ಅಲಹಾಬಾದ್ ಹೈಕೋರ್ಟ್ ಅಂತರ್ಧಮೀಯ ವಿವಾಹವೊಂದನ್ನು ಊರ್ಜಿತಗೊಳಿಸುವ ತೀರ್ಪು ನೀಡಿದ್ದು ವಯಸ್ಕ ಮಹಿಳೆ ‘ತನ್ನ ಗಂಡನೊಂದಿಗೆ ಬಾಳಲು ಇಚ್ಛಿಸಿದ್ದು’ ಅವಳಿಗೆ ‘ಅವಳಿಚ್ಛೆಯಂತೆ ಬದುಕುವ ಮತ್ತು ಬೆರೆಯುವ ಆಯ್ಕೆ’ ಅವಳಿಗಿದೆ ಎಂದೂ ಹೇಳಿದೆ. ಮಾತ್ರವಲ್ಲದೆ ಜೋಡಿಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ನಿರ್ದೇಶನವನ್ನೂ ನೀಡಿದೆ. ಮಹಿಳೆಯ ಗಂಡನ ವಿರುದ್ಧ ಸಲ್ಲಿಕೆಯಾಗಿದ್ದ ದೂರನ್ನೂ ಕೋರ್ಟ್ ರದ್ದು ಮಾಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪಂಕಜ್ ನಖ್ವಿ ಮತ್ತು ವಿವೇಕ್ ಅಗರ್ವಾಲ್ ಅವರನ್ನೊಗಂಡ ದ್ವಿ ಸದಸ್ಯ ಪೀಠ ಮಹಿಳೆಯೊಂದಿಗೆ ಮಾತಾಡಿ ಅವರ ಇಚ್ಛೆಯಂತೆಯೇ ಸಲ್ಮಾನ್ ಜೊತೆ ವಿವಾಹವಾಗಿರುವುದನ್ನು ಮತ್ತು ಆಕೆ ವಯಸ್ಕಳಾಗಿರುವುದನ್ನು ಖಾತ್ರಿಪಡಿಸಿಕೊಂಡಿತ್ತು.
ಈ ಪ್ರಕರಣದ ಕೇಂದ್ರ ಬಿಂದುವಾದ ಶಿಖಾ ಅವರು 1999ರಲ್ಲಿ ಹುಟ್ಟಿದ್ದು ಜಿಲ್ಲಾ ಮ್ಯಾಜಿಸ್ಟ್ರೇಟರು ಅವರನ್ನು ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ಒಪ್ಪಿಸಿದ್ದರು. ಆನಂತರ ಶಿಖಾ ಅವರನ್ನು ಅವರ ಪೋಷಕರಿಗೆ ಒಪ್ಪಿಸಲಾಗಿತ್ತು. ಜಿಲ್ಲಾ ಮ್ಯಾಜಿಸ್ಟ್ರೇಟರ ಈ ಕ್ರಮವನ್ನೂ ಕೋರ್ಟ್ ಖಂಡಿಸಿದೆ.
ಇದಕ್ಕೂ ಮೊದಲು ಶಿಖಾ ಅವರ ಪತಿ ಸಲ್ಮಾನ್ ವಯಸ್ಕ ಮಹಿಳೆಯನ್ನು ಅವರ ಇಚ್ಛೆಗೆ ವಿರುದ್ಧವಾಗಿ ಬಂಧನದಲ್ಲಿ ಇರಿಸಲಾಗಿದೆ ಎಂದು ಹೆಬಿಯಸ್ ಕಾರ್ಪಸ್ ಕೇಸು ದಾಖಲಿಸಿದ್ದರು. ಉ.ಪ್ರ ಸರಕಾರ ತಂದಿರುವ ಮತಾಂತರ ನಿಷೇಧ ಕಾಯ್ದೆಯನ್ವಯ 32 ವರ್ಷ ವಯಸ್ಸಿನ ಮುಸ್ಲಿಂ ಪುರುಷರೊಬ್ಬರನ್ನು ಬಂಧಿಸುವುದನ್ನೂ ಕಳೆದ ವಾರ ತಡೆದ ಕೋರ್ಟ್ ‘ ಆರೋಪಿಯಿಂದ ಬಲವಂತ ಅಥವಾ ಆಮಿಷ’ ನಡೆದಿರುವ ಬಗ್ಗೆ ಸಾಕ್ಷಾಧಾರಗಳಿಲ್ಲ ಎಂದಿತ್ತು.

