ಭಾರತೀಯರ ಘನತೆ ಮತ್ತು ಭಾರತದ ಏಕತೆ ನಮ್ಮ ಸಂವಿಧಾನದ ಎರಡು ಮೂಲ ಮಂತ್ರಗಳು. ಭಾರತವು 70 ವರ್ಷಗಳಿಂದ ಸಂವಿಧಾನವನ್ನು ಸದೃಢಗೊಳಿಸಿದೆ ಮತ್ತು ಸಬಲೀಕರಣಗೊಳಿಸಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇಂದು ಬದುಕಿದ್ದರೆ ಅತ್ಯಂತ ಸಂತೋಷಪಡುತ್ತಿದ್ದರು.
ಭಾರತೀಯ ಸಂವಿಧಾನದ 70 ವರ್ಷಾಚರಣೆ ಪ್ರಯುಕ್ತ ಸಂಸತ್ತಿನ ಸೆಂಟ್ರಲ್ ಹಾಲ್‍ನಲ್ಲಿ ಮಂಗಳವಾರ ಲೋಕಸಭೆ ಮತ್ತು ರಾಜ್ಯಸಭೆ ಜಂಟಿ ವಿಶೇಷ ಅಧಿವೇಶನ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಆಡಿದ ಮಾತುಗಳಿವು.
ಅಂಬೇಡ್ಕರ್ ಅವರು ಬದುಕಿದ್ದರೆ, ಸಂತೋಷಪಡುತ್ತಿದ್ದರೋ, ಇಲ್ಲವೋ? ಆದರೆ, ಬಾರತೀಯರಂತೂ ಸಂತೋಷಪಡುತ್ತಿಲ್ಲ. ಅದರಲ್ಲೂ ಈಗಿನ ರಾಜಕೀಯ ವ್ಯವಸ್ಥೆ ಸಂವಿಧಾನದ ಆಶಯಗಳನ್ನೇ ಅಣಕಿಸುವಂತಿರುವಾಗ ಜನ ತಾನೇ ಹೇಗೆ ಸಂತೋಷಪಡಲು ಸಾಧ್ಯ?
ಸಂವಿಧಾನವನ್ನು ಅಪಹಾಸ್ಯ ಮಾಡಿದ ಮಹಾರಾಷ್ಟ್ರ ರಾಜಕಾರಣ
ಮಹಾರಾಷ್ಟ್ರ ರಾಜಕೀಯದ ಉದಾಹರಣೆಯನ್ನೇ ಇಟ್ಟುಕೊಂಡು ಮಾತನಾಡುವುದಿದ್ದರೆ, ಕಳೆದ ಒಂದು ತಿಂಗಳಿನಿಂದ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತು, ರಾಷ್ಟ್ರಪತಿ ಆಡಳಿತ, ರಾತ್ರೋರಾತ್ರಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯೇ ಅಧಿಕಾರ ದಾಹದ ರಾಜಕಾರಣಿಗಳು ಸಂವಿಧಾನವನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತವೆ ಎಂಬುದನ್ನು ತೋರಿಸುತ್ತದೆ. ಪ್ರಧಾನಿಯವರೇ ಹೇಳಿದಂತೆ ಆಡಳಿತ ನಡೆಸುವವರು ಭಾರತೀಯರ ಘನತೆ ಸಂವಿಧಾನದ ಮೂಲ ಮಂತ್ರ ಎಂದು ಪರಿಗಣಿಸಿದ್ದರೆ ಈ ರೀತಿಯ ನಾಟಕೀಯ ಬೆಳವಣಿಗೆಗಳು ನಡೆಯಲು ಸಾಧ್ಯವೇ?
ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನಾ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದವು. ಫಲಿತಾಂಶ ಹೊರಬಿದ್ದಾಗ ಈ ಮೈತ್ರಿಕೂಟ ಅಧಿಕಾರಕ್ಕೆ ಬರುವಷ್ಟು ಬಹುಮತವನ್ನೂ ಹೊಂದಿತ್ತು. ಆದರೆ, ಮುಖ್ಯಮಂತ್ರಿ ಹುದ್ದೆಯ ಹಪಹಪಿಯಿಂದ ಶಿವಸೇನಾ ಮೈತ್ರಿಕೂಟವನ್ನೇ ತೊರೆದು ಹೊರಬಂತು. ಯಾವ ಪಕ್ಷವೂ ಸರ್ಕಾರ ರಚಿಸಲು ಸಾಧ್ಯವಾಗದೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಯಿತು. ಇದಾದ ಬಳಿಕ ರಾಜಕೀಯವಾಗಿ ಎಣ್ಣೆ-ಸೀಗೇಕಾಯಿಯಂತಿದ್ದ ಶಿವಸೇನಾ, ಎನ್ ಸಿಪಿ ಮತ್ತು ಕಾಂಗ್ರೆಸ್ ಒಟ್ಟಾಗಿ ಸರ್ಕಾರ ರಚಿಸುವ ನಿರ್ಧಾರಕ್ಕೆ ಬಂದವು. ಶಿವಾಸೇನಾದ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಎಂಬ ತೀರ್ಮಾನವೂ ಆಯಿತು. ಶುಕ್ರವಾರ ರಾತ್ರಿಯ ವೇಳೆ ಇವೆಲ್ಲವೂ ನಿರ್ಧಾರವಾಗಿ ಶನಿವಾರ ಅಧಿಕೃತ ಘೋಷಣೆ ಮಾಡಿ ರಾಷ್ಟ್ರಪತಿಗಳ ಬಳಿ ಸರ್ಕಾರ ರಚನೆ ಹಕ್ಕು ಮಂಡನೆಯೊಂದೇ ಬಾಕಿ ಉಳಿದಿತ್ತು.
ಆದರೆ, ಶನಿವಾರ ಬೆಳಗ್ಗೆ ಎದ್ದಾಗ ಇಡೀ ಚಿತ್ರಣವೇ ಬದಲಾಗಿತ್ತು. ಎನ್ ಸಿಪಿಯ ಅಜಿತ್ ಪವಾರ್ ಅವರು ಸರ್ಕಾರ ರಚನೆಗೆ ಬಿಜೆಪಿಯನ್ನು ಬೆಂಬಲಿಸುವುದಾಗಿ ನೀಡಿದ್ದ ಪತ್ರ ಆಧರಿಸಿ ರಾತ್ರೋರಾತ್ರಿ ಆದ ಬೆಳವಣಿಗೆಗಳಿಂದ ಶನಿವಾರ ಬೆಳಗ್ಗೆ ಜನ ಎದ್ದಾಗ ಬಿಜೆಪಿ-ಎನ್ ಸಿಪಿ ಸರ್ಕಾರ ರಚನೆಯಾಗಿತ್ತು. ಶುಕ್ರವಾರ ರಾತ್ರಿ 9.30ಕ್ಕೆ ದೇವೇಂದ್ರ ಫಡ್ನವಿಸ್ ಅವರು ಅಜಿತ್ ಪವಾರ್ ನೀಡಿದ ಎನ್ ಸಿಪಿಯ ಬೆಂಬಲ ಪತ್ರದೊಂದಿಗೆ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸುವ ಹಕ್ಕು ಮಂಡನೆ ಮಾಡಿದರು. ರಾತ್ರಿ 12.30ಕ್ಕೆ ಅಜಿತ್ ಪವಾರ್ ಅವರು ಎನ್ ಸಿಪಿಯ 564 ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ನೀಡಿದರು. ಶನಿವಾರ ಬೆಳಗಿನ ಜಾವ 2.30ಕ್ಕೆ ಈ ಬೆಂಬಲ ಪತ್ರವನ್ನು ರಾಷ್ಟ್ರಪತಿಗಳಿಗೆ ರವಾನಿಸಿದ ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶವಾಗುವಂತೆ ರಾಷ್ಟ್ರಪತಿ ಆಳ್ವಿಕೆ ಹಿಂಪಡೆಯುವಂತೆ ಶಿಪಾರಸು ಮಾಡಿದರು. ಅದರ ಬೆನ್ನಲ್ಲೇ ರಾಷ್ಟ್ರಪತಿ ಆಳಶ್ವಿಕೆ ಹಿಂಪಡೆಯಲು ಪ್ರಧಾನಿ ಒಪ್ಪಿಗೆ ಸೂಚಿಸಿದರು. ಆದಾದ ಬಳಿಕ ಬೆಳಗ್ಗೆ 5.47ಕ್ಕೆ ರಾಷ್ಟ್ರಪತಿಗಳು ಮಹಾರಾಷ್ಟ3ದಲ್ಲಿ ರಾಷ್ಟ್ರಪತಿ ಆಳ್ವಿಕೆ ಹಿಂಪಡೆದರು. ಶನಿವಾರ ಬೆಳಗ್ಗೆ 7.50ಕ್ಕೆ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಮತ್ತು ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಅಧಿಕಾರದ ಪ್ರಮಾಣವಚನ ಸ್ವೀಕರಿಸಿದರು.
