ಎಲ್ಲ ಅಡೆತಡೆಗಳನ್ನು ಮೆಟ್ಟಿನಿಂತು ಮಂತ್ರಿ ಮಂಡಲ ವಿಸ್ತರಣೆಗೆ ಸಿದ್ಧತೆ ಆರಂಭಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೊಸದೊಂದು ಸವಾಲು ಎದುರಾಗಿದೆ. ಅದು ಕೂಡ ಒಂದು ಕಾಲದಲ್ಲಿ ಅವರಿಗೆ ಆಪ್ತರಾಗಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರಿಂದ. ಸದ್ಯ ಉಪಮುಖ್ಯಮಂತ್ರಿ ಸ್ಥಾನಕ್ಕೆ ಮುಂಚೂಣಿಯಲ್ಲಿರುವ ಶ್ರೀರಾಮುಲು ಅವರು ಆ ಹುದ್ದೆ ಸಿಗದೇ ಇದ್ದಲ್ಲಿ ಇನ್ನೊಂದು ಬೇಡಿಕೆಯನ್ನಾದರೂ ಈಡೇರಿಸಲೇ ಬೇಕು ಎಂದು ಪಟ್ಟು ಹಿಡಿಯುತ್ತಿದ್ದಾರೆ.
ತಮಗೆ ಏಕೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು? ಪ್ರಸ್ತುತ ಬಿಜೆಪಿ ಪಾಲಿನ ವೋಟ್ ಬ್ಯಾಂಕ್ ಆಗಿರುವ ಪರಿಶಿಷ್ಟ ಪಂಗಡವಾಗಿರುವ ವಾಲ್ಮೀಕಿ ಸಮುದಾಯದ ನಾಯಕರಾಗಿ ರಾಜ್ಯ ಬಿಜೆಪಿಯಲ್ಲಿ ತಮ್ಮ ಪಾತ್ರ ಏನು? ಎಂಬುದನ್ನು ವರಿಷ್ಠರಿಗೆ ತಿಳಿಸುವ ಉದ್ದೇಶದಿಂದ ದೆಹಲಿಗೆ ತೆರಳಿರುವ ಶ್ರೀರಾಮುಲು ಅವರು ಉಪ ಮುಖ್ಯಮಂತ್ರಿ ಸ್ಥಾನ ಸಿಗದೇ ಇದ್ದಲ್ಲಿ ಯಾವ ರೀತಿಯಲ್ಲಿ ವಾಲ್ಮೀಕಿ ಸಮುದಾಯವನ್ನು ಸಮಾಧಾನಪಡಿಸಬಹುದು ಎಂಬ ಬಗ್ಗೆ ವರಿಷ್ಠರ ಗಮನಕ್ಕೆ ತಂದಿದ್ದಾರೆ. ತಮಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬುದು ವಾಲ್ಮೀಕಿ ಸಮುದಾಯದ ಒಕ್ಕೊರಲ ಬೇಡಿಕೆ. ಅದನ್ನು ಈಡೇರಿಸಲು ಸಾಧ್ಯವಾಗದೇ ಇದ್ದರೆ ಸಮುದಾಯದ ಮತ್ತೊಂದು ಪ್ರಬಲ ಬೇಡಿಕೆಯಾಗಿರುವ ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ.) ಶೇ. 75ರಷ್ಟು ಮೀಸಲಾತಿ ನೀಡಲೇ ಬೇಕು. ಆಗ ಪರಿಶಿಷ್ಟ ಪಂಗಡದವರು ಶಾಂತರಾಗುತ್ತಾರೆ ಎಂದು ತಿಳಿಸಿದ್ದಾರೆ.
