾದಿನಲ್ಲಿ ಕೈಮೀರಿ ಹೋಗಿರುವ ಕರೋನಾ ಸೋಂಕು ಮತ್ತು ತೀವ್ರ ಕೊರತೆ ಇರುವ ಪರೀಕ್ಷಾ ಕಿಟ್ ಬಿಕ್ಕಟ್ಟು. ಪರೀಕ್ಷಾ ಕಿಟ್ ಲಭ್ಯವಿಲ್ಲ ಎಂಬ ಹಿನ್ನೆಲೆಯಲ್ಲಿ ಜೂನ್ 25ರಿಂದ ಎರಡು ದಿನಗಳ ಕಾಲ ಕರೋನಾ ಪರೀಕ್ಷೆಗಳನ್ನೇ ತೆಲಂಗಾಣದ ಆ ರಾಜಧಾನಿಯಲ್ಲಿ ರದ್ದು ಮಾಡಲಾಗಿತ್ತು!
ಪರೀಕ್ಷೆಗೊಳಪಟ್ಟವರ ಪೈಕಿ ಶೇ.30ರಷ್ಟು ಸೋಂಕು ದೃಢಪಟ್ಟಿರುವ ಹೈದರಾಬಾದಿನಂತಹ ಮಹಾನಗರದಲ್ಲಿ ಪರೀಕ್ಷಾ ಕಿಟ್ ಗಳಿಲ್ಲದೆ ವೈರಾಣು ಪರೀಕ್ಷೆಯನ್ನೇ ರದ್ದು ಮಾಡಿದರೆ ಅದರಿಂದಾಗಬಹುದಾದ ಅನಾಹುತ ಎಂತಹದ್ದು ಎಂಬುದಕ್ಕೆ ಈ ಘಟನೆ ಒಂದು ನಿದರ್ಶನ.
ಹಾಗೆ ನೋಡಿದರೆ ಕೇವಲ ಹೈದರಾಬಾದ್ ಒಂದೇ ಅಲ್ಲ, ಮುಂಬೈ, ದೆಹಲಿ, ಚೆನ್ನೈ, ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಮಹಾನಗರಗಳಲ್ಲಿ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ದಿನದಿಂದ ದಿನಕ್ಕೆ ಆಘಾತಕಾರಿ ಪ್ರಮಾಣದಲ್ಲಿ ಸೋಂಕು ಹರಡುತ್ತಿದ್ದರೂ ಅದನ್ನು ನಿಯಂತ್ರಿಸಲು ಇರುವ ವೈಜ್ಞಾನಿಕ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಮಾಡುವಲ್ಲಿ ವ್ಯವಸ್ಥೆ ಸಂಪೂರ್ಣ ವಿಫಲವಾಗುತ್ತಿವೆ. ಕೇವಲ ಸೀಲ್ ಡೌನ್, ಲಾಕ್ ಡೌನ್ ನಂತಹ ಕ್ರಮಗಳನ್ನು ಹೊರತುಪಡಿಸಿ ಸೋಂಕು ನಿಯಂತ್ರಣದ ನಿಜವಾದ ಅಸ್ತ್ರಗಳಾದ ಹೆಚ್ಚು ಹೆಚ್ಚು ಪರೀಕ್ಷೆ, ಸೋಂಕು ಪತ್ತೆ, ಸೋಂಕಿತರ ಸಂಪರ್ಕ ಪತ್ತೆ, ಐಸೋಲೇಷನ್ ನಂತಹ ವಿಷಯದಲ್ಲಿ ಸಂಪೂರ್ಣ ಹಿಂದೆ ಬಿದ್ದಿವೆ. ಆಳುವ ಸರ್ಕಾರಗಳ ಇಂತಹ ಹೊಣೆಗೇಡಿ ಮತ್ತು ಅಮಾನುಷ ವರಸೆ ಈಗ ಅಮಾಯಕರ ಬಲಿದಾನ ಪಡೆಯುತ್ತಿದೆ.
