ಅನರ್ಹ ಶಾಸಕರ ಸಂಬಂಧ ಸರ್ವೋಚ್ಚ ನ್ಯಾಯಾಲಯವು ಬುಧವಾರ ನೀಡಿದ ತೀರ್ಪು ವಿಧಾನಸಭಾಧ್ಯಕ್ಷರ ಹುದ್ದೆಯ ಬಗ್ಗೆಯಾಗಲಿ, ಅವರು ಕೈಗೊಳ್ಳುವ ನಿರ್ಧಾರಗಳ ಕುರಿತಾಗಲಿ ಯಾವುದೇ “ಅಂತಿಮ’’ ಎನಿಸುವ ನಿರ್ಧಾರದಂತೆ ಕಂಡುಬರುತ್ತಿಲ್ಲ. ಇದರಿಂದಾಗಿ ನ್ಯಾಯಾಲಯವು ಈ ಹಿಂದೆ ತಾನೇ ನಡೆಸಿದ ವಿಚಾರಣೆಯ ಕಾಲಕ್ಕೆ ಎದುರಾದ ಪ್ರಶ್ನೆಗಳಿಗೆ ಈ ತೀರ್ಪಿನಲ್ಲಿ ಉತ್ತರವೂ ಸಿಗಲಿಲ್ಲ!
ಈ ಹಿನ್ನೆಲೆಯಲ್ಲಿ ಈ ತೀರ್ಪನ್ನು “ಐತಿಹಾಸಿಕ” ಅಥವಾ “ಮೈಲಿಗಲ್ಲು” ಎಂದು ಬಣ್ಣಿಸುವುದಕ್ಕೂ ಸಾಧ್ಯವಾಗಲಿಲ್ಲ. ಇಡೀ ದೇಶದ ವಿವಿಧ ರಾಜ್ಯಗಳ ವಿಧಾನ ಸಭಾಧ್ಯಕ್ಷರು ಈ ತೀರ್ಪನ್ನು ಕಡ್ಡಾಯವಾಗಿ ಅನುಸರಿಸುವಂತೆ ಮಾಡುವಲ್ಲಿಯೂ ತೀರ್ಪು ವಿಫಲವಾಗಿದೆಯೆಂದೇ ಹೇಳಬೇಕಾಗುತ್ತದೆ.
“ಶಾಸಕರನ್ನು ಅನರ್ಹಗೊಳಿಸುವ ಕ್ರಮವು ಸಭಾಧ್ಯಕ್ಷರ ಪರಮಾಧಿಕಾರ” ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯದ ತ್ರಿಸದಸ್ಯ ಪೀಠವು ” ಶಾಸಕರ ರಾಜೀನಾಮೆ ನೈಜತೆಯಿಂದ ಕೂಡಿದ್ದರೆ ರಾಜೀನಾಮೆಯನ್ನು ಸ್ವೀಕರಿಸಬೇಕು” ಎಂದೂ ಹೇಳಿದೆ. 17 ಶಾಸಕರು ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಕಳೆದ ಅಗಸ್ಟ್ ತಿಂಗಳಲ್ಲಿ ಸರ್ವೋನ್ನತ ನ್ಯಾಯಾಲಯಕ್ಕೆ ಮೊರೆ ಹೋದರು. ಇವರ ಪೈಕಿ ಎಂಟು ಶಾಸಕರ ರಾಜೀನಾಮೆಗಳು ” ಕ್ರಮಬದ್ಧ” ಇಲ್ಲ ಎಂದು ಸಭಾಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿದರು. ಆಗ ನ್ಯಾಯಾಲಯವು ಮತ್ತೊಮ್ಮೆ ರಾಜೀನಾಮೆ ಸಲ್ಲಿಸುವಂತೆ ಶಾಸಕರಿಗೆ ಸೂಚಿಸಿತು. ಅದೂ ಸಂಜೆ 6 ಗಂಟೆಯೊಳಗೆ! ಮುಂಬಯಿಯಲ್ಲಿದ್ದ ಶಾಸಕರು ವಿಶೇಷ ವಿಮಾನ ಏರಿ ಬೆಂಗಳೂರಿಗೆ ಧಾವಿಸಿ ಬಂದು ಏದುಸಿರು ಬಿಡುತ್ತಾ ವಿಧಾನಸೌಧಕ್ಕೆ ಓಡೋಡಿ ಬಂದು ರಾಜೀನಾಮೆ ನೀಡಿದ್ದನ್ನು ಟಿವ್ಹಿ ಚಾನೆಲ್ ಗಳು ಸಾವಿರ ಬಾರಿ ತೋರಿಸಿಯಾಗಿದೆ. ನ್ಯಾಯಾಲಯದ ಆದೇಶದಂತೆಯೇ ನಡೆದುಕೊಂಡ ಈ ಶಾಸಕರನ್ನೆಲ್ಲ ಸಭಾಧ್ಯಕ್ಷರು “ಹೋಲ್ ಸೇಲ್’ ಆಗಿಯೇ ಅನರ್ಹಗೊಳಿಸಿದರು.
ನ್ಯಾಯಾಲಯದ ಆದೇಶದಂತೆ ಎರಡನೇ ಬಾರಿಗೆ ರಾಜೀನಾಮೆ ಸಲ್ಲಿಸಿದವರನ್ನೂ ಸಹ ಅನರ್ಹಗೊಳಿಸಿದ ಸಭಾಧ್ಯಕ್ಷರ ಕ್ರಮದ ಬಗ್ಗೆ ತೀರ್ಪಿನಲ್ಲಿ ಏನನ್ನೂ ಹೇಳಲಾಗಿಲ್ಲವೇಕೆ? ಸಭಾಧ್ಯಕ್ಷರ ಹುದ್ದೆ ಒಂದು ಸಾಂವಿಧಾನಿಕ ಹುದ್ದೆ. ಅದರಲ್ಲಿ ” ಅತಿಕ್ರಮಿಸುವುದು” ಅಥವಾ ಹಸ್ತಕ್ಷೇಪ ಮಾಡುವುದು ನ್ಯಾಯಾಂಗಕ್ಕೆ ಸಾಧ್ಯವಿಲ್ಲ. ಆದರೆ ಸಾಂವಿಧಾನಿಕ ಹುದ್ದೆಯಲ್ಲಿ ಇದ್ದವರು ಸಾಂವಿಧಾನಿಕ ಕರ್ತವ್ಯದಲ್ಲಿ ತಪ್ಪಿದರೆ, ತಮ್ಮ ವ್ಯಾಪ್ತಿಯನ್ನು ಮೀರಿ ರಾಜಕೀಯ ಕಾರಣಗಳಿಗಾಗಿ ನಿರ್ಧಾರ ಕೈಗೊಂಡಲ್ಲಿ ಅದನ್ನು ಪರಾಮರ್ಶೆ ಮಾಡುವ ಅಧಿಕಾರ ನ್ಯಾಯಾಂಗಕ್ಕೆ ಇಲ್ಲವೇ? ಈ ಕೆಲಸವನ್ನು ನ್ಯಾಯಾಂಗವು ಮಾಡದೇ ಇನ್ನಾರು ಮಾಡಬೇಕು? ಎಂಬ ಪ್ರಶ್ನೆ ಈಗ ಮೂಡತೊಡಗಿದೆ.

