ಇತ್ತೀಚೆಗಿನ ವರ್ಷಗಳಲ್ಲಿ ಸಾಮಾಜಿಕ ತಾಣಗಳು ಪ್ರಬಲ ವೇದಿಕೆಗಳಾಗಿವೆ. ಕೈಯ್ಯಲ್ಲಿ ಸ್ಮಾರ್ಟ್ ಫೋನ್ ಹೊಂದಿರುವ ಪ್ರತಿಯೊಬ್ಬರೂ ಸಾಮಾಜಿಕ ತಾಣಗಳ ಸದಸ್ಯರಾಗೇ ಇದ್ದಾರೆ. ಕೆಲವರು ಅತೀ ಎನಿಸಿವಷ್ಟು ದಾಸರಾಗಿರುತ್ತಾರೆ. ಅದರಲ್ಲೂ ಇಂದು ವಾಟ್ಸ್ ಅಪ್ ಮತ್ತು ಫೇಸ್ ಬುಕ್ ಗಳನ್ನು ದಿನಕ್ಕೊಮ್ಮೆಯಾದರೂ ನೋಡದ ಫೋನ್ ಬಳಕೆದಾರ ಇರಲಿಕ್ಕಿಲ್ಲ. ಪ್ರತಿಯೊಬ್ಬರೂ ವಾಟ್ಸ್ ಅಪ್ ನಲ್ಲಿ ಬರುವ ವೀಡಿಯೋ , ಸಂದೇಶಗಳನ್ನು ತಮ್ಮ ಆಪ್ತರಿಗೆ ಶೇರ್ ಮಾಡುವುದನ್ನೇ ಹವ್ಯಾಸ ಮಾಡಿಕೊಂಡಿರುತ್ತಾರೆ.
ಆದರೆ ಈ ರೀತಿ ನಿತ್ಯ ನಮ್ಮ ಮೊಬೈಲ್ ಗೆ ಬರುವ ವಾಟ್ಸ್ ಅಪ್ ಸಂದೇಶ ಮತ್ತು ವೀಡಿಯೋಗಳು ಎಷ್ಟು ಸತ್ಯವಾದದ್ದು ಎಂದು ಪರಾಮರ್ಶಿಸುವ ಗೋಜಿಗೆ ಯಾರೂ ಹೋಗುವುದಿಲ್ಲ. ಏಕೆಂದರೆ ಆ ರೀತಿ ಕ್ರಾಸ್ ಚೆಕ್ ಮಾಡುವುದು ಕಷ್ಟಕರವೂ ಹೌದು. ಆದರೆ ಒಮ್ಮೆ ಬಂದಿರುವ ವೀಡಿಯೋಗಳ ಕುರಿತು ನಾಲ್ಕು ಪದಗಳನ್ನು ಟೈಪ್ ಮಾಡಿ ಗೂಗಲ್ ಸರ್ಚ್ ಮಾಡಿದರೆ ಬಹಳಷ್ಟು ಸತ್ಯಾಂಶ ಹೊರಬೀಳುತ್ತದೆ. ಇಂದು ನಕಲಿ ವೀಡಿಯೋಗಳನ್ನೆ ಜನರು ಸತ್ಯವೆಂದು ಭ್ರಮಿಸಿ ಶೇರ್ ಮಾಡಿರುತ್ತಾರೆ , ಆದರೆ ಇದು ಸತ್ಯವಲ್ಲ ಎಂದು ತಿಳಿಯುವುದರೊಳಗಾಗಿ ಇದು ದೇಶಾದ್ಯಂತ ಲಕ್ಷಾಂತರ ಬಾರಿ ಶೇರ್ ಆಗಿರುತ್ತದೆ ಮತ್ತು ಕೋಟಿಗಟ್ಟಲೆ ಜನರನ್ನು ತಲುಪಿಬಿಟ್ಟಿರುತ್ತದೆ. ಎಷ್ಟೋ ಬಾರಿ ಟ್ವಿಟರ್ ನಲ್ಲಿ ಲಕ್ಷಾಂತರ ಹಿಂಬಾಲಕರನ್ನು ಹೊಂದಿರುವ ರಾಜಕಾರಣಿಗಳು, ಸೆಲೆಬ್ರಿಟಿಗಳು ನಕಲಿ ಮಾಹಿತಿಗಳನ್ನು ಶೇರ್ ಮಾಡಿ ನಂತರ ಅದನ್ನು ಅಳಿಸಿದ್ದೂ ಇದೆ. ಇವರೇನೂ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿರೋದಿಲ್ಲ ಆದರೆ ಅವಿಶ್ವಾಸಾರ್ಹ ಮೂಲಗಳಸುದ್ದಿಗಳನ್ನು ನಂಬಿ ಪಿಗ್ಗಿ ಬಿದ್ದಿರುತ್ತಾರೆ.
