ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಹಿನ್ನೆಲೆಯಲ್ಲಿ ದೇಶದಾದ್ಯಂತ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ. ಅಸ್ಸಾಮ್, ಉತ್ತರ ಪ್ರದೇಶ, ದೆಹಲಿಗಳಲ್ಲಿ ತೀವ್ರವಾಗುತ್ತಿರುವ ಪ್ರತಿಭಟನೆಯನ್ನು ನಿಯಂತ್ರಿಸಲು, ಶಾಂತಿ ಕಾಪಾಡುವ ಕಾರಣವೊಡ್ಡಿ, ಕೇಂದ್ರ ಸರ್ಕಾರ ಒಂದೆಡೆ ಪೊಲೀಸ್ ವ್ಯವಸ್ಥೆಯನ್ನು ಬಳಸುತ್ತಿದ್ದರೆ, ಇನ್ನೊಂದೆಡೆ ದೂರಸಂಪರ್ಕ ಸೇವೆಯನ್ನು ಕತ್ತರಿಸಿ ಹಾಕುತ್ತಿದೆ.
ಅಂದರೆ ಇಂಟರ್ನೆಟ್ ಇಲ್ಲ, ಕರೆಗಳಿಲ್ಲ, ಸಂದೇಶಗಳಿಲ್ಲ, ವಾಟ್ಸ್ ಆ್ಯಪ್, ಫೇಸ್‌ಬುಕ್‌ಗಳಿಲ್ಲ, ಅಷ್ಟೇ ಅಲ್ಲ 2ಜಿ, 3ಜಿ, 4ಜಿ ಆಧರಿಸಿದ ಯಾವುದೇ ಚಟುವಟಿಕೆಗಳ ಇಲ್ಲವಾಗುತ್ತವೆ. ಸರ್ಕಾರ ಜನರ ದನಿಯನ್ನು ಹತ್ತಿಕ್ಕಲು ಹೊರಟಿರುವಾಗ ಸಂವಹನ ಇಲ್ಲದೇ ಹೋಗುವುದು ನಿಜಕ್ಕೂ ಆತಂಕಕಾರಿ ಮತ್ತು ಅಪಾಯಕಾರಿ ಬೆಳವಣಿಗೆ. ಇಂಟರ್ನೆಟ್ ಇಲ್ಲದೆಯೂ ಸಂಪರ್ಕವನ್ನು ಸತತವಾಗಿ ಹೊಂದಲು, ವಿಷಯಗಳನ್ನು ಹಂಚಿಕೊಳ್ಳಲು ಮೆಶ್ ಜಾಲ ನೆರವಾಗಲಿದೆ. ಇದು ಯಾವುದೇ ಸೆಲ್ಯುಲರ್ ನೆಟ್‌ವರ್ಕ್, ವೈಫೈ ನೆಟ್‌ವರ್ಕ್ ಇಲ್ಲದೆಯೂ ಕೆಲಸ ಮಾಡಬಲ್ಲದು. ಮೆಶ್ ಜಾಲವನ್ನು ಆಧರಿಸಿ ಕಾರ್ಯನಿರ್ವಹಿಸುವ ಮೂರು ಆ್ಯಪ್‌ಗಳು ಇಲ್ಲಿವೆ
1. ಬ್ರಿಡ್ಜ್ ಫೈ
ಇದು ಆಫ್‌ಲೈನ್ ಮೆಸೇಜಿಂಗ್ ಆ್ಯಪ್. ಬ್ಲೂ ಟೂತ್ ಮೂಲಕ ಸಂವಹನವನ್ನು ಸಾಧ್ಯವಾಗಿಸುವ ಬ್ರಿಡ್ಜ್ ಫೈ 100 ಮೀಟರ್ ವ್ಯಾಪ್ತಿಯಲ್ಲಿ ಸಂದೇಶಗಳನ್ನು ಕಳಿಸುತ್ತದೆ. ಈ ಆ್ಯಪ್ ಮೂಲಕ ಟೆಕ್ಸ್ಟ್ ಸಂದೇಶ, ಲೋಕೇಷನ್, ನೈಸರ್ಗಿಕ ವಿಕೋಪಗಳ ಮುನ್ನೆಚ್ಚರಿಕೆಗಳನ್ನು ನಿಡುವ ಜೊತೆಗೆ ಹಣ ಪಾವತಿಯೂ ಮಾಡಬಹುದು.
ಇದು ಮೂರು ರೀತಿಯಲ್ಲಿ ಕೆಲಸ ಮಾಡುತ್ತದೆ. ಒಂದು, ಇಬ್ಬರು ವ್ಯಕ್ತಿಗಳ ಸಂವಹನ ಮಾದರಿ. 100 ಮೀಟರ್ ವ್ಯಾಪ್ತಿಯಲ್ಲಿರುವ ಈ ಇಬ್ಬರು ಸಂವಹನ ನಡೆಸಬಹುದು. ಎರಡನೆಯದು, ಇಬ್ಬರು ವ್ಯಕ್ತಿಗಳ ನಡುವಿನ ಅತಿ ದೂರದ ಅಂತರದ ಸಂವಹನ. ಈಗ ಹೆfಚು ಬಳಕೆಯಾಗುತ್ತಿರುವ ಮಾದರಿ. ಮೂರನೆಯದು, ಬ್ರಾಡ್‌ಕಾಸ್ಟ್. ಈ ಮಾದರಿಯ ಮೂಲಕ ಸಾಮೂಹಿಕವಾಗಿ ಸಂದೇಶಗಳನ್ನು ರವಾನೆ ಮಾಡಬಹುದು. ಬಳಕೆದಾರನ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇಲ್ಲದ ವ್ಯಕ್ತಿಗೂ ಸಂದೇಶವನ್ನು ಕಳಿಸಲು ಸಾಧ್ಯವಿದೆ. ಇಂರ್ಟನೆಟ್ ಸೌಲಭ್ಯವಿದ್ದಾಗಲೇ ಈ ಆ್ಯಪ್ ಡೌನ್‌ಲೋಡ್ ಮಾಡಿಟ್ಟುಕೊಂಡರೆ, ಯಾವುದೇ ರೀತಿಯ ಸಂಪರ್ಕವಿಲ್ಲದ ಸಂದರ್ಭದಲ್ಲೂ ಬಳಸುವುದಕ್ಕೆ ಸಾಧ್ಯವಿದೆ.
ಇದು ಆಂಡ್ರಾಯ್ಡ್ ಮತ್ತು ಐಫೋನ್‌ಗಳಿಗೆ ಲಭ್ಯವಿದೆ. ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಿ
https://play.google.com/store/apps/details?id=me.bridgefy.main&hl=en_US
2. ವೋಯೆರ್
ಇದು ಧ್ವನಿ ಸಂದೇಶಗಳನ್ನು ಕಳಿಸುವುದಕ್ಕೆ ನೆರವಾಗುವ ಆ್ಯಪ್. ಇಂಟರ್ನೆಟ್ ಲಭ್ಯವಿಲ್ಲದಿದ್ದರೂ, ವೊಯೆರ್ ಆ್ಯಪ್ ಮೂಲಕ ಧ್ವನಿ ಸಂದೇಶಗಳನ್ನು ರವಾನಿಸಬಹುದು. ಮೆಷ್ ನೆಟ್‌ವರ್ಕ್ ಮೂಲಕ ಸಂವಹನವನ್ನು ಸಾಧ್ಯವಾಗಿಸುವ ವೊಯೆರ್ ನಿಮ್ಮ ಫೋನಿನ ವೈಫೈ, ಬ್ಲೂಟೂತ್, ಮೈಕ್ರೋಫೋನ್ ಮತ್ತು ಕ್ಯಾಮೆರಾ ಆಕ್ಸೆಸ್ ಅನುಮತಿಯನ್ನು ಕೇಳುತ್ತದೆ. ಇದು ಐಫೋನ್‌ಗಳಿಗೆ ಮಾತ್ರ ಲಭ್ಯವಿದ್ದು, 599 ರೂ.ಗಳನ್ನು ತೆರಬೇಕು.
