ಕರೋನಾ ಸಂಕಷ್ಟದಿಂದಾಗಿ ದೇಶದಲ್ಲಿ ಆಗಿರುವ ಉದ್ಯೋಗ ನಷ್ಟ, ವೈದ್ಯಕೀಯ ಸಿಬ್ಬಂದಿ ಸಾವು, ವಲಸೆ ಕಾರ್ಮಿಕರ ಸಾವು ಸೇರಿದಂತೆ ಬಹುತೇಕ ನಿರ್ಣಾಯಕ ಸಂಗತಿಗಳಿಗೆ ಸಂಬಂಧಿಸಿದಂತೆ ತನ್ನ ಬಳಿ ಮಾಹಿತಿಯೇ ಇಲ್ಲ ಎನ್ನುವ ಮೂಲಕ ‘ಇದು ಎನ್ ಡಿಎ ಸರ್ಕಾರವಲ್ಲ; ನೊ ಡೇಟಾ ಅವೈಲಬಲ್(ಎನ್ ಡಿಎ) ಸರ್ಕಾರ’ ಎಂಬ ವಿಡಂಬನೆಗೆ ಈಡಾಗಿದ್ದ ಮೋದಿಯವರ ಸರ್ಕಾರ, ಇದೀಗ ದೇಶದ ಜನತೆಗೆ ಮತ್ತೊಂದು ಆಘಾತ ನೀಡಿದೆ!
ಹೌದು, ಇಷ್ಟು ದಿನ ಸಾವು, ನೋವು, ನಷ್ಟದ ಕುರಿತ ಮಾಹಿತಿ ತನ್ನ ಬಳಿ ಇಲ್ಲ ಎನ್ನುತ್ತಿದ್ದ ಮೋದಿ ಸರ್ಕಾರ, ಈಗ ದೇಶದ ಪ್ರತಿ ಪ್ರಜೆಗೂ ತಾನೇ ಕಡ್ಡಾಯಗೊಳಿಸಿದ್ದ ಆರೋಗ್ಯ ಸೇತು ಆ್ಯಪ್ ನ್ನು ಯಾರು ಅಭಿವೃದ್ಧಿ ಪಡಿಸಿದ್ದು, ಯಾರು ನಿರ್ವಹಿಸುತ್ತಿರುವುದು ಎಂಬ ಮಾಹಿತಿಯೇ ತನಗಿಲ್ಲ ಎಂದು ಹೇಳುವ ಮೂಲಕ ಕರೋನಾ ಸೋಂಕು ಪತ್ತೆ ಮತ್ತು ಸೋಂಕಿತರ ಚಲನವಲನ ಕಣ್ಗಾವಲು ಆ್ಯಪ್ ಬಳಕೆದಾರರನ್ನು ಬೆಚ್ಚಿಬೀಳಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಾರ್ಚ್ 24ರ ಹೊತ್ತಿಗೆ ಕರೋನಾ ನಿಯಂತ್ರಣದ ಭಾಗವಾಗಿ ದೇಶವ್ಯಾಪಿ ದಿಢೀರ್ ಲಾಕ್ ಡೌನ್ ಹೇರಿದ ಪ್ರಧಾನಿ ಮೋದಿಯವರು, ಬರೋಬ್ಬರಿ ಏಳು ತಿಂಗಳ ಬಳಿಕವೂ ಅಂತಹದ್ದೊಂದು ವ್ಯಾಪಕ ಲಾಕ್ ಡೌನ್ ನಿಂದಾಗಿ ದೇಶದ ಬಡವರು, ಕಾರ್ಮಿಕರು, ಉದ್ಯೋಗಿಗಳು, ಕೃಷಿಕರ ದುಡಿಮೆ ಮತ್ತು ಬದುಕಿನ ಮೇಲೆ ಆಗಿರುವ ಪರಿಣಾಮಗಳ ಪರಿಶೀಲನೆ ನಡೆಸುವ ಹೊಣೆಗಾರಿಕೆಯನ್ನೇ ಮರೆತುಬಿಟ್ಟರು. ಹಾಗಾಗಿ ಜಗತ್ತಿನಲ್ಲೇ ಅತ್ಯಂತ ಭೀಕರ ಪರಿಣಾಣದ ಸುದೀರ್ಘ ಲಾಕ್ ಡೌನ್ ನಿಂದಾಗಿ ಆಗಿರುವ ಉದ್ಯೋಗ ನಷ್ಟದ ಬಗ್ಗೆಯಾಗಲೀ, ಸರ್ಕಾರದ ನಿರ್ಲಕ್ಷ್ಯದಿಂದಾಗಿ ಆದ ವೈದ್ಯಕೀಯ ಸಿಬ್ಬಂದಿಯ ಸಾವಿನ ಬಗ್ಗೆಯಾಗಲೀ, ದಿಢೀರ್ ಲಾಕ್ ಡೌನ್ ನಡುವೆ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ವಾಪಸ್ಸಾಗುತ್ತಿದ್ದಾಗ ಆದ ಸಾವುನೋವಿನ ಬಗ್ಗೆಯಾಗಲೀ ಮೋದಿಯವರ ಬಳಿ ಯಾವ ಅಂಕಿಅಂಶವೂ ಇರಲಿಲ್ಲ.
