ಬೆಂಗಳೂರು ದೇಶದ ಸ್ಟಾರ್ಟ್ ಅಪ್ ರಾಜಧಾನಿಯಾಗಿ ಹೆಗ್ಗಳಿಕೆ ಪಡೆದುಕೊಂಡಿದ್ದರೆ, ಇದೀಗ ಕರ್ನಾಟಕ ಕರಾವಳಿಯ ಮಂಗಳೂರು ಸ್ಟಾರ್ಟ್ ಅಪ್ ಚಟುವಟಿಕೆಯಲ್ಲಿ ರಾಜ್ಯದ ಎರಡನೇ ನಗರವಾಗಿ ಗುರುತಿಸಿಕೊಳ್ಳುವತ್ತ ಸಾಗುತ್ತಿದೆ. ಕೇಂದ್ರ ಸರಕಾರ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯನ್ನು ಸ್ಟಾರ್ಟ್ ಅಪ್ ಜಿಲ್ಲೆ ಎಂದು ಘೋಷಣೆ ಮಾಡಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರ ಸಂಸದರ ನಿಧಿಯಿಂದ ಇಂಕ್ಯುಬೇಷನ್ ಸೆಂಟರ್ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ.
ಮಂಗಳೂರಿನಲ್ಲಿ 25 ವರ್ಷಗಳ ಹಿಂದಿಯೇ ಇಂತಹ ನವೋದ್ಯಮ ಕೇಂದ್ರವೊಂದು ಸುರತ್ಕಲ್ ನ್ಯಾಶನಲ್ ಇನ್ಸಿಟ್ಯೂಟ್ ಆಫ್ ಟೆಕ್ನಲಾಜಿ – ಕರ್ನಾಟಕದಲ್ಲಿ NITK – STEP (Science & Technology Entrepreneurs Park) ಆರಂಭ ಆಗಿತ್ತು. ಇದೀಗ Technology Business Incubator (TBI) ಕೂಡ ಇದೆ. ಅನಂತರ ಸಾಫ್ಟ್ ವೇರ್ ಟೆಕ್ನಲಾಜಿ ಪಾರ್ಕ್ ಆಫ್ ಇಂಡಿಯ STPI ಮಂಗಳೂರಿನ ಬ್ಲೂಬೆರಿ ಹಿಲ್ ನಲ್ಲಿ ಹೈ ಟೆಕ್ ಇಂಕ್ಯುಬೇಷನ್ ಸೆಂಟರ್ ಆರಂಭಿಸಿ ಮಾಹಿತಿ ತಂತ್ರಜ್ಞಾನ ಮತ್ತು ಐಟಿ ಆಧಾರಿತ ಸಣ್ಣ ಉದ್ಯಮಿಗಳಿಗೆ ಸೌಲಭ್ಯ ಒದಗಿಸಿತ್ತು.
ಇದೀಗ ಸರಕಾರಿ ಪ್ರಾಯೋಜಕತ್ವದ, ಶೈಕ್ಷಣಿಕ ಸಹಭಾಗಿತ್ವ ಮತ್ತು ಖಾಸಗಿ ವಲಯದಲ್ಲಿ ಎಂಟಕ್ಕೂ ಹೆಚ್ಚು ಇಂಕ್ಯುಬೇಷನ್ ಸೆಂಟರುಗಳು ಮಂಗಳೂರು ಸುತ್ತಮುತ್ತ ಇವೆ. ಒಂದೂವರೆ ವರ್ಷಗಳ ಹಿಂದೆ ಆರಂಭಗೊಂಡ ಮಂಗಳೂರಿನ ಮಲ್ಲಿಕಟ್ಟೆ – ಶಿವಭಾಗ್ ನಗರಪಾಲಿಕೆ ಕಟ್ಟಡದಲ್ಲಿ Centre for Entrepreneurship Opportunities & Learning ಇಂಕ್ಯುಬೇಷನ್ ಸೆಂಟರ್ ಆರು ಸೀಟುಗಳ ಸಾಮರ್ಥ್ಯ ಹೊಂದಿದೆ. ಇದು ಕೂಡ ಮಾಹಿತಿ ತಂತ್ರಜ್ಞಾನ ಆಧಾರಿತ ಸ್ಟಾರ್ಟ್ ಅಪ್ ಐಡಿಯಗಳನ್ನು ಅಭಿವೃದ್ಧಿಪಡಿಸುವ ವೇದಿಕೆಯಾಗಿದೆ.
