ರಾಜ್ಯದಲ್ಲಿ ಬಜೆಟ್ ಅಧಿವೇಶನ ಆರಂಭವಾಗಿರುವ ಬೆನ್ನಲ್ಲೇ, ಇಂದಿನಿಂದ ಬಜೆಟ್ ಕುರಿತ ಚರ್ಚೆ ಆರಂಭವಾಗಬೇಕಿದೆ. ಈಗಾಗಲೇ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ಪ್ರತಿಪಕ್ಷ ಬಿಜೆಪಿ ಈಗ ಟಿಟ್ ಫಾರ್ ಟ್ಯಾಟ್ ಎಂಬಂತೆ ಸರ್ಕಾರದ ವಿರುದ್ಧ 60% ಆರೋಪ ಹೊರಿಸಲು ಮುಂದಾಗಿದೆ.

ಬೆಂಗಳೂರಿನ ಅಂಡರ್ ಪಾಸ್ ಒಂದರ ಸಮೀಪ ಏರುದ ತಡೆಗೋಡೆಯ, ನೈಕ್ ಜಾಹೀರಾತಿನ ನಕಲು ಮಾಡಿರುವಂತೆ, ಸಿಎಂ ಸಿದ್ದರಾಮಯ್ಯ ಭಾವಚಿತ್ರದ ಸಮೇತ ಪಕ್ಕದಲ್ಲಿ ಲಾಂಗ್ ಸಿಂಬಲ್ ಹಾಕಿ, ಜಸ್ಟ್ ಲೂಟ್ ಇಟ್.. ಇದು 60% ಸರ್ಕಾರ ಎಂಬ ಪೇಂಟಿಂಗ್ ರಾರಾಜಿಸುತ್ತಿದೆ.

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರ ಮೇಲೆ 40% ಕಮಿಷನ್ ಆರೋಪ ಹೊರಿಸಿದ್ದ ಕಾಂಗ್ರೆಸ್, ಇದೇ ಮಾದರಿಯಲ್ಲಿ ಪೇ ಸಿಎಂ ಅಭಿಯಾನ ಆರಂಭಿಸಿತ್ತು. ಆ ಮೂಲಕ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿತ್ತು.
ಇದೀಗ ಕಾಂಗ್ರೆಸ್ ಗೆ ಅದರದ್ದೇ ಭಾಷೆಯಲ್ಲಿ ಉತ್ತರ ನೀಡಲು ಮುಂದಾಗಿರುವ ಬಿಜೆಪಿ ಜಸ್ಟ್ ಲೂಟ್ ಇಟ್ ಅಭಿಯಾನ ಆರಂಭಿಸಿದಂತೆ ಕಾಣುತ್ತಿದೆ. ಈ ವಾಲ್ ಪೇಂಟಿಂಗ್ ನ ಫೋಟೋ ಮತ್ತು ವಿಡಿಯೋವನ್ನು ಬಿಜೆಪಿ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ.