ಭ್ರಷ್ಟಾತಿಭ್ರಷ್ಟ ಅಧಿಕಾರಿಗಳು ಜನಸಾಮಾನ್ಯರ ಬಳಿ ಲಂಚಕ್ಕೆ ಕೈಚಾಚುವುದಷ್ಟೇ ಅಲ್ಲ, ಅನ್ನ ಕೊಡುವ ಸರ್ಕಾರಕ್ಕೂ ಪಂಗನಾಮ ಹಾಕುವಲ್ಲಿ ನಿಸ್ಸೀಮರಾಗಿರುತ್ತಾರೆ. ಈ ಲಂಚಬಾಕತನ ಅಧಿಕಾರದ ಉಚ್ಛ್ರಾಯ ಮಟ್ಟಕ್ಕೆ ಹೋದರೂ ಬಿಡುವುದಿಲ್ಲ.
ಹೀಗೆ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯ ಮೂವರು ಅಧಿಕಾರಿಗಳು ಸೇರಿ ಸರ್ಕಾರದ ಜಮೀನಿಗೆ ಕನ್ನ ಹಾಕಿ ಆ ಜಮೀನನ್ನು ಖಾಸಗಿಯವರಿಗೆ ಪರಭಾರೆ ಮಾಡುವ ಮೂಲಕ ಸಿಕ್ಕಿ ಬಿದ್ದಿದ್ದಾರೆ. ಈ ಸರ್ಕಾರಿ ಜಮೀನನ್ನು ಖಾಸಗಿಯವರಿಗೆ ಸೇರಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವರ ಹೆಸರಿಗೆ ಬರೆದುಕೊಟ್ಟಿದ್ದಾರೆ.
ಅದೂ ಕೂಡ ಕೆಲವೇ ಕೆಲವು ಸಾವಿರ ರೂಪಾಯಿಗಳಿಗೆ. ಆದರೆ, ಈ ಭೂಮಿಯ ಈಗಿನ ಮಾರುಕಟ್ಟೆ ಬೆಲೆ 400 ಕೋಟಿ ರೂಪಾಯಿಗಳಿಗೂ ಅಧಿಕವಾಗಿದೆ. ಈ ಮೂಲಕ ಅಧಿಕಾರಿಗಳು ಭೂಗಳ್ಳರ ಜತೆ ಶಾಮೀಲಾಗಿ ಸರ್ಕಾರದ ಜಮೀನನ್ನು ಕಬಳಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ವಿ.ಶಂಕರ್ ಮತ್ತು ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ ಹರೀಶ್ ನಾಯಕ್, ಆನೇಕಲ್ ತಾಲೂಕಿನ ತಹಶೀಲ್ದಾರ್ ಸಿ.ಮಹದೇವಯ್ಯ ಅವರು ಆನೇಕಲ್ ತಾಲೂಕಿನ ಸರ್ಕಾರಕ್ಕೆ ಸೇರಿದ್ದ 19 ಎಕರೆ 10 ಗುಂಟೆ ಜಮೀನನ್ನು ಖಾಸಗಿಯವರಿಗೆ ಪರಭಾರೆ ಮಾಡಿದ್ದಾರೆ.
ಈ ಮೂವರೂ ಸೇರಿ ಖಾಸಗಿಯವರಿಗೆ ಸುಮಾರು 400 ಕೋಟಿ ರೂಪಾಯಿಗೂ ಅಧಿಕ ಬೆಲೆ ಬಾಳುವ ಈ ಜಮೀನನ್ನು ಪರಭಾರೆ ಮಾಡಿದ್ದಾರೆ. ಕೆಲವು ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಈ ಅಕ್ರಮ ಬಯಲಾಗಿದೆ.
