ಪೌರತ್ವ ತಿದ್ದುಪಡಿ ಕಾನೂನು ಜಾರಿಗೆ ತಂದ ದಿನಗಳಿಂದ ದೇಶದಲ್ಲಿ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿವೆ. ಈ ಕಾನೂನುನನ್ನು ಜಾರಿಗೊಳಿಸುವುದಿಲ್ಲವೆಂದು ಪಶ್ಚಿಮ ಬಂಗಾಳ, ಕೇರಳ ಸೇರಿದಂತೆ ಹಲವು ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿವೆ. ಅಂತಯೇ ಅಂತರಾಷ್ಟ್ರೀಯ ಮಟ್ಟದಲ್ಲೂ ಈ ಕಾನೂನಿಗೆ ಸಂಬಂಧಿಸಿದಂತೆ ಹಲವು ರಾಷ್ಟ್ರಗಳು ಅಸಮಾಧಾನ ವ್ಯಕ್ತಪಡಿಸಿವೆ. ಅಮೆರಿಕದ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಗೃಹ ಸಚಿವ ಅಮಿತ್ ಶಾ ಅವರ ಮೇಲೆ ನಿರ್ಬಂಧ ಹೇರಬೇಕು ಎಂದು ಅಮೆರಿಕದ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಇದನ್ನು ಭಾರತದ ವಿದೇಶಾಂಗ ಸಚಿವಾಲಯ ಖಂಡಿಸಿತ್ತು. ಇದರ ಬೆನ್ನಲ್ಲೇ ಭಾರತ ಮತ್ತು ಅಮೆರಿಕಾ ಎರಡು ರಾಷ್ಟ್ರಗಳ ಸಚಿವರ ಮಟ್ಟದ ದ್ವಿಪಕ್ಷೀಯ ಸಭೆ ರದ್ದಾಯಿತು. ಇನ್ನೂ ಅಮೆರಿಕದ ಸಂಸದೆ ಪ್ರಮೀಳಾ ಜಯಪಾಲ್ ಅವರು ಜಮ್ಮು–ಕಾಶ್ಮೀರದಲ್ಲಿನ ಸ್ಥಿತಿಗತಿಯ ಕುರಿತು ಹಾಗೂ ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸಿ “ಭಾರತ ಸರ್ಕಾರವು ಭಿನ್ನಾಭಿಪ್ರಾಯಗಳನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾರಕ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸಿ ಬಾಂಗ್ಲಾದೇಶ, ಆಫ್ಗಾನಿಸ್ತಾನ ಶ್ರೀಲಂಕಾ ದೇಶಗಳು ಭಾರತ ಸರ್ಕಾರದ ನಿಲುವಿನ ವಿರುದ್ಧ ನಿಂತಿದೆ. ಪೌರತ್ವ ತಿದ್ದುಪಡಿ ಮಸೂದೆ ಮಂಡನೆ ಮಾಡುವಾಗ ಕೇಂದ್ರ ಗೃಹ ಸಚಿವ “ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳು ಧಾರ್ಮಿಕ ಕಿರುಕುಳ ಅನುಭವಿಸುತ್ತಿದ್ದಾರೆ” ಎಂದು ಹೇಳಿಕೆ ಕೊಟ್ಟಿದ್ದರು. ಸಿಎಬಿ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಬಾಂಗ್ಲಾದ ವಿದೇಶಾಂಗ ಮತ್ತು ಹಣಕಾಸು ಸಚಿವರು ಭಾರತಕ್ಕೆ ಭೇಟಿ ನೀಡಲು ಸಿದ್ಧರಾಗಿದ್ದರು. ಸಿಎಬಿ ಸುದ್ದಿ ಕೇಳುತ್ತಿದ್ದಂತೆ ಇಬ್ಬರೂ ಸಚಿವರು ಭಾರತದ ಭೇಟಿಯನ್ನು ರದ್ದುಗೊಳಿಸಿದರು.
ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಕೆಂಡಾಮಂಡಲವಾದ ಬಾಂಗ್ಲಾ ವಿದೇಶಾಂಗ ಸಚಿವಾಲಯವು “ಬಾಂಗ್ಲಾದೇಶದಲ್ಲಿ ಮುಸ್ಲಿಂ, ಹಿಂದೂ, ಬೌದ್ಧ, ಕ್ರೈಸ್ತ ಧರ್ಮೀಯರು ಸೌಹಾರ್ದಯುತ ವಾಗಿ ಸಹಬಾಳ್ವೆ ನಡೆಸುತ್ತಿದ್ದಾರೆ. ಬಾಂಗ್ಲಾದೇಶ ವನ್ನು ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದ ಜತೆ ಸಮೀಕರಿಸುವುದು ಸರಿಯಲ್ಲ. ನಮ್ಮಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿಲ್ಲ’ ಎಂದು ಹೇಳಿತು. ಇದರ ಜೊತೆಗೆ ಬಾಂಗ್ಲಾ ಪ್ರಧಾನಿ ಕಾರ್ಯಾಲಯವು ಸಹ, “ಭಾರತದಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಇದ್ದರೆ, ಅವರನ್ನು ಇಲ್ಲಿಗೆ ಕಳುಹಿಸಿ. ನಾವು ಅವರನ್ನು ಸ್ವಾಗತಿಸುತ್ತೇವೆ. ಆದರೆ, ಅದಕ್ಕೂ ಮುನ್ನ ಅವರೆಲ್ಲರೂ ಬಾಂಗ್ಲಾದೇಶದವರೇ ಎಂಬುದನ್ನು ಭಾರತವು ಸಾಬೀತುಪಡಿಸಬೇಕು. ಮತ್ತು ಭಾರತದಲ್ಲಿರುವ ಬಾಂಗ್ಲಾ ಅಕ್ರಮ ವಲಸಿಗರ ಪಟ್ಟಿ ನೀಡಿ” ಎಂದು ಪತ್ರ ಬರೆದಿದೆ. ರದ್ದಾದ ಎರಡು ದೇಶಗಳ ಸಂಬಂಧ ಸುಧಾರಣೆ ಉದ್ದೇಶದ ಈ ಭೇಟಿಗಳು ಯಾವಾಗ ನಡೆಯುತ್ತವೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಬಾಂಗ್ಲಾ ಸಚಿವರ ಭೇಟಿಯನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿದೆ.

ಇನ್ನು ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸಿ ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟವಾದ ‘ಇಸ್ಲಾಮಿಕ್ ಸಹಕಾರ ಸಂಘಟನೆಯು’ (ಒಐಸಿ), “ಅಲ್ಪಸಂಖ್ಯಾತರ ಹಕ್ಕುಗಳನ್ನು ಎತ್ತಿಹಿಡಿಯುವ ಕೆಲಸವಾಗಬೇಕು. ಭಾರತದಲ್ಲಿನ ಬೆಳವಣಿಗೆಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದೇವೆ. ಈ ಬೆಳವಣಿಗೆಗಳು ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರ ಸ್ಥಿತಿಗತಿಯ ಮೇಲೆ ಪ್ರಭಾವ ಬೀರುತ್ತವೆ” ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಜಗತ್ತಿನಲ್ಲಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ದೇಶವೆಂದರೆ ಭಾರತ. ಈ ಒಐಸಿ ವಾಣಿಜ್ಯ ವಹಿವಾಟಿನಲ್ಲಿ ಭಾರತವು ಸಹ ವಾಣಿಜ್ಯ ಸಂಬಂಧ ಹೊಂದಿಬೇಕು ಎಂದು ಹಲವು ಸದಸ್ಯ ರಾಷ್ಟ್ರಗಳು ಒತ್ತಾಯಿಸುತ್ತಿವೆ. ಇದರಿಂದ ಭಾರತದ ವಾಣಿಜ್ಯ ವಹಿವಾಟಿನ ವೃದ್ಧಿಗೆ ಅನುಕೂಲವಾಗಲಿದೆ. ಹೀಗಾಗಿ 2019ರ ಫೆಬ್ರುವರಿಯಲ್ಲಿ ಅಬುಧಾಬಿಯಲ್ಲಿ ನಡೆದಿದ್ದ ಒಐಸಿ ಶೃಂಗಸಭೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾಗವಹಿಸಿದ್ದರು. ಆದರೆ ಭಾರತ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾನೂನು ಬಗ್ಗೆ ಇಸ್ಲಾಮಿಕ್ ಸಹಕಾರ ಸಂಘಟನೆಯು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದರಿಂದಾಗಿ ಒಐಸಿ ಒಕ್ಕೂಟದ ಜತೆ ಭಾರತದ ಸಂಬಂಧ ಹದಗೆಡುವ ಅಪಾಯವು ಎದುರಾಗಬಹುದು.
