ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಭಿನ್ನಮತ ಇರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಉಪಮುಖ್ಯಮಂತ್ರಿಗಳ ನೇಮಕ ಮತ್ತು ಖಾತೆಗಳ ಹಂಚಿಕೆ ವಿಚಾರದಲ್ಲಿ ಉದ್ಭವವಾದ ಈ ವಿವಾದ ನೆರೆ ಬಂದಾಗ ಎದ್ದುಕಂಡಿತ್ತು. ಮುಖ್ಯಮಂತ್ರಿಗಳೇ ಎಲ್ಲಾ ಕಡೆ ಓಡಾಡಿದ್ದು ಬಿಟ್ಟರೆ ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಗಳ ಬಗ್ಗೆಯೂ ಗಮನಹರಿಸಿರಲಿಲ್ಲ. ಇದೀಗ ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕರೋನಾ ಸೋಂಕಿನ ವಿಚಾರದಲ್ಲೂ ಸಚಿವರ ನಡುವಿನ ಭಿನ್ನಮತ ಎದ್ದು ಕಾಣುತ್ತಿದೆ. ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಡವಳಿಕೆ ಸಚಿವರಿಗೆ ಬೇಸರ ತರಿಸಿದ್ದು, ತಮಗೆ ವಹಿಸಿರುವ ಖಾತೆಯ ನಿರ್ವಹಣೆಯಷ್ಟೇ ನಮ್ಮ ಜವಾಬ್ದಾರಿ ಎಂದುಕೊಂಡು ಸುಮ್ಮನಾಗಿದ್ದಾರೆ. ಇದರ ಪರಿಣಾಮ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಬಿ.ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತ್ರ ರಾಜ್ಯದ ಜನರ ಕರೋನಾತಂಕವನ್ನು ದೂರ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.
ಈ ಮಧ್ಯೆ ಕರೋನಾ ವಿಚಾರದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಅವರನ್ನೇ ಬದಿಗಿಟ್ಟು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮುಂಚೂಣಿಯಲ್ಲಿರುವುದು ಕೂಡ ಇತರೆ ಸಚಿವರಲ್ಲಿ, ಅದರಲ್ಲೂ ಮುಖ್ಯವಾಗಿ ಮೂಲ ಬಿಜೆಪಿ ಸಚಿವರಲ್ಲಿ ಅಸಮಾಧಾನವಿದೆ. ಇತ್ತೀಚೆಗಷ್ಟೇ ಬಿಜೆಪಿ ಸೇರಿ ಗೆದ್ದು ಬಂದು ಸಚಿವರಾಗಿರುವ ಸುಧಾಕರ್ ಅವರು ಹಿರಿಯರಾದ ಶ್ರೀರಾಮುಲು ಅವರಿಗೆ ಸೂಕ್ತ ಗೌರವ ನೀಡುತ್ತಿಲ್ಲ. ಹೀಗಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸುಧಾಕರ್ ಅವರನ್ನು ಬೆಂಬಲಿಸುತ್ತಿದ್ದಾರೆ. ಇದು ಈಗಾಗಲೇ ಮುಖ್ಯಮಂತ್ರಿಗಳ ಬಗ್ಗೆ ಸಚಿವರಲ್ಲಿರುವ ಅಸಮಾಧಾನದ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇದರ ಪರಿಣಾಮ, ಅವರು ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಬಹುತೇಕ ಸಚಿವರು ತಮ್ಮ ಪಾಡಿಗೆ ತಾವಿದ್ದಾರೆ.
ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು ವಿಶ್ವದ ಇತರೆ ರಾಷ್ಟ್ರಗಳಿಗೆ ವಿಸ್ತರಿಸಲಾರಂಭಿಸಿದಾಗ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಪುತ್ರಿಯ ಮದುವೆ ಕಾರ್ಯದಲ್ಲಿ ನಿರತರಾಗಿದ್ದರು. ಹೀಗಾಗಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಡಾ.ಸುಧಾಕರ್ ಅವರಿಗೆ ಕೊರೊನಾ ಸೋಂಕು ಕುರಿತ ಜವಾಬ್ದಾರಿಯನ್ನು ನೀಡಲಾಯಿತು. ಸುಧಾಕರ್ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದರಿಂದ ಈ ಕುರಿತ ಮಾಹಿತಿಗಳನ್ನು ಬಹಳ ಬೇಗ ಅರ್ಥೈಸಿಕೊಳ್ಳುತ್ತಿದ್ದರು. ಹೀಗಾಗಿ ಮುಂದಿನ ದಿನಗಳಲ್ಲಿ ಅವರಿಗೆ ಸ್ವಲ್ಪ ಹೆಚ್ಚು ಜವಾಬ್ದಾರಿ ನೀಡಲಾಯಿತು. ಆದರೆ, ಈ ಅವಕಾಶವನ್ನು ದುರುಪಯೋಗಪಡಿಸಿಕೊಂಡ ಸುಧಾಕರ್, ಆರೋಗ್ಯ ಸಚಿವರು ಪುತ್ರಿಯ ಮದುವೆ ಕಾರ್ಯಗಳನ್ನು ಮುಗಿಸಿ ವಾಪಸ್ ಬಂದರೂ ಅವರನ್ನು ಹೆಚ್ಚು ಗಂಭೀರವಾಗಿ ಪರಿಗಣಿಸದೆ ತಮ್ಮ ಪಾಡಿಗೆ ತಾವೇ ಆರೋಗ್ಯ ಸಚಿವರು ಎಂಬಂತೆ ಮಾತನಾಡುತ್ತಿದ್ದಾರೆ. ಮಾಧ್ಯಮಗಳು ಕೂಡ ಸುಧಾಕರ್ ಅವರನ್ನೇ ಹೀರೋ ಎಂದು ಬಿಂಬಿಸುತ್ತಿವೆ. ಇದು ಶ್ರೀರಾಮುಲು ಸೇರಿದಂತೆ ಇತರೆ ಸಚಿವರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಕಾರ್ಯಪಡೆಯಲ್ಲೂ ಹಿರಿಯ ಸಚಿವರ ಕಡೆಗಣನೆ
ಕರೋನಾ ಕುರಿತಂತೆ ದೈನಂದಿನ ಬೆಳವಣಿಗೆಗಳನ್ನು ಪರಿಶೀಲಿಸಿ ತಕ್ಷಣ ನಿರ್ಣಯ ಕೈಗೊಳ್ಳಲು ಮತ್ತು ದಿನಕ್ಕೆರಡು ಬಾರಿ ಕೊರೊನಾ ಕುರಿತಂತೆ ಬುಲೆಟಿನ್ ಬಿಡುಗಡೆ ಮಾಡಲು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರ ನೇತೃತ್ವದಲ್ಲಿ ಕಾರ್ಯಪಡೆಯೊಂದನ್ನು ರಚಿಸಲಾಗಿದೆ. ಈ ಕಾರ್ಯಪಡೆಯಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿದ್ದಾರೆ. ಜತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯೂ ಇದ್ದಾರೆ. ಶ್ರೀರಾಮುಲು ಮತ್ತು ಸುಧಾಕರ್ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಚಿವರಾದರೆ, ಇಲ್ಲಿ ಗೃಹ ಇಲಾಖೆಗೂ ಪ್ರಮುಖ ಪಾತ್ರ ಇರುವುದರಿಂದ ಬಸವರಾಜ ಬೊಮ್ಮಾಯಿ ಅವರಿಗೆ ಸ್ಥಾನ ಕಲ್ಪಿಸಲಾಗಿದೆ. ಇನ್ನು ವೃತ್ತಿಯಲ್ಲಿ ವೈದ್ಯರಾಗಿರುವುದರಿಂದ ಡಾ. ಅಶ್ವತ್ಥನಾರಾಯಣ ಅವರನ್ನು ಸೇರಿಸಿಕೊಳ್ಳಲಾಗಿದೆ. ಆದರೆ, ಇತರೆ ಸಚಿವರನ್ನು ಕಡೆಗಣಿಸಿರುವುದು ಹಲವರಿಗೆ ಬೇಸರ ತಂದಿದೆ. ಕನಿಷ್ಠ ಕೊರೊನಾ ವೈರಸ್ ಕಾಣಿಸಿಕೊಂಡಿರುವ ಮತ್ತು ಈ ವಿಚಾರದಲ್ಲಿ ತೀವ್ರ ನಿಗಾ ಇಟ್ಟಿರುವ ಜಿಲ್ಲೆಗಳ ಉಸ್ತುವಾರಿಗಳಾಗಿರುವ ಸಚಿವರನ್ನಾದರೂ ಕಾರ್ಯಪಡೆಗೆ ನೇಮಕ ಮಾಡಬೇಕಿತ್ತು ಎಂಬುದು ಬಹುತೇಕ ಸಚಿವರ ಅಭಿಪ್ರಾಯವಾಗಿದೆ.
