ದೇಶದ ಎಲ್ಲ ಹೈಕೋರ್ಟುಗಳಂತೆ ಕರ್ನಾಟಕ ಹೈಕೋರ್ಟಿನಲ್ಲಿ ಶೇಕಡ 45ಕ್ಕಿಂತ ಹೆಚ್ಚು ಮಂದಿ ನ್ಯಾಯಾಧೀಶರ ಕೊರತೆಯಿಂದ ವ್ಯಾಜ್ಯಗಳ ತೀರ್ಮಾನದಲ್ಲಿ ವಿಳಂಬವಾಗುತ್ತಿದೆ. ಕರ್ನಾಟಕ ಹೈಕೋರ್ಟಿನಲ್ಲಿ 62 ಮಂದಿ ಹೈಕೋರ್ಟ್ ನ್ಯಾಯಾಧೀಶರ ಇರಬೇಕಾಗಿದ್ದು, ಈಗ ಕೇವಲ 34 ನ್ಯಾಯಾಧೀಶರು ಮಾತ್ರ ಇದ್ದಾರೆ. ಒಟ್ಟು 24 ನ್ಯಾಯಾಧೀಶರ ಹುದ್ದೆ ಖಾಲಿ ಇವೆ.
ಅದೇ ರೀತಿ ಎರಡೂವರೆ ಲಕ್ಷ ಪ್ರಕರಣಗಳು ಕರ್ನಾಟಕ ಹೈಕೋರ್ಟಿನಲ್ಲಿ ವಿಚಾರಣೆಗೆ ಬಾಕಿ ಇದೆ. ಜಸ್ಟೀಸ್ ಸಂಜಯ್ ಕಿಶನ್ ಕೌಲ್ ಮತ್ತು ಕೆ.ಎಂ.ಜೋಸೆಫ್ ಅವರಿದ್ದ ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠವು ನವೆಂಬರ್ 15ರಂದು ಪ್ರಕರಣವೊಂದರ ವಿಚಾರಣೆ ವೇಳೆ ಹೈಕೋರ್ಟಿನಲ್ಲಿ ನ್ಯಾಯಾಧೀಶರ ಕೊರತೆಯು ಗಂಭೀರ ವಿಚಾರವಾಗಿದೆ ಎಂದು ಹೇಳಿದೆ.
ದೇಶದ ಹೈಕೋರ್ಟುಗಳಲ್ಲಿ ಶೇಕಡ 40ರಷ್ಟು ನ್ಯಾಯಧೀಶರ ಕೊರತೆ ಇದೆ. ನ್ಯಾಯಾಧೀಶರ ಹುದ್ದೆ ಖಾಲಿ ಆಗುವುದಕ್ಕಿಂತ ಆರು ತಿಂಗಳ ಮುಂಚೆಯೇ ಕೇಂದ್ರ ಸರಕಾರಕ್ಕೆ ಖಾಲಿ ಹುದ್ದೆಗಳ ಮಾಹಿತಿ ನೀಡಲಾಗುತ್ತದೆ. ವ್ಯವಸ್ಥೆ ಹೀಗಿದ್ದರೂ ಕೇಂದ್ರ ಸರಕಾರ ಸಕಾಲದಲ್ಲ ನ್ಯಾಯಾಧೀಶರ ನೇಮಕ ಮಾಡದಿದ್ದಲ್ಲಿ ಆರು ತಿಂಗಳು ಮುಂಚಿತವಾಗಿ ಖಾಲಿ ಹುದ್ದೆಗಳಿಗೆ ನೇಮಕ ಮಾಡುವಂತೆ ಹೆಸರುಗಳನ್ನು ಶಿಫಾರಸು ಮಾಡುವುದರಲ್ಲಿ ಅರ್ಥವೇ ಇಲ್ಲ ಎಂದು ಈ ದ್ವಿಸದಸ್ಯ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಈ ವರ್ಷ 20 ಮಂದಿ ನ್ಯಾಯಾಧೀಶರು ನಿವೃತ್ತಿಯಾಗುತ್ತಿದ್ದು, ಅದಕ್ಕಿಂತ ಕಡಿಮೆ ನ್ಯಾಯಾಧೀಶರ ನೇಮಕ ಮಾಡಲಾಗುತ್ತಿದೆ. ಇದರಿಂದಾಗಿ ಮುಂದಿನ ವರ್ಷ ಹೈಕೋರ್ಟ್ ನ್ಯಾಯಾಧೀಶರ ಕೊರತೆ ಇನ್ನಷ್ಟು ಹೆಚ್ಚಳವಾಗಲಿದೆ. ಮಾಲಿಕ್ ಮಜಾರ್ ಸುಲ್ತಾನ್ ಪ್ರಕರಣದ ವೇಳೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಕೆಳಗಿನ ಕೋರ್ಟುಗಳ ನೇಮಕ ಕುರಿತಂತೆ ನಿರ್ದೇಶನ ಜಾರಿ ಮಾಡಿದ್ದಾರೆ. ಆದರೆ, ಹೈಕೋರ್ಟುಗಳಲ್ಲಿ ನ್ಯಾಯಾಧೀಶರ ಹುದ್ದೆಗಳು ಕಡಿಮೆ ಆಗುತ್ತಲೇ ಇದೆ ಎಂದ ಪೀಠ ತನ್ನ ತೀರ್ಪಿನಲ್ಲಿ ಉಲ್ಲೇಖ ಮಾಡಿದೆ.
