ಭಾರತದ ರಾಷ್ಟ್ರಗೀತೆ ರಚನೆಕಾರ ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಟಾಗೋರ್ ಅವರ ಜನುಮ ದಿನ ಇಂದು. 159ನೇ ಜನ್ಮದಿನದ ಈ ಸಂದರ್ಭದಲ್ಲಿ ಟಾಗೋರ್ ಅವರು ಈ ದೇಶಕ್ಕೆ ಸಾಹಿತ್ಯದ ಮೂಲಕ ನೀಡಿದ ಕೊಡುಗೆಯನ್ನ ನೆನಪಿಸಿಕೊಳ್ಳಲೇಬೇಕಾಗುತ್ತದೆ. ಸ್ವಾತಂತ್ರ್ಯ ಚಳವಳಿಗೆ ತನ್ನ ಸಾಹಿತ್ಯ, ಹಾಡು, ಕಲೆಯ ಮೂಲಕ ಹುರಿದುಂಬಿಸಿದವರು. ದೇವೇಂದ್ರನಾಥ ಟಾಗೋರ್ ಹಾಗೂ ಶಾರದಾ ದೇವಿಯ ಮಗನಾಗಿ 1861ರ ಮೇ 7ನೇ ತಾರೀಕಿನಂದು ಜನಿಸಿದ ಅವರು ಸಂಪ್ರದಾಯಸ್ಥ ಬ್ರಾಹ್ಮಣ ಮನೆತನದವರು. ಆದರೆ ರವೀಂದ್ರನಾಥರು ಸಂಪ್ರದಾಯವನ್ನ ಮೀರಿ ಬಂಗಾಳದ ಸಾಹಿತ್ಯದಲ್ಲಿ ವಿಶಿಷ್ಠ ಹೆಜ್ಜೆ ಗುರುತು ಇಟ್ಟವರು. ಬಂಗಾಳಿ ಭಾಷೆಯ ಮೂಲಕವೇ ಅವರು ಇಡೀ ದೇಶದ ಮನೆಮಾತಾದವರು. 1950ರಲ್ಲಿ ಸಂವಿಧಾನ ರಚನೆ ಆಗುವ ಹೊತ್ತಿಗೆ 1911 ರಲ್ಲಿ ರವೀಂದ್ರನಾಥ ಟಾಗೋರ್ ಅವರು ಬರೆದಿದ್ದ ʼಜನ ಗಣ ಮನʼ ಈ ದೇಶದ ರಾಷ್ಟ್ರಗೀತೆಯಾಯಿತು. ಆದರೆ ಈ ʼಜನ ಗಣ ಮನʼ ಅನ್ನೋ ಹಾಡು ನಿಜಕ್ಕೂ ದೇಶದ ಕುರಿತು ಬರೆಯಲಾಗಿದೆಯೋ ಅಥವಾ ʼಅಧಿನಾಯಕʼ ಅನ್ನೋ ಮೂಲಕ ಯಾರನ್ನಾದರೂ ಮೆಚ್ಚಿಸಲು ಬರೆದಿದ್ದಾರೋ ಅನ್ನೋದು ಈಗಲೂ ಮೆಲ್ಲಗೆ ಚರ್ಚೆಗೀಡಾಗುವ ಸುದ್ದಿಗಳೇ..