ಈ ಮೂವರ ವಿರುದ್ಧ ಎಸಿಬಿಗೆ ದೂರು ದಾಖಲಾಗಿದ್ದು, ಆನೇಕಲ್ ತಾಲೂಕಿನ ತಹಶೀಲ್ದಾರ್ ಸಿ.ಮಹದೇವಯ್ಯ ವಿರುದ್ಧ ವಿಚಾರಣೆ/ತನಿಖೆ ನಡೆಸಲು ಕಂದಾಯ ಇಲಾಖೆ ಅನುಮತಿ ನೀಡಿದೆ. ಆದರೆ, ಇನ್ನಿಬ್ಬರು ಉನ್ನತಾಧಿಕಾರಿಗಳಾದ ಶಂಕರ್ ಮತ್ತು ಹರೀಶ್ ನಾಯಕ್ ವಿರುದ್ಧ ವಿಚಾರಣೆ/ತನಿಖೆ ನಡೆಸುವಂತೆ ಅನುಮತಿ ನೀಡಬಹುದು ಎಂದು ಕಂದಾಯ ಇಲಾಖೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಪ್ರಕರಣದ ಸಂಪೂರ್ಣ ಮಾಹಿತಿ ಇಲ್ಲಿದೆ:-
ಈ ಮೂವರು ಅಧಿಕಾರಿಗಳು ಸೇರಿ ಬುಕ್ಕಸಾಗರ ಗ್ರಾಮದ ಸರ್ವೇ ನಂಬರ್ 183/2 ನ ಬಿ ಖರಾಬು ಜಮೀನು ಸರ್ಕಾರಕ್ಕೆ ಸೇರಿದ ಜಮೀನು ವಿಸ್ತೀರ್ಣ 19 ಎಕರೆ 10 ಗುಂಟೆಯನ್ನು ಖಾಸಗಿ ಜಾಗ ಎಂದು ಪರಿಗಣಿಸಿ ಅದರಂತೆ ನಕಲಿ ದಾಖಲೆಯನ್ನು ಸೃಷ್ಟಿಸಿದ್ದರು.
ಆದರೆ, ಬುಕ್ಕಸಾಗರ ಗ್ರಾಮದ ಮುಖಂಡರಾದ ರಾಮಯ್ಯ ನಿಂಗರಾಜು ಮತ್ತು ಇತರರು ಕಂದಾಯ ಇಲಾಖೆಯಲ್ಲಿ ಪರಿಶೀಲನೆ ನಡೆಸಿದಾಗ ಈ ಅಕ್ರಮ ಬಯಲಿಗೆ ಬಂದಿದೆ. ಅಲ್ಲದೇ, ಹಲವಾರು ದಶಕಗಳಿಂದಲೂ ಸರ್ಕಾರಕ್ಕೆ ಸೇರಿದ ಈ ಜಾಗವನ್ನು ಇದ್ದಕ್ಕಿದ್ದಂತೆ ಖಾಸಗಿ ವ್ಯಕ್ತಿಗಳು ಅದರ ಮೇಲೆ ಹಿಡಿತ ಸಾಧಿಸಿದ್ದನ್ನು ಕಂಡು ಅವರಿಗೆ ಮತ್ತಷ್ಟು ಅನುಮಾನಗಳು ಬಂದಿದ್ದವು.
ಈ ಹಿನ್ನೆಲೆಯಲ್ಲಿ ರಾಮಯ್ಯ ನಿಂಗರಾಜು ಮತ್ತಿತರು ನೇರವಾಗಿ ಕಂದಾಯ ಇಲಾಖೆ ಆಯುಕ್ತರನ್ನು ಭೇಟಿ ಮಾಡಿ 07-06-2018 ರಲ್ಲಿ ದೂರು ನೀಡುತ್ತಾರೆ. ಅಂದಿನ ಆಯುಕ್ತರಾಗಿದ್ದ ಮುನೀಶ್ ಮೌದ್ಗಿಲ್ ಅವರು ಈ ಬಗ್ಗೆ ಸರ್ವೇ ಮತ್ತು ಪರಿಶೀಲನೆ ನಡೆಸಿ ಈ ಮೂವರು ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಸರ್ಕಾರಿ ಜಮೀನನ್ನು ಖಾಸಗಿ ಎಂದು ಪರಿಗಣಿಸಿ ದಾಖಲೆಗಳನ್ನು ತಿದ್ದಿದ್ದಾರೆ. ಇದರ ಬೆಲೆ 400 ಕೋಟಿ ರೂಪಾಯಿಗೂ ಅಧಿಕವಿದ್ದರೂ ಕೇವಲ 4,000 ರೂಪಾಯಿ ಮೌಲ್ಯ ಎಂದು ದಾಖಲಿಸಿದ್ದಾರೆ ಎಂಬುದನ್ನು ಸರ್ಕಾರದ ಗಮನಕ್ಕೆ ತಂದಿದ್ದರು.