ಮೈತ್ರಿ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿರಿಯರನ್ನು ಕಡೆಗಣಿಸಿ ಡಾ.ಅಶ್ವತ್ಥನಾರಾಯಣ ಮತ್ತು ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿ ಮಾಡಿದಾಗಲೇ ಅಸಮಾಧಾನ ಕಾಣಿಸಿಕೊಂಡಿತ್ತು. ನಂತರದಲ್ಲಿಯೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಿರಿಯ ಸಚಿವರನ್ನು ಹೆಚ್ಚು ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ. ಬೆಂಗಳೂರು ನಗರಕ್ಕೆ ಸಂಬಂಧಿಸಿದ ಬಹುತೇಕ ಸಭೆಗಳು ಡಾ.ಅಶ್ವತ್ಥನಾರಾಯಣ ನೇತೃತ್ವದಲ್ಲೇ ನಡೆಯುತ್ತಿದ್ದವೇ ಹೊರತು ಬೆಂಗಳೂರಿನಿಂದಲೇ ಆಯ್ಕೆಯಾಗಿರುವ ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ, ಸುರೇಶ್ ಕುಮಾರ್ ಅವರಿಗೆ ಆದ್ಯತೆ ಸಿಕ್ಕಿರಲಿಲ್ಲ. ಬೆಂಗಳೂರು ಮಾತ್ರವಲ್ಲದೆ, ಇತರೆ ಜಿಲ್ಲೆಗಳಲ್ಲೂ ಅಶ್ವತ್ಥನಾರಾಯಣ್ ಅವರು ಅಗತ್ಯಕ್ಕಿಂತ ಹೆಚ್ಚು ಮೂಗು ತೂರಿಸುತ್ತಿದ್ದರು. ಇದು ಬೆಂಗಳೂರನ್ನು ಪ್ರತಿನಿಧಿಸುತ್ತಿರುವ ಸಚಿವರಿಗೆ ಇರುಸು-ಮುರುಸು ಉಂಟುಮಾಡಿತ್ತು. ಇದೀಗ ರಾಜ್ಯವನ್ನು ವ್ಯಾಪಿಸುತ್ತಿರುವ ಕರೋನಾ ವಿಚಾರದಲ್ಲೂ ಕಾರ್ಯಪಡೆ ರಚಿಸುವಾಗ ಆರೋಗ್ಯ ಸಚಿವರು ಮತ್ತು ಗೃಹ ಸಚಿವರನ್ನು ಹೊರತುಪಡಿಸಿದರೆ ಹೊಸದಾಗಿ ಬಂದಿರುವ ಸುಧಾಕರ್ ಮತ್ತು ಈಗಾಗಲೇ ತಮ್ಮದಲ್ಲದ ವಿಚಾರಗಳಿಗೆ ಮೂಗು ತೂರಿಸುತ್ತಿರುವ ಡಾ.ಅಶ್ವತ್ಥನಾರಾಯಣ್ ಅವರನ್ನು ಮಾತ್ರ ಆಯ್ಕೆ ಮಾಡಿ ಹಿರಿಯರನ್ನು ದೂರ ಇಟ್ಟಿರುವುದು ಬಹುತೇಕ ಸಚಿವರ ಬೇಸರಕ್ಕೆ ಕಾರಣವಾಗಿದೆ.

ಕರೋನಾ ಸೋಂಕು ರಾಜ್ಯಾದ್ಯಂತ ವ್ಯಾಪಿಸುತ್ತಿದೆ ಎಂಬುದು ಗಮನಕ್ಕೆ ಬರುತ್ತಿದ್ದಂತೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಎದುರಾಗಬಹುದಾದ ಅಪಾಯವನ್ನೂ ಲೆಕ್ಕಿಸದೆ ಕಲಬುರ್ಗಿ, ಮಂಗಳೂರು, ಶಿವಮೊಗ್ಗ, ಮೈಸೂರು, ಶಿವಮೊಗ್ಗ ಮುಂತಾದ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ, ಸುಧಾಕರ್ ಅವರು ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ದೈನಂದಿನ ಮಾಹಿತಿಗಳನ್ನು ಮಾಧ್ಯಮಗಳಿಗೆ ನೀಡುತ್ತಿದ್ದಾರೆಯೇ ಹೊರತು ಹೆಚ್ಚೇನೂ ಕೆಲಸ ಮಾಡುತ್ತಿಲ್ಲ. ಆದರೂ ಅವರಿಗೆ ಅಗತ್ಯಕ್ಕಿಂತ ಹೆಚ್ಚು ಪ್ರಾಧಾನ್ಯತೆ ನೀಡುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಡೆಯೇ ಇತರೆ ಸಚಿವರ ಬೇಸರಕ್ಕೆ ಕಾರಣ. ಹೀಗಾಗಿ ತಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಪರಿಸ್ಥಿತಿ ಏನಿದೆ ಎಂಬುದನ್ನು ತಿಳಿದುಕೊಳ್ಳುವ ಕೆಲಸಕ್ಕೂ ಸಚಿವರು ಆಸಕ್ತಿ ತೋರಿಸುತ್ತಿಲ್ಲ.
ಆಡಳಿತದ ಮೇಲೆ ಪ್ರತೀಕೂಲ ಪರಿಣಾಮ
ಸಚಿವ ಸಂಪುಟ ರಚನೆ, ಸಂಪುಟ ವಿಸ್ತರಣೆ ವೇಳೆಯೇ ಸಾಕಷ್ಟು ಮಂದಿ ಆಕಾಂಕ್ಷಿಗಳಿಗೆ, ಅದರಲ್ಲೂ ಹಿರಿಯರಿಗೆ ಅವಕಾಶ ಸಿಗದೆ ಅಸಮಾಧಾನ ಸ್ಫೋಟಗೊಂಡಿತ್ತು. ನಂತರದಲ್ಲಿ ಹಿರಿಯ ಸಚಿವರನ್ನು ಕಡೆಗಣಿಸಿದ ಆರೋಪ ಕೇಳಿಬಂದಿತ್ತು. ಇದೀಗ ಕರೋನಾ ಸೋಂಕಿನ ವಿಚಾರದಲ್ಲೂ ಹಿರಿಯರನ್ನು ದೂರ ಇಟ್ಟಿರುವ ಬಗ್ಗೆ ಬೇಸರ ವ್ಯಕ್ತವಾಗಿದೆ. ಇದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುರ್ಚಿಗೆ ಯಾವುದೇ ಸಂಚಕಾರ ಬರಲಾರದು. ಏಕೆಂದರೆ, ಯಡಿಯೂರಪ್ಪ ಕುರ್ಚಿಗೆ ಸಂಚಕಾರ ಬಂದರೆ ಸರ್ಕಾರವೇ ಉರುಳುವ ಆತಂಕವಿದೆ. ಹೀಗಾಗಿ ಆಡಳಿತ ಪಕ್ಷದಲ್ಲಿ ಇರುವ ಅವಕಾಶವನ್ನು ಕಳೆದುಕೊಳ್ಳಲು ಶಾಸಕರು ಇಷ್ಟಪಡುವುದಿಲ್ಲ. ಹೀಗಾಗಿ ಯಡಿಯೂರಪ್ಪ ಅವರಿಗಾಗಲೀ, ಸರ್ಕಾರಕ್ಕಾಗಲೀ ಯಾವುದೇ ಆಪಾಯ ಇಲ್ಲ. ಆದರೆ, ಸಚಿವರ ನಿರಾಶೆ, ಬೇಸರ ಆಡಳಿತದ ಮೇಲೆ ಪ್ರತೀಕೂಲ ಪರಿಣಾಮ ಬೀರಲಿದ್ದು, ಭವಿಷ್ಯದಲ್ಲಿ ಸರ್ಕಾರ ಸುಸೂತ್ರವಾಗಿ ನಡೆಯಲು ತೊಂದರೆಯಾಗಬಹುದು ಎಂದು ಹೇಳಲಾಗುತ್ತಿದೆ.