ಸೋಮವಾರದಿಂದ ಆರಂಭವಾಗಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ತಾಲೀಮು ತೀವ್ರಗೊಳಿಸಿದೆ. ವಿಧಾನಸಭೆ ಉಪ ಚುನಾವಣೆಯ ಹೀನಾಯ ಸೋಲು, ನಾಯಕತ್ವ ಬದಲಾವಣೆ ಕುರಿತ ಗೊಂದಲದಿಂದಾಗಿ ಸುಮಾರು ಎರಡು ತಿಂಗಳು ಕೇವಲ ಮಾತಿನ ಟೀಕೆಗಳಿಗಷ್ಟೇ ಸೀಮಿತವಾಗಿದ್ದು ಕಾಂಗ್ರೆಸ್ ಮೈಕೊಡವಿ ಎದ್ದುನಿಂತಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸುವ ಭರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕೀಳು ಟೀಕೆಗಳನ್ನು ಮಾಡಿದ ಬೀದರ್ ಜಿಲ್ಲೆಯ ಶಾಹೀನ್ ಶಾಲೆಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಬೆಂಗಳೂರಿನಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪಕ್ಷದ ಕಾರ್ಯಕರ್ತರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಚೇರಿ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಪ್ರಧಾನಿ ವಿರುದ್ಧ ಟೀಕೆಗಳನ್ನು ಮಾಡಿದ್ದಾರೆ ಎಂಬ ಕಾರಣಕ್ಕೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಉರ್ದು ಶಾಲೆಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಶಾಲೆಯ ಮುಖ್ಯ ಶಿಕ್ಷಕ ಮತ್ತು ವಿದ್ಯಾರ್ಥಿನಿಯೊಬ್ಬರ ಪೋಷಕರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಸದ್ಯ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ವಿವಾದಾತ್ಮಕ ನಾಟಕ ನಡೆದಿರುವುದು ಜನವರಿ 26ರಂದು. ಪ್ರಕರಣ ದಾಖಲಾಗಿರುವುದು ಅದಾಗಿ ಒಂದೆರಡು ದಿನಗಳಲ್ಲಿ. ಅಂದಿನಿಂದ 15 ದಿನ ಕಳೆದರೂ ಎಚ್ಚೆತ್ತುಕೊಳ್ಳದ ಕಾಂಗ್ರೆಸ್, ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿ ಎಡಪಂಥೀಯ ನಾಯಕರು ಶಾಹೀನ್ ಶಾಲೆ ಪರ ದನಿ ಎತ್ತಿದ ನಂತರ ಎಚ್ಚೆತ್ತುಕೊಂಡು ಕಳೆದ ಮೂರು ದಿನಗಳಿಂದ ಹೋರಾಟ ತೀವ್ರಗೊಳಿಸಿರುವುದರಿಂದ ಇದು ಶಾಹೀನ್ ಶಾಲೆ ಪರ, ಸರ್ಕಾರದ ವಿರುದ್ಧ ನಡೆಸುತ್ತಿರುವ ಹೋರಾಟ ಎಂಬುದಕ್ಕಿಂತ ವಿಧಾನಮಂಡಲ ಅಧಿವೇಶನಕ್ಕೆ ತಾಲೀಮು ಎಂದೇ ಹೇಳಬಹುದು.
