ಹೋರಾಟದ ಮೂಲಕವೇ ಪಕ್ಷ ಸಂಘಟಿಸಿದ್ದಲ್ಲದೆ, ತಾವೂ ನಾಯಕರಾಗಿ ಮುಖ್ಯಮಂತ್ರಿ ಅಧಿಕಾರಕ್ಕೇರಿರುವ ಬಿ.ಎಸ್.ಯಡಿಯೂರಪ್ಪ ಅವರಿಗೆ ಯಾವುದೂ ಸುಲಭವಾಗಿ ಕೈಗೂಡಿಲ್ಲ. ಸುಮಾರು ಮೂರು ದಶಕಗಳ ಹೋರಾಟದ ಬಳಿಕ ಮುಖ್ಯಮಂತ್ರಿಯ ಅಧಿಕಾರ ಗಿಟ್ಟಿಸಿಕೊಂಡ ಯಡಿಯೂರಪ್ಪ ಅವರು, 2019ರ ಜುಲೈನಲ್ಲಿ ನಾಲ್ಕನೇ ಬಾರಿ ಮುಖ್ಯಮಂತ್ರಿಯಾದರು. ಈ ಅವಧಿಯಲ್ಲಿ ಸಂಪುಟ ರಚನೆಯಿಂದ ಹಿಡಿದು ಇದುವರೆಗೆ ಯಾವುದೂ ಅವರಿಗೆ ಸುಲಭವಾಗಿ ಆಗಲಿಲ್ಲ. ಹಲವು ಡರು-ತೊಡರುಗಳ ಮಧ್ಯೆ ಸಂಪುಟ ರಚನೆ ಮತ್ತು ವಿಸ್ತರಣೆಯಲ್ಲಿ ಸಾಕಷ್ಟು ವಿಳಂಬವಾಗಿತ್ತು. ಇದೀಗ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ವಿಚಾರದಲ್ಲೂ ಅದೇ ರೀತಿಯ ಅಡ್ಡಿ ಎದುರಾಗಿದ್ದು, ಸದ್ಯಕ್ಕಂತೂ ಈ ಕೆಲಸ ಆಗುವ ಲಕ್ಷಣ ಕಾಣಿಸುತ್ತಿಲ್ಲ. ಇದರಿಂದ ಸಚಿವಾಕಾಂಕ್ಷಿಗಳಿಗೆ ಬೇಸರದ ಜತೆಗೆ ಯಡಿಯೂರಪ್ಪ ಅವರಿಗೆ ಅಂದುಕೊಂಡಂತೆ ಯಾವುದೇ ಕೆಲಸಗಳು ಸಾಗುತ್ತಿಲ್ಲವಲ್ಲ ಎಂಬ ಚಿಂತೆ ಕಾಡುವಂತಾಗಿದೆ.
ಹೌದು, 2019ರ ಜುಲೈ ತಿಂಗಳಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರೂ ಸಚಿವ ಸಂಪುಟ ರಚನೆಯಾಗಿದ್ದು ಸುಮಾರು ಒಂದು ತಿಂಗಳ ನಂತರ. ನಂತರ ಉಪಚುನಾವಣೆ ನಡೆದು ಹೊಸದಾಗಿ ಆಯ್ಕೆಯಾದವರನ್ನು ಒಂದು ದಿನದಲ್ಲಿ ಸಚಿವರನ್ನಾಗಿ ಮಾಡುತ್ತೇನೆ ಎಂದು ಯಡಿಯೂರಪ್ಪ ಘೋಷಿಸಿದ್ದರೂ ಈ ಕಾರ್ಯ ಕೈಗೂಡಲು ಎರಡು ತಿಂಗಳು ಕಾಯಬೇಕಾಗಿ ಬಂದಿತ್ತು. ಇದೀಗ ವಿಧಾನ ಮಂಡಲ ಅಧಿವೇಶನ ಮುಗಿಯುತ್ತಿದ್ದಂತೆ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ಮಾಡುತ್ತೇನೆ. ಬಿಜೆಪಿಯ ಮೂವರಿಗೆ ಸಚಿವ ಸ್ಥಾನ ನೀಡುತ್ತೇನೆ ಎಂದು ಅವರು ಹೇಳಿದ್ದಾರಾದರೂ ಸದ್ಯದ ಪರಿಸ್ಥಿತಿಯಲ್ಲಿ ಸಂಪುಟ ವಿಸ್ತರಣೆಯಾಗುವ ಯಾವುದೇ ಸಾಧ್ಯತೆಗಳು ಕಂಡುಬರುತ್ತಿಲ್ಲ.
ಏಕೋ ಈ ವಿಚಾರದಲ್ಲಿ ಯಡಿಯೂರಪ್ಪ ಅವರಿಗೆ ಅದೃಷ್ಟ ಕೂಡಿ ಬರುತ್ತಿಲ್ಲ ಎನಿಸುತ್ತದೆ. ಏಕೆಂದರೆ, 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗಳಿಸಿ ಬಹುಮತಕ್ಕೆ ಹತ್ತಿರ ಬಂದಿದ್ದರೂ ಒಂಬತ್ತು ಸ್ಥಾನಗಳ ಕೊರತೆ ಎದುರಾಗಿತ್ತು. ಬಹುಮತ ಇಲ್ಲದೇ ಇದ್ದರೂ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ನಂತರ ಬಹುಮತ ಸಾಬೀತುಪಡಿಸಲಾಗದೆ ಮೂರೇ ದಿನಕ್ಕೆ ರಾಜೀನಾಮೆ ನೀಡಿದರು. ಇದಾದ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಈ ಸರ್ಕಾರ ಬಂದಾಗಿನಿಂದಲೂ ಅದನ್ನು ಉರುಳಿಸಲು ನಾನಾ ರೀತಿಯ ಪ್ರಯತ್ನ ನಡೆಸಿದರು. ಸುಮಾರು ಒಂದೂಕಾಲು ವರ್ಷದ ಬಳಿಕ ಈ ಪ್ರಯತ್ನ ಫಲ ನೀಡಿ ಮೈತ್ರಿ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯೂ ಆದರು. ಆದರೆ, ಮುಖ್ಯಮಂತ್ರಿಯಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪಟ್ಟ ಪಡಿಪಾಟಲಿಗಿಂತ ಹೆಚ್ಚಿನ ತೊಂದರೆಗಳನ್ನು ಸಂಪುಟ ರಚನೆ ಮತ್ತು ವಿಸ್ತರಣೆಯಲ್ಲಿ ಎದುರಿಸಬೇಕಾಯಿತು.
2019ರ ಜುಲೈ ತಿಂಗಳಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ, ಆಗ ರಾಜ್ಯವನ್ನು ಭೀಕರ ನೆರೆ ಹಾವಳಿ ಕಾಡುತ್ತಿತ್ತು. ಹೀಗಾಗಿ ಸಂಪುಟ ರಚನೆ ಮಾಡುವ ಕುರಿತು ಹೈಕಮಾಂಡ್ ಜತೆ ಚರ್ಚಿಸಲೂ ಸಮಯವಿಲ್ಲದಂತೆ ನೆರೆ ಸಂತ್ರಸ್ತರ ನೆರವಿಗೆ ಧಾವಿಸಬೇಕಾಯಿತು. ಏಕಾಂಗಿಯಾಗಿ ರಾಜ್ಯ ಸುತ್ತಿ ನೆರೆ ಪರಿಹಾರ ಕಾರ್ಯಗಳ ಉಸ್ತುವಾರಿ ವಹಿಸಿಕೊಂಡರು. ನೆರೆ ಪರಿಸ್ಥಿತಿ ತಹಬದಿಗೆ ಬಂದು ಹೈಕಮಾಂಡ್ ಜತೆ ಚರ್ಚಿಸಿ ಸಂಪುಟ ರಚನೆ ಮಾಡುವ ವೇಳೆಗೆ ಮುಖ್ಯಮಂತ್ರಿಯಾಗಿ ಒಂದು ತಿಂಗಳು ಕಳೆದಿತ್ತು. ನಂತರ ಖಾತೆಗಳ ಹಂಚಿಕೆ, ಉಪ ಮುಖ್ಯಮಂತ್ರಿಗಳ ನೇಮಕ ವಿಚಾರದಲ್ಲೂ ಸಾಕಷ್ಟು ಗೊಂದಲಗಳು ಕಾಣಿಸಿಕೊಂಡವು. ಅದೆಲ್ಲವನ್ನೂ ನಿಭಾಯಿಸಿದ ಯಡಿಯೂರಪ್ಪ ಅವರು 15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಇನ್ನು ತಮ್ಮನ್ನು ಹಿಡಿಯುವವರು ಯಾರೂ ಇಲ್ಲ ಎಂಬಂತಾದರು. ಆದರೆ, ಆಗಲೂ ಅವರಿಗೆ ತೊಂದರೆಗಳು ಎದುರಾದವು. ಉಪ ಚುನಾವಣೆ ಫಲಿತಾಂಶ ಬಂದ ಮಾರನೇ ದಿನವೇ ಗೆದ್ದವರನ್ನು ಸಚಿವರನ್ನಾಗಿ ಮಾಡುತ್ತೇನೆ ಎಂದು ಘೋಷಿಸಿದ್ದ ಯಡಿಯೂರಪ್ಪ ಅದನ್ನು ಈಡೇರಿಸಲು ಸಾಧ್ಯವಾಗಲೇ ಇಲ್ಲ. ಇದರ ಪರಿಣಾಮ ಸುಮಾರು ಎರಡು ತಿಂಗಳ ಕಾಲ ಸಾಕಷ್ಟು ಮುಜುಗರ ಅನುಭವಿಸಬೇಕಾಯಿತು. ಜಾರ್ಖಂಡ್ ಚುನಾವಣೆ ಸೇರಿದಂತೆ ನಾನಾ ಕಾರಣಗಳಿಂದ ಹೈಕಮಾಂಡ್ ನಾಯಕರ ಜತೆ ಮಾತನಾಡಲು ಅವಕಾಶವೇ ಸಿಗಲಿಲ್ಲ. ಕೊನೆಗೆ ಎರಡು ತಿಂಗಳ ನಂತರ ಕಾಲ ಕೂಡಿ ಬಂತು.
ಈಗ ಸಂಪುಟ ವಿಸ್ತರಣೆಗೆ ಕರೋನಾ ಸೋಂಕು ಅಡ್ಡಿ
ಸಂಪುಟ ವಿಸ್ತರಣೆ ವೇಳೆ ಬಿಜೆಪಿಯಿಂದ ಯಾರನ್ನು ಸಚಿವರನ್ನಾಗಿ ನೇಮಿಸಬೇಕು ಎಂಬ ವಿಚಾರದಲ್ಲಿ ಉದ್ಭವವಾಗ ಗೊಂದಲ ಮೂಲ ಬಿಜೆಪಿ ಶಾಸಕರಾರೂ ಸಚಿವರಾಗಿ ಅಧಿಕಾರ ಸ್ವೀಕರಿಸದಂತೆ ಮಾಡಿತು. ಇದರಿಂದ ಪಕ್ಷದಲ್ಲಿ ತೀವ್ರ ಅಸಮಾಧಾನ ಕಾಣಿಸಿಕೊಂಡಿತ್ತು. ಈ ವೇಳೆ ಭರವಸೆ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ವಿಧಾನಮಂಡಲ ಅಧಿವೇಶನ ಮುಗಿದ ಬಳಿಕ (ಮಾರ್ಚ್ 31ರ ನಂತರ) ಸಂಪುಟ ವಿಸ್ತರಣೆ ಮಾಡಲಾಗುವುದು. ಉಮೇಶ್ ಕತ್ತಿ ಸೇರಿದಂತೆ ಮೂಲ ಬಿಜೆಪಿಯ ಮೂವರು ಶಾಸಕರಿಗೆ ಸಂಪುಟದಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದ್ದರು. ಹೀಗಾಗಿ ಮಾರ್ಚ್ ಆರಂಭದಿಂದಲೇ ಎರಡು ಸಚಿವ ಸ್ಥಾನಗಳಿಗೆ ಸಾಕಷ್ಟು ಪೈಪೋಟಿ, ಲಾಬಿ ಶುರುವಾಗಿತ್ತು.