ಈ ಬಗ್ಗೆ ಮೌದ್ಗೀಲ್ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ದೂರು ನೀಡಿ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದರು. ಅವರು ಎಸಿಬಿಗೆ ನೀಡಿರುವ ದೂರಿನಲ್ಲಿ, ಶಂಕರ್ ಮತ್ತು ಇಬ್ಬರು ಅಧಿಕಾರಿಗಳು ತಮಗೆ ಬೇಕಾದ ವ್ಯಕ್ತಿಗಳ ಹೆಸರಿಗೆ ಈ ಜಮೀನನ್ನು ವರ್ಗಾವಣೆ ಮಾಡುವ ಉದ್ದೇಶದಿಂದಲೇ ಖಾಸಗಿ ಜಮೀನು ಎಂದು ನಮೂದು ಮಾಡಿ ದಾಖಲೆಗಳನ್ನು ತಯಾರು ಮಾಡುತ್ತಿದ್ದರು. ಈ ಬಗ್ಗೆ ಭೂದಾಖಲೆಗಳ ಜಂಟಿ ನಿರ್ದೇಶಕರು ಪರಿಶೀಲನೆ ನಡೆಸಿದ್ದು, ಅಕ್ರಮ ನಡೆಯುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.
ಸರ್ವೇ ನಂಬರ್ 183 ರಲ್ಲಿ ಖರಾಬು ಕಲ್ಲುಬಂಡೆ ಮತ್ತು ಸರವು ಬಗ್ಗೆ ಫೂಟ್ ಖರಾಬು ಇದ್ದು, ರೀ ಕ್ಲಾಸಿಫಿಕೇಶನ್ ಸಂದರ್ಭದಲ್ಲಿ ಖರಾಬನ್ನು ಎ ಅಥವಾ ಬಿ ಎಂದು ವರ್ಗೀಕರಿಸದೆ ಒಟ್ಟು ಖರಾಬು ಸಿ ಕಾಲಂ ನಲ್ಲಿ ದಾಖಲಿಸಲಾಗಿದೆ. ಆದರೆ ಪ್ರತಿ ಮತ್ತು ಟಿಪ್ಪಣಿ ಪುಸ್ತಕದಲ್ಲಿ ಕಲ್ಲು ಬಂಡೆ ಮತ್ತು ಸರವು ಇರುವುದನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಸರ್ವೇ ಮ್ಯಾನ್ಯುವಲ್ ನಲ್ಲಿ ಸಹ ಖರಾಬನ್ನು ಬಿ ಖರಾಬು ಎಂದು ದಾಖಲಾಗಿದೆ. ಆದರೆ ರೀ ಕ್ಲಾಸಿಫಿಕೇಶನ್ ಸಂದರ್ಭದಲ್ಲಿ ಖರಾಬು ವರ್ಗೀಕರಿಸದೆ ನೇರವಾಗಿ 5 ಸಿ ಕಾಲಂ ನಲ್ಲಿ ನಮೂದಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಕಲ್ಲು ಬಂಡೆ ಖರಾಬು ಆಗಿರುವ ಈ ಜಮೀನನ್ನು ಸಾಗು ಜಮೀನು ಎಂದು ದಾಖಲಿಸುವ ಮೂಲಕ ಸರ್ವೇ ಮ್ಯಾನ್ಯುವಲ್ ಮತ್ತು ಸರ್ಕಾರದ ಆದೇಶದ ಉಲ್ಲಂಘನೆಯಾಗಿದೆ. ಈ ಮೂಲಕ ಜಮೀನು ಖಾಸಗಿ ವ್ಯಕ್ತಿಗಳ ಪಾಲಾಗಲು ಕಾರಣಕರ್ತರಾಗಿದ್ದಾರೆ.
ಇದಕ್ಕೆ ಪೂರಕವಾಗಿ ಜಮೀನನ್ನು ಸಾಗು ಜಮೀನು ಎಂದು ದಾಖಲಿಸುವಂತೆ ಆನೇಕಲ್ ತಹಶೀಲ್ದಾರ್ ಅವರು ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು ಮತ್ತು ಭೂದಾಖಲೆಗಳ ಸಹಾಯಕ ನಿರೀಕ್ಷಕರಿಗೆ ಆದೇಶ ನೀಡುವ ಮೂಲಕ ಕಾನೂನುಗಳನ್ನು ಗಾಳಿಗೆ ತೂರಿದ್ದಾರೆ.