ಶಾಸಕರ ಅನರ್ಹತೆಯ ಸಂಬಂಧ ನಿರ್ಣಯಿಸುವ ಅಧಿಕಾರ ಸರ್ವೋನ್ನತ ನ್ಯಾಯಾಲಯಕ್ಕೆ ಇದೆ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯವು, ಇದೇ ಪ್ರಕರಣದಲ್ಲಿ ಶಾಸಕರ ರಾಜೀನಾಮೆಯ ಸಂಬಂಧ ಕಳೆದ ಆಗಸ್ಟ್ ತಿಂಗಳಲ್ಲಿ ತಾನು ಸಭಾಧ್ಯಕ್ಷರಿಗೆ ನೀಡಿದ ಆದೇಶವು ಪಾಲನೆಯಾಗದ ಬಗ್ಗೆ ಮೌನವಹಿಸಿದ್ದು ಏಕೆ? ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.
ಶಾಸಕರು ನೀಡಿರುವ ರಾಜೀನಾಮೆಗಳ ಬಗ್ಗೆ ಮೊದಲು ನಿರ್ಧಾರ ಕೈಗೊಳ್ಳಿರಿ. ಅನರ್ಹತೆಯ ಪ್ರಶ್ನೆಯನ್ನು ನ್ಯಾಯಾಲಯಕ್ಕೆ ಬಿಡಿ ಎಂದು ನ್ಯಾಯಾಲಯವು ಸೂಚಿಸಿದಾಗಲೂ ಸಭಾಧ್ಯಕ್ಷರು ದಿಢೀರ್ ಆಗಿ ಎಲ್ಲ ಶಾಸಕರನ್ನು ಅನರ್ಹಗೊಳಿಸಿಬಿಟ್ಟರು.
“ಶಾಸಕರ ರಾಜೀನಾಮೆಯು ನೈಜ ಕಾರಣದಿಂದ ಕೂಡಿದ್ದರೆ ಒಪ್ಪಬೇಕು” ಎಂದು ತೀರ್ಪಿನಲ್ಲಿ ಹೇಳಿರುವ ನ್ಯಾಯಾಲಯವು “ಕಾರಣಗಳು ನೈಜವೊ, ಅಲ್ಲವೊ ಎಂಬುದನ್ನು ನಿರ್ಧರಿಸುವ ಸಂಪೂರ್ಣ ಅಧಿಕಾರವನ್ನು ಸಭಾಧ್ಯಕ್ಷರಿಗೆ ಬಿಟ್ಟಿದೆ”!
ಸಭಾಧ್ಯಕ್ಷ ಸ್ಥಾನವನ್ನು ಅಲಂಕರಿಸುವವರು ಆಡಳಿತ ಪಕ್ಷಕ್ಕೇ ಸೇರಿರುವುದು ಸರ್ವರಿಗೂ ಗೊತ್ತಿರುವ ಸಂಗತಿ. ಅವರು ಪಕ್ಷಾತೀತವಾಗಿ ವರ್ತಿಸಬೇಕು, ವರ್ತಿಸುತ್ತಾರೆ ಎಂಬುದನ್ನು ಮೇಲ್ನೋಟಕ್ಕೆ ಹೇಳುತ್ತೇವೆ. ವಾಸ್ತವವಾಗಿ ಅವರು ಆಡಳಿತದಲ್ಲಿರುವವರ ಒಲವು ನಿಲುವುಗಳ ಪರವಾಗಿಯೇ ತಮ್ಮ ಕಾರ್ಯವನ್ನು ನಿರ್ವಹಿಸುತ್ತಾರೆಂಬುದು ಗುಟ್ಟಿನ ಸಂಗತಿಯಲ್ಲ. ಸುಪ್ರೀಂಕೋರ್ಟ್ ತೀರ್ಪು ಬಂದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಿಂದಿನ ಸಭಾಧ್ಯಕ್ಷ ರಮೇಶಕುಮಾರ್ ಅವರ ವಿರುದ್ಧ ವಾಗ್ದಾಳಿ ಮಾಡಿದರಲ್ಲದೇ ರಮೇಶಕುಮಾರ್ ಅವರು ಸಿದ್ದರಾಮಯ್ಯ ಅವರೊಂದಿಗೆ ಸೇರಿ ಷಡ್ಯಂತ್ರ ಮಾಡಿಯೇ ಶಾಸಕರನ್ನು ಅನರ್ಹಗೊಳಿಸಿದರು ಎಂದೂ ಆರೋಪಿಸಿದ್ದಾರೆ.