2018ರಲ್ಲಿ ನಡೆದ ವಿಧಾನಸಭೆ ಚುನಾವಣೆ ಪೂರ್ವದಲ್ಲೇ ಬಿಜೆಪಿ ಅಧಿಕಾರಕ್ಕೆ ಬಂದರೆ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ವಿಚಾರ ಮುನ್ನಲೆಗೆ ಬಂದಿತ್ತು. ಶ್ರೀರಾಮುಲು ಉಪಮುಖ್ಯಮಂತ್ರಿಯಾಗುತ್ತಾರೆ ಎಂಬ ಕಾರಣದಿಂದಲೇ ವಾಲ್ಮೀಕಿ ಸಮುದಾಯ ಹೆಚ್ಚಾಗಿರುವ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಸಮುದಾಯದವರು ಬಿಜೆಪಿಯನ್ನು ಬೆಂಬಲಿಸಿದ್ದರು. ಆದರೆ, ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬಾರದ ಕಾರಣ ಆ ಕೂಗು ಅಲ್ಲಿಗೇ ನಿಂತಿತ್ತು. ನಂತರ ಮೈತ್ರಿ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಒತ್ತಾಯ ಮತ್ತೆ ತೀವ್ರಗೊಂಡಿತು. ಆದರೆ, ಸರ್ಕಾರ ಅಲ್ಪಮತದಲ್ಲಿದ್ದ ಕಾರಣದಿಂದಾಗಿ ಮತ್ತು ವರಿಷ್ಠರ ಸೂಚನೆ ಮೇಲೆ ಬೇರೆಯವರನ್ನು ಉಪಮುಖ್ಯಮಂತ್ರಿ ಮಾಡುವ ಅನಿವಾರ್ಯತೆ ಮುಖ್ಯಮಂತ್ರಿಗಳಿಗೆ ಬಂದಿದ್ದರಿಂದ ಶ್ರೀರಾಮುಲು ಅವಕಾಶ ವಂಚಿತರಾಗಬೇಕಾಯಿತು.
ಈ ಮಧ್ಯೆ ವಿಧಾನಸಭೆ ಉಪ ಚುನಾವಣೆ ಮುಗಿದು ಸರ್ಕಾರ ಸುಭದ್ರವಾಗಿದೆ. ಆದರೆ, ವಾಲ್ಮೀಕಿ ಸಮುದಾಯಕ್ಕೇ ಸೇರಿದವರಾಗಿರುವ ರಮೇಶ್ ಜಾರಕಿಹೊಳಿ ಕೂಡ ಉಪಮುಖ್ಯಮಂತ್ರಿ ಹುದ್ದೆಯ ಪ್ರಮುಖ ಆಕಾಂಕ್ಷಿ. ಈಗಾಗಲೇ ಇರುವ ಮೂರು ಉಪಮುಖ್ಯಮಂತ್ರಿ ಸ್ಥಾನದ ಜತೆ ಮತ್ತೊಂದು ಹುದ್ದೆಯನ್ನು ಸೃಷ್ಟಿಸುವುದಾದರೆ ಮೈತ್ರಿ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಮೂಲ ಕಾರಣಕರ್ತರಾದ ರಮೇಶ್ ಜಾರಕಿಹೊಳಿಗೆ ಈ ಸ್ಥಾನ ನೀಡಬೇಕು. ಐದು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸಿ ರಮೇಶ್ ಜಾರಕಿಹೊಳಿ ಮತ್ತು ಶ್ರೀರಾಮುಲು ಅವರಿಗೆ ಹಂಚಿಕೆ ಮಾಡಿದರೆ ಪರಿಶಿಷ್ಟ ಪಂಗಡದ ಇಬ್ಬರಿಗೆ ಈ ಸ್ಥಾನ ಸಿಕ್ಕಂತಾಗಿ ಇತರೆ ಸಮುದಾಯದವರು ಅಸಮಾಧಾನಗೊಳ್ಳಬಹುದು. ಹೀಗಾಗಿ ಉಪಮುಖ್ಯಮಂತ್ರಿ ಸ್ಥಾನವೇ ಬೇಡ ಎಂಬ ಕೂಗು ಬಿಜೆಪಿಯಲ್ಲಿ ಜೋರಾಗಿದೆ.