ಸದ್ಯದ ಸ್ಥಿತಿಯಲ್ಲಿ ಕರ್ನಾಟಕ ಕೂಡ ಇಂತಹ ಹೊಣೆಗೇಡಿತನಕ್ಕೆ ಹೊರತೇನಲ್ಲ. ಮಾರ್ಚ್ 24ರಂದು ಲಾಕ್ ಡೌನ್ ಹೇರಿ ನೂರು ದಿನಗಳೇ ಕಳೆದರೂ, ಲಾಕ್ ಡೌನ್ ನ ನಿಜವಾದ ಉದ್ದೇಶವಾದ ವೈದ್ಯಕೀಯ ವ್ಯವಸ್ಥೆ ಸಜ್ಜು ಮಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಪ್ರಯತ್ನವನ್ನೇ ಮಾಡಿಲ್ಲ ಎಂಬುದಕ್ಕೆ ಈಗ ರಾಜ್ಯ ಸರ್ಕಾರ ಖಾಸಗೀ ಆಸ್ಪತ್ರೆಗಳಿಗೆ ದಮ್ಮಯ್ಯ ಹಾಕಿ ಕೋವಿಡ್ ಚಿಕಿತ್ಸೆಗೆ ಕೋರುತ್ತಿರುವುದೇ ಸಾಕ್ಷಿ. ಗಡ್ಡಕ್ಕೆ ಬೆಂಕಿ ಬಿದ್ದ ಮೇಲೂ ಬಾವಿ ತೋಡಲಾಗದ ಪರಮ ಮೂರ್ಖತನ ಇದು.

ಕರ್ನಾಟಕದಲ್ಲಂತೂ ಪರಿಸ್ಥಿತಿ ಎಷ್ಟು ವಿಪರೀತಕ್ಕೆ ಹೋಗಿದೆ ಎಂದರೆ, ಕೋವಿಡ್-19 ಸೋಂಕಿತರು ಬದುಕಿರುವಾಗಷ್ಟೇ ಅಲ್ಲ, ಸಾವಿನ ಬಳಿಕ ಕೂಡ ಅವರನ್ನು ಕನಿಷ್ಟ ಗೌರವದಿಂದ ಅಂತ್ಯಸಂಸ್ಕಾರ ಮಾಡುವಷ್ಟು ತಯಾರಿ ಕೂಡ ಸರ್ಕಾರ ಮಾಡಿಕೊಂಡಿಲ್ಲ ಎಂಬುದಕ್ಕೆ ಬಳ್ಳಾರಿಯಲ್ಲಿ ನಡೆದ ಘಟನೆಯೇ ನಿದರ್ಶನ. ಕೋವಿಡ್ ನಿಂದ ಮೃತಪಟ್ಟವನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗಿ ಒಂದೇ ಗುಂಡಿಯಲ್ಲಿ ಹೂತು ಮಣ್ಣು ಮುಚ್ಚಿರುವ ಬಳ್ಳಾರಿ ನಗರ ಪಾಲಿಕೆಯ ಕೃತ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕರ್ನಾಟಕದ ಬಿಜೆಪಿ ಸರ್ಕಾರ ಕೋವಿಡ್-19 ವಿಷಯದಲ್ಲಿ ಎಷ್ಟರಮಟ್ಟಿಗೆ ತಯಾರಿ ಮಾಡಿಕೊಂಡಿದೆ ಈ ನೂರು ದಿನಗಳ ಲಾಕ್ ಡೌನ್ ಅವಧಿಯಲ್ಲಿ ಎಂಬುದಕ್ಕೆ ಸ್ವತಃ ಆರೋಗ್ಯ ಶಿಕ್ಷಣದ ತವರೂರಿನ ಈ ಹೀನಾಯ ಕೃತ್ಯವೇ ಸಾಕ್ಷಿ.