Also Read: ಪ್ರಧಾನಿ ಮೋದಿ ಆಪ್ತ ಮುಖೇಶ್ ಅಂಬಾನಿ ತೆಕ್ಕೆಗೆ ದೇಶದ ಜನರ ‘ಆರೋಗ್ಯ ಸೇತು’ ಆಪ್ ಮಾಹಿತಿ!
ಆದರೆ, ತಾವೇ ಸ್ವತಃ ಆ್ಯಪ್ ಅಭಿವೃದ್ಧಿಪಡಿಸಿರುವುದಾಗಿ ಹೇಳಿ, ಆರೋಗ್ಯ ಸಂಬಂಧಿತ ಉದ್ದೇಶ ಹೊರತು ಅನ್ಯ ಉದ್ದೇಶಕ್ಕೆ ಆ ಆಪ್ ಮಾಹಿತಿಯನ್ನು ಬಳಸುವುದಿಲ್ಲ ಎಂಬ ಭರವಸೆಯನ್ನೂ ನೀಡಿ, ಸೋಂಕಿನ ಆರಂಭದಿಂದಲೂ ಪ್ರತಿ ಭಾರತೀಯರಿಗೂ ಆ್ಯಪ್ ಬಳಕೆ ಕಡ್ಡಾಯಗೊಳಿಸಿದ್ದ ಪ್ರಧಾನಿ ಮೋದಿಯವರ ಸರ್ಕಾರ, ಇದೀಗ ಆ ಆ್ಯಪ್ ಯಾರು ಮಾಡಿದ್ದು, ಅದನ್ನು ನಿರ್ವಹಿಸುತ್ತಿರುವವರು ಯಾರು? ಮುಂತಾದ ಮೂಲಭೂತ ಮಾಹಿತಿಯೇ ತನ್ನ ಬಳಿ ಇಲ್ಲ ಎಂದು ಈಗ ಕೈ ಎತ್ತಿದೆ. ಈಗಾಗಲೇ ದೇಶದ 16 ಕೋಟಿಗೂ ಹೆಚ್ಚು ಮಂದಿ ತಮ್ಮ ಮೊಬೈಲ್ ಗಳಲ್ಲಿ ಈ ಆ್ಯ ಪ್ ಬಳಸುತ್ತಿದ್ದಾರೆ. ಆ್ಯಪ್ ವೈಯಕ್ತಿಕ ಮಾಹಿತಿ ಸಂಗ್ರಹಿಸುತ್ತದೆ, ಬ್ಲೂಟೂತ್ ಮತ್ತು ಜಿಪಿಎಸ್ ತಂತ್ರಜ್ಞಾನ ಬಳಸಿ ಬಳಕೆದಾರರ ಚಲನವಲನವನ್ನು ಕ್ಷಣಕ್ಷಣವೂ ದಾಖಲಿಸಲಾಗುತ್ತದೆ. ಇದು ಅಕ್ಷರಶಃ ದೇಶದ ನಾಗರಿಕರ ಮೇಲೆ ಸಾಮೂಹಿಕ ಕಣ್ಗಾವಲು ನಡೆಸಿದಂತೆ ಎಂದು ಗಂಭೀರ ಟೀಕೆಗಳು ಆ್ಯಪ್ ವಿಷಯದಲ್ಲಿ ಕೇಳಿಬಂದಿದ್ದವು. ಆ ಹಿನ್ನೆಲೆಯಲ್ಲಿ ಆ್ಯಪ್ ಸಂಗ್ರಹಿಸುವ ಮಾಹಿತಿಯ ಮತ್ತು ರಿಯಲ್ ಟೈಮ್ ಡೇಟಾದ ಸುರಕ್ಷತೆ ಮತ್ತು ಜನರ ಖಾಸಗೀತನದ ಮೇಲೆ ಅದು ಬೀರುವ ಪರಿಣಾಮಗಳ ಬಗ್ಗೆ ವ್ಯಾಪಕ ಆತಂಕವೂ ವ್ಯಕ್ತವಾಗಿತ್ತು.
