ಹಂಪಿ ಉತ್ಸವ ಅಂದರೆ ಇತ್ತೀಚೆಗೆ ಯಾವಾಗಲೂ ಮುಂದೂಡಿಕೆಯಿಂದಲೇ ಪ್ರಚಾರ ಪಡೆಯುತ್ತಿದೆ. ಅದಕ್ಕೆ ಕಾರಣ ಇಂತಹುದ್ದೇ ಆಗಬೇಕೆಂದಿಲ್ಲ. ಒಂದಲ್ಲ ಒಂದು ಸಬೂಬು ಹೇಳಿ ಮುಂದೆ ಹಾಕುವುದು ಪರಿಪಾಠವೇ ಆಗಿದೆ. ಇದು ಮೊದಲಿನಿಂದಲೂ ಆಗುತ್ತಿದ್ದು ಈ ಭಾಗದ ಜನರು ಮೈಸೂರು ದಸರಾ ಹೇಗೆ ತಪ್ಪದೇ ಮಾಡುತ್ತೀರಿ, ಹಂಪಿ ಉತ್ಸವ ಅಂದೆ ತಾರತಮ್ಯ ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ವರ್ಷದ ಉದಾಹರಣೆ ಇತ್ತೀಚಿನದ್ದು. 2019 ರ ಹಂಪಿ ಉತ್ಸವವನ್ನು 2020 ರ ಜನವರಿಯಲ್ಲಿ ಆಚರಿಸಲಾಗುವುದು ಎಂದು ನಿರ್ಧಾರ ಮಾಡಲಾಗಿದ್ದು, ಜನವರಿ 11 ಮತ್ತು 12ರಂದು ಆಚರಿಸಲಾಗುವುದು. ಹೀಗಾಗಿ ಮೂರು ದಿನಗಳ ಉತ್ಸವವನ್ನು ಎರಡು ದಿನಕ್ಕೆ ನಿಗದಿಗೊಳಿಸಲಾಗಿದೆ.
ಒಮ್ಮೆ ಬರ ಮತ್ತೊಮ್ಮೆ ನೆರೆ ಮಗುದೊಮ್ಮೆ ಚುನಾವಣಾ ಸಂಹಿತೆ. ಈ ಎಲ್ಲ ನೆವಗಳು ಉದ್ಭವಿಸುವುದು ಬರೀ ಈ ಉತ್ಸವಕ್ಕೆ ಮಾತ್ರವೇನೋ ಎಂಬಂತೆ ಭಾಸವಾಗುತ್ತಿದೆ. ಹಂಪಿ ಕಲಾವೈಭವವನ್ನು ನೋಡಲು ದೇಶದ ನಾನಾ ಮೂಲೆಗಳಿಂದ ಹಾಗೂ ವಿದೇಶದಿಂದಲೂ ಜನರು ಧಾವಿಸುತ್ತಾರೆ. ಹಂಪಿಗೆ ವಿಶ್ವ ಮಟ್ಟದಲ್ಲಿ ವಿಶೇಷ ಸ್ಥಾನಮಾನವೂ ಇದೆ. ಇಂತಹ ಭವ್ಯ ಪರಂಪರೆ ಹೊಂದಿರುವ ಸ್ಥಳದ ಬಗ್ಗೆ ಇನ್ನೂ ಹಲವಾರು ರೀತಿಯ ಪ್ರಯತ್ನಗಳನ್ನು ನಡೆಸಿ ಹೆಚ್ಚು ಪ್ರವಾಸಿಗರನ್ನು ಸೆಳೆಯಬೇಕು. ಇಲ್ಲಿಯ ಭವ್ಯ ಪರಂಪರೆಯನ್ನು ಜನರಿಗೆ ತಿಳಿಸಿಕೊಡಲು ಉತ್ತಮ ವೇದಿಕೆಯಾಗುವ ಉತ್ಸವವನ್ನು ಪ್ರತಿ ಬಾರಿ ನವೆಂಬರ್ ನಲ್ಲಿ ತಪ್ಪದೇ ಆಚರಿಸಬೇಕು. ವರ್ಷಕ್ಕೆ ಮೂರು ದಿನವೂ ಆಚರಿಸಲು ಹಿಂದೇಟು ಹಾಕುತ್ತಿರುವುದು ಮಾತ್ರ ಖೇದದ ಸಂಗತಿ.