ದೇಶದ ಇತಿಹಾಸದಲ್ಲೇ ರಾತ್ರೋರಾತ್ರಿಯ ಬೆಳವಣಿಗೆಗಳಲ್ಲಿ ಹೀಗೊಂದು ಸರ್ಕಾರ ಅಧಿಕಾರ ಸ್ವೀಕರಿಸಿದ್ದು ಇದೇ ಪ್ರಥಮ. ಹೊಸ ಸರ್ಕಾರ ರಚನೆ ಪ್ರಕ್ರಿಯೆ ಸಂವಿಧಾನದ ಆಶಯವನ್ನೇ ಬುಡಮೇಲು ಮಾಡಿತ್ತು. ಇಲ್ಲಿ ಬಿಜೆಪಿ, ಪರಾಜ್ಯಪಾಲರ ಕಚೇರಿ, ಪ್ರಧಾನಿ ಮತ್ತು ಅವರ ಕಚೇರಿ, ರಾಷ್ಟ್ರಪತಿ ಮತ್ತು ಅವರ ಕಚೇರಿಯ ಕಾರ್ಯಚಟುವಟಿಕೆಗಳು ಸಂವಿಧಾನದ ಘನತೆಯನ್ನು ನಗೆಪಾಟಲಿಗೀಡಾಗುವಂತೆ ಮಾಡಿತು. ಹಾಗೆಂದು ಮಹಾರಾಷ್ಟ್ರ ಪ್ರಕರಣದಲ್ಲಿ ಬಿಜೆಪಿಯೊಂದೇ ಸಂವಿಧಾನದ ಆಶಯಗಳಿಗೆ ಧಕ್ಕೆ ತಂದಿದ್ದಲ್ಲ. ಮುಖ್ಯಮಂತ್ರಿ ಪಟ್ಟ ಬೇಕೆಂಬ ಚಟಕ್ಕಾಗಿ ಚುನಾವಣಾ ಪೂರ್ವ ಮೈತ್ರಿ ಕಡಿದೊಂಡ ಶಿವಸೇನಾ, ಇದಕ್ಕೆ ಬೆಂಬಲ ನೀಡಿ ಅಧಿಕಾರಕ್ಕಾಗಿ ಶಿವಸೇನಾ ಜತೆ ಕೈಜೋಡಿಸಿದ ಎನ್ ಸಿಪಿ ಮತ್ತು ಕಾಂಗ್ರೆಸ್ ಕೂಡ ಬಿಜೆಪಿ ಮಾಡಿದ ಕೆಲಸವನ್ನೇ ಮಾಡಿತ್ತು.