ಇದರ ನಡುವೆ ಇದುವರೆಗೆ ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಬೆಂಬಲಿಗರು, ಸಮುದಾಯ ಮುಖಂಡರು, ಸ್ವಾಮೀಜಿಗಳ ಮೂಲಕ ಸಾರ್ವಜನಿಕವಾಗಿ ಒತ್ತಡ ಹಾಕುತ್ತಿದ್ದ ಶ್ರೀರಾಮುಲು ಈಗ ನೇರವಾಗಿ ಪ್ರಯತ್ನಕ್ಕೆ ಕೈ ಹಾಕಿದ್ಧಾರೆ. ತನಗೆ ಉಪಮುಖ್ಯಮಂತ್ರಿ ಹುದ್ದೆ ಸಿಗದಿದ್ದರೂ ಪರವಾಗಿಲ್ಲ, ಮಂತ್ರಿ ಸ್ಥಾನವನ್ನು ಬೇಕಾದರೂ ಕಿತ್ತುಕೊಳ್ಳಿ. ಅದರ ಬದಲು ಪರಿಶಿಷ್ಟ ಪಂಗಡಕ್ಕೆ ಶೇ. 7.5ರಷ್ಟು ಮೀಸಲಾತಿಯನ್ನು ತಕ್ಷಣದಿಂದಲೇ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಅಂಶವೇ ಯಡಿಯೂರಪ್ಪ ಅವರ ಸಂಪುಟ ವಿಸ್ತರಣೆ ಪರಿಸ್ಥಿತಿಯನ್ನು ಕಠಿಣಗೊಳಿಸಿರುವುದು. ರಮೇಶ್ ಜಾರಕಿಹೊಳಿ ಮತ್ತು ಶ್ರೀರಾಮುಲು ಇಬ್ಬರೂ ವಾಲ್ಮೀಕಿ ಸಮುದಾಯಕ್ಕೆ ಸೇರಿದವರಾದರೂ ಇವರ ಪೈಕಿ ಸಮುದಾಯದ ನಾಯಕರಾಗಿ ಗುರುತಿಸಿಕೊಂಡವರು ಶ್ರೀರಾಮುಲು. ಈ ಸಮುದಾಯದವರು ಸಮಾಧಾನಗೊಳ್ಳಬೇಕಾದರೆ ರಮೇಶ್ ಬದಲು ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು. ಆದರೆ, ಹಾಗೆ ಮಾಡಿದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ರಮೇಶ್ ಜಾರಕಿಹೊಳಿಗೆ ಅನ್ಯಾಯ ಮಾಡಿದಂತಾಗುತ್ತದೆ.
ಈ ಸಮಸ್ಯೆ ಒಂದೆಡೆಯಾದರೆ, ಉಪಮುಖ್ಯಮಂತ್ರಿ ಸ್ಥಾನ ಸಿಗದೇ ಇದ್ದರೂ ಪರವಾಗಿಲ್ಲ, ಪರಿಶಿಷ್ಟ ಪಂಗಡಕ್ಕೆ ಶೇ. 7.5ರಷ್ಟು ಮೀಸಲಾತಿಯನ್ನು ತಕ್ಷಣದಿಂದಲೇ ನೀಡಬೇಕು ಎಂಬ ಶ್ರೀರಾಮುಲು ಆಗ್ರಹ ಮುಖ್ಯಮಂತ್ರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮೀಸಲಾತಿ ಸಿಗದೇ ಇದ್ದರೆ ವಾಲ್ಮೀಕಿ ಸಮುದಾಯದ ಎಲ್ಲಾ ಶಾಸಕರೂ ತಿರುಗಿ ಬೀಳಬಹುದು. ಅಷ್ಟೇ ಅಲ್ಲ, ವಾಲ್ಮೀಕಿ ಸಮುದಾಯದ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿಯವರು ಮೀಸಲು ಹೆಚ್ಚಳಕ್ಕೆ ಫೆಬ್ರವರಿಯ ಗಡುವು ವಿಧಿಸಿದ್ದಾರೆ. ಫೆಬ್ರವರಿಯಲ್ಲಿ ನಡೆಯುವ ವಾಲ್ಮೀಕಿ ಜಾತ್ರೆಯೊಳಗೆ ಸರ್ಕಾರ ಮೀಸಲಾತಿ ಹೆಚ್ಚಳ ಕುರಿತು ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂಬ ಎಚ್ಚರಿಕೆ ನೀಡಿದ್ದಾರೆ.
