ಮಧ್ಯರಾತ್ರಿ ಸಂಸತ್ ಅಧಿವೇಶನ ನಡೆಸಿ ಭಾರಿ ಪ್ರಚಾರದೊಂದಿಗೆ ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯು (ಜಿಎಸ್ಟಿ) ಎರಡೂವರೆ ವರ್ಷ ತುಂಬುವ ಮುನ್ನವೇ ಸಂಪೂರ್ಣ ವಿಫಲಗೊಂಡಿದೆ. ಅದೆಷ್ಟೋ ಬಾರಿ ತೆರಿಗೆ ಸ್ವರೂಪ ಬದಲಾವಣೆ ಕಂಡಿರುವ ಜಿಎಸ್ಟಿ ಮತ್ತೊಂದು ಸುತ್ತಿನ ಆಮೂಲಾಗ್ರಹ ಬದಲಾವಣೆಗೆ ಸಿದ್ದವಾಗುತ್ತಿದೆ. ಮತ್ತು ಉದ್ದೇಶಿತ ಆಮೂಲಾಗ್ರ ಬದಲಾವಣೆಯು ತೆರಿಗೆದಾರರ ಪಾಲಿಗೆ ಭಾರಿ ಹೊರೆಯಾಗಲಿದೆ.
ಡಿಸೆಂಬರ್ 18 ರಂದು ನಡೆಯಲಿರುವ ಜಿಎಸ್ಟಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಜಿಎಸ್ಟಿ ಮಂಡಳಿಯ ಅಧ್ಯಕ್ಷರೂ ಆಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತುತ ಜಿಎಸ್ಟಿ ವ್ಯವಸ್ಥೆಯು ಸತತ ಬದಲಾವಣೆಯಿಂದಾಗಿ ಮೂಲ ಸ್ವರೂಪ ಮತ್ತು ಸಂರಚನೆಯಿಂದ ವಿಮುಖವಾಗಿದೆ ಎಂದು ಹೇಳಿದ್ದಾರೆ. ಇತ್ತ ಜೆಎಸ್ಟಿ ಮಂಡಳಿಯಲ್ಲಿ ಖಾಯಂ ಸದಸ್ಯರಾಗಿರುವ ಎಲ್ಲಾ ರಾಜ್ಯಗಳ ಹಣಕಾಸು ಸಚಿವರು ಸಹ ಆಮೂಲಾಗ್ರ ಬದಲಾವಣೆಗೆ ಒತ್ತಾಯಿಸಿದ್ದಾರೆ.
ಇವರೆಲ್ಲರ ಒತ್ತಾಯಕ್ಕೆ ಮೂಲ ಕಾರಣ ಎಂದರೆ- ಜಿಎಸ್ಟಿ ತೆರಿಗೆ ಜಾರಿಗೆ ತಂದ ನಂತರ ಕೇಂದ್ರ ಸರ್ಕಾರವು ರಾಜ್ಯಸರ್ಕಾರಗಳಿಗೆ ನೀಡಬೇಕಾದ ಪರಿಹಾರ ರೂಪದ ತೆರಿಗೆಯನ್ನು ಸಕಾಲದಲ್ಲಿ ಪಾವತಿಸುತ್ತಿಲ್ಲ. ಈಗಾಗಲೇ ಆರ್ಥಿಕ ಸಂಪನ್ಮೂಲ ಕೊರತೆ ಎದುರಿಸುತ್ತಿರುವ ರಾಜ್ಯ ಸರ್ಕಾರಗಳು ಸಕಾಲದಲ್ಲಿ ಜಿಎಸ್ಟಿ ತೆರಿಗೆ ಪರಿಹಾರ ಪಾವತಿಸುವಂತೆ ಒತ್ತಾಯಿಸುತ್ತಿವೆ.
ಜಿಎಸ್ಟಿ ವೈಫಲ್ಯ ಹೇಗೆ?
ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇ ತೆರಿಗೆ ಪದ್ಧತಿಯನ್ನು ಸರಳಗೊಳಿಸುವ ಮತ್ತು ತೆರಿಗೆ ಸಂಗ್ರಹವನ್ನು ಹೆಚ್ಚಿಸುವ ಉದ್ದೇಶದಿಂದ. ಈಗ ಉಭಯ ಉದ್ದೇಶಗಳೂ ಈಡೇರಿದಂತಿಲ್ಲ. ಆರಂಭದಲ್ಲಿದ್ದ ಅರ್ಧ ಡಜನ್ ತೆರಿಗೆ ಹಂತಗಳನ್ನು ಈಗ ನಾಲ್ಕಕ್ಕೆ ತಗ್ಗಿಸಲಾಗಿದ್ದರೂ ಪ್ರಮುಖ ತೆರಿಗೆ ಆದಾಯ ಮೂಲವಾಗಿರುವ ಪೆಟ್ರೋಲ್, ಡಿಸೇಲ್ ಸೇರಿದಂತೆ ಪೆಟ್ರೋಲಿಂಯ ಉತ್ಪನ್ನಗಳು ಹಾಗೂ ಮದ್ಯಪಾನೀಯಗಳು ಜೆಎಸ್ಟಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದಿವೆ. ನೂತನ ತೆರಿಗೆ ವ್ಯವಸ್ಥೆಯಡಿ ನಿರೀಕ್ಷಿತ ತೆರಿಗೆ ಆದಾಯ ಸಂಗ್ರಹವಾಗುತ್ತಿಲ್ಲ. ಇದು ರಾಜ್ಯಗಳ ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿದೆ.
ಈ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ನಾಲ್ಕು ಹಂತಗಳನ್ನು ರದ್ದು ಮಾಡಿ ಕೇವಲ ಮೂರು ಹಂತದ ತೆರಿಗೆ ಸ್ವರೂಪವನ್ನು ಜಾರಿಗೆ ತರಬೇಕು ಎಂಬುದು ಬಹುತೇಕ ರಾಜ್ಯಗಳ ಒತ್ತಾಯವಾಗಿದೆ.
ಅಂದರೆ ಈಗ ಇರುವ ಶೇ.5ರಷ್ಟು ತೆರಿಗೆ ದರವನ್ನು ಶೇ.8ಕ್ಕೆ ಏರಿಸಬೇಕು ಮತ್ತು ಶೇ.12ರಷ್ಟು ಇರುವ ತೆರಿಗೆ ಹಂತವನ್ನು ಶೇ.18ರ ಹಂತದೊಂದಿಗೆ ವಿಲೀನಗೊಳಿಸಿ ಶೇ.18ರ ಹಂತದ ತೆರಿಗೆಯನ್ನು ಉಳಿಸಿಕೊಂಡು ಹೋಗಬೇಕು ಮತ್ತು ಶೇ.28ರಷ್ಟು ಇರುವ ತೆರಿಗೆ ಹಂತವನ್ನು ಮುಂದುವರೆಸಿಕೊಂಡು ಹೋಗಬೇಕು ಎಂಬುದು ಜಿಎಸ್ಟಿ ಮಂಡಳಿ ಮುಂದಿಡಲಾಗಿರುವ ಪ್ರಸ್ತಾಪವಾಗಿದೆ. ಅಂದರೆ ಉದ್ದೇಶಿತ ತೆರಿಗೆ ಸ್ವರೂಪ ಬದಲಾವಣೆಯನ್ನು ಒಪ್ಪಿಕೊಂಡರೆ ಜಿಎಸ್ಟಿ ವ್ಯಾಪ್ತಿಯಲ್ಲಿ ಉಳಿಯುವುದು ಕೇವಲ ಮೂರು ಹಂತಗಳು- ಶೇ.8, ಶೇ.18 ಮತ್ತು ಶೇ.28.
ಬದಲಾವಣೆಗೆ ತರಾತುರಿ ಏಕೆ?