Also Read: ಆರೋಗ್ಯ ಸೇತು: ಭಾರತದ 9 ಕೋಟಿ ಜನರ ಗೌಪ್ಯ ಮಾಹಿತಿ ಅಪಾಯದಲ್ಲಿ
ಆದರೆ, ಪ್ರಧಾನಿ ಮೋದಿಯವರು ಪ್ರತಿ ಬಾರಿಯ ತಮ್ಮ ಕರೋನಾ ಕಾಲದ ಭಾಷಣಗಳಲ್ಲಿಯೂ ಸುರಕ್ಷಿತ ಅಂತರ, ಮಾಸ್ಕ್ ಬಳಕೆ, ಕೈ ತೊಳೆಯವುದು ಎಷ್ಟು ಮುಖ್ಯವೋ ಅಷ್ಟೇ ಈ ಆ್ಯಪ್ ಬಳಕೆ ಕೂಡ ಮುಖ್ಯವೆಂದು ದೇಶದ ಜನತೆಗೆ ಕರೆ ನೀಡುತ್ತಿದ್ದರು. ಆ ಹಿನ್ನೆಲೆಯಲ್ಲಿ ಏಪ್ರಿಲ್ ಮೊದಲ ವಾರ ಮೇ ಮೂರನೇ ವಾರದವರೆಗೆ ದೇಶವ್ಯಾಪಿ ಸಂಚಾರ ಮತ್ತು ಸೌಲಭ್ಯ ಪಡೆಯಲು ಈ ಆ್ಯಪ್ ಬಳಕೆ ಕಡ್ಡಾಯಗೊಳಿಸಲಾಗಿತ್ತು. ಆ ಬಳಿಕ ಸುರಕ್ಷತೆ ಮತ್ತು ತಾಂತ್ರಿಕ ಅಂಶಗಳ ಬಗ್ಗೆ ಆಕ್ಷೇಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಆ್ಯಪ್ ಬಳಕೆಯನ್ನು ಜನರ ಇಚ್ಛೆಗೆ ಬಿಡಲಾಗಿತ್ತು.
Also Read: ರೈಲು ಪ್ರಯಾಣಿಕರಿಗೆ ʼಆರೋಗ್ಯ ಸೇತುʼ App ಕಡ್ಡಾಯ!
ಈ ನಡುವೆ ಆ್ಯಪ್ ಕುರಿತ ಅನುಮಾನ, ಆತಂಕಗಳು ಎದುರಾದಾಗೆಲ್ಲ ಸರ್ಕಾರ, ಆ ಆ್ಯಪನ್ನು ಸರ್ಕಾರದ ನ್ಯಾಷನಲ್ ಇನ್ ಫಾರ್ಮ್ಯಾಟಿಕ್ಸ್ ಸೆಂಟರ್(ಎನ್ ಐಸಿ) ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಜಂಟಿಯಾಗಿ ಅಭಿವೃದ್ಧಿಪಡಿಸಿವೆ ಎಂದು ಹೇಳುವ ಮೂಲಕ ಅದರ ಸುರಕ್ಷತೆಗೆ ಅಧಿಕೃತತೆಯ ಮುದ್ರೆ ಒತ್ತಲಾಗುತ್ತಿತ್ತು. ಕೇಂದ್ರ ಸರ್ಕಾರದ ವಿವಿಧ ಸಚಿವರು, ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಸೇರಿದಂತೆ ಹಲವರು ಈ ಭರವಸೆಗಳನ್ನು ನೀಡಿ, ಆ್ಯಪ್ ಕಡ್ಡಾಯಗೊಳಿಸಿದ್ದ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಆ್ಯಪ್ ಸುರಕ್ಷತೆಯ ಬಗ್ಗೆ ಪ್ರಶ್ನಿಸಿ, ಇದು ದೇಶದ ಜನತೆಯ ಸಾಮೂಹಿಕ ಕಣ್ಗಾವಲು ಉದ್ದೇಶಕ್ಕೆ ಬಳಕೆಯಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದರು. ಅದಕ್ಕೆ ಪ್ರತಿಯಾಗಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್, ಇದೊಂದು ಬಲಿಷ್ಟ ಭದ್ರತೆಯ ಆ್ಯಪ್ ಆಗಿದ್ದು, ಮಾಹಿತಿ ಸೋರಿಕೆಯ ಯಾವ ಸಾಧ್ಯತೆಯೂ ಇಲ್ಲ ಎಂದಿದ್ದರು!