ಮೀಸಲು ಹೆಚ್ಚಳ ಸದ್ಯಕ್ಕೆ ಕಷ್ಟಸಾಧ್ಯ
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಪ್ರಸ್ತುತ ನೀಡುತ್ತಿರುವ ಮೀಸಲಾತಿ ಪ್ರಮಾಣ ಹೆಚ್ಚಿಸುವ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ವರದಿ ನೀಡಲು ರಾಜ್ಯ ಸರ್ಕಾರ 2018ರ ಜುಲೈ ತಿಂಗಳಲ್ಲಿ ಆಗಿನ ಮೈತ್ರಿ ಸರ್ಕಾರ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಿತ್ತು. ನಂತರ ಬಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಆಯೋಗದ ಅವಧಿಯನ್ನು ಮತ್ತೆ ವಿಸ್ತರಿಸಿತ್ತು. ಸದ್ಯದ ಮಾಹಿತಿ ಪ್ರಕಾರ ಫೆಬ್ರವರಿಯೊಳಗೆ ಆಯೋಗ ತನ್ನ ವರದಿ ನೀಡುವುದು ಅನುಮಾನ. ಒಂದೊಮ್ಮೆ ವರದಿ ನೀಡಿದರೂ ಅದನ್ನು ಅಧ್ಯಯನ ನಡೆಸಿ ತೀರ್ಮಾನ ಕೈಗೊಂಡು ಜಾರಿಗೊಳಿಸಬೇಕಾದರೆ ಕನಿಷ್ಟ ಮೂರ್ನಾಲ್ಕು ತಿಂಗಳಾದರೂ ಬೇಕು. ಹೀಗಿರುವಾಗ ಉಪಮುಖ್ಯಮಂತ್ರಿ ಸ್ಥಾನದ ಬದಲು ಶ್ರೀರಾಮುಲು ಮತ್ತು ವಾಲ್ಮೀಕಿ ಸಮುದಾಯದ ಸ್ವಾಮೀಜಿಯವರು ನೀಡಿರುವ ಗಡುವಿನೊಳಗೆ ಪರಿಶಿಷ್ಟ ಪಂಗಡಕ್ಕೆ ಶೇ. 7.5ರಷ್ಟು ಮೀಸಲಾತಿ ಘೋಷಿಸುವುದು ಕಷ್ಟಸಾಧ್ಯ.
ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ಮತ್ತು ಸಮುದಾಯಕ್ಕೆ ಶೇ. 7.5ರ ಮೀಸಲಾತಿಯ ಎರಡು ಪ್ರಮುಖ ಬೇಡಿಕೆಗಳ ಪೈಕಿ ಒಂದನ್ನಾದರೂ ಆಡೇರಿಸಲೇ ಬೇಕು. ಅದು ಸಾಧ್ಯವಾಗದೇ ಇದ್ದರೆ ವಾಲ್ಮೀಕಿ ಸಮುದಾಯ ಬಿಜೆಪಿ ವಿರುದ್ಧ ತಿರುಗಿ ಬೀಳಬಹುದು. ಇದು ಭವಿಷ್ಯದಲ್ಲಿ ಸರ್ಕಾರದ ಮೇಲೂ ಪ್ರತೀಕೂಲ ಪರಿಣಾಮ ಉಂಟು ಮಾಡಬಹುದು. ಸಂಪುಟ ವಿಸ್ತರಣೆಗೆ ಮುಂದಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಂದಿರುವ ಹೊಸ ಸವಾಲೇ ಇದು. ಅದನ್ನು ಯಾವ ರೀತಿ ನಿಭಾಯಿಸುತ್ತಾರೆ ಶ್ರೀರಾಮುಲು ಮತ್ತು ವಾಲ್ಮೀಕಿ ಸಮುದಾಯದವರನ್ನು ಹೇಗೆ ಸಮಾಧಾನಗೊಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕು