ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೀವ್ರ ಮುಖಭಂಗ ಅನುಭವಿಸಲಿದೆ ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಹೇಳಿರುವುದರಿಂದ ಕಮಲ ಪಾಳೆಯದ ‘ಚುನಾವಣಾ ಚಾಣಕ್ಯ’ ಎಂದು ಬಿಂಬಿಸಲ್ಪಟ್ಟ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಾಮರ್ಥ್ಯದ ಬಗ್ಗೆ ಗಂಭೀರ ಪ್ರಶ್ನೆಗಳು ಹೇಳುವಂತೆ ಮಾಡಿವೆ. ಈ ಮಧ್ಯೆ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸತತ ಎರಡನೇ ಬಾರಿಗೆ ಬಹುಮತ ಪಡೆಯುವ ಫೇವರಿಟ್ ಎನಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಚುನಾವಣಾ ಕಾರ್ಯ ತಂತ್ರಜ್ಞ ಹಾಗೂ ಬಿಜೆಪಿಯ ಒಂದು ಕಾಲದ ಸ್ನೇಹಿತ ಪ್ರಶಾಂತ್ ಕಿಶೋರ್ ಮುಖ್ಯ ಭೂಮಿಕೆ ಬಂದಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಅಮಿತ್ ಶಾ ಜೊತೆಗೂಡಿ ಪ್ರಚಾರ ತಂತ್ರ ಹೆಣೆದಿದ್ದ ಪ್ರಶಾಂತ್ ಕಿಶೋರ್ ಅವರು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹಣಿಯುವಲ್ಲಿ ಸಫಲವಾಗುವ ಮೂಲಕ ಪ್ರಚಾರ ತಂತ್ರಗಾರಿಕೆಯಲ್ಲಿ ಅಮಿತ್ ಶಾ ಅವರನ್ನು ಮಣಿಸಿದ್ದಾರೆ.
ಅಮಿತ್ ಶಾ ಹಾಗೂ ಪ್ರಶಾಂತ್ ಕಿಶೋರ್ ನಡುವಿನ ಹಣಾಹಣಿಯು ವರ್ಷಾಂತ್ಯದಲ್ಲಿ ನಡೆಯುವ ತಮಿಳುನಾಡು ಹಾಗೂ ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲೂ ಮುಂದುವರಿಯಲಿದೆ. ತಮಿಳುನಾಡಿನಲ್ಲಿ ಡಿಎಂಕೆ ಹಾಗೂ ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಚುನಾವಣಾ ಪ್ರಚಾರ ಕಾರ್ಯತಂತ್ರಗಾರನ ಜವಾಬ್ದಾರಿಯನ್ನು ಪ್ರಶಾಂತ್ ಕಿಶೋರ್ ವಹಿಸಿಕೊಂಡಿದ್ದಾರೆ. ಈ ಎರಡೂ ರಾಜ್ಯಗಳ ಫಲಿತಾಂಶವು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹಾಗೂ ಎಂ ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಪರವಾಗಿ ಹೊರಹೊಮ್ಮಿದರೆ ಪ್ರಶಾಂತ್ ಕಿಶೋರ್ ಅವರ ಎದುರು ಅಮಿತ್ ಶಾ ಅವರು ಮತ್ತಷ್ಟು ಮಂಕಾಗುವುದು ಸ್ಪಷ್ಟ. ಇದರೊಂದಿಗೆ ಅಮಿತ್ ಶಾ ಅವರ ‘ಚಾಣಕ್ಯ’ನ ಪಟ್ಟ ಕಿಶೋರ್ ಅವರಿಗೆ ವರ್ಗಾವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯುವಿನ ಉಪಾಧ್ಯಕ್ಷರಾಗಿದ್ದ ಪ್ರಶಾಂತ್ ಕಿಶೋರ್ ಅವರು ಆ ಪಕ್ಷದಲ್ಲಿ ನಿತೀಶ್ ಉತ್ತರಾಧಿಕಾರಿ ಎನ್ನಲಾಗಿತ್ತು. ಬಿಹಾರದವರೇ ಆದ ಪ್ರಶಾಂತ್ ಅವರು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. “ನಿತೀಶ್ ಕುಮಾರ್ ಅವರು ಈ ಎರಡೂ ವಿವಾದಾತ್ಮಕ ವಿಚಾರಗಳನ್ನು ವಿರೋಧಿಸಬೇಕು” ಎಂದು ಬಹಿರಂಗವಾಗಿ ಹೇಳುವ ಮೂಲಕ ಜೆಡಿಯು-ಬಿಜೆಪಿಗೆ ಇರುಸುಮುರುಸು ಉಂಟು ಮಾಡಿದ್ದರು.