ಕಳೆದ ಒಂದು ವರ್ಷದಿಂದ ಕೆ- ಟೆಕ್ ಇನೊವೇಶನ್ ಹಬ್ ಇಂಕ್ಯುಬೇಷನ್ ಸೆಂಟರ್ ಮಂಗಳೂರು ಬಿಜೈ – ಕಾಪಿಕಾಡ್ ರಸ್ತೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಐಕೆಪಿ- ನಾಲೆಡ್ಜ್ ಪಾರ್ಕ್ ಸಹಭಾಗಿತ್ವದಲ್ಲಿ ಕರ್ನಾಟಕ ರಾಜ್ಯ ಸರಕಾರ ಈ ಕೇಂದ್ರವನ್ನು ಸ್ಥಾಪಿಸಿದೆ. ಇಲ್ಲಿ ಕೇವಲ ಮಾಹಿತಿ ತಂತ್ರಜ್ಞಾನ ಮಾತ್ರವಲ್ಲದೆ ಇತರ ತಾಂತ್ರಿಕ, ಬಯೋ ಟೆಕ್ನಿಕಲ್ ನವೋದ್ಯಮಗಳ ಆರಂಭಿಸಲು ಎಲ್ಲ ರೀತಿಯ ವ್ಯವಸ್ಥೆ ಇದೆ.
ಆರಕ್ಕೂ ಹೆಚ್ಚು ತಾಂತ್ರಿಕ ಕಾಲೇಜುಗಳಲ್ಲಿ ಇಂಕ್ಯುಬೇಷನ್ ಮತ್ತು ಟಿಂಕರಿಂಗ್ ಕೇಂದ್ರಗಳು ವಿದ್ಯಾರ್ಥಿಗಳು ಮತ್ತು ಇತರರಿಗೆ ನವೋದ್ಯಮ ಸ್ಥಾಪಿಸಲು ಪೂರಕವಾದ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದೆ. ಇವಲ್ಲದೆ ಮೂರಕ್ಕೂ ಹೆಚ್ಚು ಖಾಸಗಿ ಸಂಸ್ಥೆಗಳು ಇಂಕ್ಯುಬೇಷನ್ ಸೆಂಟರ್ ಸೌಲಭ್ಯಗಳನ್ನು ನೀಡುತ್ತಿವೆ. ಎನ್ಐಟಿಕೆ ವಿದ್ಯಾರ್ಥಿ ಇ-ಸೆಲ್ ಎಂಬ ಪ್ರತ್ಯೇಕ ನವೋದ್ಯಮ ಉತ್ತೇಜನ ನೀಡುವ ಘಟಕ ಆರಂಭಿಸಿದ್ದಾರೆ.
ಇಂತಹ ಸರಕಾರಿ ಪ್ರಾಯೋಜಕತ್ವದ ಇಂಕ್ಯುಬೇಷನ್ ಸೆಂಟರುಗಳು ದಿನದ 24 ಗಂಟೆಗಳು ತೆರೆದಿರುತ್ತವೆ. ಮಾತ್ರವಲ್ಲದೆ, ಪ್ರತಿಯೊಂದು ಸೀಟಿಗೆ ಕೇವಲ ತಲಾ 2,500 ರಿಂದ 3,500 ರೂಪಾಯಿ ಮಾಸಿಕ ವೆಚ್ಚ ಭರಿಸಬೇಕಾಗುತ್ತದೆ. ನವೋದ್ಯಮಕ್ಕೆ ಬೇಕಾಗುವ ಉದ್ಯೋಗಿಯ ಆಧಾರದಲ್ಲಿ ಸೀಟು ಸೌಲಭ್ಯ ಪಡೆಯಬೇಕಾಗುತ್ತದೆ. ದಿನವಿಡೀ ಲೀಸ್ಡ್ ಲೈನ್ ಇಂಟರನೆಟ್ ಸೌಲಭ್ಯ, ಕಾನ್ಫರೆನ್ಸ್ ಹಾಲ್, ಕೆಫೆಟೇರಿಯ, ಮೆಂಟರಿಂಗ್, ಫಂಡಿಂಗ್ ಇತ್ಯಾದಿ ಸೌಲಭ್ಯಗಳನ್ನು ನೀಡಲಾಗುತ್ತದೆ.