ಜಿಲ್ಲಾಧಿಕಾರಿಗಳು ಈ 19.10 ಎಕರೆ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ನೀಡುವ ಉದ್ದೇಶದಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವುಂಟು ಮಾಡಿದ್ದಾರೆ. ಈ ಮೂಲಕ ತಪ್ಪು ಆದೇಶ ಹೊರಡಿಸಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ವಿಶ್ವಾಸದ್ರೋಹ ಅಪರಾಧ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು ಮಾಡಿದ ತಪ್ಪು ಆದೇಶವನ್ನು ಸಮರ್ಥಿಸಿ ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್ ಈ ಜಮೀನನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಸ್ತುತವಾಗಿ ಈ ಜಮೀನಿನ ಮಾರುಕಟ್ಟೆ ಮೌಲ್ಯವು ಹಲವು ನೂರು ಕೋಟಿ ರೂಪಾಯಿಗಳಷ್ಟಿದೆ. ಇದರ ಅರಿವು ಇದ್ದಾಗ್ಯೂ ಉದ್ದೇಶಪೂರ್ವಕವಾಗಿ ವಿಶ್ವಾಸದ್ರೋಹದ ಅಪರಾಧವನ್ನು ಈ ಅಧಿಕಾರಿಗಳು ಎಸಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಬೇಕೆಂದು ಮೌದ್ಗಿಲ್ ಎಸಿಬಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಇದಲ್ಲದೇ, ತಹಶೀಲ್ದಾರ್ ಮಹದೇವಯ್ಯ ವಿರುದ್ಧ ವಿಚಾರಣೆ/ತನಿಖೆ ಮಾಡಲು ಅನುಮತಿ ನೀಡಿ 06-11-2019 ರಂದು ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಬಿ.ಎನ್.ಭಾಗ್ಯ ಅವರು ಆದೇಶ ಹೊರಡಿಸಿದ್ದಾರೆ.
ಇನ್ನು ಶಂಕರ್ ಮತ್ತು ಹರೀಶ್ ನಾಯಕ್ ಅವರೂ ಸಹ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವುದರಿಂದ ಅವರ ವಿರುದ್ಧವೂ ವಿಚಾರಣೆ/ತನಿಖೆ ನಡೆಸಲು ಕಂದಾಯ ಇಲಾಖೆ ಸಹಮತಿ ಇದೆ ಎಂದು ತಿಳಿಸಿದ್ದಾರೆ.
ಮೌದ್ಗೀಲ್ ಅವರ ದೂರಿನನ್ವಯ ಭ್ರಷ್ಟಾಚಾರ ನಿಗ್ರಹ ದಳದ ಅಪರ ಪೊಲೀಸ್ ಮಹಾನಿರ್ದೇಶಕರು ಶಂಕರ್ ಮತ್ತು ಹರೀಶ್ ನಾಯಕ್ ವಿರುದ್ಧ ತನಿಖೆ ನಡೆಸಲು ಅನುಮತಿ ಕೋರಿ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಶಂಕರ್ ಅವರು ಜಿಲ್ಲಾ ದಂಡಾಧಿಕಾರಿಗಳಾಗಿಯೂ ನ್ಯಾಯ ಹೇಳುವ ಸ್ಥಾನದಲ್ಲಿದ್ದವರು. ಆದರೆ, ಈ ಉನ್ನತ ಸ್ಥಾನದಲ್ಲಿದ್ದುಕೊಂಡು ಅನ್ಯಾಯದ ಹಾದಿಯನ್ನು ತುಳಿದಿರುವುದು ಅಕ್ಷಮ್ಯವಾಗಿದೆ. ಅದೇ ರೀತಿ ತಮ್ಮ ಕೆಳಗಿನ ಅಧಿಕಾರಿಗಳನ್ನೂ ಭ್ರಷ್ಟರನ್ನಾಗಿಸುವ ಮೂಲಕ ಇಲಾಖೆಗೆ ಕಪ್ಪು ಮಸಿ ಬಳಿದಿದ್ದಾರೆ.
ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ಸರ್ಕಾರಕ್ಕೆ ಸೇರಿದ ಖರಾಬು ಭೂಮಿಯನ್ನು ಭೂರಹಿತ ಬಡ ಕುಟುಂಬಗಳಿಗೆ ಮಂಜೂರು ಮಾಡಲಾಗುತ್ತದೆ. ಹೀಗೆ ಸ್ಥಳೀಯ ಮಟ್ಟದಲ್ಲಿ ನಿರ್ಧಾರಗಳನ್ನು ತೆಗೆದುಕೊಂಡು ಹಂಚಿಕೆ ಮಾಡಲಾಗುತ್ತದೆ. ಈ ಮೂಲಕ ಬಡ ಕುಟುಂಬಗಳ ಜೀವನೋಪಾಯಕ್ಕೆ ನೆರವು ನೀಡಲಾಗುತ್ತದೆ. ಆದರೆ, ಇಂತಹ ಅಧಿಕಾರಿಗಳು ಸರ್ಕಾರಕ್ಕೆ ಸೇರಿದ ಜಮೀನನ್ನು ಬಡವರಿಗೆ ಹಂಚಿಕೆ ಮಾಡುವ ಬದಲು ಪಟ್ಟಭದ್ರ ಹಿತಾಸಕ್ತಿಗಳು/ರಿಯಲ್ ಎಸ್ಟೇಟ್ ದಂಧೆಕೋರರಿಗೆ ಪರಭಾರೆ ಮಾಡುವ ಮೂಲಕ ಅಕ್ಷಮ್ಯ ಅಪರಾಧವನ್ನು ಎಸಗುತ್ತಿದ್ದಾರೆ.
ಹೇಳಿ ಕೇಳಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಭಾರೀ ದೊಡ್ಡ ಪ್ರಮಾಣದಲ್ಲಿ ಸಕ್ರಿಯವಾಗಿದೆ. ಇದರಿಂದ ಭೂಮಿಯ ಬೆಲೆ ಗಗನಕ್ಕೇರಿದ್ದು, ಒಂದು ಗುಂಟೆ ಜಮೀನು ಖರೀದಿಸಲು ಜನಸಾಮಾನ್ಯನಿಗೆ ಸಾಧ್ಯವಾಗದಿರುವ ಮಟ್ಟಿಗೆ ಹೆಚ್ಚಾಗಿದೆ. ರಿಯಲ್ ಎಸ್ಟೇಟ್ ದಂಧೆಕೋರರು ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿಕೊಳ್ಳುವುದು, ಪ್ರಭಾವ ಬೀರಿ ಪರಭಾರೆ ಮಾಡಿಕೊಳ್ಳುವ ಕಾಯಕದಲ್ಲಿ ತೊಡಗಿದ್ದಾರೆ. ಇಂತಹ ದಂಧೆಕೋರರ ಎಂಜಲು ದುಡ್ಡಿಗೆ ಕೈಚಾಚುವ ಶಂಕರ್ ಮತ್ತಿತರೆ ಭ್ರಷ್ಟ ಅಧಿಕಾರಿಗಳು ಕೈಜೋಡಿಸಿ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ.
ಈಗಾಗಲೇ ಎಸಿಬಿ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಅನುಮತಿ ಕೋರಿದ್ದು, ಸರ್ಕಾರ ಮೀನಾಮೇಷ ಎಣಿಸದೇ ಅನುಮತಿಯನ್ನು ನೀಡಬೇಕು. ಇಲ್ಲವಾದರೆ ಈ ಭ್ರಷ್ಟ ಅಧಿಕಾರಿಗಳು ತಮ್ಮ ಪ್ರಭಾವ ಬೀರಿ ತನಿಖೆಯೆಂಬ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಮತ್ತು ವರ್ಗಾವಣೆ ಆಗಿ ಹೋಗುವ ಜಾಗದಲ್ಲೂ ಇದೇ ಪ್ರವೃತ್ತಿಯನ್ನು ಮುಂದುವರಿಸಿ ಅಲ್ಲಿಯೂ ತಮ್ಮ ಇಲಾಖೆಯನ್ನು ಭ್ರಷ್ಟಾಚಾರದ ಕೂಪವನ್ನಾಗಿ ಮಾಡದೇ ಇರಲಾರರು.