ಈ ಆ್ಯಪ್‌ಅನ್ನು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ | ವೊಯೆರ್
https://apps.apple.com/us/app/vojer-be-connected-conference-or-in-roaming-be-intouch/id913585553
3. ಬ್ರಿಯರ್
ಬ್ಲೂಟೂತ್ ಅಥವಾ ವೈಫೈ ಬಳಸಿ ಹತ್ತಿರದ ಬಳಕೆದಾರರಿಗೆ ಸಂದೇಶವನ್ನು ಕಳಿಸುವು ಬ್ರಿಯರ್ ಅನುಕೂಲಕ ಮಾಡಿಕೊಡುತ್ತದೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಇಲ್ಲವೇ ಕಾಂಟ್ಯಾಕ್ಟ್‌ಗಳನ್ನು ಪ್ರತ್ಯೇಕವಾಗಿ ಸೇರಿಸಿ, ಸಂದೇಶಗಳನ್ನು ಕಳುಹಿಸಬಹುದಾಗಿದೆ. ಸಂಪರ್ಕ ಸಂಪೂರ್ಣ ಬಂದ್ ಆದಾಗ ಪೂರ್ಣ ನೆರವಾಗದೇ ಹೋದರು, ಸುರಕ್ಷಿತ ಸಂವಹನಕ್ಕೆ ಇದು ಉಪಯುಕ್ತ ಆ್ಯಪ್.
ಆಂಡ್ರಾಯ್ಡ್ ಫೋನ್‌ಗಳಿಗೆ ಮಾತ್ರ ಲಭ್ಯವಿರುವ ಬ್ರಿಯರ್ ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
https://play.google.com/store/apps/details?id=org.briarproject.briar.android
4. ಫೈರ್ ಚಾಟ್
ನೀವು ಎಲ್ಲೇ ಇರಿ, ನಿಮ್ಮ ಹತ್ತಿರದ ವ್ಯಕ್ತಿಗೆ ಸಂದೇಶವನ್ನು ರವಾನಿಸುವುದಕ್ಕೆ ನೆರವಾಗುತ್ತದೆ. ಒಬ್ಬರಿಗಷ್ಟೇ ಅಲ್ಲ, ಏಕ ಕಾಲಕ್ಕೆ 10,000 ಮಂದಿಗೆ ಸಂದೇಶ ಕಳಿಸಬಹುದು. ಗೌಪ್ಯವಾಗಿಯೂ ಇರುವ ಈ ಸಂವಹನ ಗುಂಪು ಚರ್ಚೆಗಳಿಗೆ ಬಳಕೆಯಾಗುತ್ತಿದೆ. ಕ್ಷಣ ಮಾತ್ರದಲ್ಲಿ ಸಂದೇಶಗಳನ್ನು ಕಳಿಸಬಹುದು. 200 ಮೀಟರ್‌ಗಳವರೆಗೆ ತಲುಪಬಹುದು. ಬ್ಯಾಟರಿಯನ್ನು ಹೆಚ್ಚು ಬಳಸದ ಈ ಆ್ಯಪ್, ಹತ್ತಾರು ಆಸಕ್ತಿ ಚರ್ಚೆಯ ಗುಂಪುಗಳನ್ನು ಸೃಷ್ಟಿಸಿಕೊಳ್ಳುವುದಕ್ಕೆ, ಪಾಲ್ಗೊಳ್ಳುವುದಕ್ಕೆ ಸಹಾಯ ಮಾಡುತ್ತದೆ.
ಇದು ಅಂಡ್ರಾಯ್ಡ್ ಮತ್ತು ಐಒಎಸ್ ಫೋನ್‌ಗಳಿಗೆ ಲಭ್ಯವಿದೆ
https://play.google.com/store/apps/details?id=com.opengarden.firechat&hl=en_IN
5. ದಿ ಸರ್ವಲ್ ಮೆಶ್
ದಾಖಲೆಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕೆ, ಖಾಸಗಿಯಾಗಿ ಕರೆ ಮಾಡುವುದಕ್ಕೆ, ಸುರಕ್ಷಿತ ಎಸ್‌ಎಂಎಸ್‌ಗಳನ್ನು ಕಳಿಸುವುದಕ್ಕೆ ಇದು ಬಳಕೆಯಾಗುತ್ತದೆ. ಯಾವುದೇ ಭೌಗೋಳಿಕ ಪ್ರದೇಶದಲ್ಲಿ ಯಾವುದೇ ನೆಟ್‌ವರ್ಕ್ ಇಲ್ಲದ ತಾಣದಲ್ಲೂ ಇದು ಆಪದ್ಭಾಂದವನಂತೆ ನೆರವಿಗೆ ಬರುತ್ತದೆ.
ಆಂಡ್ರಾಯ್ಡ್ ಫೋನ್‌ಗಳಿಗೆ ಮಾತ್ರ ಈ ಆ್ಯಪ್ ಲಭ್ಯವಿದೆ
ಮೆಶ್ ಜಾಲ ಹೇಗೆ ಕೆಲಸ ಮಾಡುತ್ತದೆ?
ನಮ್ಮ ಮೊಬೈಲ್ ಸಂವಹನ ಸಾಧ್ಯವಾಗುವುದು ಮಧ್ಯವರ್ತಿಯ ಮೂಲಕ. ಅಂದರೆ ನಮಗೆ ಸೇವೆ ನೀಡುವ ಜಾಲವನ್ನು ಅವಲಂಬಿಸಿರುತ್ತವೆ. ನಮ್ಮ ಮೊಬೈಲ್‌ನಿಂದ ಹೊರಡುವ ಸಂಜ್ಞೆಗಳು ಸೇವಾದಾರರ ಟವರ್ ತಲುಪಿ, ಅಲ್ಲಿಂದ ನಾವು ಬಯಸಿದ ವ್ಯಕ್ತಿಗೆ ಸಂದೇಶ ತಲುಪುತ್ತದೆ. ಸೇವಾದಾರರೂ ನಮ್ಮ ಸಂವಹನಕ್ಕೆಂದೇ ಒಂದು ಸರ್ವರ್ ವಿನಿಯೋಗಿಸುತ್ತಾರೆ. ಇದು ಸಾಂಪ್ರದಾಯಿಕವಾಗಿ ನಡೆಯುವ ಸಂವಹನ ವಿಧಾನ. ಆದರೆ ಮೆಶ್ ಜಾಲ ಇವುಗಳ ಅಗತ್ಯವೇ ಇಲ್ಲದ ಮೊಬೈಲ್ ನಿಂದ ಮೊಬೈಲ್‌ಗೆ ಸಂವಹನವನ್ನು ಸೃಷ್ಟಿಸುತ್ತದೆ.
ಬ್ಲೂಟೂತ್ ಅಥವಾ ವೈಫೈ ಮೂಲಕ ಯಾವುದೇ ಸ್ವರೂಪದ ಮಾಹಿತಿ, ಅಕ್ಷರ, ವಿಡಿಯೋ, ಆಡಿಯೋರೂಪದಲ್ಲಿ ಹಂಚಿಕೊಳ್ಳಬಹುದು. ವಾಕಿಟಾಕಿ ಮಾದರಿಯಲ್ಲಿ ನಡೆಯುವ ಈ ಸಂವಹನದ ಜಾಲ ವ್ಯಾಪ್ತಿ 100 ಮೀಟರ್‌ಗಳು. ಈ ವ್ಯಾಪ್ತಿಯಲ್ಲಿರುವ ಒಂದು ಸಂಪರ್ಕ ಕೇಂದ್ರ ಮತ್ತು ತನ್ನ 100 ವ್ಯಾಪ್ತಿಯ ಸಂಪರ್ಕಗಳಿಗೆ ಸಂದೇಶವನ್ನು ರವಾನಿಸಬಹುದು.
ಹಾಂಕಾಂಗ್, ಈಜಿಪ್ತ್ ದೇಶಗಳಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ ಸರ್ಕಾರ ಎಲ್ಲ ರೀತಿಯ ಸಂಪರ್ಕ ಸಾಧ್ಯತೆಗಳನ್ನು ರದ್ದು ಮಾಡಿದಾಗ, ಅಲ್ಲಿನ ಹೋರಾಟಗಾರರು ಸಂವಹನಕ್ಕೆ ಅನುಸರಿಸಿದ್ದು ಇದೇ ಮಾರ್ಗವನ್ನು. ಇಷ್ಟೇ ಅಲ್ಲದೆ, ನೈಸರ್ಗಿಕ ವಿಕೋಪ, ಕಾಡುಗಳಲ್ಲಿ ಹಾದಿ ತಪ್ಪಿದ ಸಂದರ್ಭಗಳಲ್ಲಿ ಮೆಶ್ ಸಂಪರ್ಕ ಜಾಲ ಪರಿಣಾಮಕಾರಿಯಾಗಿ ನೆರವಿಗೆ ಬಂದಿದೆ.
ಕೃಪೆ: ಟೆಕ್ ಕನ್ನಡ- https://www.techkannada.in/