ನವೋದ್ಯಮ ಸ್ಥಾಪಿಸಲು ಐಡಿಯ ಹೊಂದಿರುವ ಯುವಕರಿಗೆ ಕೇವಲ ಇಂತಹ ಆಫೀಸ್ ಸ್ಪೇಸ್ ನೀಡಿದರೆ ಸಾಲದು. ಬಹುಮುಖ್ಯವಾಗಿ ಅಗತ್ಯ ಬಂಡವಾಳ ಹೂಡಿಕೆಗೆ ವ್ಯವಸ್ಥೆ ಮಾಡಿಕೊಡಬೇಕು ಎನ್ನುತ್ತಾರೆ ಸ್ಟಾರ್ಟ್ಅಪ್ ಆರಂಭಿಸಿ ಅನುಭವ ಇರುವ exams24x7.com ಮುಖ್ಯಸ್ಥ ಆಂಡೊ ಪೌಲ್.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎ. ಬಿ. ಇಬ್ರಾಹಿಂ ಜಿಲ್ಲಾಧಿಕಾರಿ ಆಗಿದ್ದಾಗ ನವೋದ್ಯಮ ಸಲಹಾ ಸಮಿತಿಯೊಂದನ್ನು ರಚಿಸಿದ್ದರು. ಸ್ಟಾರ್ಟ್ ಅಪ್ ಪರಿಕಲ್ಪನೆ ಬಗ್ಗೆ ಪರಿಜ್ಞಾನ ಇಲ್ಲದ ಅಧಿಕಾರಿಗಳಿಂದಾಗಿ ಯಾವುದೇ ರಚನಾತ್ಮಕ ಪ್ರಯೋಜನ ಆಗಿರಲಿಲ್ಲ. ಕೆನರಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ – ಕೆಸಿಸಿಐ ಸ್ಥಳೀಯ ಉತ್ಪನ್ನಗಳ ಆಧಾರಿತ ನೇಟಿವ್ ಸ್ಟಾರ್ಟ್ಅಪ್ ಪ್ರಯತ್ನಗಳಿಗೆ ಬಂಡವಾಳ ಮತ್ತು ಇತರ ಉತ್ತೇಜನ ನೀಡುವುದಾಗಿ ಪ್ರಕಟಿಸಿದೆ. ಮಾಹಿತಿ ತಂತ್ರಜ್ಞಾನ ಸ್ಟಾರ್ಟ್ಅಪ್ ಗಳಿಗೆ ಸರಕಾರ ವತಿಯಿಂದ ಉತ್ತೇಜನ ನೀಡಲಾಗುತ್ತಿದೆ. ಕರಾವಳಿಯ ಕೃಷಿ, ಉದ್ಯಮಗಳಿಗೆ ಪೂರಕವಾದ ನವೋದ್ಯಮ ಸ್ಥಾಪನೆಗೆ ಉತ್ತೇಜನ ನೀಡಲಾಗುವುದು ಎನ್ನುತ್ತಾರೆ ಕೆಸಿಸಿಐ ನೂತನ ಅಧ್ಯಕ್ಷ ಐಸಾಕ್ ವಾಸ್.
ನವೋದ್ಯಮಗಳಿಗೆ ಹೂಡಿಕೆ ಒದಗಿಸಿಕೊಡಬೇಕು. ಯುವಕರಲ್ಲಿ ಉತ್ತಮ ಐಡಿಯಗಳಿವೆ. ಬೆಂಗಳೂರಿನಲ್ಲಿ ಸಾಕಷ್ಟು ಮಂದಿ ಏಂಜೆಲ್ ಇನ್ವೆಸ್ಟರ್ಸ್, ಸೀಡ್ ಫಂಡ್, ವೆಂಚರ್ ಕ್ಯಾಪಿಟಲ್, ಸಹಯೋಗಿ ಹೂಡಿಕೆ ಮಾಡುವವರು ಇದ್ದಾರೆ. ಮಂಗಳೂರಿನಲ್ಲಿ ಈ ಕೊರತೆ ಇದೆ. ನಾವು ಆಸ್ತಿವಂತರನ್ನು ಪತ್ತೆ ಮಾಡಿ ಇಂತಹ ಸ್ಟಾರ್ಟ್ಅಪ್ ನಲ್ಲಿ ಹೂಡಿಕೆ ಮಾಡಲು ಉತ್ತೇಜಿಸುವ ಯೋಜನೆ ಇದೆ ಎನ್ನುತ್ತಾರೆ ಕೆಸಿಸಿಐ ಸ್ಟಾರ್ಟ್ಅಪ್ ಸಮಿತಿಯ ಲಿಯೊನಲ್ ಆರಾನ್ಹ.
ಯಶಸ್ವಿ ನವೋದ್ಯಮ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿ ಇದೆ. 10,000 ನವೋದ್ಯಮಗಳು ಕರ್ನಾಟಕದಲ್ಲಿದ್ದು, ಬೆಂಗಳೂರು ಸಿಂಹಪಾಲು ಪಡೆದುಕೊಂಡಿದೆ. ಮಂಗಳೂರಿನಲ್ಲಿ 300-400 ನವೋದ್ಯಮ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸ್ಪಷ್ಟ ಅಂಕಿ ಅಂಶಗಳು ಲಭ್ಯವಿಲ್ಲ. ಉತ್ಪಾದನಾ ವಲಯ, ಕೃಷಿ, ಕೃಷಿ ತಂತ್ರಜ್ಞಾನ, ಆರೋಗ್ಯ, ವೈದ್ಯಕೀಯ ತಂತ್ರಜ್ಞಾನ, ವೈಮಾನಿಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸ್ಟಾರ್ಟ್ಅಪ್ ಆರಂಭ ಆಗುತ್ತಿದೆ. ರಾಜ್ಯದ ನಗರಗಳಲ್ಲಿ ನವೋದ್ಯಮ ಸ್ಥಾಪನೆಗೆ ಉತ್ತೇಜನ ನೀಡಲಾಗುತ್ತಿದೆ. ರಾಜ್ಯ ಸರಕಾರ ಸ್ಟಾರ್ಟ್ಅಪ್ ಕ್ಷೇತ್ರಕ್ಕೆ ಉತ್ತೇಜನ ನೀಡಲು ವಿಶನ್ ಗ್ರೂಪ್ ರಚಿಸಿದೆ. ಮಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗ ನಗರಗಳಿಗೆ ಸರಕಾರ ಆದ್ಯತೆ ನೀಡಲಿದೆ.