ಜಿಎಸ್ಟಿ ತೆರಿಗೆ ವ್ಯವಸ್ಥೆಯನ್ನು ನರೇಂದ್ರ ಮೋದಿ ಸರ್ಕಾರವು ಎಷ್ಟು ತರಾತುರಿಯಲ್ಲಿ ಜಾರಿಗೆ ತಂದಿದೆಯೋ ಅಷ್ಟೇ ತರಾತುರಿಯಲ್ಲಿ ಬದಲಾವಣೆ ಮಾಡುವಂತೆ ರಾಜ್ಯ ಸರ್ಕಾರಗಳು ಒತ್ತಡ ಹೇರುತ್ತಿವೆ. ಇದರಿಂದ ರಾಜ್ಯಗಳ ತೆರಿಗೆ ಮೂಲದ ಸಂಪನ್ಮೂಲ ಹೆಚ್ಚಳವಾಗಬಹುದು. ಆದರೆ, ಬದಲಾವಣೆಯು ತೆರಿಗೆದಾರರ ಪಾಲಿಗೆ ಭಾರಿ ಹೊರೆಯಾಗಲಿದೆ. ಒಂದು ವೇಳೆ ಹಾಲಿ ಇರುವ ತೆರಿಗೆ ಸ್ವರೂಪವು ಪರಿಷ್ಕೃತಗೊಂಡರೆ ಶೇ.5ರ ಬದಲಿಗೆ ಶೇ.8ರಷ್ಟು ಮತ್ತು ಶೇ.12ರ ಬದಲಿಗೆ ಶೇ.18ರಷ್ಟು ತೆರಿಗೆಯನ್ನು ಗ್ರಾಹಕರು ಪಾವತಿಸಬೇಕಾಗುತ್ತದೆ.
ಶೂನ್ಯ ತೆರಿಗೆ ವ್ಯಾಪ್ತಿಯಲ್ಲಿರುವ ಕಚ್ಚಾ ರೇಷ್ಮೆ, ದುಬಾರಿ ಆರೋಗ್ಯ ಸೇವೆ ಮತ್ತಿತರ ಸರಕು ಮತ್ತು ಸೇವೆಗಳನ್ನು ತೆರಿಗೆ ವ್ಯಾಪ್ತಿಗೆ ತರಬೇಕು, ಪ್ರಸ್ತುತ ಶೇ.5ರ ವ್ಯಾಪ್ತಿಯಲ್ಲಿರುವ ಬ್ರಾಂಡೆಡ್ ಸಿರಿಧಾನ್ಯಗಳು, ಪಿಜ್ಜಾ, ರೆಸ್ಟೋರೆಂಟ್, ಕ್ರೂಸ್ ಷಿಪ್ಪಿಂಗ್, ಮೊದಲ ಮತ್ತು ಎರಡನೇ ದರ್ಜೆ ರೈಲು ಪ್ರಯಾಣ, ಆಲಿವ್ ಆಯಿಲ್, ಕೆಂಪು ಉಪ್ಪು, ಶುದ್ಧ ರೇಷ್ಮೆ,ನಾರು ಹತ್ತಿ ಮತ್ತಿತರ ವಸ್ತುಗಳನ್ನು ಶೇ.12ರ ಹಂತಕ್ಕೆ ವರ್ಗಾಹಿಸಬೇಕು (ಪರಿಷ್ಕೃತಗೊಂಡಾಗ ಸಹಜವಾಗಿಯೇ ಶೇ.18ರ ಹಂತಕ್ಕೆ ಸೇರ್ಪಡೆಗೊಳ್ಳುತ್ತವೆ) ಮೊಬೈಲ್ ಫೋನ್, ರಾಜ್ಯ ಸರ್ಕಾರಗಳ ಲಾಟರಿ, ದುಬಾರಿ ಮತ್ತು ಐಷಾರಾಮಿ ಹೋಟೆಲ್ ವಸತಿ, ಬ್ಯೂಸಿನೆಸ್ ಮತ್ತು ಫಸ್ಟ್ ಕ್ಲಾಸ್ ವಿಮಾನ ಪ್ರಯಾಣ, ದುಬಾರಿ ಕಲಾಕೃತಿಗಳನ್ನು ಹಾಲಿ ಶೇ.12ರಿಂದ ಶೇ.18ಕ್ಕೆ ವರ್ಗಾಹಿಸಬೇಕು ಎಂದು ಸಲಹೆ ನೀಡಲಾಗಿದೆ.
ಪರಿಷ್ಕರಣೆ ಪ್ರಸ್ತಾಪಕ್ಕೆ ಮುಖ್ಯ ಕಾರಣವೇನು?
