ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರನ್ನು ಬಂಧಿಸಿದ ನಂತರ ಆಲಿಬಾಗ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಧೀಶರು ಅರ್ನಾಬ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಅನ್ವಯ್ ಮಧುಕರ್ ನಾಯ್ಕ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ನಾಬ್ ಗೋಸ್ವಾಮಿ ಅವರನ್ನು ಬುಧವಾರ ವೋರ್ಲಿಯಲ್ಲಿರುವ ಅವರ ಮನೆಯಿಂದ ಬಂಧಿಸಲಾಗಿತ್ತು. ಆಲಿಬಾಗ್ ಪೊಲೀಸರು ಮುಂಬೈ ಕ್ರೈಂಬ್ರಾಂಚ್ನ ಸಹಾಯ ಪಡೆದು ಅರ್ನಾಬ್ರನ್ನು ಬಂಧಿಸಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಂಧನದ ಸಂದರ್ಭದಲ್ಲಿ ನನ್ನ ಮೇಲೆ ಹಾಗೂ ನನ್ನ ಕುಟುಂಬದ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಅರ್ನಾಬ್ ಆರೋಪ ಮಾಡಿದ್ದರು. ಈ ಆರೋಪಗಳಿಗೆ ಪ್ರತಿಯಾಗಿ 13 ನಿಮಿಷಗಳ ವೀಡಿಯೋವೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಪೊಲೀಸರು ಯಾವುದೇ ಹಲ್ಲೆ ನಡೆಸಿಲ್ಲ ಎಂದು ಹೇಳಿದ್ದಾರೆ. ಈ ವೀಡಿಯೋವನ್ನು ವೀಕ್ಷಿಸಿದ ನ್ಯಾಯಾಲಯವು ಅರ್ನಾಬ್ ಆರೋಪವನ್ನು ತಳ್ಳಿ ಹಾಕಿದೆ.
ಬಂಧನದ ವಿರುದ್ದ ಗುರುವಾರ ಬಾಂಬೆ ಹೈಕೋರ್ಟ್ ಮೆಟ್ಟಿಲೇರಲಿರುವ ಅರ್ನಾಬ್ ಪರ ವಕೀಲರು, ಅರ್ನಾಬ್ ಮೇಲಿನ ಕೇಸನ್ನು ವಜಾಗೊಳಿಸಲು ಮನವಿ ಸಲ್ಲಿಸಲಿದ್ದಾರೆಂದು ವರದಿಯಾಗಿದೆ. ಇದರೊಂದಿಗೆ, ಅರ್ನಾಬ್ ಅವರಿಗೆ ಜಾಮೀನು ಮಂಜೂರು ಮಾಡಲು ಕೂಡಾ ಮನವಿ ಮಾಡಲಿದ್ದಾರೆ.
ಪೊಲೀಸ್ ಕಸ್ಟಡಿ ನೀಡದೇ ಇರುವ ನ್ಯಾಯಾಲಯದ ನಿರ್ಧಾರವನ್ನು ಸ್ವಾಗತಿಸಿರುವ ಅರ್ನಾಬ್ಗೆ ವಕೀಲರು, ಇದು ತಮಗೆ ಸಿಕ್ಕಿರುವ ಜಯ ಎಂದು ಹೇಳಿದ್ದಾರೆ.
ಬುಧವಾರ ರಾತ್ರಿ ಅರ್ನಾಬ್ ಅವರನ್ನು ಆಲಿಬಾಗ್ನ ಶಾಲೆಯೊಂದರಲ್ಲಿ ಇಡಲಾಗಿತ್ತು. ಆಲಿಬಾಗ್ ಜೈಲಿನ ಕೋವಿಡ್ ಸೆಂಟರ್ ಆಗಿ ಆ ಶಾಲೆಯನ್ನು ಮಾರ್ಪಡಿಸಲಾಗಿತ್ತು. ಶಾಲೆಗೆ ಕರೆತರುವ ಮುನ್ನ ಸರ್ಕಾರಿ ಆಸ್ಪತ್ರೆಯಲ್ಲಿ ಅರ್ನಾಬ್ ಅವರ ಆರೋಗ್ಯ ತಪಾಸಣೆಯನ್ನೂ ನಡೆಸಲಾಗಿತ್ತು.