ಈ ನಕಲಿ ಮಾಹಿತಿಗಳು ಹೇಗೆ ಹುಟ್ಟುತ್ತವೆ ಗೊತ್ತಾ ? ಇಂದು ಎಲ್ಲ ಪಕ್ಷಗಳು ತಮ್ಮದೇ ಆದ ಐಟಿ ಸೆಲ್ ನ್ನು ಹೊಂದಿರುತ್ತವೆ. ಇದು ಇಂದು ಪಕ್ಷಗಳ ಜನಪ್ರಿಯತೆ ಹೆಚ್ಚಿಸಲು ಅನಿವಾರ್ಯವೂ ಕೂಡ. ಇಂತಹ ಕಡೆಗಳಲ್ಲೆ ನಕಲಿ ವೀಡಿಯೋಗಳು , ಫೋಟೋಗಳು ತಯಾರಾಗಿ ತಾಣಗಳಲ್ಲಿ ಹರಿಬಿಡಲಾಗುತ್ತದೆ. ಈ ರೀತಿ ಸುಳ್ಳು ಹರಿಬಿಡುವುದರಿಂದ ಬೇರೊಬ್ಬರ ಗೌರವಕ್ಕೆ ಧಕ್ಕೆ ತರಬಹುದು ಮತ್ತು ಮಾನಹಾನಿ ಮಾಡಬಹುದು ಮತ್ತು ತಮ್ಮ ಜನಪ್ರಿಯತೆಯನ್ನೂ ಹೆಚ್ಚಿಸಿಕೊಳ್ಳಬಹುದು. ಕೆಲವೊಮ್ಮೆ ದುಷ್ಕರ್ಮಿಗಳು ಎಲ್ಲೋ ನಡೆದ ಗಲಭೆಯ ವೀಡಿಯೋವನ್ನು ಎಡಿಟ್ ಮಾಡಿ ಹರಿ ಬಿಡುವ ಮೂಲಕ ಕೋಮು ಪ್ರಚೋದನೆಗೂ ಕಾರಣವಾಗುತಿದ್ದಾರೆ.
ಇತ್ತೀಚೆಗೆ ಸುಪ್ರೀಂ ಕೋರ್ಟಿನ ಕೊಲಿಜಿಯಂ ನ್ಯಾಯಮೂರ್ತಿ ಮುರಳೀಧರನ್ ಅವರನ್ನು ಪಂಜಾಬ್ ಮತ್ತು ಹರ್ಯಾಣ ಹೈ ಕೋರ್ಟಿಗೆ ವರ್ಗಾವಣೆ ಮಾಡಲಾಯಿತು.ಈ ವರ್ಗಾವಣೆಮೂ ಮುನ್ನ ಅವರು ಪ್ರಚೋದನಾಕಾರಿ ಭಾಷಣ ಮಾಡಿದ್ದ ಪ್ರಕರಣದ ವಿಚಾರಣೆ ನಡೆಸಿ ಬಿಜೆಪಿ ನಾಯಕರ ವಿರುದ್ದ ಪ್ರಕರಣ ದಾಖಲು ಮಾಡದ್ದಕ್ಕೆ ದೆಹಲಿ ಪೋಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರ ಕೂಡಲೇ ಅವರನ್ನು ವರ್ಗಾವಣೆ ಮಾಡಿದ್ದು ಅನುಮಾನಗಳಿಗೂ ಕಾರಣವಾಗಿತ್ತು. ಇದರ ನಂತರ ವರ್ಗಾವಣೆಯ ವಿರುದ್ದ ಸಾಕಷ್ಟು ಪ್ರತಿರೋಧವೂ ಕೇಳಿಬಂತು. ಇದು ಸರ್ಕಾರಕ್ಕೂ ಇರಿಸುಮುರಿಸು ತಂದಿತ್ತು.
ಅದರ ಮಾರನೇ ದಿನವೇ ಫೇಸ್ ಬುಕ್ ಹಾಗೂ ವಾಟ್ಸ್ ಅಪ್ ನಲ್ಲಿ ಪೋಟೋವೊಂದು ಹರಿದಾಡತೊಡಗಿತ್ತು ಅದರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂದಿ ಅವರು ನಾಮಪತ್ರ ಸಲ್ಲಿಸುವಾಗ ಅವರ ಪಕ್ಕದಲ್ಲಿ ಮುರಳೀದರನ್ ಅವರು ಕುಳಿತಿದ್ದು ,ಸೋನಿಯಾ ಗಾಂಧಿ ಅವರೂ ಜತೆಯಲ್ಲಿದ್ದರು. ಇದನ್ನು ಶೇರ್ ಮಾಡಿದವರು ಮುರಳೀಧರನ್ ಅವರು ಮೊದಲು ಕಾಂಗ್ರೆಸ್ ಪಕ್ಷದ ವಕೀಲರಾಗಿದ್ದರು ಎಂದು ಕ್ಯಾಪ್ಷನ್ ನೀಡಿ ಸಾಕ್ಷ್ಯವೆಂಬಂತೆ ಚಿತ್ರ ಶೇರ್ ಮಾಡಿದ್ದರು. ಇದು ಲಕ್ಷಾಂತರ ಬಾರಿ ಶೇರ್ ಅಗಿತ್ತು. ಆದರೆ ವಾಸ್ತವ ಬೇರೆ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.
ವಾಸ್ತವವಾಗಿ ಚಿತ್ರದಲ್ಲಿ ಇರುವ ವಕೀಲ ಮುರಳೀದರನ್ ಅವರಾಗಿರಲಿಲ್ಲ , ಅವರು ವಕೀಲ ಕೆ ಸಿ ಕೌಶಿಕ್ ಅವರಾಗಿದ್ದರು.ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಫೋಟೋವನ್ನು ಯೂತ್ ಕಾಂಗ್ರೆಸ್‌ನ ಅಧಿಕೃತ ಹ್ಯಾಂಡಲ್ 2019 ರ ಏಪ್ರಿಲ್ 11 ರಂದು ಟ್ವೀಟ್ ಮಾಡಿದೆ ಎಂದು ತಿಳಿದುಬಂದಿದೆ. ಸೋನಿಯಾ ಗಾಂಧಿ ಅವರು ರಾಯ್ ಬರೇಲಿಯಿಂದ ನಾಮಪತ್ರ ಸಲ್ಲಿಸಿದ ದಿನ, ನ್ಯಾಯಮೂರ್ತಿ ಮುರಳಿದರ್ ಅವರು ದೆಹಲಿ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದರು.

ವಾಟ್ಸ್ ಅಪ್ ಮತ್ತು ಫೇಸ್ ಬುಕ್ ನಲ್ಲಿ ಈಗ ಟ್ರೆಂಡ್ ಅಗಿರುವುದೆಂದರೆ ವನಸ್ಪತಿ ಡಬ್ಬದಲ್ಲಿ ಪಿಸ್ತೂಲುಗಳನ್ನು ಕಳ್ಳ ಸಾಗಾಟ ಮಾಡಿದ ದೃಶ್ಯಾವಳಿ. ಇದನ್ನು ಮುಲ್ಲಾಗಳು ದೆಹಲಿಯ ಗಲಭೆಗೆ ಪಿಸ್ತೂಲುಗಳನ್ನು ಸಾಗಿಸುವಾಗ ಹೇಗೆ ಸಿಕ್ಕು ಬಿದ್ದರು ನೋಡಿ ಎಂದು ಹೆಡಿಂಗ್ ನೀಡಲಾಗಿತ್ತು. ಆದರೆ ವಾಸ್ತವವಾಗಿ ಇದು 5 ತಿಂಗಳ ಹಿಂದೆ ದೆಹಲಿಯ ಪೋಲೀಸರೇ ಅಂತರರಾಜ್ಯ ಆಯುಧ ಸಾಗಾಟಗಾರರನ್ನು ಬಂಧಿಸಿದಾಗ ತೆಗೆಯಲಾಗಿತ್ತು. ಇದಕ್ಕೂ ದೆಹಲಿ ಕೋಮುಗಲಭೆಗೂ ಏನೂ ಸಂಭಂದ ಇರಲಿಲ್ಲ.