ಜಿಎಸ್ಟಿ ಜಾರಿಗೆ ತರುವ ಮುನ್ನ ಇದ್ದ ಒಟ್ಟಾರೆ ಸರಾಸರಿ ತೆರಿಗೆ ದರವು ಶೇ.14.5-15 ರಷ್ಟಿತ್ತು. ಆ ತೆರಿಗೆ ದರವನ್ನು ‘ಆದಾಯ ತಟಸ್ಥ ದರ’ವೆಂದು ಪರಿಗಣಿಸಿ, ಆ ದರದಲ್ಲೇ ತೆರಿಗೆ ಸಂಗ್ರಹ ಮಾಡುವ ಉದ್ದೇಶ ಇತ್ತು. ತರಾತುರಿಯಲ್ಲಿ ಜಾರಿಗೆ ಬಂದ ಜಿಎಸ್ಟಿಯ ಲೋಪದೋಷಗಳನ್ನು ನಿವಾರಿಸುವ ಬದಲು, ಚುನಾವಣೆಗಳು ಬಂದಾಗಲೆಲ್ಲ ತೆರಿಗೆ ವ್ಯಾಪ್ತಿಯಲ್ಲಿದ್ದ ವಸ್ತುಗಳನ್ನು ಹೊರಗಿಡುವ ಕೇಂದ್ರ ಸರ್ಕಾರದ ಪ್ರವೃತ್ತಿಯಿಂದಾಗಿ ಜಿಎಸ್ಟಿಯ ಮೂಲ ತೆರಿಗೆ ಸ್ವರೂಪ ಹಾಳಾಯಿತು. ಹೀಗಾಗಿ ಆರಂಭದಲ್ಲಿದ್ದ ಶೇ.15ರ ತಟಸ್ಥ ತೆರಿಗೆ ದರ ಸಂಗ್ರಹದ ಗುರಿಯು ಹಾದಿ ತಪ್ಪಿತು. ಪ್ರಸ್ತುತ ತೆರಿಗೆ ದರವು ಶೇ.11ರಷ್ಟಿದೆ. ಅಂದರೆ, ಜಿಎಸ್ಟಿ ಪೂರ್ವದಲ್ಲಿದ್ದ ತೆರಿಗೆ ದರಕ್ಕೆ ಹೋಲಿಸಿದರೆ ಶೇ.4ರಷ್ಟು ಕಡಮೆ ಇದೆ. ಹೀಗಾಗಿ ಈ ಕೊರತೆಯನ್ನೂ ಕೇಂದ್ರ ಸರ್ಕಾರವೇ ತುಂಬಿಕೊಡಬೇಕು ಎಂಬುದು ರಾಜ್ಯ ಸರ್ಕಾರಗಳ ಒತ್ತಾಯ. ಆದರೆ, ಜಿಎಸ್ಟಿ ಜಾರಿಯಾದಾಗ ಮಾಡಿಕೊಂಡ ಒಡಂಬಡಿಕೆಯಂತೆ ರಾಜ್ಯ ಸರ್ಕಾರಗಳಿಗೆ ವಾರ್ಷಿಕ ಶೇ.14ರಷ್ಟು ಹೆಚ್ಚಳದೊಂದಿಗೆ ನೀಡಬೇಕಾದ ತೆರಿಗೆ ಪರಿಹಾರವನ್ನೇ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಕಾಲದಲ್ಲಿ ನೀಡುತ್ತಿಲ್ಲ. ಹೀಗಾಗಿ ತಟಸ್ಥ ದರಕ್ಕಿಂತ ಕೊರತೆ ಬೀಳುವ ತೆರಿಗೆ ಆದಾಯವನ್ನು ಕೇಂದ್ರದಿಂದ ನಿರೀಕ್ಷಿಸುವುದು ಸಾಧ್ಯವಿಲ್ಲ ಎಂಬುದು ರಾಜ್ಯಗಳಿಗೂ ಅರಿವಾದಂತಿದೆ. ಹೀಗಾಗಿ ತೆರಿಗೆ ಸ್ವರೂಪವನ್ನು ಬದಲಾಯಿಸಿ, ತಟಸ್ಥ ದರಕ್ಕೆ ಪೂರಕವಾಗಿ ತೆರಿಗೆ ನಿಗದಿ ಮಾಡಬೇಕೆನ್ನುವುದು ರಾಜ್ಯಗಳ ಒತ್ತಾಯವಾಗಿದೆ.