ಆದರೆ, ಮಂಗಳವಾರ ಸಂಜೆ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಕರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾಸ್ಕ್ ಧರಿಸಿ, ಭೌತಿಕ ಅಂತರ ಕಾಯ್ದುಕೊಳ್ಳಿ ಎಂದು ಉಪದೇಶ ನೀಡಿದ್ದಾರೆ. ಜೊತೆಗೆ ನವೆಂಬರ್ ವರೆಗೆ ಬಡವರಿಗೆ ಐದು ಕೆಜಿ ಅಕ್ಕಿ ಉಚಿತವಾಗಿ ನೀಡುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಜೊತೆಗೆ ಹಬ್ಬಗಳ ಪಟ್ಟಿ ಕೊಟ್ಟು ಎಚ್ಚರಿಕೆಯಿಂದಿರಿ ಎಂದಿದ್ದಾರೆ.
ಅಷ್ಟಕ್ಕೆ ತಮ್ಮ ಜವಾಬ್ದಾರಿ ಮುಗಿಯಿತು ಎಂಬಂತೆ ಪ್ರಧಾನಮಂತ್ರಿಗಳು ಕರೋನಾ ನಿಯಂತ್ರಣ ಮತ್ತು ರೋಗದ ಚಿಕಿತ್ಸೆಗೆ ಸರ್ಕಾರ ಎಷ್ಟರಮಟ್ಟಿಗೆ ಸಜ್ಜಾಗಿದೆ? ಪರೀಕ್ಷಾ ಕಿಟ್, ಪಿಪಿಇ, ವೆಂಟಿಲೇಟರು, ಆಕ್ಸಿಜನ್, ಔಷಧ ಮತ್ತು ವೈದ್ಯಕೀಯ ಸೌಲಭ್ಯಗಳ ವಿಷಯದಲ್ಲಿ ಏನೆಲ್ಲಾ ತಯಾರಿಯಾಗಿದೆ. ಎಷ್ಟು ದಿನಗಳ ವರೆಗೆ ಸರ್ಕಾರ ಸೋಂಕು ಪ್ರಮಾಣ ಊಹಿಸಿದೆ ಮತ್ತು ಅದಕ್ಕೆ ತಕ್ಕಂತೆ ಪೂರ್ವತಯಾರಿಗಳನ್ನು ಮಾಡಿಕೊಂಡಿದೆ? ಸರ್ಕಾರದ ಅಂದಾಜಿನ ಪ್ರಕಾರ ಸೋಂಕು ಯಾವಾಗ ಕಡಿಮೆಯಾಗಲಿದೆ ಮತ್ತು ಆ ವರೆಗೆ ದೇಶದಲ್ಲಿ ಸೋಂಕು ನಿಯಂತ್ರಣ ಮತ್ತು ಜನರ ದೈನಂದಿನ ದುಡಿಮೆ ಕಾಯಲು ಯಾವ ಯೋಜನೆ ಹೊಂದಿದೆ? ಎಂಬಂತಹ ಯಾವುದೇ ನಿರ್ಣಾಯಕ ಪ್ರಶ್ನೆಗಳ ಬಗ್ಗೆ ಮೋದಿಯವರು ಚಕಾರವೆತ್ತಿಲ್ಲ! ಕನಿಷ್ಟ ವೈದ್ಯಕೀಯ ಸಿಬ್ಬಂದಿ ಮತ್ತು ಖಾಸಗೀ ಆಸ್ಪತ್ರೆಗಳು ರೋಗಿಗಳೊಂದಿಗೆ ಹೇಗೆ ನಡೆದುಕೊಳ್ಳಬೇಕು? ಅನ್ಯಾಯದ ಸಾವುಗಳನ್ನು ತಡೆಯುವುದು ಹೇಗೆ ಎಂಬುದನ್ನೂ ಅವರು ಪ್ರಸ್ತಾಪಿಸಿಲ್ಲ.