ಹಂಪಿ ಉತ್ಸವ ಈ ವರ್ಷದ ಪ್ರಾರಂಭದಲ್ಲಿ, ಅಂದರೆ ಜನವರಿ 12ಕ್ಕೆ ನಡೆಯಬೇಕಿತ್ತು. ಆದರೆ ಕೆಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಲಿಲ್ಲವಂತೆ. ಜನವರಿಯಲ್ಲಿಯೇ ನಡೆಯುವುದು ಖಚಿತ ಎಂದು ಆಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೇಳಿತ್ತು. ಆಗ ಜಿಲ್ಲೆಯ ಕಲಾವಿದರು ಅದಕ್ಕೆ ತಾಲೀಮು ನಡೆಸಿ ಸಿದ್ಧವಾಗಿದ್ದರು. ನಂತರ ಸಿದ್ಧತೆಗಾಗಿ ಒಂದು ತಿಂಗಳ ಕಾಲಾವಕಾಶ ಬೇಕು ಎಂದು ನೆವ ಹೇಳಿ ಫೆಬ್ರವರಿಗೆ ನಿಗದಿಗೊಳಿಸಲಾಯಿತು. ಹಾಗೆ ಮುಂದೂಡುತ್ತ ಬಂದು ಈಗ ಅಕ್ಟೋಬರ್ ಬಂದರೂ ನಡೆಯಲಿಲ್ಲ. ಈಗ ಚುನಾವಣಾ ನೀತಿ ಸಂಹಿತೆ ಕಾರಣದಿಂದ ಮತ್ತೆ ಮುಂದೂಡಲಾಗಿದೆ.
ಮೊದಲು ಹೀಗೆ ಆಗಿತ್ತು:
ಮೊದಲು ಹಂಪಿ ಉತ್ಸವವು ಕನಕ-ಪುರಂದರ ಉತ್ಸವದ ಹೆಸರಿನಲ್ಲಿ ಆಚರಿಸಲಾಗುತ್ತಿತ್ತು. ನಂತರ 1970 ರಲ್ಲಿ ಹಂಪಿಯ ಕಮಲ್ ಮಹಲ್ ನಲ್ಲಿ ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಉತ್ಸವವನ್ನು ಆಚರಿಸಲಾಗುತ್ತಿತ್ತು.