ಆದರೆ, ಇದೀಗ ದಿಢೀರನೇ ಸರ್ಕಾರ ಉಲ್ಟಾ ಹೊಡೆದಿದ್ದು, ಆ ಆ್ಯಪ್ ಯಾರು ಅಭಿವೃದ್ಧಿಪಡಿಸಿದ್ದಾರೆ? ಯಾರು ನಿರ್ವಹಣೆ ಮಾಡುತ್ತಿದ್ದಾರೆ? ಅದು ಸಂಗ್ರಹಿಸಿದ ದೇಶದ ಕೋಟ್ಯಂತರ ಜನರ ಖಾಸಗೀ ಮಾಹಿತಿಯನ್ನು ಎಲ್ಲಿ ಸಂಗ್ರಹಿಸಿಡಲಾಗಿದೆ ಮತ್ತು ಅದು ಎಷ್ಟು ಸುರಕ್ಷಿತವಾಗಿದೆ? ಎಂಬದೂ ಸೇರಿದಂತೆ ಸಂಪೂರ್ಣ ಮಾಹಿತಿ ಕೋರಿದ್ದ ಮಾಹಿತಿ ಹಕ್ಕು ಅರ್ಜಿಯೊಂದಕ್ಕೆ, ಆ ಯಾವ ಮಾಹಿತಿಯೂ ತನ್ನ ಬಳಿ ಇಲ್ಲ ಎಂದು ಸ್ವತಃ ಎನ್ ಐಸಿಯೇ ಅಧಿಕೃತ ಮಾಹಿತಿ ನೀಡಿದೆ! ಅಷ್ಟೇ ಅಲ್ಲ; ನ್ಯಾಷನಲ್ ಇ ಗವರ್ನೆನ್ಸ್ ಡಿವಿಸನ್, ಮಾಹಿತಿ ತಂತ್ರಜ್ಞಾನ ಸಚಿವಾಲಯ ಕೂಡ ಆ್ಯಪ್ ಸಂಬಂಧ ತನ್ನ ಬಳಿ ಮಾಹಿತಿ ಇಲ್ಲ ಎಂದು ಹೇಳಿವೆ!
ಆ ಹಿನ್ನೆಲೆಯಲ್ಲಿ ಮಾಹಿತಿ ಕೋರಿದ್ದ ಸೌರವ್ ದಾಸ್ ಎಂಬುವರು ಈ ಸರ್ಕಾರಿ ಸಂಸ್ಥೆ ಮತ್ತು ಇಲಾಖೆಗಳ ವಿರುದ್ಧ ಕೇಂದ್ರ ಮಾಹಿತಿ ಆಯೋಗಕ್ಕೆ(ಸಿಐಸಿ) ದೂರು ಸಲ್ಲಿಸಿದ್ದರು. ಮಾಹಿತಿ ಆಯೋಗ, ಇದೀಗ ಸಂಬಂಧಪಟ್ಟ ಸರ್ಕಾರಿ ಸಂಸ್ಥೆಗಳಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದ್ದು, ಆ್ಯಪ್ ಸಂಬಂಧಿಸಿದ ವೆಬ್ ಸೈಟಿನಲ್ಲಿ ಆ್ಯಪ್ ಅಭಿವೃದ್ಧಿಪಡಿಸಿದ್ದು ಮತ್ತು ನಿರ್ವಹಣೆ ಮಾಡುತ್ತಿರುವುದು ಎನ್ ಐಸಿ ಮತ್ತು ಕೇಂದ್ರ ಐಟಿ ಸಚಿವಾಲಯ ಎಂಬ ಮಾಹಿತಿ ಇದೆ. ಜೊತೆಗೆ ಸರ್ಕಾರಿ ವೆಬ್ ವಿಳಾಸದಲ್ಲಿಯೇ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಆದರೆ, ನೀವು ಆ ಆ್ಯಪ್ ಕುರಿತ ಯಾವ ಮಾಹಿತಿಯೂ ಇಲ್ಲ ಎಂದಿದ್ದೀರಿ. ಇದರ್ಥವೇನು ಎಂದು ಪ್ರಶ್ನಿಸಿದೆ.