ಮುಜುಗರ ತಿಪ್ಪಿಸಿಕೊಳ್ಳಲು ಹಾಗೂ ಸರ್ಕಾರ ಉಳಿಸಿಕೊಳ್ಳುವ ಒತ್ತಡಕ್ಕೆ ಸಿಲುಕಿದ್ದ ನಿತೀಶ್ ಕುಮಾರ್ ಅವರು ಪ್ರಶಾಂತ್ ಕಿಶೋರ್ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಮೂಲಕ ಮಿತ್ರಪಕ್ಷವಾದ ಬಿಜೆಪಿ ಬೆಂಬಲಕ್ಕೆ ನಿಂತಿದ್ದರು. ಇಷ್ಟಕ್ಕೆ ಸುಮ್ಮನಾಗದ ನಿತೀಶ್ ಕುಮಾರ್ ಅವರು “ಅಮಿತ್ ಶಾ ಸೂಚನೆಯ ಮೇರೆಗೆ ಪ್ರಶಾಂತ್ ಕಿಶೋರ್ ಅವರನ್ನು ಜೆಡಿಯು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು” ಎನ್ನುವ ಮೂಲಕ ಕಿಶೋರ್ ಅವರನ್ನು ಕೆರಳಿಸಿದ್ದರು.
ಇದರ ಬೆನ್ನಲ್ಲೇ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ಗೆ ಚುನಾವಣಾ ಕಾರ್ಯ ತಂತ್ರಜ್ಞರಾಗಿ ನೇಮಕವಾಗಿದ್ದ ಕಿಶೋರ್ ಬಗ್ಗೆ ನಿತೀಶ್ ಗೆ ಬೇಸರವಿತ್ತು. ದೆಹಲಿ ಚುನಾವಣೆಯಲ್ಲಿ ನಿತೀಶ್ ಅವರು ಬಿಜೆಪಿಗೆ ಬೆಂಬಲ ಘೋಷಿಸಿದ್ದು, ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಆಪ್ ಬಹುಮತ ಪಡೆಯಲಿದೆ ಎಂಬ ಅಂಶ ನಿತೀಶ್ ಹಾಗೂ ಅಮಿತ್ ಶಾ ಗೆ ಮುಜುಗರ ತರುವ ಬೆಳವಣಿಗೆ. ಇಲ್ಲಿ ಪ್ರಶಾಂತ್ ಕಿಶೋರ್ ಕೈ ಮೇಲಾಗಿರುವುದು ಸ್ಪಷ್ಟವಾಗಿದ್ದು, ಇಬ್ಬರು ಪ್ರಮುಖ ರಾಜಕಾರಣಿಗಳು ಚುನಾವಣಾ ತಂತ್ರಗಾರನ ಪ್ರಶಾಂತ್ ಕಿಶೋರ್ ಎದುರು ಮಂಡಿಯೂರಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಎಂಬ ಬ್ರ್ಯಾಂಡ್ ಸೃಷ್ಟಿಸಿ ಅದನ್ನು ಸಮರ್ಥವಾಗಿ ಮಾರಾಟ ಮಾಡುವ ಮೂಲಕ ಬಿಜೆಪಿಗೆ ಅಭೂತಪೂರ್ವ ಗೆಲುವು ತಂದುಕೊಡುವಲ್ಲಿ ಪ್ರಶಾಂತ್ ಕಿಶೋರ್ ಪಾತ್ರ ದೊಡ್ಡದಾಗಿತ್ತು. ಆನಂತರ ಬಿಜೆಪಿಯೊಂದಿಗೆ ಮನಸ್ತಾಪವಾಗಿ ಅಲ್ಲಿಂದ ಹೊರ ನಡೆದಿದ್ದರು. ಆದರೂ ಬಹುತೇಕ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಭಾರತದ ಅತ್ಯಂತ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ 80 ಸ್ಥಾನಗಳ ಪೈಕಿ ಪ್ರಾದೇಶಿಕ ಪಕ್ಷಗಳಾದ ಸಮಾಜವಾದಿ (ಎಸ್ಪಿ) ಹಾಗೂ ಬಹುಜನ ಸಮಾಜವಾದಿ ಪಕ್ಷಗಳನ್ನು (ಬಿಎಸ್‌ಪಿ) ಮಣಿಸಿ 73 ಸ್ಥಾನವನ್ನು ಬಿಜೆಪಿ ನೇತೃತ್ವದ ಎನ್ಡಿಎ ಗೆದ್ದುಕೊಡುವ ಮೂಲಕ ಅಮಿತ್ ಶಾ ಭಾರತದ ರಾಜಕಾರಣದಲ್ಲಿ ಮಹತ್ವರ ಸ್ಥಾನಕ್ಕೇರಿದ್ದು. ಇದಾದ ಕೆಲವೇ ತಿಂಗಳಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಅವರು ಬಿಜೆಪಿಯ ಗೆಲುವಿನ ಚೈತ್ರಯಾತ್ರೆಯನ್ನೇ ಸೃಷ್ಟಿಸಿದ್ದರು. ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಬಹುಮತ ತಂದುಕೊಡುವಲ್ಲಿ ಅಮಿತ್ ಶಾ ಪಾತ್ರ ಹಿರಿದು. 2017ರಲ್ಲಿ ನಡೆದಿದ್ದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಚುನಾವಣಾ ತಂತ್ರಜ್ಞನಾಗಿ ಪ್ರಶಾಂತ್ ಕೆಲಸ ಮಾಡಿದ್ದರೂ ರಾಹುಲ್ ಗಾಂಧಿ ನೇತೃತ್ವದ ಪಕ್ಷ ನಿರೀಕ್ಷಿತ ಫಲಿತಾಂಶ ನೀಡಿರಲಿಲ್ಲ. ಅಮಿತ್ ಶಾ ಅಲ್ಲಿ ಪ್ರಶಾಂತ್ ಕಿಶೋರ್ ಎದುರು ಸ್ಪಷ್ಟ ಮೇಲುಗೈ ಸಾಧಿಸಿದ್ದರು.
ಸರಿ ಸುಮಾರು 21 ರಾಜ್ಯಗಳಲ್ಲಿ ಮಿತ್ರಪಕ್ಷಗಳ ಜೊತೆಗೂಡಿ ರಾಜಕೀಯ ತಂತ್ರಗಾರಿಕೆಯ ಮೂಲಕ ಬಿಜೆಪಿಗೆ ಅಧಿಕಾರ ಒದಗಿಸುವಲ್ಲಿ ತಂತ್ರಗಾರಿಕೆ ಮೆರೆದ ಶಾ, ಬಿಜೆಪಿಯ ಚಾಣಕ್ಯ ಎನ್ನುವ ಬಿರುದುಗಿಟ್ಟಿಸಿಕೊಂಡಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಂತೂ ಬಿಜೆಪಿಗೆ 303 ಸ್ಥಾನ ಗೆದ್ದುಕೊಡುವಲ್ಲಿ ಅಮಿತ್ ಶಾ ಪಾತ್ರ ಹಿರಿದು ಎನ್ನಲಾಗಿತ್ತು. ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಎರಡು ಪ್ರಾದೇಶಿಕ ಪಕ್ಷಗಳಾದ ಎಸ್‌ಪಿ ಹಾಗೂ ಬಿಎಸ್‌ಪಿ ಜೊತೆಗೂಡಿದರೂ ಬಿಜೆಪಿಗೆ 65 ಸ್ಥಾನ ಗೆದ್ದುಕೊಡುವ ಮೂಲಕ ಶಾ ಅವರು ತಮ್ಮ ಸಾಮರ್ಥ್ಯವನ್ನು ಪ್ರಚುರಪಡಿಸಿದ್ದರು.
ಇದಾದ ಬಳಿಕ ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್ ನಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿರುವುದು ಹಾಗೂ 2018ರ ಡಿಸೆಂಬರ್ ನಲ್ಲಿ ನಡೆದ ಮಧ್ಯಪ್ರದೇಶ, ಚತ್ತೀಸಗಢ ಹಾಗೂ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡರೂ ಅಮಿತ್ ಶಾ ಅವರಿಗೆ ದೊರೆತಿದ್ದ “ಚಾಣಕ್ಯ’ನ ಪಟ್ಟಕ್ಕೆ ಅಷ್ಟೇನು ಚ್ಯುತಿಯಾಗಿರಲಿಲ್ಲ.
2019ರ ಸಾರ್ವತ್ರಿಕ ಚುನಾವಣೆಯ ಅಭೂತಪೂರ್ವ ಗೆಲುವಿನ ಬಳಿಕ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಸರಣಿ ಸೋಲಿಗೆ ಕಾರಣವೇನು? ಅಮಿತ್ ಶಾ ತಂತ್ರಗಾರಿಕೆಯ ಕತ್ತಿ ಮೊಂಡಾಗಿದೆಯೇ ಎಂಬ ವಾದ ಸರಣಿ ಆರಂಭವಾಗಿದೆ. ವರ್ಷಾಂತ್ಯದಲ್ಲಿ ನಡೆಯಲಿರುವ ತಮಿಳುನಾಡು ಹಾಗೂ ಬಿಹಾರ ಹಾಗೂ ಮುಂದಿನ ವರ್ಷ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶವು ಅಮಿತ್ ಶಾ ಸಾಮರ್ಥ್ಯವನ್ನು ಮತ್ತೊಮ್ಮೆ ಹೊರಗೆ ಹಚ್ಚಲಿದೆ. ಇಲ್ಲಿನ ಫಲಿತಾಂಶ ಅವರ ತಂತ್ರಗಾರಿಕೆ ಪ್ರಬಲ ಸವಾಲು ಒಡ್ಡಲಿದೆ.