ಬಲಪಂಥೀಯ ಸಂಘಟನೆಗಳು ಪ್ರತಿಪಾದಿಸುತ್ತಲೇ ಬಂದಿರುವ ‘ಲವ್ ಜಿಹಾದ್’ ವಿರುದ್ಧ ಉತ್ತರ ಪ್ರದೇಶ ಕಾನೂನು ರೂಪಿಸಿದ್ದು ಕುಚೋದ್ಯವೆಂದರೆ ಕೇಂದ್ರ ಸರ್ಕಾರವೇ ಸಂಸತ್ತಿನಲ್ಲಿ ನೀಡಿರುವ ಮಾಹಿತಿಯಂತೆ” ‘ಲವ್ ಜಿಹಾದ್’ ಎನ್ನುವುದು ಕಾನೂನಿನ ಪ್ರಕಾರ ವ್ಯಾಖ್ಯಾನಕ್ಕೆ ಒಳಪಟ್ಟಿಲ್ಲ ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ಲವ್ ಜಿಹಾದ್ ಗೆ ಸಂಬಂಧಪಟ್ಟಂತೆ ಯಾವ ವರದಿಗಳೂ ಸಲ್ಲಿಕೆಯಾಗಿಲ್ಲ”. ಹೀಗಿದ್ದೂ ಕರ್ನಾಟಕ ಸೇರಿದಂತೆ ಹಲವು ಬಿಜೆಪಿ ಆಡಳಿತ ಇರುವ ರಾಜ್ಯಗಳು ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೊಳಿಸ ಹೊರಟಿವೆ. ಮೇಲಾಗಿ ಪ್ರಸ್ತುತ ಕಾನೂನಿನಲ್ಲಿ ಹಿಂದೂ ಪುರುಷ ಮತ್ತು ಮುಸ್ಲಿಂ ಮಹಿಳೆಯ ಮದುವೆಯ ಬಗ್ಗೆ ಯಾವುದೇ ಸೂಚನೆಗಳಿಲ್ಲ.
ಹಾಗಾಗಿಯೇ ಈಗಾಗಲೇ ಕಾನೂನು ತಂದಿರುವ ಉ.ಪ್ರ ಸರ್ಕಾರದ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಜಸ್ಟಿಸ್ ಮದನ್ ಬಿ ಲೋಕೂರ್ ಅವರು NDTV ಜೊತೆ ಮಾತಾಡುತ್ತಾ ಸರ್ಕಾರದ ಕಾನೂನನ್ನು ‘ಅಸಂವಿಧಾನಿಕ” ಎಂದಿದ್ದಾರೆ.
ಪ್ರಸ್ತುತ ಅಲಹಾಬಾದ್ ಕೋರ್ಟ್ ತೀರ್ಪು ನೀಡಿರುವ ಶಿಖಾ ಪ್ರಕರಣವು ‘ಮತಾಂತರ ನಿಷೇಧ ಕಾನೂನು’ ಜಾರಿಗೆ ಬರುವುದಕ್ಕಿಂತ ಮೊದಲು ದಾಖಲಾಗಿದ್ದ ಪ್ರಕರಣವಾಗಿದ್ದು ಹೊಸ ಕಾನೂನಿನ ನೀತಿ ನಿಯಮಗಳನ್ನು ಅನ್ವಯಿಸಲಾಗಿಲ್ಲ.
ReplyForward