ಈ ಹಿಂದೆ ರಾಜಸ್ತಾನದ ರಾಜ್ಯಪಾಲರಾಗಿದ್ದ ಕಲ್ಯಾಣ್ ಸಿಂಗ್ ಹಾಗೂ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಟ್ಜು ಇಂತಹದ್ದೊಂದು ಆರೋಪವನ್ನೂ ಹೊರಿಸಿದ್ದರು. ಇದು ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಅಷ್ಟಕ್ಕೂ ಇಂತಹ ಆರೋಪಕ್ಕೊಂದು ಕಾರಣನೂ ಇದೆ. ನಾವು ರಾಷ್ಟ್ರಗೀತೆ ಎಂದು ಅಳವಡಿಸಿಕೊಂಡಿರುವ ʼಜನ ಗಣ ಮನ ಅಧಿನಾಯಕ ಜಯ ಯೇ..ʼ ಅನ್ನೋದು 1911ರ ಡಿಸೆಂಬರ್ 11ರಂದು ರಚಿಸಿದ್ದು, ಅದೇ ತಿಂಗಳ 28ರ ಕೊಲ್ಕತ್ತಾ ಕಾಂಗ್ರೆಸ್ ಅಧಿವೇಶನದಲಿ ಕವಿ ರವೀಂದ್ರನಾಥ ಟಾಗೋರರು ಈ ʼಜನ ಗಣ ಮನʼ ಗೀತೆಯನ್ನ ಭಾರತದಲ್ಲಿ ನೆಲೆಸಿದ್ದ ಬ್ರಿಟಿಷ್ ಚಕ್ರವರ್ತಿ ಎಂದು ಕರೆಯಲ್ಪಟ್ಟಿದ್ದ 5ನೇ ಜಾರ್ಜ್ ನ ದೆಹಲಿಯ ದರ್ಬಾರ್ ನಲ್ಲಿ ಈ ಗೀತೆ ರಚಿಸಲಾಗಿತ್ತು ಎನ್ನಲಾಗಿದೆ. ಅಲ್ಲದೇ ಈ ಗೀತೆಯಲ್ಲಿ ಬರುವ ʼಅಧಿನಾಯಕʼ ಎನ್ನುವ ಪದ ಅದು ಇದೇ ಜಾರ್ಜ್ ಗೆ ಉಲ್ಲೇಖಿಸಿ ಬರೆಯಲಾಗಿದೆ ಎನ್ನುವ ವಾದವೂ ಇದೆ. ಅಲ್ಲದೇ ಇದರುದ್ದಕ್ಕೂ ಬರುವ ಸಾಲುಗಳೆಲ್ಲವೂ ಅದು 5ನೇ ಜಾರ್ಜ್ ಹಾಗೂ ಬ್ರಟಿನ್ ರಾಜಕುಮಾರಿ ಅವರನ್ನ ಉಲ್ಲೇಖಿಸಿ ಬರೆಯಲಾಗಿದೆ ಅನ್ನೋ ವಿವಾದವೂ ಈ ಗೀತೆಯ ಜೊತೆಗೆ ಹಿಂದಿನಿಂದಲೂ ಬಂದಿದೆ.
ಸುಪ್ರೀಂ ಕೋರ್ಟ್ ಮಾಜಿ ನ್ಯಾಯಧೀಶ ಮಾರ್ಕಾಂಡೇಯ ಕಾಟ್ಜು 2015ರಲ್ಲಿ ಇಂತಹದ್ದೊಂದು ಆರೋಫ ಮಾಡಲು ಮುಂದಿಟ್ಟ ವಾದವೇನೆಂದರೆ, “1911ರಲ್ಲಿ ಭಾರತದ ದೊರೆಯಾಗಿ ದೆಹಲಿ ದರ್ಬಾರ್ ಗೆ 5 ನೇ ಜಾರ್ಜ್ ಬಂದ ಸಮಯದಲ್ಲಿ ರವೀಂದ್ರನಾಥ ಟಾಗೋರರು ಈ ಗೀತೆ ಬರೆದಿದ್ದಾರೆ. ಹಾಗಾಗಿ ಇದು ಜನ್ಮಭೂಮಿಯ ಮೇಲಿನ ಮೋಹದಿಂದ ಬರೆದ ಗೀತೆಯಲ್ಲ, ಬದಲಾಗಿ ʼದೊರೆಯ ಮೇಲಿನ ಪ್ರೀತಿʼಯಿಂದ ಎಂದೂ ಉಲ್ಲೇಖಿಸಿದ್ದಾರೆ. ಅಲ್ಲದೇ ಅದೇ ವರುಷ ಅಂದ್ರೆ 1911 ರ ಡಿಸೆಂಬರ್ ತಿಂಗಳ 28ಕ್ಕೆ ನಡೆದ ಕೊಲ್ಕತ್ತಾ ಕಾಂಗ್ರೆಸ್ ಕಾಂಗ್ರೆಸ್ ಸಮಾವೇಶದಲ್ಲೂ ಈ ಗೀತೆ ಹಾಡಿರುವ ಉದ್ದೇಶವೂ ರಾಜನ ಸ್ವಾಗತಕ್ಕಾಗಿ ಅನ್ನೋದನ್ನ ಮಾರ್ಕಂಡೆಯ ಕಾಟ್ಜು ತಿಳಿಸಿದ್ದರು.