1987 ರಲ್ಲಿ ಎಂ. ಪಿ. ಪ್ರಕಾಶ ಅವರ ಮುತುವರ್ಜಿಯಿಂದಾಗಿ ಹಂಪಿ ಉತ್ಸವವನ್ನು ಆರಂಭಿಸಲಾಗಿತ್ತು. 1988 ರಲ್ಲಿ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ನಜೀರ್ ಸಾಬ್ ನಿಧನರಾದರೆಂದು ಆಚರಿಸಲಿಲ್ಲ. 2000 ನೇ ಇಸವಿಯಲ್ಲಿ ಡಾ. ರಾಜ್ ಕುಮಾರ್ ಅವರನ್ನು ಅಪಹರಿಸಲಾಗಿದ್ದರಿಂದ ಹಂಪಿ ಉತ್ಸವವನ್ನು ಆಚರಿಸಲಿಲ್ಲ. 2002 ರಲ್ಲಿ ಬರದ ನೆವದಿಂದ ಉತ್ಸವ ಮಾಡಲಾಗಲಿಲ್ಲ. 2003 ರಲ್ಲಿ ಜನವರಿ 26 ಕ್ಕೆ ನಿಗದಿ ಮಾಡಲಾಗಿತ್ತು. ಉತ್ಸವವೇನೋ ವೈಭವದಿಂದ ಆರಂಭವಾಯಿತು. ಆದರೆ ಅಂದು ಮೊದಲನೆಯ ದಿನವೇ ಸ್ಥಳೀಯ ತಾಲೂಕಾ ಪಂಚಾಯತ್ ಅಧ್ಯಕ್ಷರಾಗಿದ್ದ ಸೂರ್ಯನಾರಾಯಣ ಅವರು ನಿಧನರಾಗಿದ್ದರಿಂಧ ರದ್ದುಗೊಳಿಸಲಾಯಿತು. 2009 ರಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂತು, ಉತ್ಸವ ಕೈಬಿಡಲಾಯಿತು. 2011 ರಲ್ಲಿ ರೆಡ್ಡಿ ಸಹೋದರರ ರಾಜಕೀಯ ಪರಿಸ್ಥಿತಿ ಬದಲಾವಣೆಯಾದ ಕಾರಣ ಹಂಪಿ ಉತ್ಸವದ ವೈಭವಕ್ಕೆ ಕೊರತೆ ಉಂಟಾಯಿತು. 2012 ರಲ್ಲಿ ರಾಜಕೀಯ ಸ್ಥಿತಿಗಳು ಬದಲಾವಣೆಗಳ ಕಾರಣದಿಂದ ಉತ್ಸವವನ್ನೇ ಕೈಬಿಡಬೇಕಾಗಿ ಬಂತು.
2013 ರಲ್ಲಿಯೂ ಹೀಗೆಯೇ ಆಗಿತ್ತು. ಜನವರಿ 18 ರಿಂದ 20 ರ ವರೆಗೆ ಆಚರಿಸಲು ನಿರ್ಧಾರವಾಗಿತ್ತು. ಅದಕ್ಕೆ ಕೆಲ ಸಭೆಗಳೂ ನಡೆದವು. ನಂತರ ಆಗಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಂತಿಮ ದಿನಾಂಕಕ್ಕೆ ಒಪ್ಪಿಗೆ ನೀಡಲಿಲ್ಲ. ನಂತರ ಬಿಜೆಪಿ ಸರ್ಕಾರದ ಆಂತರಿಕ ಬೆಳವಣಿಗೆಗಳು ಉತ್ಸವಕ್ಕೆ ಅಡ್ಡಿಯಾದವು.
ಆದರೆ 2008 ರಲ್ಲಿ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಂಪಿ ಉತ್ಸವನ್ನು ಅದ್ಧೂರಿಯಿಂದ ಆಚರಿಸಿದರು. ಬಿಜೆಪಿ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ ಅಂದು ಚಾಲನೆ ನೀಡಿದ್ದು, ಹಂಪಿ ಉತ್ಸವ ರಾಷ್ಟ್ರದ ಗಮನ ಸೆಳೆಯಿತು. ನಂತರ 2010 ಜನವರಿ ಯಲ್ಲಿಯೂ ವೈಭವದಿಂದ ಆಚರಿಸಲಾಯಿತು.
ಸಚಿವರು ಎಲ್ಲಿದ್ದಾರೆ?
