ಕಟ್ಟರ್ ಹಿಂದುತ್ವ ಪ್ರತಿಪಾದನೆಯ ವಿರೋಧಿಯಾಗಿದ್ದ ಸ್ವಾಮಿ ಅಗ್ನಿವೇಶ್ ಅವರು ಶುಕ್ರವಾರ ಸಂಜೆ ನಿಧನರಾಗಿದ್ದಾರೆ. 81 ವರ್ಷ ವಯಸ್ಸಿನ ಸ್ವಾಮಿ ಅಗ್ನಿವೇಶ್ ಅವರು, ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ಜನಿಸಿದ್ದರು. ಬಹು ಅಂಗಾಂಗ ವೈಫಲ್ಯದಿಂದ ನರಳುತ್ತಿದ್ದ ಇವರು, ಸಂಜೆ 6.55ರವೇಳೆಗೆ ನಿಧನರಾಗಿದ್ದಾರೆ.
2004 ರಿಂದ 2014ರವರೆಗೆ ಆರ್ಯ ಸಮಾಜದ ವಿಶ್ವ ಮಂಡಳಿಯ ಅಧ್ಯಕ್ಷರಾಗಿದ್ದ ಇವರು, 1981ರಲ್ಲಿ ಜೀತ ಪದ್ದತಿಯ ವಿರುದ್ದ ಹೋರಾಡುವ ಸಲುವಾಗಿ ಬಾಂಡೆಡ್ ಲೇಬರ್ ಲಿಬರೇಶನ್ ಫ್ರಂಟ್ನ ಸ್ಥಾಪನೆ ಮಾಡಿದ್ದರು. ವಿಶ್ವ ಜೀತ ವಿಮುಕ್ತಿ ನಿಧಿಯ ಅಧ್ಯಕ್ಷರಾಗಿ 1994 ರಿಂದ 2004ರವರೆಗೆ ಸೇವೆ ಸಲ್ಲಿಸಿದ್ದರು.
ಹಿಂದೂ ಧರ್ಮದ ನಿಜವಾದ ಆಶಯಗಳನ್ನು ಆರ್ಎಸ್ಎಸ್ ಪ್ರತಿನಿಧಿಸುತ್ತಿಲ್ಲ, ಎಂದು ಹೇಳಿದ ಕಾರಣಕ್ಕಾಗಿ ಅವರ ಮೇಲೆ ಎರಡು ಬಾರಿ ಹಲ್ಲೆ ಕೂಡಾ ನಡೆದಿತ್ತು. 2018ರಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಅವರ ಅಂತಿಮ ದರ್ಶನಕ್ಕೆ ತೆರಳಿದ್ದ ವೇಳೆಯೂ ಅವರ ಮೇಲೆ ಹಲ್ಲೆ ನಡೆದಿತ್ತು.
ಹಲ್ಲೆಯ ನಂತರ ನನ್ನ ಮೇಲೇಕೆ ಹಲ್ಲೆ ಮಾಡಿದರು ಎಂದು ಬಹಿರಂಗ ಪತ್ರವನ್ನು ಬರೆದಿದ್ದರು. ಆ ಪತ್ರದಲ್ಲಿ, ತಮ್ಮ ಹಲ್ಲೆಗೆ ಬಿಜೆಪಿ ನಾಯಕರೇ ಕಾರಣ ಎಂದು ಹೇಳಿದ್ದರು. ನನ್ನ ನ್ಯಾಯದ ಆದರ್ಶಗಳು ಎಂದಿಗೂ ಆರ್ಎಸ್ಎಸ್ಗೆ ಇರಿಸುಮುರಿಸು ಉಂಟು ಮಾಡುತ್ತಿದ್ದವು ಎಂದು ಬರೆದುಕೊಂಡಿದ್ದರು.
ಗಣ್ಯರ ಸಂತಾಪ:
ಸ್ವಾಮಿ ಅಗ್ನಿವೇಶ್ ಅವರ ನಿಧನಕ್ಕೆ ರಾಷ್ಟ್ರೀಯ ನಾಯಕರು ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಅವರ ಮರಣ ಆರ್ಯ ಸಮಾಜಕ್ಕೆ ಮಾತ್ರವಲ್ಲ ಸಂಪೂರ್ಣ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾರೆ.
ಹಿರಿಯ ವಕೀಲ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿ, ಸ್ವಾಮಿ ಅಗ್ನಿವೇಶ್ ಮಾನವೀಯತೆಯ ಸೈನಿಕರಾಗಿದ್ದರು. ಜಾರ್ಖಂಡ್ನಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ನ ದಾಳಿಯಿಂದಾಗಿ ಅವರ ಯಕೃತ್ತಿಗೆ ಹಾನಿಯಾಗಿತ್ತು, ಎಂದು ಹೇಳಿದ್ದಾರೆ.