ಮುಸ್ಲಿಂ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಜಾರಿಗೆ ತಂದಿರುವ ಈ ಪೌರತ್ವ ತಿದ್ದುಪಡಿ ಕಾನೂನನ್ನು ಅಫ್ಗಾನಿಸ್ತಾನವೂ ಸಹ ಕಳವಳ ವ್ಯಕ್ತಪಡಿಸಿದೆ. ಗೃಹ ಸಚಿವ ಅಮಿತ್ ಶಾ, “ಆಫ್ಗಾನಿಸ್ತಾನದಲ್ಲಿ ಹಿಂದೂ ಧಾರ್ಮಿಕ ಅಲ್ಪ ಸಂಖ್ಯಾತರು ಸಾಕಷ್ಟು ಕಿರುಕುಳ ಅನುಭವಿಸುತ್ತಿದ್ದಾರೆ” ಎಂಬ ಹೇಳಿಕೆಗೆ ಭಾರತದಲ್ಲಿನ ಆಫ್ಗಾನಿಸ್ತಾನ ರಾಯಭಾರ ಕಚೇರಿ, “ತಾಲಿಬಾನ್‌ನ ಪತನದ ನಂತರ ಅಫ್ಗಾನಿಸ್ತಾನದಲ್ಲಿ ಪರಿಸ್ಥಿತಿ ಬದಲಾಗಿದೆ. ನಮ್ಮಲ್ಲಿ ಸಿಖ್ ಸಮುದಾಯದವರನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದೇವೆ. ನಮ್ಮ ಸಂಸತ್ತಿನ ಎರಡೂ ಸದನಗಳಲ್ಲಿ ಅವರಿಗೆ ಪ್ರಾತಿನಿಧ್ಯವಿದೆ. ಹೀಗಾಗಿ ನಮ್ಮನ್ನು ಪಾಕಿಸ್ತಾನದ ಜತೆ ಹೋಲಿಕೆ ಮಾಡುವುದು ಸರಿಯಲ್ಲ” ಎಂದು ಕಳವಳ ವ್ಯಕ್ತಪಡಿಸಿದೆ.

ಪೌರತ್ವ ತಿದ್ದುಪಡಿ ಕಾನೂನು ಅಡಿಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಗಾನಿಸ್ತಾನ ದೇಶಗಳಿಲ್ಲಿನ ಹಿಂದೂ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುತ್ತಿರುವುದನ್ನು ವಿರೋಧಿಸಿ ಶ್ರೀಲಂಕಾ ತಮಿಳರು ಅಸಮಾಧಾನ ವ್ಯಕ್ತಪಡಿಸಿದೆ. “ನಾಲ್ಕು ದಶಕಗಳ ಹಿಂದೆ 3 ಲಕ್ಷಕ್ಕೂ ಹೆಚ್ಚು ತಮಿಳು ಹಿಂದೂಗಳು ಭಾರತಕ್ಕೆ ನಿರಾಶ್ರಿತರಾಗಿ ಹೋಗಿದ್ದಾರೆ. ಇವರಲ್ಲಿ 1 ಲಕ್ಷಕ್ಕೂ ಹೆಚ್ಚು ಹಿಂದೂಗಳು ಭಾರತದ ನಿರಾಶ್ರಿತ ಶಿಬಿರಗಳಲ್ಲಿ ಇದ್ದಾರೆ. ಈ ಕಾಯ್ದೆಯಿಂದ ಇವರನ್ನು ಹೊರಗೆ ಇಟ್ಟರೆ, ಇವರೆಲ್ಲಾ ನಿರಾಶ್ರಿತರಾಗಿಯೇ ಇರಬೇಕಾಗುತ್ತದೆ. ಹಾಗೂ ಇನ್ನೂ ಸಾಕಷ್ಟು ಮಂದಿ ತಮಿಳು ಹಿಂದೂಗಳು ಬೇರೆ–ಬೇರೆ ದೇಶಗಳಿಗೆ ನಿರಾಶ್ರಿತರಾಗಿ ಹೋಗಿದ್ದಾರೆ. ಅವರಿಗೆಲ್ಲಾ ಆಯಾ ದೇಶಗಳ ಪೌರತ್ವ ದೊರಕಿದೆ. ಆದರೆ, ಭಾರತದಲ್ಲಿ ಮಾತ್ರ ಪೌರತ್ವ ದೊರೆತಿಲ್ಲ. ಹೀಗಾಗಿ ಶ್ರೀಲಂಕಾ ತಮಿಳು ಹಿಂದೂಗಳನ್ನೂ ಈ ಕಾಯ್ದೆಗೆ ಸೇರಿಸಬೇಕು ಎಂದು ಶ್ರೀಲಂಕಾ ಶಿವ ಸೇನೈ ಸಂಘಟನೆಯು ಆಗ್ರಹಿಸಿದೆ.
ಇನ್ನು ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಲೋಕಸಭೆಯಲ್ಲಿ ಮಂಡಿಸುವುದಕ್ಕೆ ಮುನ್ನವೇ ಐರೋಪ್ಯ ಒಕ್ಕೂಟವು, “ಭಾರತ ಮತ್ತು ಐರೋಪ್ಯ ರಾಷ್ಟ್ರಗಳು ಧಾರ್ಮಿಕ ಅಸಮಾನತೆಯನ್ನು ನಿರಾಕರಿಸುತ್ತವೆ. ಪೌರತ್ವ ತಿದ್ದುಪಡಿ ಕಾನೂನು ಭಾರತದ ಸಂವಿಧಾನಕ್ಕೆ ಬದ್ಧವಾಗಿರುತ್ತದೆ ಎಂದು ನಿರೀಕ್ಷಿಸಿದ್ದೇವೆ” ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.