Also Read: ಸ್ಮಾರ್ಟ್ ಫೋನ್ಗಳಲ್ಲಿ ಇನ್ಮುಂದೆ ಇನ್ಬಿಲ್ಟ್ ಆಗಿ ಬರಲಿದೆ ʼಆರೋಗ್ಯ ಸೇತುʼ
ಈ ನಡುವೆ, ಆ್ಯಪ್ ಕುರಿತ ಈ ಹೊಸ ವಿವಾದ ಭುಗಿಲೇಳುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರದ ‘ಮೈಗವರ್ನಮೆಂಟ್ ಮತ್ತು ಡಿಜಿಟಲ್ ಇಂಡಿಯಾ’ ಕಾರ್ಪೊರೇಷನ್ ಸಿಇಒ ಅಭಿಷೇಕ್ ಸಿಂಗ್, ಈ ಬಗ್ಗೆ ಗೊಂದಲಬೇಡ. ಎನ್ ಐಸಿ ಮತ್ತು ಐಟಿ ಇಲಾಖೆ ಜಂಟಿಯಾಗಿ ಖಾಸಗೀ ಸಹಭಾಗಿತ್ವದಲ್ಲಿಯೇ ಈ ಆ್ಯಪ್ ಅಭಿವೃದ್ಧಿಪಡಿಸಿವೆ. ಈ ಕುರಿತು ಸರ್ಕಾರ ಸದ್ಯದಲ್ಲೇ ವಿವರ ಸ್ಪಷ್ಟನೆ ನೀಡಲಿದೆ ಎಂದು ಬುಧವಾರ ಸಂಜೆ ಹೇಳಿದ್ದಾರೆ. ಆ ಮೂಲಕ ಸ್ವತಃ ಎನ್ ಐಸಿ ಮತ್ತು ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯಗಳು ಮಾಹಿತಿ ಹಕ್ಕು ಅರ್ಜಿಗೆ ಸುಳ್ಳು ಉತ್ತರ ನೀಡಿವೆ ಎಂಬುದನ್ನು ಮೋದಿಯವರ ಸರ್ಕಾರ ಒಪ್ಪಿಕೊಂಡಂತಾಗಿದೆ.
Also Read: ನೀವು ಬಳಸುವ Arogya Sethu App ಎಷ್ಟು ಸುರಕ್ಷಿತ.?
ಆದರೆ, ಈ ಆ್ಯಪ್ ನ ವಿಶ್ವಾಸಾರ್ಹತೆ ಮತ್ತು ಸುರಕ್ಷತೆಯ ವಿಷಯದಲ್ಲಿ ಆರಂಭದಿಂದಲೂ ಇದ್ದ ಆತಂಕ ಮತ್ತು ಅನುಮಾನಗಳನ್ನು ಬಗೆಹರಿಸುವ ಬದಲು, ಜನರಲ್ಲಿ ವಿಶ್ವಾಸ ಹುಟ್ಟಿಸುವ ಬದಲು; ಕೇಂದ್ರ ಬಿಜೆಪಿ ಸರ್ಕಾರ, ಈ ಹಿಂದೆ ಕರೋನಾ ವಿಷಯದಲ್ಲಿ ಮಾಡಿದಂತೆಯೇ ಇನ್ನಷ್ಟು ಗೊಂದಲ ಮತ್ತು ಆತಂಕ ಹುಟ್ಟಿಸುವಲ್ಲಿಯೇ ಹೆಚ್ಚು ಆಸಕ್ತಿ ವಹಿಸುತ್ತಿದೆ ಎಂಬುದನ್ನು ಈ ಪ್ರಕರಣ ಮತ್ತೊಮ್ಮೆ ಸಾಭೀತುಮಾಡಿದೆ.