ಅನರ್ಹ ಶಾಸಕ ರಮೇಶ ಜಾರಕಿಹೊಳಿ ಅವರಂತೂ ರಮೇಶಕುಮಾರ ಅವರನ್ನು “ಹುಚ್ಚ” ಎಂದೇ ಜರಿದರು.

ಶಾಸಕರನ್ನು ಅನರ್ಹಗೊಳಿಸುವ ಸಭಾಧ್ಯಕ್ಷರ ಕ್ರಮವು ” ಸಭಾಧ್ಯಕ್ಷರ ಪರಮಾಧಿಕಾರ” ಎನ್ನುವ ನ್ಯಾಯಾಲಯವು ” ಎಲ್ಲಿಯವರೆಗೆ ಅನರ್ಹ” ಎಂದು ತೀರ್ಮಾನಿಸುವ ಅಧಿಕಾರ ಸಭಾಧ್ಯಕ್ಷರಿಗೆ ಇಲ್ಲ ಎಂದು ತಿಳಿಸಿದೆ.” “ಪರಮಾಧಿಕಾರ” ದಲ್ಲಿ ಕೆಲವೊಂದಿಷ್ಟನ್ನು ಮಾತ್ರ ಆಕ್ಷೇಪಿಸಿ ಇನ್ನುಳಿದದ್ದನ್ನು ಸಭಾಧ್ಯಕ್ಷರಿಗೆ ನ್ಯಾಯಾಲಯ ಬಿಟ್ಟುಕೊಟ್ಟಿದೆ. ಆದರೆ ” ಪರಮಾಧಿಕಾರವನ್ನು ” ಪ್ರಯೋಗಿಸುವಾಗ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸಲಾಗಿದೆಯೇ ಇಲ್ಲವೆ ಎಂಬುದನ್ನು ತೀರ್ಪಿನಲ್ಲಿ ನಿಷ್ಕರ್ಷೆ ಮಾಡಿದಂತೆ ಕಾಣುತ್ತಿಲ್ಲ.
ಒಂದಂತೂ ಸ್ಪಷ್ಟ. ಕಾಂಗ್ರೆಸ್ ಮತ್ತು ಜೆ ಡಿ ಎಸ್ ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವಾಗ ಅವರ ಉದ್ದೇಶ ಮತ್ತೆ ಚುನಾವಣೆಗೆ ಸ್ಪರ್ಧಿಸಿ, ಗೆದ್ದು ಬಂದು ಬಿಜೆಪಿ ಸರಕಾರದಲ್ಲಿ ಸೇರುವುದೇ ಆಗಿತ್ತು. ತಮ್ಮ ರಾಜೀನಾಮೆಗಳನ್ನು ಸಭಾಧ್ಯಕ್ಷರು ಅಂಗೀಕರಿಸಬೇಕೆಂಬುದೇ ಅವರ ಇಚ್ಛೆಯಾಗಿತ್ತು. ಆದರೆ ಅವರನ್ನು ಅನರ್ಹಗೊಳಿಸಿ ನಾಲ್ಕು ವರ್ಷಗಳ ಕಾಲ ಚುನಾವಣೆಗೇ ನಿಲ್ಲದಂತೆ ಮಾಡಬೇಕೆಂಬುದು ಸಮ್ಮಿಶ್ರ ಸರಕಾರದ ನಾಯಕರ ಪ್ರಬಲವಾದ ಪಟ್ಟು ಆಗಿತ್ತು. ತೆರೆಯ ಮುಂದೆ, ಹಿಂದೆ ಏನೇನೊ ಬೆಳವಣಿಗೆಗಳು ನಡೆದು ಕೊನೆಗೆ ಸಭಾಧ್ಯಕ್ಷರಿಂದ ” ಅನರ್ಹತೆಯ ಆದೇಶ” ಜುಲೈ ಕೊನೆಗೆ ಹೊರ ಬಿತ್ತು. ನಂತರ ನಡೆದಿದ್ದೆಲ್ಲ ಕಾನೂನಿನ ಹೋರಾಟ.