2014ರ ಲೋಕಸಭಾ ಚುನಾವಣೆಯ ನಂತರ 2015ರಲ್ಲಿ ಬಿಹಾರದಲ್ಲಿ ನಡೆದಿದ್ದ ವಿಧಾನಸಸಭಾ ಚುನಾವಣೆಯಲ್ಲಿ ನಿತೀಶ್ ನೇತೃತ್ವದ ಆರ್ ಜೆಡಿ-ಕಾಂಗ್ರೆಸ್ ಮಹಾಮೈತ್ರಿಯ ಪರವಾಗಿ ಕೆಸಲ ಮಾಡಿದ್ದ ಪ್ರಶಾಂತ್ ಕಿಶೋರ್ ಬಿಜೆಪಿಗೆ ಮಣ್ಣು ಮುಕ್ಕಿಸಿದ್ದರು. ನಿತೀಶ್ ವಂಶವಾಹಿ (ಡಿಎನ್‌ಎ) ಬಗ್ಗೆ ಮಾತನಾಡಿದ್ದ ನರೇಂದ್ರ ಮೋದಿ ಹಾಗೂ ಮೀಸಲಾತಿಯ ಬಗ್ಗೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಆಡಿದ್ದ ಮಾತುಗಳನ್ನು ಪರಿಣಾಮಕಾರಿಯಾಗಿ ಮತದಾರರಿಗೆ ತಲುಪಿಸಿದ್ದ ಪ್ರಶಾಂತ್ ಕಿಶೋರ್ ಅವರು ಬಿಜೆಪಿಯನ್ನು ಮಣಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದರು. ಆನಂತರ ಪಂಜಾಬ್ ನಲ್ಲಿ ಕಾಂಗ್ರೆಸ್ ಅಮರೇಂದ್ರ ಸಿಂಗ್ ನೇತೃತ್ವದ ಸರ್ಕಾರ ಸ್ಥಾಪಿಸುವಲ್ಲಿ ಪ್ರಶಾಂತ್ ಕಿಶೋರ್ ಯಶಸ್ವಿಯಾಗಿದ್ದರು. ಬಿಜೆಪಿ ಹಾಗೂ ಅಕಾಲಿದಳ ಧೂಳೀಪಟವಾಗಿದ್ದವು. ಮೋದಿ-ಶಾ ಜೋಡಿ ನಿರ್ದಯವಾಗಿ ಸೋತಿತ್ತು.
ಇದಾದ ಬಳಿಕ ಆಂಧ್ರಪ್ರದೇಶದಲ್ಲಿ ವೈಎಸ್ ಆರ್ ಕಾಂಗ್ರೆಸ್ ನ ಜಗನ್ಮೋಹನ್ ರೆಡ್ಡಿ ಮುಖ್ಯಮಂತ್ರಿ ಗಾದಿಗೇರುವಲ್ಲಿ ಕಿಶೋರ್ ತಂತ್ರ ಫಲಿಸಿತ್ತು. ದೆಹಲಿ ಚುನಾವಣೆಯಲ್ಲಿಯೂ ಪ್ರಶಾಂತ್ ಕಿಶೋರ್ ಅವರು ಗೆಲ್ಲುವ ಪಕ್ಷದೊಂದಿಗೆ ನಿಂತಿರುವುದು ಅವರ ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಹೊರಹೊಮ್ಮವ ಫಲಿತಾಂಶಗಳು ಅಮಿತ್ ಶಾ ಹಾಗೂ ಪ್ರಶಾಂತ್ ಕಿಶೋರ್ ನಡುವಿನ ಹಣಾಹಣಿ ತೀವ್ರಗೊಳ್ಳುವಂತೆ ಮಾಡಲಿದೆ ಎಂಬುದು ಸ್ಪಷ್ಟ. ಸದ್ಯಕ್ಕೆ ಚುನಾವಣಾ ಕಾರ್ಯತಂತ್ರದಲ್ಲಿ ಪ್ರಶಾಂತ್ ಕಿಶೋರ್ ಅವರು ಅಮಿತ್ ಶಾ ಎದುರು ಮೇಲುಗೈ ಸಾಧಿಸಿರುವುದು ಸ್ಪಷ್ಟ.