ಅಲ್ಲದೇ ಇದೇ ಕಾರಣಕ್ಕಾಗಿ 1913ರಲ್ಲಿಯೇ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಶ್ರೇಷ್ಠ ಪ್ರಶಸ್ತಿ ನೊಬೆಲ್ ಪ್ರಶಸ್ತಿಗೆ ರವೀಂದ್ರನಾಥ ಟಾಗೋರ್ ಭಾಜರಾದರು ಅನ್ನೋ ಮಾತು ಇದೆ. ಆದರೆ ಇನ್ನೊಂದೆಡೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ವಿರೋಧಿಸಿ ಇದೇ ರವೀಂದ್ರನಾಥ ಟಾಗೋರ್ ತನಗೆ ಲಭಿಸಿದ್ದ ʼನೈಟ್ಹುಡ್ʼ ಪ್ರಶಸ್ತಿಯನ್ನ ವಾಪಾಸ್ ನೀಡಿದ್ದರು. ಅಲ್ಲದೇ ʼಇದು ಭಾರತದಲ್ಲಿ ಬ್ರಿಟಿಷರ ಅತ್ಯಂತ ಕ್ರೂರಿತನದ ಹತ್ಯಾಕಾಂಡʼ ಎಂದು ಜರೆದಿದ್ದರು.
ಇತಿಹಾಸಕಾರ ಸವ್ಯಸಾಚಿ ಭಟ್ಟಾಚಾರ್ಯ ತನ್ನ ಪುಸ್ತಕ ʼಮೈತ್ ಅಬೌಟ್ ದ ಸಾಂಗ್ʼ (Myth About the Song) ಎಂಬ ಪುಸ್ತಕದಲ್ಲಿ ಈ ವಿವಾದದ ಕುರಿತು ಸೂಕ್ಷ್ಮವಾಗಿ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಟಾಗೋರ್ ʼಜನ ಗಣ ಮನ ಅಧಿನಾಯಕʼ ಗೀತೆ ರಚಿಸಿದ ಮರುದಿನವೇ ದೆಹಲಿಯ ದರ್ಬಾರ್ ನಲ್ಲಿ 5ನೇ ಜಾರ್ಜ್ ಸಭೆಯನ್ನ ಕರೆದಿದ್ದ ಅನ್ನೋದನ್ನ ಇತಿಹಾಸ ತಿಳಿಸುತ್ತದೆ.
ಆದರೆ ಸವ್ಯಸಾಚಿ ಭಟ್ಟಾಚಾರ್ಯ ಇಂತಹ ವದಂತಿಯೊಂದಿದ್ದು, ರವೀಂದ್ರನಾಥ ಟಾಗೋರ್ ರಚಿಸಿದ ಹಾಡು ದೆಹಲಿಯ ದರ್ಬಾರ್ ನಲ್ಲಿ ಹಾಡಲಾಗಿದ್ದು, ಅದೇ ಕಾರಣಕ್ಕಾಗಿ ರವೀಂದ್ರನಾಥ ಟಾಗೋರ್ ಅವರು ಈ ಗೀತೆಯನ್ನ ರಚಿಸಿದ್ದಾರೆ ಅನ್ನೋದಾಗಿ. ಆದರೆ ಇದನ್ನ ಸತ್ಯವೆಂದು ನಂಬಲು ಯಾವುದೇ ಪುರಾವೆ ಇಲ್ಲ. ಬದಲಾಗಿ ಇದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಟಾಗೋರ್ ಅವರು ತನ್ನ ಮಿತ್ರ ಪುಲಿನ್ ಬೆಹರಿ ಸೇನ್ ಅವರಿಗೆ ಬರೆದ ಪತ್ರದಲ್ಲಿ, “ಗೀತೆಯ ಐದು ಅಥವಾ ಆರನೇ ಸಾಲುಗಳು ಜಾರ್ಜ್ ಅಥವಾ ಯಾರೊಬ್ಬನನ್ನೂ ಸ್ತುತಿಸುವ ನಿಟ್ಟಿನಲ್ಲಿ ಬರೆದಿಲ್ಲ. ಬದಲಾಗಿ ಜನ ಗಣ ಮನ ಗೀತೆಯಲ್ಲಿ ಏಳು ಬೀಳಿನ ಮಧ್ಯೆ ಜನರಿಗೆ ಮಾರ್ಗದರ್ಶಕನಾಗಿರುವ ಪ್ರತಿಯೊಬ್ಬ ಭಾರತದ ಭಾಗ್ಯವಿಧಾತನಿಗೆ ಸ್ತುತಿಸಿದ್ದೇನೆʼ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೇ ಆಧಾರವಾಗಿ ಇಟ್ಟುಕೊಂಡು ಸವ್ಯಸಾಚಿ ಭಟ್ಟಾಚಾರ್ಯ ತನ್ನ ಅಭಿಪ್ರಾಯವನ್ನ ಸ್ಪಷ್ಟಪಡಿಸುತ್ತಾರೆ. “ರವೀಂದ್ರ ನಾಥ ಅವರು ಎಲ್ಲೂ 5ನೇ ಜಾರ್ಜ್ ಗಾಗಲೀ, ಇಲ್ಲವೇ ಕಾಂಗ್ರೆಸ್ ಅಧಿವೇಶನಕ್ಕಾಗಲೀ ಈ ಹಾಡನ್ನ ಬರೆದಿಲ್ಲ” ಎಂದು. ಅಲ್ಲದೇ ಈ ಹಾಡನ್ನ 1912ರಲ್ಲಿ ಹಿಂದೂ ಧಾರ್ಮಿಕ ಸುಧಾರಣ ಚಳವಳಿಯ ಸಂಕೇತವಾದ ಆದಿ ಬ್ರಹ್ಮ ಸಮಾಜದ ಸಂಸ್ಥಾಪನಾ ಕಾರ್ಯಕ್ರಮದಲ್ಲೂ ಹಾಡಲಾಗಿತ್ತು ಅನ್ನೋದನ್ನ ಸವ್ಯಸಾಚಿ ಭಟ್ಟಾಚಾರ್ಯ ಉಲ್ಲೇಖಿಸುತ್ತಾರೆ.
ಅಲ್ಲದೇ ರವೀಂದ್ರನಾಥ ಟಾಗೋರ್ ಅವರು ರಾಜಕೀಯವಾಗಿ ತೊಡಗಿಸಿಕೊಳ್ಳದಿದ್ದರೂ ಅಂಬೇಡ್ಕರ್, ಗಾಂಧೀಜಿ ನಡುವೆ ಉತ್ತಮ ಬಾಂಧವ್ಯ ಹೊಂದಿದ್ದವರೂ ಆಗಿದ್ದರು. ಮಾತ್ರವಲ್ಲದೇ ಬ್ರಿಟಿಷ್ ಆಡಳಿತದ ಕಟುಟೀಕಾಕಾರರೂ ಆಗಿದ್ದವರು ರವೀಂದ್ರನಾಥ ಟಾಗೋರ್. ಆದರೂ ʼಜನ ಗಣ ಮನ ಅಧಿನಾಯಕ ಜಯ ಹೇʼ ಹಾಡು ಯಾಕಾಗಿ ಇಷ್ಟು ವಿವಾದಕ್ಕೆ ಸಿಲುಕಿತ್ತು ಅನ್ನೋದು ಇಂದಿಗೂ ಪ್ರಶ್ನಾರ್ಹವಾಗಿಯೇ ಉಳಿದಿದೆ. ʼಅಧಿನಾಯಕ ಜಯ ಹೇʼ, ʼಭಾರತ ಭಾಗ್ಯ ವಿದಾತʼ ಅನ್ನೋ ಪದ ಬಳಕೆ ಯಾರಿಗಾಗಿ ಬಳಸಿದ್ದು ಅನ್ನೋದು ಇನ್ನೂ ಒಂದಿಷ್ಟು ಗೊಂದಲವಿದ್ದರೂ, ಅದರ ಬದಲಾಗಿ ವಿಶಾಲಾರ್ಥದಲ್ಲಿ ರಾಷ್ಟ್ರಗೀತೆಯನ್ನ ಅರ್ಥ ಮಾಡಿಕೊಂಡಾಗ ಇನ್ನೊಂದು ಅದ್ಭುತ ಪರಿಕಲ್ಪನೆಯನ್ನ ದೇಶದ ಬಗ್ಗೆ ಮೂಡಿಸುತ್ತದೆ ಅನ್ನೋದರ ಬಗ್ಗೆ ಸಂಶಯವಿಲ್ಲ