ಹೌದು, ಕಾಂಗ್ರೆಸ್ಸಿಗೆ ನಿಜವಾಗಿಯೂ ಶಾಹೀನ್ ಶಾಲೆ ಮತ್ತು ಅಲ್ಲಿನ ಮಕ್ಕಳು, ಶಿಕ್ಷಕರ ಬಗ್ಗೆ ಕಾಳಜಿ ಇದ್ದಿದ್ದರೆ ಈಗಾಗಲೇ ಸರ್ಕಾರ ಮತ್ತು ಪೊಲೀಸ್ ಇಲಾಖೆ ವಿರುದ್ಧ ಹೋರಾಟ ತೀವ್ರಗೊಳಿಸಿ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ತರಬಹುದಿತ್ತು. ಏಕೆಂದರೆ, ಬೀದರ್ ಸೇರಿದಂತೆ ಆ ಭಾಗದಲ್ಲಿ ಕಾಂಗ್ರೆಸ್ ಇನ್ನೂ ಶಕ್ತಿ ಉಳಿಸಿಕೊಂಡಿದೆ. ಬೀದರ್ ನಲ್ಲಿ ತೀವ್ರ ಸ್ವರೂಪದ ಹೋರಾಟ ಆರಂಭಿಸಿದ್ದರೆ ಜನರೂ ಜತೆಗೆ ನಿಲ್ಲುತ್ತಿದ್ದರು. ಆದರೆ, ಸ್ಥಳೀಯ ಕೆಲವು ಕಾಂಗ್ರೆಸ್ ನಾಯಕರು ಸೇರಿ ಪ್ರತಿಭಟನೆ ನಡೆಸಿದ್ದು ಬಿಟ್ಟರೆ ರಾಜ್ಯ ಕಾಂಗ್ರೆಸ್ ನಾಯಕರಾರೂ ಪಾಲ್ಗೊಳ್ಳಲಿಲ್ಲ. ಪ್ರಕರಣದಲ್ಲಿ ಬಂಧನಕ್ಕೊಳಗಾದ ಶಾಲಾ ಮುಖ್ಯ ಶಿಕ್ಷಕರು ಮತ್ತು ವಿದ್ಯಾರ್ಥಿನಿಯೊಬ್ಬರ ಪೋಷಕರು ಬಂಧನಕ್ಕೊಳಗಾದಾಗಲೂ ಕಾಂಗ್ರೆಸ್ ನಾಯಕರಿಂದ ಮಾತಿನ ಟೀಕೆ ವ್ಯಕ್ತವಾಯಿತೇ ಹೊರತು ಗಟ್ಟಿಯಾಗಿ ಸರ್ಕಾರದ ಕ್ರಮವನ್ನು ವಿರೋಧಿಸುವ ಕೆಲಸ ಆಗಲಿಲ್ಲ. ಇದರ ಪರಿಣಾಮವೇ ಶಾಹೀನ್ ಶಾಲೆಯ ವಿವಾದ ತೀವ್ರ ಸ್ವರೂಪಕ್ಕೆ ಹೋಗಿ ಶಾಲೆಯ ವಿರುದ್ಧ ಕ್ರಮ ಕೈಗೊಂಡಿದ್ದನ್ನು ವಿರೋಧಿಸುವವರಿಗೆ ಸಮನಾಗಿ ಬೆಂಬಲಿಸುವರ ಸಂಖ್ಯೆಯೂ ಹೆಚ್ಚುವಂತಾಯಿತು. ಹೀಗಾಗಿ ಬೀದರ್ ಬಿಟ್ಟು ಬೆಂಗಳೂರಿನಲ್ಲಿ ಕಾಂಗ್ರೆಸ್ ಹೋರಾಟಕ್ಕಿಳಿಯುವಂತಾಯಿತು.
ಸೋಮವಾರದಿಂದ ಆರಂಭವಾಗುತ್ತಿದೆ ವಿಧಾನಮಂಡಲ ಕಲಾಪ
ಸೋಮವಾರದಿಂದ ವಿಧಾನ ಮಂಡಲದ ಕಲಾಪಗಳು ಆರಂಭವಾಗುತ್ತಿದ್ದು, ಅಧಿವೇಶನದೊಳಗೆ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್ಸಿಗೆ ಸಾಕಷ್ಟು ಅಸ್ತ್ರಗಳು ಇವೆ. ವಿಧಾನಸಭೆಯೊಳಗೆ ನಡೆಸುವ ಹೋರಾಟದೊಂದಿಗೆ ಹೊರಗೂ ಹೋರಾಟಗಳು ನಡೆದರೆ ಆಗ ಅದಕ್ಕೆ ಹೆಚ್ಚಿನ ಬಲ ಬರುತ್ತದೆ. ಈ ಕಾರಣಕ್ಕಾಗಿ ಶಾಹೀನ್ ಶಾಲೆ ಪರ ಹೋರಾಟದ ಮೂಲಕ ವಿಧಾನಸಭೆಯೊಳಗೆ ಸರ್ಕಾರದ ವಿರುದ್ಧ ಮುಗಿಬೀಳಲು ತಾಲೀಮು ನಡೆಸುವುದರೊಂದಿಗೆ ಕಾರ್ಯಕರ್ತರಲ್ಲೂ ಹುಮ್ಮಸ್ಸು ತರಲು ಪಕ್ಷ ಪ್ರಯತ್ನಿಸಿದೆ. ವಿಧಾನಸಭೆಯ ಹೊರಗೆ ಪ್ರತಿಭಟನೆಗಲು ಹೆಚ್ಚಿದರೆ ಆಗ ವಿಧಾನಸಭೆಯೊಳಗೆ ಸರ್ಕಾರದ ವಿರುದ್ಧ ಹೋರಾಟಕ್ಕೆ ಹೆಚ್ಚಿನ ಶಕ್ತಿ ಸಿಗುತ್ತದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ.