ಸಂವಿಧಾನದ ಹತ್ತನೇ ಪರಿಚ್ಛೇದದಂತೆ ಅನರ್ಹ ಶಾಸಕರ ಮರುಸ್ಪರ್ಧೆಯ ಬಗ್ಗೆ ನಿರ್ಧಾರ ಕೈಗೊಳ್ಳುವ ಹಕ್ಕು ಸಭಾಧ್ಯಕ್ಷರಿಗೆ ಇಲ್ಲವೆಂದು ತೀರ್ಪಿನಲ್ಲಿ ಹೇಳಲಾಗಿದ್ದರಿಂದ ಹಿಂದಿನ ಸಮ್ಮಿಶ್ರ ಸರಕಾರದ ನಾಯಕರ ” ಮೂಲ ಉದ್ದೇಶಕ್ಕೆ” ಭಾರೀ ಪೆಟ್ಟು ಬಿದ್ದಂತಾಗಿದೆ. ಪ್ರಸಕ್ತ ವಿಧಾನಸಭೆಯ ಅವಧಿ ಅಂತ್ಯಗೊಳ್ಳುವ 2023 ರವರೆಗೂ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಫರ್ಮಾನು ಹೊರಡಿಸಿದ್ದ ಸಭಾಧ್ಯಕ್ಷರು ಈಗ ದೇಶದ ಜನಪ್ರತಿನಿಧಿಗಳ ಎದುರು ತೀವ್ರ ಮುಜುಗರ ಎದುರಿಸುವಂತಾಗಿದೆ.
ಶಾಸಕರ ರಾಜೀನಾಮೆ ವಿಷಯದಲ್ಲಿ, ಪಕ್ಷಾಂತರ ಚಟುವಟಿಕೆಯಲ್ಲಿ ತೊಡಗಿದ ಶಾಸಕರ ಸಂಬಂಧದಲ್ಲಿ ದೇಶದ ವಿವಿಧ ರಾಜ್ಯಗಳ ಸಭಾಧ್ಯಕ್ಷರುಗಳು ವಿಭಿನ್ನ ರೀತಿಗಳಲ್ಲಿ ನಡೆದುಕೊಂಡಿರುವ ಉದಾಹರಣೆಗಳು ನಮ್ಮ ಮುಂದಿವೆ. ಹರಿಯಾಣದಲ್ಲಿ ರಾಜೀನಾಮೆಗಳನ್ನು ನಾಲ್ಕು ತಿಂಗಳು ಕಾಲ ಇಟ್ಟುಕೊಂಡರೆ, ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಏಳು ಜೆ ಡಿ ಎಸ್ ಶಾಸಕರ ಅನರ್ಹತೆಯ ಬಗ್ಗೆ ಕರ್ನಾಟಕದ ಸಭಾಧ್ಯಕ್ಷರು 2017 ರಲ್ಲಿ ಯಾವದೇ ತೀರ್ಮಾನ ಕೈಗೊಳ್ಳದೇ ಹಾಗೇ ಹೋದರು! ತಮಿಳುನಾಡಿನಲ್ಲಿ ಸಭಾಧ್ಯಕ್ಷರಿಂದ ಅನರ್ಹಗೊಂಡ 18 ಶಾಸಕರು ಚೆನ್ನೈ ಹೈಕೋರ್ಟಿನಲ್ಲಿ ಪ್ರಶ್ನಿಸಿ ಮರು ಸ್ಪರ್ಧೆಗೆ ಅವಕಾಶ ಪಡೆದುಕೊಂಡರು.