ಟ್ವಿಟ್ಟರ್‌ನಲ್ಲಿ ನೂರಾರು ಬಳಕೆದಾರರು ಜನಸಮೂಹವೊಂದು ಕಲ್ಲು ಮತ್ತು ಕೋಲುಗಳಿಂದ ಮನುಷ್ಯನನ್ನು ಕ್ರೂರವಾಗಿ ಥಳಿಸುವ ವೀಡಿಯೊವನ್ನು ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋವು ದೆಹಲಿಯಲ್ಲಿ ಇತ್ತೀಚೆಗೆ ನಡೆದ ಕೋಮು ಗಲಭೆಯಿಂದ ಬಂದಿದೆ ಎಂದು ಹೇಳಿಕೊಳ್ಳಲಾಗಿದೆ. ಪಾಕಿಸ್ತಾನದ ಟ್ವಿಟ್ಟರ್ ಬಳಕೆದಾರ ಅಫ್ತಾಬ್ ಅಫ್ರಿದಿ ವೈರಲ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಅದಕ್ಕೆ ವಿವರಣೆಯಾಗಿ “ಎಚ್ಚರಗೊಳ್ಳುವ ಸಮಯ ತಡವಾಗಿ ಬಂದಿದೆ ಪ್ರಧಾನಿ ಇಮ್ರಾನ್ಖಾನ್ ಅವರು ಒಂದು ವರ್ಷದ ಹಿಂದೆ ಮೋದಿಯವರು ಆರ್‌ಎಸ್‌ಎಸ್ ಅನ್ನು ಬೆಂಬಲಿಸಿದ ಬಗ್ಗೆ ನಿಮಗೆ ಎಚ್ಚರಿಕೆ ನೀಡಿದರು ಆದರೆ ನೀವು ಜನರು ಕೇಳಲಿಲ್ಲ. ಈಗ ನೀವು ಇದಕ್ಕೆ ಕಾರಣ. #DelhiViolance # DelhiGenocide2020. ಇದನ್ನು 1,200 ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಲಾಗಿದೆ. ಪಾಕಿಸ್ತಾನದ ಇನ್ನೊಬ್ಬ ಟ್ವಿಟ್ಟರ್ ಬಳಕೆದಾರರು ವೈರಲ್ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ “ಭಾರತೀಯ ಭಯೋತ್ಪಾದನೆಯ ಮೂಲ ಆರ್‌ಎಸ್ ಎಸ್ ಎಂದೂ ಬರೆಯಲಾಗಿದೆ. ವಾಸ್ತವವಾಗಿ ಈ ವಿಡಿಯೋ ಮದ್ಯಪ್ರದೇಶದ ಗ್ರಾಮವೊಂದರ ಗ್ರಾಮಸ್ಥರು ಮಕ್ಕಳ ಕಳ್ಳರನ್ನು ಥಳಿಸುತ್ತಿರುವ ದೃಶ್ಯ ಆಗಿದೆ.
ಹೀಗೆ ನೂರಾರು ವಿಡಿಯೋಗಳು ವಿಕೃತರಿಂದ ಸಾಮಾಜಿಕ ತಾಣಗಳಲ್ಲಿ ಹರಡಲ್ಪಡುತ್ತಿವೆ.ಇದು ಸಮಾಜದ ಸ್ವಾಸ್ಥ್ಯ ಹಾಳು ಮಾಡುವುದಲ್ಲದೆ ಇನ್ನೇನೂ ಪ್ರಯೋಜನವಾಗದು.