ಪಿಎಂ ಕೇರ್ಸ್ ಸೇರಿದಂತೆ ಕೋವಿಡ್ ಚಿಕಿತ್ಸೆಗಾಗಿಯೇ ಸಾರ್ವಜನಿಕರಿಂದ ಬಂದಿರುವ ದೇಣಿಗೆಯ ಬಳಕೆಯ ಬಗ್ಗೆಯಾಗಲೀ, ಕೋವಿಡ್ ಲಾಕ್ ಡೌನ್ ಪರಿಹಾರ ಪ್ಯಾಕೇಜಿನ 2 ಲಕ್ಷ ಕೋಟಿ ಹಣದಲ್ಲಿ ಅಗತ್ಯ ಪ್ರಮಾಣದ ಪರೀಕ್ಷಾ ಕಿಟ್ ಮತ್ತು ವೈದ್ಯಕೀಯ ಸೌಲಭ್ಯ ಒದಗಿಸಲು ಏನೆಲ್ಲಾ ಯೋಜನೆ ಮಾಡಲಾಗಿದೆ ಮತ್ತು ಈವರೆಗೆ ಎಷ್ಟು ಹಣ ಅದಕ್ಕಾಗಿ ವ್ಯಯಿಸಲಾಗಿದೆ ಎಂಬ ಮಾಹಿತಿಯನ್ನೂ ಪ್ರಧಾನಿ ನೀಡಿಲ್ಲ.
ಆಡಲೇಬೇಕಾದ ಮಾತುಗಳನ್ನು ಆಡದೇ ಕೇವಲ ಹಬ್ಬಗಳ ಪಟ್ಟಿ ಕೊಟ್ಟು ಸುಮ್ಮನಾದ ದೇಶದ ಪ್ರಧಾನಿಯ ಜಾಣಕುರುಡುತನದ ಪ್ರದರ್ಶನದ ನಡುವೆ, ಅಮಾಯಕರು ಆಸ್ಪತ್ರೆಗಳ ಕದ ತಟ್ಟುತ್ತಲೇ ಜೀವ ಬಿಡುತ್ತಿದ್ದಾರೆ. ಸೋಂಕು ಜಗತ್ತಿನ ಅತ್ಯಂತ ಹೆಚ್ಚು ಸಾವು-ನೋವು ಕಂಡ ದೇಶಗಳನ್ನು ಮೀರಿ ಭಾರತದಲ್ಲಿ ವ್ಯಾಪಿಸುತ್ತಿದೆ ಮತ್ತು ದಿನದಿಂದ ದಿನಕ್ಕೆ ಜಾಗತಿಕ ಮಟ್ಟದಲ್ಲಿ ಸೋಂಕಿತರ ಪಟ್ಟಿಯಲ್ಲಿ ಮೇಲೇರುತ್ತಲೇ ಇದೆ!
ಹಾಗಾಗಿ ಅತ್ಯಂತ ಹೊಣೆಗೇಡಿ ವ್ಯವಸ್ಥೆಯೊಂದಕ್ಕೆ ಅಪ್ಪಳಿಸಿರುವ ಜಾಗತಿಕ ಮಹಾಮಾರಿಯಿಂದ ಬಚಾವಾಗಲು ಈಗ ದೇಶದ ಜನತೆಗೆ ಇರುವ ಒಂದೇ ದಾರಿ, ಪ್ರಧಾನಿಗಳು ಹೇಳಿದಂತೆ ಮಾಸ್ಕ್ ಧರಿಸುವುದು, ಭೌತಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಪದೇ ಪದೇ ಕೈತೊಳೆದುಕೊಳ್ಳುವುದು. ಆಳುವ ಮಂದಿ ತಮ್ಮ ಜವಾಬ್ದಾರಿಯಿಂದ, ಉತ್ತರದಾಯಿತ್ವದಿಂದ ಕೈತೊಳೆದುಕೊಂಡ ಮೇಲೆ, ಜನರು ತಮ್ಮ ಕೈ ಪದೇಪದೇ ತೊಳೆದುಕೊಳ್ಳದೇ ಇರಲಾಗದು!