ಅಲ್ಲದೇ ಹಣಕಾಸು ಆಯೋಗದ ಮುಖ್ಯಸ್ಥ ಎನ್.ಕೆ. ಸಿಂಗ್ ಅವರು, ಪ್ರಸ್ತುತ ಜಿಡಿಪಿ ಬೆಳವಣಿಗೆಯು ಶೇ.5-6ರ ಆಜುಬಾಜಿನಲ್ಲಿರುವಾಗ ರಾಜ್ಯ ಸರ್ಕಾರಗಳಿಗೆ ನೀಡುವ ತೆರಿಗೆ ಪರಿಹಾರವನ್ನು ವಾರ್ಷಿಕ ಶೇ.14ರ ದರದಲ್ಲಿ ಹೆಚ್ಚಿಸುವುದು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ. ಹೀಗಾಗಿ ಕೇಂದ್ರದಿಂದ ರಾಜ್ಯಗಳು ಹೆಚ್ಚಿನ ಪಾಲು ನಿರೀಕ್ಷಿಸುವಂತೆಯೂ ಇಲ್ಲ. ಅಲ್ಲದೇ ಪ್ರಸ್ತುತ ಉಪಕರ (ಸೆಸ್) ಹೇರಬಹುದಾದ ‘ಸಿನ್ ಗೂಡ್ಸ್’ ಗಳೆಂದು ವರ್ಗೀಕರಿಸಿರುವ ಪಾನೀಯಗಳು, ಧೂಮಪಾನ ಮತ್ತು ಐಷಾರಾಮಿ ಸರಕುಗಳ ಮೇಲೆ ಈಗಾಗಲೇ ಗರಿಷ್ಠ ಪ್ರಮಾಣದಲ್ಲಿ ಉಪಕರ ಹೇರಲಾಗಿದೆ. ಅದನ್ನೂ ಹೆಚ್ಚಿಸುವ ಸ್ಥಿತಿಯಲ್ಲಿ ಇಲ್ಲ.
ತೆರಿಗೆ ಆದಾಯ ಕೊರತೆ ಅನುಭವಿಸುತ್ತಿರುವ ರಾಜ್ಯ ಸರ್ಕಾರಗಳು ತೆರಿಗೆ ಸ್ವರೂಪ ಬದಲಾವಣೆ ಬಯಸಿವೆ. ಆದರೆ, ಪದೇ ಪದೇ ತೆರಿಗೆ ಸ್ವರೂಪ ಬದಲಾಯಿಸುವುದರಿಂದ ಇಡೀ ತೆರಿಗೆ ವ್ಯವಸ್ಥೆಗೆ ಹಾನಿಯಾಗುತ್ತದೆ. ಅದು ಉತ್ಪಾದನೆ, ಸಾಗಣೆ ಮತ್ತು ಹಂಚಿಕೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇಡೀ ತೆರಿಗೆ ವ್ಯವಸ್ಥೆಯನ್ನು ಬದಲಾಯಿಸುವ ಹಂತದಲ್ಲಿ ವಹಿವಾಟು ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಅಪಾಯವೂ ಇದೆ. ಇದು ಪರೋಕ್ಷವಾಗಿ ಒಟ್ಟಾರೆ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 18 ರಂದು ನಡೆಯಲಿರುವ ಜೆಎಸ್ಟಿ ಮಂಡಳಿ ಸಭೆಯು ಆಮೂಲಾಗ್ರವಾಗಿ ಚರ್ಚಿಸಿ ಮತ್ತು ಪೂರ್ವಸಿದ್ಧತೆಯೊಂದಿಗೆ ಪರಿಷ್ಕೃತ ತೆರಿಗೆ ಜಾರಿಮಾಡಲು ಕಾಲಾವಾಕಾಶ ಪಡೆಯುವ ಸಾಧ್ಯತೆ ಇದೆ. ಪರಿಷ್ಕೃತ ತೆರಿಗೆ ವ್ಯವಸ್ಥೆ ಜಾರಿ ಆದ ನಂತರ ಮತ್ತೆ ತೀರಾ ಅನಿವಾರ್ಯ ಪರಿಸ್ಥಿತಿಯ ಹೊರತಾಗಿ ಪದೇ ಪದೇ ಮಾರ್ಪಾಡುಗಳಿಗೆ ಅವಕಾಶ ಇಲ್ಲದಂತೆ ನಿಯಮಜಾರಿ ಮಾಡುವ ನಿರೀಕ್ಷೆ ಇದೆ.