ಇತ್ತೀಚೆಗೆ ಬಿಜೆಪಿ ಗೆಲುವು ಸಾಧಿಸಿದ ಶಿರಾ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಸರ್ಕಾರ ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ ಎಂದು ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲು ಸಾಧಿಸಿದ ಬಳಿಕ ಪ್ರತಿಕ್ರಿಯಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ಚುನಾವಣೆಯಲ್ಲಿ ಗೆಲ್ಲಲು ಅಧಿಕಾರ ದುರುಪಯೋಗ ಪಡಿಸಿಕೊಂಡಿದೆ ಎಂದು ಆರೋಪಿಸಿದ್ದರು. ಸಿದ್ದರಾಮಯ್ಯರ ಈ ಹೇಳಿಕೆಗೆ ತಿರುಗೇಟು ನೀಡಿದ ವಿಜಯೇಂದ್ರ ಯಾವುದೇ ತೆರನಾದ ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ, ಆಮಿಷವೊಡ್ಡಿದರೆ ಮತದಾರ ಬೆಂಬಲಿಸುವುದಿಲ್ಲ ಎಂದಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಶಿರಾದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ವೈಫಲ್ಯಗಳನ್ನು ಎತ್ತಿ ತೋರಿಸಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರ ಮುಂದೆ ಇಟ್ಟಿದ್ದೇವೆ. ಎಲ್ಲಿಯೂ ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ. ಸೋಲಿನ ಹತಾಶೆಯಿಂದ ಸಿದ್ಧರಾಮಯ್ಯ ಹೀಗೆ ಮಾತಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ 15 ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿತ್ತು. 15 ರಲ್ಲಿ 12 ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು. ಮೊನ್ನೆ ನಡೆದ 2 ಕ್ಷೇತಗಳ ಚುನಾವಣೆಯಲ್ಲಿ ಬಿಜೆಪಿಗೆ ಶಿರಾ ಕ್ಷೇತ್ರ ಗೆಲ್ಲುವುದು ದೊಡ್ಡ ಸವಾಲಾಗಿತ್ತು. ಆದರೂ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಗಳು ಜಾತಿ ಆಧಾರದ ಮೇಲೆ ರಾಜಕಾರಣ ಮಾಡುತ್ತಿವೆ. ಆದರೆ, ಬಿಜೆಪಿ ಎಲ್ಲ ಸಮುದಾಯಗಳನ್ನು ಒಂದಾಗಿ ಕಂಡಿರುವುದರಿಂದ ಕಮಲ ಅರಳಿದೆ. ಎಲ್ಲಿಯೇ ಹೋದರೂ ಕಮಲ ಅರಳುತ್ತದೆ ಅನ್ನುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
‘ಯಡಿಯೂರಪ್ಪ ಅವರ ಕೆಲಸಗಳೇ ಗೆಲುವಿಗೆ ಮುಖ್ಯ ಕಾರಣ. ಮುಂದಿನ ದಿನಗಳಲ್ಲಿ ಮಸ್ಕಿ, ಬಸವಕಲ್ಯಾಣ ಕ್ಷೇತ್ರಗಳಲ್ಲಿ ಉಪ ಚುನಾವಣೆ ಬರಲಿದೆ. ಬಸವ ಕಲ್ಯಾಣದಲ್ಲಿ ಇಂದು ಮುಖಂಡರನ್ನು ಭೇಟಿಯಾಗುತ್ತೇನೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಯಾವ ಕ್ಷೇತ್ರದ ಜವಾಬ್ದಾರಿ ಕೊಟ್ಟರೂ ಅದನ್ನು ವಹಿಸಿಕೊಳ್ಳುತ್ತೇನೆ. ಬಿಜೆಪಿ ಆಯ್ಕೆ ಸಮಿತಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ. ಪಕ್ಷದ ಹೈಕಮಾಂಡ್ ನಿರ್ಣಯಿಸುವ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ, ಬಸವ ಕಲ್ಯಾಣದಲ್ಲಿ ನಾನಂತೂ ಆಕಾಂಕ್ಷಿಯಲ್ಲ’ ಎಂದು ಅವರು ತಿಳಿಸಿದ್ದಾರೆ.
ಬಳಿಕ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿದ ವಿಜಯೇಂದ್ರ, ಬಸವಾದಿ ಶರಣರ ಕುರುಹಾದ ಅನುಭವ ಮಂಟಪಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪರವರ ಸರ್ಕಾರ ಅಗತ್ಯ ಅನುದಾನ ಒದಗಿಸಿದ್ದು, ಕಟ್ಟಡ ಕಾಮಗಾರಿಗೆ ಶೀಘ್ರ ಆರಂಭವಾಗಲಿದೆ. ಇಂದು ಬಸವಕಲ್ಯಾಣದ ಅನುಭವ ಮಂಟಪದಲ್ಲಿ ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶರಣರ ಆಶೀರ್ವಾದ ಪಡೆದುಕೊಳ್ಳಲಾಯಿತು ಎಂದು ತಿಳಿಸಿದ್ದಾರೆ.