ಓಡಿಶಾ ರಾಜ್ಯದಲ್ಲಿ ವಕೀಲರು ಮುಷ್ಕರ ನಡೆಸುತ್ತಿರುವುದರಿಂದ ತಮ್ಮ ಪ್ರಕರಣಗಳನ್ನು ಓಡಿಶಾ ರಾಜ್ಯದ ಹೊರಗಡೆ ವರ್ಗಾವಣೆ ಮಾಡುವಂತೆ ಮೆಸರ್ಸ್ ಪಿಎಲ್ಆರ್ ಪ್ರಾಜೆಕ್ಟ್ಸ್ ಸುಪ್ರೀಂ ಕೋರ್ಟಿಗೆ ಮನವಿ ಮಾಡಿಕೊಂಡಿರುವ ಪ್ರಕರಣದ ವಿಚಾರಣೆ ವೇಳೆ ದ್ವಿಸದಸ್ಯ ಪೀಠ ಈ ಟಿಪ್ಪಣಿ ಮಾಡಿದೆ.
ಆರು ತಿಂಗಳ ಮೊದಲೇ ನ್ಯಾಯಾಧೀಶರ ನೇಮಕದ ಹೆಸರುಗಳನ್ನು ಪಟ್ಟಿಯನ್ನು ಕಳುಹಿಸಿ ಕೊಡಲಾಗುತ್ತದೆ. ಆದರೆ, ಆ ಅವಧಿಯಲ್ಲಿ ನೇಮಕ ಮಾಡಲು ಅಸಾಧ್ಯವಾದರೆ ಈ ವ್ಯವಸ್ಥೆಗೆ ಅರ್ಥ ಇರುವುದಿಲ್ಲ.
ನ್ಯಾಯಾಧೀಶರ ನೇಮಕ ವಿಳಂಬ ಆಗುತ್ತಿರುವ ವಿಚಾರದಲ್ಲಿ ಎನ್ ಡಿ ಟಿವಿಗೆ ಪ್ರತಿಕ್ರಿಯೆ ನೀಡಿರುವ ಸುಪ್ರೀಂ ಕೋರ್ಟಿನ ಹೊಸ ಮುಖ್ಯನ್ಯಾಯಾಧೀಶರಾಗಲಿರುವ ಜಸ್ಟೀಸ್ ಶರದ್ ಅರವಿಂದ್ ಬೊಡ್ಜೆ ಅವರು ಸರಕಾರ ವಿಳಂಬ ಮಾಡುತ್ತಿದೆ ಎಂದು ಹೇಳಲಾಗದು. ನೂರಾರು ನೇಮಕಗಳು ಯಾವುದೇ ತೊಂದರೆ ಇಲ್ಲದೆ ಆಗಿವೆ. ಕೆಲವೊಮ್ಮೆ ಕೊಲಿಜಿಯಮ್ ಮಾಡುವ ಕೊನೆ ಕ್ಷಣದ ಬದಲಾವಣೆಯಿಂದ ವಿಳಂಬ ಆಗಿರಬಹುದು. ಸರಕಾರ ರಬ್ಬರ್ ಸ್ಟಾಂಪ್ ಆಗಬೇಕಾಗಿಲ್ಲ. ಅದು ಕೂಡ ವ್ಯವಸ್ಥೆಯ ಪಾಲುದಾರನೇ ಆಗಿದೆ ಎಂದು ಹೇಳಿದ್ದಾರೆ.