ದೇಶದ ಯಾವುದೇ ಸಭಾಧ್ಯಕ್ಷರಿರಲಿ. ರಾಜೀನಾಮೆ, ಪಕ್ಷಾಂತರ ಚಟುವಟಿಕೆ ಸಂಬಂಧ ಕೈಗೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಏಕರೂಪದ ಮಾರ್ಗದರ್ಶಿಗಳನ್ನು ಹಾಕಿಕೊಡುವ ತೀರ್ಪನ್ನು ಕೊಡಬಹುದೆಂಬ ನಿರೀಕ್ಷೆ ಸುಳ್ಳಾಗಿದೆ.” ಪರಮಾಧಿಕಾರ” ದ ಹೆಸರಿನಲ್ಲಿ ಸಭಾಧ್ಯಕ್ಷರು ತಮಗೆ ತಿಳಿದಂತೆ ನಿರ್ಧಾರ ಕೈಗೊಳ್ಳುವ “ಟ್ರೆಂಡ್” ಮತ್ತೆ ಮುಂದುವರಿಯಲು ನ್ಯಾಯಾಲಯ ಅವಕಾಶ ನೀಡಿದಂತಾಗಿದೆ.
1989 ರಲ್ಲಿ ರಾಜ್ಯದಲ್ಲಿಯ ಬೊಮ್ಮಾಯಿ ಸರಕಾರವನ್ನು ವಜಾ ಮಾಡಿದ ಸಂಬಂಧ ಸರ್ವೋಚ್ಚ ನ್ಯಾಯಾಲಯವು 1994 ರ ಮಾರ್ಚ್ 21 ರಂದು ನೀಡಿದ ಐತಿಹಾಸಿಕ ತೀರ್ಪು ಇಡೀ ದೇಶಕ್ಕೇ ಮಾದರಿಯಾಯಿತು. ಅದೇ ರೀತಿ ಸಭಾಧ್ಯಕ್ಷರ ನಡವಳಿಕೆ ಮತ್ತು ನಿರ್ಧಾರಗಳ ಸಂಬಂಧವೂ ” ಮಾದರಿ ತೀರ್ಪು” ಹೊರಬರಬಹುದು ಎಂಬ ನಿರೀಕ್ಷೆ ಹುಸಿಯಾದಂತಾಗಿದೆ.
ಅನರ್ಹಗೊಂಡ ಶಾಸಕರು ಸರಕಾರದ ಯಾವುದೇ ಸ್ಥಾನಮಾನಗಳನ್ನು ಅಲಂಕರಿಸುವಂತಿಲ್ಲ. ಅಷ್ಟರ ಮಟ್ಟಿಗೆ ಅವರಿಗೆ ಹಿನ್ನಡೆಯಾಗಿದೆ. ಆದರೆ ರಾಜೀನಾಮೆ ನೀಡಲು ನಿರ್ಧಾರ ಕೈಗೊಂಡಾಗಲೇ ಆಡಳಿತ ಪಕ್ಷ ಸೇರುವ ಮತ್ತು ಆಡಳಿತ ಪಕ್ಷದ ಟಿಕೆಟ್ ಮೇಲೆಯೇ ಸ್ಪರ್ಧಿಸುವುದು ಅವರ ಗುರಿಯಾಗಿತ್ತು. ನ್ಯಾಯಾಲಯದ ತೀರ್ಪಿನಿಂದ ಅವರ ಹಾದಿ ಸುಗಮವಾಗಿದೆ.
ಬುಧವಾರ ನವ್ಹೆಂಬರ್ 13 ರ ತೀರ್ಪು ಅನೇಕ ಪ್ರಶ್ನೆಗಳಿಗೆ ಉತ್ತರ ಕೊಡದೇ ಹೋಗಿರುವುದಂತೂ ಸ್ಪಷ್ಟ.