ಆದರೆ, ವಿಶ್ವವನ್ನೇ ತಲ್ಲಣಗೊಳಿಸಿರುವ ಕರೋನಾ ಸೋಂಕು ಸಚಿವ ಸಂಪುಟ ವಿಸ್ತರಣೆ ಮೇಲೂ ತನ್ನ ಕರಿನೆರಳು ಬೀರಿದೆ. ಮುಖ್ಯಮಂತ್ರಿಯಾದಿಯಾಗಿ ಎಲ್ಲಾ ಸಚಿವರು, ಸರ್ಕಾರ ಕರೋನಾ ಸೋಂಕು ನಿಯಂತ್ರಣದ ಕೆಲಸದಲ್ಲಿ ನಿರತವಾಗಿದೆ. ಸದ್ಯಕ್ಕಂತೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರೋನಾ ನಿಯಂತ್ರಣ ಕೆಲಸದಿಂದ ಹೊರಬಂದು ಸಂಪುಟ ವಿಸ್ತರಣೆ ಕುರಿತು ಯೋಚಿಸುವ ಸ್ಥಿತಿಯಲ್ಲಿ ಇಲ್ಲ. ಇನ್ನೊಂದೆಡೆ ಇಡೀ ದೇಶವೇ ಕರೋನಾ ವಿರುದ್ಧ ಸಮರ ಸಾರಿರುವುದರಿಂದ ಬಿಜೆಪಿ ರಾಷ್ಟ್ರೀಯ ನಾಯಕರಿಗೂ ಸಂಪುಟ ವಿಸ್ತರಣೆ ಕುರಿತು ಯೋಚಿಸುವ ಪುರುಸೋತ್ತು ಇಲ್ಲ.
ಇನ್ನೊಂದೆಡೆ ಕರೋನಾ ಸೋಂಕು ರಾಜದ್ಯದಲ್ಲಿ ಹರಡಲಾರಂಭಿಸಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಸಚಿವಾಕಾಂಕ್ಷಿಗಳಲ್ಲಾಗಲೀ, ಬಿಜೆಪಿಯಲ್ಲಾಗಲೂ ಯಾವುದೇ ಸದ್ದು ಕೇಳಿಸುತ್ತಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವಾಕಾಂಕ್ಷಿಯೊಬ್ಬರು, ಸದ್ಯಕ್ಕಂತೂ ಸಂಪುಟ ವಿಸ್ತರಣೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಕರೋನಾ ಸೋಂಕು ನಿಯಂತ್ರಣಕ್ಕೆ ಬಂದರೂ ಮುಖ್ಯಮಂತ್ರಿಯಾಗಲಿ, ಹೈಕಮಾಂಡ್ ನಾಯಕರಾಗಲಿ ಈ ಬಗ್ಗೆ ತಲೆಕೆಡಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಏಪ್ರೀಲ್ ಮೊದಲ ವಾರದೊಳಗೆ ಕರೋನಾ ಸಂಪೂರ್ಣ ನಿಯಂತ್ರಣಕ್ಕೆ ಬಂದರೆ ಏಪ್ರಿಲ್ ಅಂತ್ಯ ಅಥವಾ ಮೇ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆಯಾಗಬಹುದು ಎಂದು ಹೇಳಿದ್ದಾರೆ. ಆದರೆ, ಈ ವಿಚಾರದಲ್ಲಿ ಯಡಿಯೂರಪ್ಪ ಅವರ ಮನಸ್ಸಿನಲ್ಲಿ ಏನಿದೆಯೋ ಯಾರಿಗೆ ಗೊತ್ತು.