ಸಂವಿಧಾನಕ್ಕೆ ಅಪಚಾರ ಮಾಡುವ ಬೀಜ ಬಿತ್ತಿದ್ದೇ ಕಾಂಗ್ರೆಸ್
ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸರ್ಕಾರ ರಚಿಸುವ ಕೆಲಸವನ್ನು ಬಿಜೆಪಿ ಆರಂಭಿಸಿರಬಹುದು. ಆದರೆ, ಅದೇ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ, ಘನತೆಗೆ ಧಕ್ಕೆ ಬರುವಂತೆ ಸರ್ಕಾರಗಳನ್ನು ಉರುಳಿಸುತ್ತಿದ್ದುದು ಕೇಂದ್ರದಲ್ಲಿ ಹಿಂದೆ ಅಧಿಕಾರ ನಡೆಸುತ್ತಿದ್ದ ಕಾಂಗ್ರೆಸ್. ಸುಮಾರು 25 ವರ್ಷಗಳ ಹಿಂದೆ ಕರ್ನಾಟಕದ ಎಸ್.ಆರ್.ಬೊಮ್ಮಾಯಿ ಸರ್ಕಾರವನ್ನು ಉರುಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದ ಕೇಂದ್ರದ ಕಾಂಗ್ರೆಸ್ ಸರ್ಕಾರ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೆ ಅದೆಷ್ಟು ಬಾರಿ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದ್ದ ಸರ್ಕಾರಗಳನ್ನು ಅಲ್ಪಮತದ ನೆಪದಲ್ಲಿ ಇಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಸ್ವಾತಂತ್ರ್ಯಾನಂತರ ಈವರೆಗೆ ಸಂವಿಧಾನದ ಅನುಚ್ಛೇದ 356ರ ಪ್ರಕಾರ ಒಟ್ಟು 126 ಬಾರಿ ವಿವಿಧ ರಾಜ್ಯಗಳ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಇದರಲ್ಲಿ ಸಿಂಹಪಾಲು ಕಾಂಗ್ರೆಸ್ ಪಕ್ಷದ್ದು. ಜವಹರಲಾಲ ನೆಹರು ಅವಧಿಯಿಂದ ಮನಮೋಹನ್ ಸಿಂಗ್ ಅವಧಿವರೆಗೆ ಕಾಂಗ್ರೆಸ್ ಸರ್ಕಾರ 88 ಬಾರಿ ವಿವಿಧ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿತ್ತು. ಅದರಲ್ಲೂ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ 50 ಬಾರಿ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಕಾಂಗ್ರೆಸ್ ಅವಧಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಾಗಿದ್ದು ಬಹುತೇಕ ಕಾಂಗ್ರೆಸ್ಸೇತರ ರಾಜ್ಯ ಸರ್ಕಾರಗಳು ಇದ್ದಾಗ. ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರಗಳನ್ನು ಅಸ್ತಿರಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಎಸ್.ಆರ್.ಬೊಮ್ಮಾಯಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಈ ಪ್ರಕ್ರಿಯೆಗೆ ಕೊಂಚ ಮಟ್ಟಿಗೆ ಕಡಿವಾಣ ಬಿತ್ತು.
ಇನ್ನು ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ತುರ್ತು ಪರಿಸ್ಥಿತಿ ಹೇರುವ ಮೂಲಕ ಸಂವಿಧಾನದ ಘನತೆಯನ್ನು ಅಣಕ ಮಾಡಿದರು. ಇದರ ಪರಿಣಾಮ ಅವರು ಅಧಿಕಾರ ಕಳೆದುಕೊಂಡರಾದರೂ ಮತ್ತೆ ಸಂವಿಧಾನವನ್ನು ಅಣಕ ಮಾಡುವಂತಹ ಪ್ರಕ್ರಿಯೆಗಳ ಮೂಲಕ ಕಾಂಗ್ರೆಸ್ಸೇತರ ಆಡಳಿತವನ್ನು ಕೊನೆಗಾಣಿಸಿ ಅಧಿಕಾರಕ್ಕೆ ಬಂದಿದ್ದರು.
ಇದೀಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಕಾಂಗ್ರೆಸಿಗಿಂತ ವಿಭಿನ್ನವಾಗಿ ರಾಜ್ಯ ಸರ್ಕಾರಗಳನ್ನು ಉರುಳಿಸುತ್ತಿದೆ. ರಾಜ್ಯಗಳಲ್ಲಿ ಆಪರೇಷನ್ ಕಮಲದ ಮೂಲಕ ಶಾಸಕರನ್ನು ಸೆಳೆದುಕೊಂಡು, ಶಾಸಕರನ್ನು ಬೆದರಿಸಿ ಸರ್ಕಾರವನ್ನು ಉರುಳಿಸಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುತ್ತಿದೆ. ಇದಿಷ್ಟೇ ಕಾಂಗ್ರೆಸ್ ಮತ್ತು ಬಿಜೆಪಿಗಿರುವ ವ್ಯತ್ಯಾಸ.