ಸೋಮವಾರ ವಿದಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಸೇರಿದಂತೆ ನಾಲ್ಕು ದಿನ ಕಲಾಪಗಳು ನಡೆಯುತ್ತವೆ. ಬಳಿಕ ಮಾರ್ಟ್ 2ರಿಂದ ಮಾ. 31ರವರೆಗೆ ಅಧಿವೇಶನ ನಡೆಯುತ್ತದೆ. ಈ ಅವಧಿಯಲ್ಲಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಶಾಹೀನ್ ಶಾಲೆ ಪ್ರಕರಣ, ಅರಣ್ಯ ಕಾಯ್ದೆ ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಸಚಿವ ಆನಂದ್ ಸಿಂಗ್ ಅವರಿಗೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ನೀಡಿರುವುದು, ರಾಜ್ಯದ ಹಣಕಾಸು ಪರಿಸ್ಥಿತಿ ಸಂಕಷ್ಟದಲ್ಲಿರುವುದು, ನೆರೆ ಪರಿಹಾರ ಕಾರ್ಯದಲ್ಲಿ ಆಗುತ್ತಿರುವ ವಿಳಂಬ, ಸಚಿವ ಸಂಪುಟ ವಿಸ್ತರಣೆ ಗೊಂದಲ… ಹೀಗೆ ಹಲವಾರು ಅಂಶಗಳು ಇವೆ. ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿನಿತ್ಯ ಸದನಕ್ಕೆ ಬಂದರೆ ಸರ್ಕಾರದ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಪರ್ಧೆಗೆ ಬಿದ್ದಂತೆ ಹೋರಾಟ ನಡೆಸುತ್ತದೆ. ಆಗ ಕಾಂಗ್ರೆಸ್ಸಿನ ಹೋರಾಟಕ್ಕೆ ಪ್ರಚಾರ ಕಮ್ಮಿಯಾಗುತ್ತದೆ. ಆದರೆ, ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಿದರೆ ಹೆಚ್ಚಿನ ಪ್ರಚಾರ ಸಿಗುತ್ತದೆ. ಜನರೂ ಅದನ್ನು ಗಂಭೀರವಾಗಿ ಗಮನಿಸುತ್ತಾರೆ.
ಈ ಕಾರಣದಿಂದಲೇ ಕಾಂಗ್ರೆಸ್ ಶಾಹೀನ್ ಶಾಲೆ ವಿರುದ್ಧ ಬೀದಿಗಿಳಿದು ಹೋರಾಟ ಆರಂಭಿಸಿದೆ. ಮುಂದಿನ ದಿನಗಳಲ್ಲಿ (ಅಧಿವೇಶನ ನಡೆಯುವ ಅವಧಿಯಲ್ಲಿ ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ನೀಡಿರುವುದು, ನೆರೆ ಪರಿಹಾರ ವಿಳಂಬ ಸೇರಿದಂತೆ ಸರ್ಕಾರದ ವಿರುದ್ಧ ಇರುವ ಅಸ್ತ್ರಗಳನ್ನು ಬಳಸಿಕೊಂಡು ಬೀದಿ ಹೋರಾಟ ನಡೆಸಲು ಕೂಡ ಕಾಂಗ್ರೆಸ್ ಮುಂದಾಗಿದೆ. ಅದಕ್ಕಾಗಿಯೇ ಶಾಹೀನ್ ಶಾಲೆ ವಿರುದ್ಧ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡಿದ್ದು.
ಶನಿವಾರ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದರ ಹಿಂದೆಯೂ ರಾಜಕೀಯವಿದೆ. ಮುಖ್ಯಮಂತ್ರಿಗಳ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರೆ ಪ್ರತಿಭಟನಾಕಾರರನ್ನು ಪೊಲೀಸರು ತಡೆಯುತ್ತಾರೆ. ಪರಿಸ್ಥಿತಿ ಹತೋಟಿಗೆ ತರಲು ಬಂಧಿಸುತ್ತಾರೆ. ಹೀಗೆ ಬಂಧಿಸಿದರೆ ಹೋರಾಟಕ್ಕೆ ಮತ್ತೊಂದು ಅಸ್ತ್ರ ಸಿಕ್ಕಂತಾಗುತ್ತದೆ ಎಂಬ ಕಾರಣಕ್ಕಾಗಿಯೇ ಮುಖ್ಯಮಂತ್ರಿಗಳ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದು.
ಸದ್ಯ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರ ನೇಮಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮತ್ತು ಪ್ರತಿಪಕ್ಷ ನಾಯಕರ ನೇಮಕ ಕುರಿತ ಗೊಂದಲ ಮುಂದುವರಿದಿದೆ. ಸೋಮವಾರದೊಳಗೆ ಶಾಸಕಾಂಗ ಪಕ್ಷ ಮತ್ತು ಪ್ರತಿಪಕ್ಷ ನಾಯಕ ಸ್ಥಾನದ ಗೊಂದಲ ಬಗೆಹರಿಯದಿದ್ದಲ್ಲಿ ಸಿದ್ದರಾಮಯ್ಯ ಅವರೇ ಸದನದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಬೇಕಾಗುತ್ತದೆ. ಇದಕ್ಕೆ ತಯಾರಿ ನಡೆಸಲು ಕೂಡ ಸಿದ್ದರಾಮಯ್ಯ ಅವರಿಗೆ ಶಾಹೀನ್ ಶಾಲೆ ಪರವಾಗಿ ಸರ್ಕಾರದ ವಿರುದ್ಧ ಶನಿವಾರ ನಡೆಸಿದ ಹೋರಾಟ ಸಹಕಾರಿಯಾಗಿದೆ.