ಕರ್ನಾಟಕ ಹೈಕೋರ್ಟಿನಲ್ಲಿ ಹತ್ತೊಂಬತ್ತು ಮಂದಿ ಪೂರ್ಣಕಾಲಿಕ ನ್ಯಾಯಾಧೀಶರಿದ್ದು, ಇವರಲ್ಲಿ ಜಸ್ಟೀಸ್ ಕೆಎನ್ ಎಂ ಫಣೀಂದ್ರ ಅವರು ಮುಂದಿನ ವರ್ಷ ಮೇ ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ. ಅದೇ ರೀತಿ 15 ಮಂದಿ ಹೆಚ್ಚುವರಿ ನ್ಯಾಯಾಧೀಶರು ಕೂಡ ಇದ್ದು, ಇವರಲ್ಲಿ ಹತ್ತು ಮಂದಿ ಮುಂದಿನ ವರ್ಷದ ಮೊದಲ ಭಾಗದಲ್ಲಿ ನಿವೃತ್ತರಾಗಲಿದ್ದಾರೆ.

ಕೇವಲ ನ್ಯಾಯಾಧೀಶರ ಕೊರತೆಯಿಂದ ನ್ಯಾಯ ದಾನ ವಿಳಂಬ ಆಗುತ್ತಿದೆ ಎನ್ನಲಾಗುವುದಿಲ್ಲ. ನ್ಯಾಯಾಂಗ ಪ್ರಕ್ರಿಯೆಯ ವಿಳಂಬದಲ್ಲಿ ವಕೀಲರ ಪಾತ್ರ ಕೂಡ ಇದೆ. ದೇಶದಲ್ಲಿ ಕಳೆದ ಹತ್ತು ರ್ಷಗಳಿಂದ 44 ಲಕ್ಷ ಪ್ರಕರಣಗಳು ವಿವಿಧ ಹೈಕೋರ್ಟುಗಳಲ್ಲಿ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ. ಅವುಗಳಲ್ಲಿ 94 ಸಾವಿರ ಪ್ರಕರಣಗಳು ಕಳೆದ 20 ವರ್ಷಗಳಿಂದ ನ್ಯಾಯಾಲಯದಲ್ಲಿ ಕೊಳೆಯುತ್ತಿವೆ. ಇವುಗಳಲ್ಲಿ 44 ಸಾವಿರ ಪ್ರಕರಣಗಳು ಅಲಹಾಬಾದ್ ಹೈಕೋರ್ಟಿನಲ್ಲೇ ಇವೆ. ದೇಶದ ಅತಿ ದೊಡ್ಡ ಹೈಕೋರ್ಟಿನಲ್ಲಿ 160 ಮಂದಿ ನ್ಯಾಯಾಧೀಶರಿರಬೇಕಾಗಿದ್ದು, ಮೂರನೇ ಒಂದಂಶ ನ್ಯಾಯಾಧೀಶರ ಹುದ್ದೆ ಖಾಲಿ ಇದೆ.
ಅಲಹಾಬಾದ್ ಹೈಕೋರ್ಟಿಗೆ ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟಿನ ಕೊಲಿಯಮ್ ಕಳುಹಿಸಿರುವ 13 ಶಿಫಾರಸು ಪಟ್ಟಿಗಳು ಕೇಂದ್ರ ಸರಕಾರದ ಎದುರು ಕೊಳೆಯುತ್ತಿವೆ. ಇವುಗಳಲ್ಲಿ ಹತ್ತು ಮಂದಿ ಆದಾಯ ಅರ್ಹತೆ ಹೊಂದಿರುವುದಿಲ್ಲ. ನಿಯಮ ಪ್ರಕಾರ ಹೈಕೋರ್ಟಿಗೆ ನ್ಯಾಯಾಧೀಶರಾಗಿ ನೇಮಕವಾಗಲು ತಮ್ಮ ವೃತ್ತಿ ನೆಲೆಯಲ್ಲಿ ಕನಿಷ್ಟ ವಾರ್ಷಿಕ ಏಳು ಲಕ್ಷ ರೂಪಾಯಿ ಆದಾಯ ಹೊಂದಿರಬೇಕಾಗುತ್ತದೆ.