ಈ ಬಾರಿಯೂ ನವೆಂಬರ್ ನಲ್ಲಿ ಉತ್ಸವ ಆಚರಿಸಬೇಕಿತ್ತು. ಎಲ್ಲರೂ ರಾಜಕೀಯ ಸ್ಥಿತ್ಯಂತರಗಳಿಂದ ವ್ಯಸ್ತರಾಗಿದ್ದಾರೆ. ಈ ಭಾಗದ ಕಲಾವಿದರು, ಕಲಾಸಕ್ತರು ಹಾಗೂ ಸಾಹಿತಿಗಳು ಸಚಿವ ಲಕ್ಷ್ಮಣ ಸವದಿಯವರು ಎಲ್ಲಿದ್ದಾರೆ ಎಂಬ ಪ್ರಶ್ನೆಯನ್ನೇ ಕೇಳುತ್ತಿದ್ದಾರೆ. ಈ ಮಾತು ಅವರಿಗೆ ಎಲ್ಲಿಂದಲೋ ಕೇಳಿಸಿತೊ ಗೊತ್ತಿಲ್ಲ. ತಕ್ಷಣ ಈ ವರ್ಷದ ಹಂಪಿ ಉತ್ಸವವನ್ನು ಮುಂದಿನ ಜನವರಿ ತಿಂಗಳಿನಲ್ಲಿ ಮಾಡಲಾಗುವುದು ಎಂದು ಬಳ್ಳಾರಿಯಲ್ಲಿ ಡಿಸಿಎಂ ಇತ್ತೀಚೆಗೆ ತಿಳಿಸಿದರು.
ಗಂಗಾವತಿ ಮುರುಳೀಧರ, ಸಾಮಾಜಿಕ ಕಾರ್ಯಕರ್ತರು ಹಾಗೂ ಗಾಯಕರ ಪ್ರಕಾರ, “ನಮ್ಮ ಭಾಗದಲ್ಲಿ ಹಲವಾರು ಕಲಾವಿದರು ಹಂಪಿ ಉತ್ಸವಕ್ಕಾಗಿ ಕಾಯುತ್ತಿರುತ್ತಾರೆ. ಇಲ್ಲಿ ಹಾಡಬೇಕು, ತಮ್ಮ ಕಲೆಯನ್ನು ತಿಳಿಸಬೇಕು, ಈ ಭಾಗದ ಕಲಾವಿದರನ್ನು ಪ್ರೋತ್ಸಾಹಿಸಬೇಕು, ಕಲಾಸಕ್ತರನ್ನು ರಂಜಿಸಬೇಕು. ಉತ್ಸವ್ಕಕೆಂದು ಬಂದ ಜನರಿಗೆ ಕಲಾವೈಭವವನ್ನು ತಿಳಿಸಬೇಕು. ಪ್ರತಿ ವರ್ಷಕ್ಕೆ ಮೂರು ದಿನ ಆಚರಿಸಲು ಹಿಂದೇಟೇಕೆ ಎಂಬುದು ನಮ್ಮ ಅಹವಾಲು”.
ಮುಂದಿನ ವರ್ಷವಾದರೂ ಸರಿಯಾಗಿ ಆಚರಿಸಲಿ:
ಹಂಪಿ ಉತ್ಸವ ಬರೀ ಸರ್ಕಾರಿ ಕಾರ್ಯಕ್ರಮವಾಗಬಾರದು. ಇದನ್ನು ಕಲಾ ಸಿರಿವಂತಿಕೆಯನ್ನು ಕಾಪಿಟ್ಟುಕೊಳ್ಳುವಲ್ಲಿ ಹಾಗೂ ಉದಯೋನ್ಮುಖ ಕಲಾವಿದರಿಗೆ ಪ್ರೋತ್ಸಾಹ ನೀಡುವಂತ ವಿಶೇಷ ವೇದಿಕೆಯಾಗಬೇಕು. ಮುಂದಿನ ವರ್ಷದಿಂದಲಾದರೂ ಸಬೂಬುಗಳನ್ನು ಹೇಳದೇ ಪ್ರತಿಬಾರಿ ಮೈಸೂರು ದಸರಾ ಹೇಗೆ ಆಚರಿಸುತ್ತಾರೋ ಹಾಗೆಯೇ ಹಂಪಿ ಉತ್ಸವ ಆಚರಿಸಲಿ ಎಂಬುದು ಕಲಾರಸಿಕರ, ಕಲಾವಿದರ ಆಶಯ.